ಬಳ್ಳಾರಿ: ಗೌರಿ ಸ್ನಾನಕ್ಕೆಂದು ಹೋಗುವಾಗ ತನ್ನ ಬೆವರಿನಿಂದ ಗಣಪನನ್ನು ಸೃಷ್ಟಿಸಿದಳು ಎಂದು ಪುರಾಣ ಹೇಳುತ್ತದೆ. ಬಳ್ಳಾರಿಯ ಕುಂಬಾರರ ಓಣಿಗೆ ಬಂದರೆ ಆ ಪುರಾಣದ ಕತೆಯನ್ನೇ ಜೀವಿಸುವ ರೀತಿಯಲ್ಲಿ ಹಲವು ಹೆಣ್ಣುಮಕ್ಕಳು ಕಾಣುತ್ತಾರೆ.
ಇವರೂ ಆ ಗೌರಿಯಂತೆಯೇ ಮನೆಯ ಶಕ್ತಿಗೌರಿಯರು. ಶ್ರಮದ ಸಂಕೇತವಾಗಿರುವ ಬೆವರಿನ ಬೆಲೆಯನ್ನು ಸರಿಯಾಗಿ ಅರಿತವರು. ಆಧುನಿಕ ಕಾಲದ ವ್ಯವಹಾರದ ಮಾತಿನಲ್ಲಿ ಹೇಳುವುದಾದರೆ, ‘ಹೊರಗೆ ಹೋಗಿ ದುಡಿದರೆ ತಿಂಗಳಿಗೆ ಹೆಚ್ಚೆಂದರೆ ಮೂರು ಸಾವಿರ ರೂಪಾಯಿ. ಮನೆ ಮುಂದೆಯೇ ದುಡಿದರೆ ನಮಗೆ ಬೇಕಾದಷ್ಟು ಹಣ.’ ಅದು ಹಣದ ಲೆಕ್ಕಾಚಾರವಷ್ಟೇ ಅಲ್ಲ. ಹಲವರಿಗೆ ಕೆಲಸ ಕೊಟ್ಟು ಪೊರೆಯುವ ಮಾಲೀಕತ್ವ. ಓಣಿಯ ಹಲವು ಕುಟುಂಬಗಳ ಪುರುಷ ಸದಸ್ಯರೊಡನೆ ಯುವತಿಯರು, ತಾಯಂದಿರು ಹೀಗೆ ಗೌರಿಯನ್ನೇ ಜೀವಿಸಿದ್ದಾರೆ.
ಅಪ್ಪನ ಹಾದಿ…
ಈಕೆ ಕೆ.ಗಿರಿಜಾ ಕುಂಬಾರ. 25ರ ಹರೆಯದ ಈ ಯುವತಿ, ಬಿಕಾಂ ಓದನ್ನು ಒಂದೂವರೆ ವರ್ಷಕ್ಕೆ ಬಿಡಬೇಕಾದ ಪರಿಸ್ಥಿತಿಯಲ್ಲಿ ಎದೆಗುಂದದೆ ಕುಲಕಸುಬಿನಲ್ಲೇ ಬದುಕನ್ನು ರೂಪಿಸಿಕೊಳ್ಳುತ್ತಿರುವಾಕೆ. ತಂದೆ ನಿಧನರಾದ ವೇಳೆ ದಿಕ್ಕುತೋಚದ ಸ್ಥಿತಿಯಲ್ಲಿದ್ದವಳು. ಈಗ ಕನಿಷ್ಠ ಹತ್ತು ಯುವಕರಿಗೆ ಉದ್ಯೋಗದಾತೆ. ಮಾತು ಈಗ ಲಕ್ಷದ ಲೆಕ್ಕದಲ್ಲೇ. ಕುಂಬಾರರ ಓಣಿಯ ಇವರ ಮನೆ ಮುಂದೆ ಉರುವಕೊಂಡ, ಜೋಳದರಾಶಿ, ಹಚ್ಚೊಳ್ಳಿ, ಬಸರಕೋಡಿನ ಯುವಕರು ಕೆಲಸ ಮಾಡುತ್ತಾರೆ.
ವರ್ಷಕ್ಕೆ ಕನಿಷ್ಠ 6 ಲಕ್ಷ ಬಂಡವಾಳ ಹೂಡಿ 8 ಲಕ್ಷ ಸಂಪಾದಿಸುವ ಉಮ್ಮೇದಿನ ಈ ಯುವತಿಗೆ ಸಾಲವಿಲ್ಲದೇ, ಚಿಕ್ಕ ಮೊತ್ತವಾದರೂ ಸ್ವಂತ ಬಂಡವಾಳದಲ್ಲಿ ದುಡಿಮೆ ಮಾಡಬೇಕೆಂಬ ಕನಸಿದೆ. ಈ ದುಡಿಮೆಯ ಗಳಿಕೆಯಲ್ಲಿಯೇ ತಂಗಿಗೆ ಮೊದಲು ಮದುವೆ ಮಾಡಿದ್ದಾರೆ. ‘ಅಪ್ಪ ಹೋದ್ರೂ, ಕೆಲ್ಸ ಅಂತೂ ಹೋಗಿಲ್ವಲ್ಲ’ ಇದು ಅವಳ ಆತ್ಮವಿಶ್ವಾಸ. ಹತ್ತು ಜನಕ್ಕೆ ಕೆಲಸ ಕೊಟ್ಟರೂ, ಲಾಭ ಎಂಬುದು ಕೂಲಿ ರೀತಿಯೇ ಬರುತ್ತದೆ ಎಂಬ ವಾಸ್ತವವನ್ನು ಒಪ್ಪಿಕೊಂಡೇ ಯುವತಿ ಗಣಪನ ಮೂರ್ತಿಗಳ ಮಾರುಕಟ್ಟೆ ಸ್ಪರ್ಧೆಯಲ್ಲಿ ಘನತೆಯ ಅಸ್ತಿತ್ವದ ಹುಡುಕಾಟದಲ್ಲಿದ್ದಾರೆ. ‘ಓಣಿಯಲ್ಲಿರುವ ಹಲವು ಹೆಣ್ಣು ಮಕ್ಕಳು ಇಂಥ ಮನೆಯ ಕಷ್ಟಗಳ ಸಲುವಾಗಿಯೇ ಅರ್ಧಕ್ಕೇ ಓದು ಬಿಟ್ಟು ಕುಲಕಸುಬಿನಲ್ಲಿ ತೊಡಗಿದ್ದಾರೆ. ನಮ್ಮನ್ನು ದೊಡ್ಡ ಕಲಾವಿದರಂತೆ ನೋಡಬೇಡಿ. ನಾವು ಮಾಡ್ತಿರೋದು ವ್ಯಾಪಾರ ಅಷ್ಟೆ’ ಎನ್ನುತ್ತಾರೆ ಅವರು.
ಮನೆಯ ಬೆಳಕು…
ಮತ್ತೊಂದು ಮನೆಯಲ್ಲಿ ಕೆ.ಜ್ಯೋತಿ ಕುಂಬಾರ. ಅಮ್ಮ, ಅಣ್ಣ, ಅತ್ತೆಯೊಡನೆ ಗಣಪನ ಮೂರ್ತಿಗಳಿಗೆ ಬಣ್ಣ ಲೇಪಿಸುವುದರಲ್ಲಿ ನಿರತರು. ಈಕೆ ಬಿಕಾಂ ಪೂರ್ಣಗೊಳಿಸಿದ್ದರೂ ಅನ್ಯ ಕೆಲಸವನ್ನು ಹುಡುಕಿ ಹೋಗಿಲ್ಲ ಎಂಬುದೇ ವಿಶೇಷ. ‘ಹೊರಗಿನ ಸ್ಯಾಲರಿಗಿಂತ ಇಲ್ಲೇ ಹೆಚ್ಚು ಬರ್ತದೆ’ ಎನ್ನುತ್ತಾರೆ ಅವರು. ಇಕ್ಕಟ್ಟಿನಲ್ಲೇ ಇರುವ ಎರಡಂತಸ್ತಿನ ಗೂಡಿನಂಥ ಮನೆಯೊಳಗಿನ ಏಣಿಗಳನ್ನು ಹತ್ತಿ ಇಳಿಯುತ್ತಾ, ಅಟ್ಟದಂಥ ಮಾಳಿಗೆಯಲ್ಲಿ ಬಣ್ಣ, ಪಿಓಪಿಗಳ ಸಾಂಗತ್ಯದಲ್ಲಿ ತನ್ಮಯರಾಗುವ ಇಂಥ ಯುವತಿಯರು ಈ ಓಣಿಯಲ್ಲಿ ಹತ್ತಾರು ಮಂದಿ ಇದ್ದಾರೆ. ಅವರಿಗೆ ಬೆಂಗಾವಲಿನಂತೆ ಅವರ ತಾಯಂದಿರು, ಅಕ್ಕ, ಅತ್ತೆಯಂದಿರಿದ್ದಾರೆ. ಇವರೆಲ್ಲ ಬೆವರಿನ ಸಂಸ್ಕೃತಿಯ ಘನತೆಯನ್ನು ಸಾರುತ್ತಾ, ಲಿಂಗ ತಾರತಮ್ಯಕ್ಕೆ ಸೆಡ್ಡು ಹೊಡೆಯುತ್ತಾ ಗಮನ ಸೆಳೆಯುತ್ತಾರೆ.
* ಕೆ. ನರಸಿಂಹಮೂರ್ತಿ



