ಕನ್ನಡ ಸಾಹಿತ್ಯ ಕ್ಷೇತ್ರದಲ್ಲಿ ಅಪಾರ ಪ್ರತಿಭೆ, ಅರ್ಹತೆ ಎಲ್ಲವೂ ಇದ್ದರೂ ಕೂಡ ನಿರ್ಲಕ್ಷ್ಯಕ್ಕೆ ಒಳಗಾದ ಕವಿಯೊಬ್ಬನಿದ್ದರೆ ಅದು ಸರ್ವಜ್ಞ ಮಾತ್ರ. ಸುಮಾರು ಏಳು ಕೋಟಿಗಿಂತಲೂ ಅಧಿಕ ವಚನಗಳನ್ನು ರಚಿಸಿದ್ದ ೧೬ನೇ ಶತಮಾನದ ತತ್ವಜ್ಞಾನಿ ಹಾಗೂ ದಾರ್ಶನಿಕ ಸರ್ವಜ್ಞನಿಗೆ ಮಾನ್ಯತೆ ದೊರೆಯದಿರುವುದು ವಿಪರ್ಯಾಸ. ಸರ್ವಜ್ಞನ ಕುರಿತು ಮಾಡಿರುವ ನಿರ್ಲಕ್ಷ್ಯಕವಿಯೊಬ್ಬನಿಗೆ ಮಾಡಿದ ಅಪಮಾನವಲ್ಲ ಅದು ಕುಂಬಾರ ಸಮಾಜಕ್ಕೆ, ಅಲ್ಲದೇ ಇಡೀ ಕರ್ನಾಟಕ ರಾಜ್ಯಕ್ಕೆ ಮಾಡಿರುವ ಅವಮಾನ.
ಒಬ್ಬ ತತ್ವಜ್ಞಾನಿಯಾಗಿ ಸೌಹಾರ್ದಪ್ರಿಯ ವ್ಯಕ್ತಿತ್ವದಿಂದ ಸಮಾಜದಲ್ಲಿರುವ ಅಸಮಾನತೆ, ದೌರ್ಜನ್ಯಗಳನ್ನು ಪ್ರತಿಭಟಿಸುತ್ತಾ ಹಿತ-ಮಿತವಾದ ನುಡಿಯಿಂದ ಎಚ್ಚರಿಸುತ್ತಿದ್ದ. ಸಮಾಜದ ಅಂಕು ಡೊಂಕುಗಳನ್ನು ವಚನಗಳ ಮೂಲಕ ವೈಚಾರಿಕ ಪ್ರಜ್ಞೆ ಮೂಡಿಸಿದ್ದ ಸರ್ವಜ್ಞನ ವಚನಗಳು ಖಡ್ಗಕ್ಕಿಂತಲೂ ಹರಿತವಾಗಿದ್ದವು. ಇಂತಿಪ್ಪ ಮಹಾನ್ ವ್ಯಕ್ತಿಗೆ ನಾವು ಎಂತಹ ಗೌರವ ಸಮರ್ಪಿಸಿದ್ದೇವೆ ಎಂಬುದಕ್ಕೆ ನಿನ್ನೆ ದ.ಕ ಜಿಲ್ಲಾಡಳಿತ ವತಿಯಿಂದ ನಡೆದ ಸರ್ವಜ್ಞ ಜಯಂತಿಯೇ ಸಾಕ್ಷಿ. ಆಮಂತ್ರಣ ಪತ್ರಿಕೆಯಲ್ಲಿ ಡಜನ್ ಗಟ್ಟಲೆ ಚುನಾಯಿತ ಪ್ರತಿನಿಧಿಗಳ ಹೆಸರು ಅತಿಥಿಗಳ ಪಟ್ಟಿಯಲ್ಲಿದ್ದರೂ ಇವರಲ್ಲಿ ಒಬ್ಬೇ ಒಬ್ಬರೂ ಕಾರ್ಯಕ್ರಮದಲ್ಲಿ ಹಾಜರಿರಲಿಲ್ಲ. ಇವರೆಲ್ಲ ಚುನಾವಣೆಯ ಗುಂಗಿನಲ್ಲಿ ಸಮಾರಂಭ ಮರೆತುಬಿಟ್ಟಿದ್ದರು! ಇನ್ನು ಜಯಂತ್ಯುತ್ಸವಕ್ಕೆ ಆಗಮಿಸಿದ ಸಮಾಜ ಬಾಂಧವರ ಸಂಖ್ಯೆ ಎಷ್ಟಿತ್ತು ಎಂದು ಹೇಳಿ ಪ್ರಯೋಜನವಿಲ್ಲ. ಸರ್ವಜ್ಞ ಒಬ್ಬ ಪ್ರಬಲ ಜಾತಿಯಲ್ಲಿ ಹುಟ್ಟಿದ್ದರೆ ರಾಜಕೀಯ ವ್ಯಕ್ತಿಗಳು ಇಂಥ ನಿರ್ಲಕ್ಷ್ಯ ವಹಿಸುತ್ತಿದ್ದರೇ?
ಸರ್ವಜ್ಞ ಪ್ರಬಲ ಜಾತಿಯವನಾಗಿದ್ದರೆ ಆತನ ಗುರುತಿಸುವ ಕಾರ್ಯ ಯಾವತ್ತೋ ನಡೆದಿರುತ್ತಿತ್ತು. ಆತನ ಹುಟ್ಟಿನ ಬಗ್ಗೆ, ಜಾತಿ ಬಗ್ಗೆ ಸುಳ್ಳು ಕಥೆಗಳನ್ನೇ ಪೋಣಿಸುತ್ತಾ ಬಂದಿರುವ ಮೇಲ್ವರ್ಗದ ಮಂದಿ ಒಂದೆಡೆಯಾದರೆ, ಬಸವಣ್ಣ, ಕನಕದಾಸ, ವಾಲ್ಮೀಕಿಯಂತಹ ಹಲವಾರು ದಾರ್ಶನಿಕರನ್ನು ತಮ್ಮ ಜಾತಿಯಲ್ಲಿ ಹುಟ್ಟಿದವರೆಂದು ವೈಭವೀಕರಣ ನಡೆಸುತ್ತಿರುವವರು ಇನ್ನೊಂದೆಡೆಯಿದ್ದಾರೆ. ಸರ್ವಜ್ಞ ಸಮಾಜದಲ್ಲಿ ಕ್ರಾಂತಿ ಮಾಡಿದ ಮಹಾನುಭಾವ. ಇಂತಹ ಮಹಾನುಭಾವರ ಆದರ್ಶಗಳನ್ನು ಹಾಗೂ ಚಿಂತನೆಗಳನ್ನು ಮರೆತಿರುವ ಜನ ನೆನಪು ಮಾಡಿಕೊಂಡು ಕಾರ್ಯರೂಪಕ್ಕೆ ತರಲೆಂಬ ಕಾರಣಕ್ಕೆ ಕುಂಬಾರ/ಕುಲಾಲ ಸಂಘಟನೆಗಳು ಸರ್ವಜ್ಞ ಜಯಂತಿ ಆಚರಣೆಗೆ ಒತ್ತಾಯಿಸಿದ್ದರೆ ಸರಕಾರ ಅದನ್ನು ಕಾಟಾಚಾರಕ್ಕೆಂಬಂತೆ ಆಚರಿಸುತ್ತಿದೆ. ಸರಕಾರದ ಆದೇಶ ಇದ್ದರೂ ಇನ್ನು ಹಲವೆಡೆ ಜಿಲ್ಲಾಡಳಿತ ಸರ್ವಜ್ಞ ಜಯಂತಿ ಆಚರಣೆಯನ್ನೇ ಮಾಡದೆ ಮೌನಕ್ಕೆ ಶರಣಾಗಿದೆ.
ತುಂಡು ಬಟ್ಟೆಯ ಗಂಡು ಕವಿ ಎಂದು ಕರೆಯಿಸಿಕೊಂಡ ಸರ್ವಜ್ಞ ಸ್ವತಃ ಒಂದು ವಿಶ್ವವಿದ್ಯಾನಿಲಯವಿದ್ದಂತೆ. ಆತ ಒಬ್ಬ ಮನಶ್ಶಾಸ್ತ್ರಜ್ಞ, ಸಮಾಜಶಾಸ್ತ್ರಜ್ಞ, ಅರ್ಥಶಾಸ್ತ್ರಜ್ಞ, ಚರಿತ್ರಕಾರ, ಕವಿ, ತತ್ವಜ್ಞಾನಿ, ಆರ್ಥಿಕ ಚಿಂತಕ, ಅದ್ಭುತ ವಿಮರ್ಶಕ. ಇನ್ನೂ ಅನೇಕ ಪ್ರತಿಭೆಗಳ ಸಮನ್ವಯದಂತಿರುವ ಸರ್ವಜ್ಞ ಮುಂದಿನ ಪೀಳಿಗೆಯ ವಸ್ತುನಿಷ್ಠ ಅಧ್ಯಯನದ ನಿಕಷಕ್ಕೆ ಒಳಪಡಬೇಕು. ವಿಶ್ವವಿದ್ಯಾಲಯಗಳಲ್ಲಿ ಸರ್ವಜ್ಞನ ಅಧ್ಯಯನ ಪೀಠ ಅಲ್ಲದೆ ಪ್ರತಿಷ್ಠಾನ, ಪ್ರಾಧಿಕಾರಗಳನ್ನೂ ಸ್ಥಾಪಿಸಬೇಕೆಂಬ ಬೇಡಿಕೆಗೆ ಸರಕಾರ ಸ್ಪಂದಿಸುತ್ತಿಲ್ಲ.
ರಾಜ್ಯದಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯಿಂದ ತಿರುವಳ್ಳುವರ್, ಸರ್ವಜ್ಞ ಪ್ರತಿಮೆ ಸ್ಥಾಪನೆ ದಿನವನ್ನು ಸೌಹಾರ್ದ ದಿನಾಚರಣೆಯೆಂದು ಆಚರಿಸಲಾಗುತ್ತಿದೆ. ಆದರೆ ಇದೇ ಇಲಾಖೆಯಿಂದ ಸರ್ವಜ್ಞನ ಹೆಸರಲ್ಲಿ ಇತರ ಕಾರ್ಯಕ್ರಮ ಮಾಡಲು ಒತ್ತಡ ಹೇರಬೇಕಾಗಿದೆ.
ಸರ್ವಜ್ಞ ಕವಿ ಹೆಸರಿನ ಸರ್ವಜ್ಞ ಪ್ರಾಧಿಕಾರ ರಚನೆಯ ಬಗ್ಗೆ ಮೂರು ವರ್ಷದ ಹಿಂದೆ ಸರ್ಕಾರ ಘೋಷಿಸಿದ್ದು ಬಿಟ್ಟರೆ ಈವರೆಗೆ ಯಾವುದೇ ಕಾರ್ಯಗಳೂ ಆಗದೆ ಪ್ರಾಧಿಕಾರ ಕೇವಲ ಘೋಷಣೆಗಷ್ಟೇ ಸೀಮಿತಗೊಂಡಿದೆ. ಯಾವುದೇ ಅಭಿವೃದ್ಧಿ ವಿಚಾರದಲ್ಲಿ ಒಂದು ಸಮಿತಿ ರಚಿಸಲು ಅಧಿಕಾರಿಗಳಿಗೆ ಸರಕಾರ ಆದೇಶಿಸಿದರೆ ಅದಕ್ಕೆ ಗರಿಷ್ಠ ಅಂದರೆ ಆರು ತಿಂಗಳು ಅವಧಿ ತೆಗೆದುಕೊಳ್ಳಬಹುದು. ಆದರೆ ಮೂರು ವರ್ಷ ಕಳೆದರೂ ಸರ್ವಜ್ಞ ಪ್ರಾಧಿಕಾರಕ್ಕೆ ಪೂರ್ಣ ಪ್ರಮಾಣದ ಸಮಿತಿಯೇ ರಚನೆಯಾಗಿಲ್ಲ ಎಂದರೆ ಅದು ಜವಾಬ್ದಾರಿ ಸ್ಥಾನದಲ್ಲಿರುವವರ ನಿರ್ಲಕ್ಷದ ಪರಮಾವಧಿಯೇ ಅಲ್ಲವೇ ? ಸರ್ವಜ್ಞನ ಬದುಕು, ಬರಹ, ವಿಚಾರಗಳ ಪರಾಮರ್ಶೆಯ ಜೊತೆಗೆ ಸಂಶೋಧನೆ ಮತ್ತು ಅಧ್ಯಯನಗಳನ್ನು ಕೈಗೆತ್ತಿಗೊಳ್ಳುವ ಒಂದು ಪುಟ್ಟ ವಿಶ್ವವಿದ್ಯಾಲಯದ ಹಾಗೆ ಈ ಸರ್ವಜ್ಞ ಪ್ರಾಧಿಕಾರ ರೂಪುಗೊಳ್ಳಬೇಕಿದೆ.
ಸರ್ವಜ್ಞನ ಜನ್ಮಸ್ಥಳವಾದ ಹಿರೇಕೆರೂರು ತಾಲೂಕಿನ ಅಬಲೂರು ಗ್ರಾಮಕ್ಕೆ ಇನ್ನೂ ಕಾಯಕಲ್ಪ ಸಿಕ್ಕಿಲ್ಲ. ಸರ್ವಜ್ಞ ಹೆಸರಿನಲ್ಲಿ ಸಭಾಭವನ ನಿರ್ಮಾಣ, ಒಂದು ಕಂಚಿನ ಪುತ್ಥಳಿ ನಿರ್ಮಾಣ ಬಿಟ್ಟರೆ, ಮತ್ಯಾವ ಕೆಲಸಗಳೂ ನಡೆದಿಲ್ಲ. ಸರ್ವಜ್ಞ ನೆಲೆಸಿದ್ದನೆನ್ನಲಾದ ಸೋಮೇಶ್ವರ ದೇವಾಲಯ ಇಂದು ಹಾಳು ಕೊಂಪೆಯಾಗಿದೆ. ಆತನ ಸಾಹಿತ್ಯ ಕೃತಿಗಳ ಒಂದು ಸಣ್ಣ ಗ್ರಂಥಾಲಯ ನಿರ್ಮಿಸುವ ಪ್ರಯತ್ನವೂ ಇಲ್ಲಿ ನಡೆದಿಲ್ಲ. ಸರ್ವಜ್ಞನ ಊರಿಗೆ ಪ್ರವಾಸಿಗರು ಬಂದರೆ ನಿರಾಶೆಯಾಗುವುದು ಕಟ್ಟಿಬುತ್ತಿ. ಅಬಲೂರು ಅಭಿವೃದ್ಧಿ, ಆತನ ಸಮಾಧಿಯ ಜೀರ್ಣೋದ್ಧಾರ, ಹಳೆಯ ವಾಸದ ಮನೆಯನ್ನು ವಸ್ತು ಸಂಗ್ರಾಲಯವಾಗಿ ಪರಿವರ್ತಿಸುವ ಕೆಲಸ, ಗ್ರಂಥಾಲಯ ಸ್ಥಾಪನೆ, ಹುಟ್ಟೂರಿನಲ್ಲಿ ಉದ್ಯಾನವನ, ಆತನ ಜೀವನ ಕುರಿತು ಸಮಗ್ರ ಮಾಹಿತಿ ಒದಗಿಸುವ ಅಧ್ಯಯನ ಕೇಂದ್ರ, ರಾಜ್ಯದ ಎಲ್ಲ ವಿಶ್ವವಿದ್ಯಾಲಯಗಳಲ್ಲಿ ಸರ್ವಜ್ಞ ಅಧ್ಯಯನ ಪೀಠ, ಆತನ ಹೆಸರಿನಲ್ಲಿ ಪ್ರಶಸ್ತಿ-ಪುರಸ್ಕಾರ, ತ್ರಿಪದಿ ಕವಿಯ ಸಾಹಿತ್ಯವು ಅನ್ಯ ಭಾಷೆಗೆ ತರ್ಜುಮೆ ಕಾರ್ಯ ಹೀಗೆ ಹತ್ತು ಹಲವು ಕೆಲಸಗಳು ಆಗಬೇಕಿವೆ.
ಕುಂಬಾರರು ಒಂದಾಗಬೇಕು
ಸರಕಾರದ ನಿರ್ಲಕ್ಷ್ಯವನ್ನು ಪ್ರಶ್ನಿಸಲು ಕುಂಬಾರರು ಒಂದಾಗಬೇಕು. ವಿವಿಧ ಹೆಸರಿನಲ್ಲಿ ವಿಭಜಿತರಾಗಿರುವ ಕುಂಬಾರರು ಸಂಘಟಿತರಾಗಲು ಸರ್ವಜ್ಞ ಜಯಂತಿ ನಾಂದಿಯಾಗಿದೆ. ಇದನ್ನು ಸಮರ್ಪಕವಾಗಿ ಬಳಸಿಕೊಳ್ಳಬೇಕು. ಜನಾಂಗದ ಒಳಪಂಗಡಗಳು ಒಂದೇ ಲಾಂಛನದಡಿಯಲ್ಲಿ ಬರಬೇಕು. ತುಳುವ, ಕನ್ನಡಿಗ, ಉತ್ತರ, ದಕ್ಷಿಣ ಎಂಬ ಭೇದ ಭಾವ ಮಾಡದೇ ಒಂದಾಗಿ ಸರಕಾರದ ಸೌಲಭ್ಯಗಳನ್ನು ಪಡೆಯಲು ಶ್ರಮಿಸಬೇಕು.
ದಿನೇಶ್ ಬಂಗೇರ ಇರ್ವತ್ತೂರು



