ಮಂಗಳೂರು :”ಜಾತಿಹೀನನ ಮನೆಯ ಜ್ಯೋತಿ ತಾ ಹೀನವೆ ಜಾತಿ ವಿಜಾತಿ ಎನಬೇಡ ಶಿವನೊಲಿದಾತನೆ ಜಾತ ಸರ್ವಜ್ಞ”
“ಸರ್ವಜ್ಞ ನೆಂಬುವನು ಗರ್ವದಿಂದಾದವನೆ ಸರ್ವರೊಳಗೊಂದು ನುಡಿಗಲಿತು ವಿದ್ಯೆಯಾ ಪರ್ವತವೇ ಆದ ಸರ್ವಜ್ಞ”
“ಹರನೆಂಬ ದೈವ ನಮಗುಂಟು, ತಿರಿವರಿಂ ಸಿರಿವಂತರಾರು ಸರ್ವಜ್ಞ”
“ಮಂಡೆ ಬೋಳಿಸಿಕೊಂಡು ತುಂಡುಗಂಬಳಿ ಹೊದೆದು ಹಿಂಡನಗಲಿದ ಗಜದಂತೆ ಇಪ್ಪವನ ಕಂಡು ನಂಬುವುದು ಸರ್ವಜ್ಞ”
16ನೇ ಶತಮಾನದಲ್ಲಿ ಕರ್ನಾಟಕ ಕಂಡ ಒಬ್ಬ ಶ್ರೇಷ್ಠ ವಚನಕಾರ, ದಾರ್ಶನಿಕ, ಕುಂಬಾರ ಕವಿ ಸರ್ವಜ್ಞನ ಜಯಂತಿ ಆಚರಣೆಯನ್ನು ಇಂದು ಮಾಡಲಾಗುತ್ತಿದೆ.
ಹಾವೇರಿ ಜಿಲ್ಲೆಯ ಅಬಲೂರು ಸರ್ವಜ್ಞನ ಜನ್ಮಸ್ಥಳ. ಜನರ ಆಡುಭಾಷೆಯಲ್ಲಿ ತ್ರಿಪದಿಗಳನ್ನು ರಚಿಸಿ ಸಮಾಜದ ಅಂಕುಡೊಂಕುಗಳನ್ನು ಚಿಕಿತ್ಸಕ ನೋಟದೊಂದಿಗೆ ತಿದ್ದಿದ ಸಮಾಜ ಸುಧಾರಕ. ಸರ್ವಜ್ಞನ ತ್ರಿಪದಿಗಳು ಕನ್ನಡ ಸಾಹಿತ್ಯ ಸಿರಿಗೆ ಅಮೂಲ್ಯ ಕೊಡುಗೆಯಾಗಿದೆ. ತ್ರಿಪದಿಗಳು ಸಾರುವ ಸಂದೇಶ ಸರ್ವಕಾಲಕ್ಕೂ ಪ್ರಸ್ತುತ. ಇವುಗಳು ಹಲವು ಭಾಷೆಗಳಿಗೆ ಭಾಷಾಂತರಗೊಂಡಿದ್ದು, ಭಾಷೆ ಮತ್ತು ಗಡಿಗಳ ಎಲ್ಲೆ ಮೀರಿ ಕರ್ನಾಟಕದ ಕೀರ್ತಿಯನ್ನು ಬೆಳಗಿಸಿವೆ.
ಇಂದು ರಾಜ್ಯದೆಲ್ಲಡೆ ಸರ್ವಜ್ಞನ ಜನ್ಮದಿನಾಚರಣೆಯನ್ನು ಆಚರಿಸಲಾಗಿದೆ. ಬೆಳಗ್ಗೆ 11 ಗಂಟೆಗೆ ಬೆಂಗಳೂರಿನ ಜೆಸಿ ರಸ್ತೆಯ ಕನ್ನಡ ಭವನದ ನಯನ ಸಭಾಂಗಣದಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸರ್ವಜ್ಞ ಜಯಂತಿ ಆಚರಣೆ ಹಮ್ಮಿಕೊಂಡಿತ್ತು.
ದ.ಕ ಜಿಲ್ಲಾಡಳಿತ, ಕರ್ನಾಟಕ ರಾಜ್ಯ ಕುಂಬಾರ ಸಂಘ ಕರಾವಳಿ ವಿಭಾಗ, ಕರಾವಳಿ ಕುಲಾಲ ಕುಂಬಾರರ ಯುವವೇದಿಕೆ ಮಂಗಳೂರು ಇವರ ಸಂಯುಕ್ತ ಆಶ್ರಯದಲ್ಲಿ ಸರ್ವಜ್ಞ ಜಯಂತಿ ಆಚರಣೆಯು ದ.ಕ ಜಿಲ್ಲಾ ಪಂಚಾಯತ್ ಆವರಣದಲ್ಲಿರುವ ನೇತ್ರಾವತಿ ಸಭಾಂಗಣದಲ್ಲಿ ಬೆಳಿಗ್ಗೆ 10.30ಕ್ಕೆ ನಡೆಯಿತು.
ಉಡುಪಿ ಜಿಲ್ಲಾಡಳಿತ, ಜಿಪಂ, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಂಯುಕ್ತ ಆಶ್ರಯದಲ್ಲಿ ಕವಿ ಸರ್ವಜ್ಞ ಜಯಂತಿ ಆಚರಣೆ ಜ.20 ರಂದು ಬೆಳಗ್ಗೆ 8 ಗಂಟೆಗೆ ಬನ್ನಂಜೆಯ ಸಮಾಜ ಕಲ್ಯಾಣ ಇಲಾಖಾ ವಸತಿ ನಿಲಯದಲ್ಲಿ ನಡೆಯಿತು.
ಕಲಬುರ್ಗಿಯಲ್ಲಿ 11.30 ಗಂಟೆಗೆ ಡಾ.ಎಸ್.ಎಂ.ಪಂಡಿತ ರಂಗಮಂದಿರದಲ್ಲಿ ಸರ್ವಜ್ಞ ಕವಿಯ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ, ಮಾಲಾರ್ಪಣೆ ಮಾಡುವ ಮೂಲಕ ಜಯಂತಿ ಸಮಾರಂಭಕ್ಕೆ ಜಿಲ್ಲಾ ಉಸ್ತುವಾರಿ ಸಚಿವರಿಂದ ಚಾಲನೆ ನೀಡಲಾಯಿತು. ಸರ್ವಜ್ಞರ ಭಾವಚಿತ್ರದ ಬೃಹತ್ ಮೆರವಣಿಗೆಯನ್ನು ಬೆಳಿಗ್ಗೆ 10 ಗಂಟೆಯಿಂದ ಸೂಪರ್ಮಾರ್ಕೆಟ್ ಜನತಾ ಬಜಾರದಿಂದ ಜಗತ್ ವೃತ್ತದ ಮೂಲಕ ಡಾ.ಎಸ್.ಎಂ.ಪಂಡಿತ ರಂಗಮಂದಿರದವರೆಗೆ ಆಯೋಜಿಸಲಾಗಿತ್ತು. ಸರ್ವಜ್ಞರ ಜೀವನ ಮತ್ತು ಸಾಧನೆ ಕುರಿತು ಡಾ.ಜಯಶ್ರೀ ದಂಡೆ ವಿಶೇಷ ಉಪನ್ಯಾಸ ನೀಡಿದರು.