ಇಪ್ಪತ್ತೊಂದು ವರ್ಷಗಳ ಹಿಂದೆ ಒಂಭತ್ತು ತಿಂಗಳ ಕೂಸಿನ ಬಾಲ್ಯವಿವಾಹವನ್ನು ವಿರೋಧಿಸಿದ ತಪ್ಪಿಗೆ ಸಾಮೂಹಿಕ ಅತ್ಯಾಚಾರಕ್ಕೆ ಒಳಗಾಗಿ ನ್ಯಾಯಕ್ಕಾಗಿ ಹೋರಾಡಿದ ಭಾಂವ್ರಿದೇವಿ ತನ್ನ ಸೋದರಿಯರ ಬದುಕನ್ನು ಬದಲಿಸಲು ಹೊರಟಾಕೆ.
ಭಾಂವ್ರಿಯ ಮನೆ ಒಂದು ಪುರಾತನ ಶಿಥಿಲ ದೇವಾಲಯದ ಎದುರು ಮಳೆ ನೀರು ನಿಂತು ಕಾಲು ಹೂತು ಹೋಗುವಂತಹ ಜೌಗು ಪ್ರದೇಶದಲ್ಲಿದೆ. ಭಾಂವ್ರಿಗೆ ಇನ್ನೂ ನ್ಯಾಯ ದೊರೆಯದಿದ್ದರೂ, ಅನೇಕ ಸಂಘ, ಸಂಸ್ಥೆಗಳು ಈಕೆಯ ಹೋರಾಟಕ್ಕೆ ಜೊತೆ ನಿಂತು ಬೆಂಬಲಿಸಿವೆ. ಪ್ರಶಸ್ತಿ, ಪುರಸ್ಕಾರಗಳು ಹಾದುಬಂದಿವೆ. ಹಾಗೆಂದೇ ಈ ನೆಲದಲ್ಲಿ, ಒಂದಿಷ್ಟು ಎತ್ತರದ ಬುನಾದಿಯ ಮೇಲೆ ಒಂದು ಗಟ್ಟಿ ಮನೆ ನಿಂತಿದೆ. ಇಳಿವ ಸೂರ್ಯನ ಕಿರಣಗಳು ಬಾಗಿಲಿನಿಂದ ಒಳ ಹಾದಂತೆ ಭಾಂವ್ರಿಯೊಡನೆ ಮಾತನಾಡತೊಡಗಿದೆ.
ಭಾಂವ್ರಿ ತನ್ನ ಕತೆ ಹೇಳಿದಳು. ನಮಗೆ ತಿಳಿದ ನೋವಿನ ಕತೆ ಅದು. ಆದರೂ ನಮಗೆ ಅರಿವಿರದ ಅನೇಕ ವಿವರಗಳು ಇಲ್ಲಿ ತಿಳಿದುಬಂದಿತ್ತು. ಭಾಂವ್ರಿಯ ಅಮ್ಮನ ಹೆಸರು ರಾಮ್ಪುರೀ. ತಂದೆಯ ಹೆಸರು ಡುಂಗಲಾಲ್ ಕುಮಾರ್. ಗಂಡನ ಹೆಸರು ಮೋಹನ್ಲಾಲ್ ಪ್ರಜಾಪತ್. ಕುಂಬಾರರ ಸಮುದಾಯದಲ್ಲಿ ಕೆಲವರು ತಮ್ಮನ್ನು “ಪ್ರಜಾಪತ್’ ಅಥವಾ “ಪ್ರಜಾಪತಿ’ ಎಂದು ಕರೆದುಕೊಳ್ಳುತ್ತಾರೆ. ಇವರ ಮುಖ್ಯ ಕಸುಬು ಮಡಕೆ ಮಾಡುವುದು. ಕುಂಬಾರ ಸಮುದಾಯದ ಈ ಒಂದು ವರ್ಗ ತಮ್ಮನ್ನು ಸೃಷ್ಟಿಕರ್ತ ಬ್ರಹ್ಮನ ನೇರ ವಂಶಜರು ಎಂದು ಭಾವಿಸುತ್ತದೆ.
ವಿವಾಹವಾಗಿ ಗಂಡನ ಮನೆಗೆ ಭಟೇರಿಗೆ ಭಾಂವ್ರಿ ಬಂದಿದ್ದಳು. ಭಟೇರಿಯಲ್ಲಿ ಇವರದೊಂದೇ ಕುಂಬಾರ ಕುಟುಂಬ. ಉಳಿದಂತೆ ಬಹುಸಂಖ್ಯೆಯಲ್ಲಿ ಇದ್ದವರು ಗುಜ್ಜಾರರು. ಈ ಪ್ರದೇಶದಲ್ಲಿಯೇ ಗುಜ್ಜಾರ್ರದು ಪ್ರಬಲ ಜಾತಿ. ಈಕೆಗೆ ಎಷ್ಟು ಮಕ್ಕಳು ಎಂಬುದೂ ಒಂದೊಂದು ಕಡೆ ಒಂದೊಂದು ಬಗೆಯಲ್ಲಿ ಅಚ್ಚಾಗಿತ್ತು. ಈಗ ಭಾಂವ್ರಿಯ ಬಾಯಿಂದಲೇ ಕೇಳುವ ಅವಕಾಶ. ಹಿರಿಯ ಮಗಳು ಬಿಮಲಾ. ಗಂಡು ಮಕ್ಕಳು ಸೂರ್ಯನಾರಾಯಣ ಮತ್ತು ಮಹೇಶ್. ಕಿರಿಯ ಮಗಳು ರಾಮೇಶ್ವರಿ.
ಆಕೆಯ ಮೇಲೆ ಅತ್ಯಾಚಾರ ಮಾಡಿದ ಐದು ಜನ ಆರೋಪಿಗಳಲ್ಲಿ ಇಬ್ಬರು ಈಗಾಗಲೇ ತೀರಿಕೊಂಡಿದ್ದಾರೆ. ನ್ಯಾಯದ ಬಾಗಿಲು ಬಲುದೂರ. ಇಷ್ಟು ಹೊತ್ತಿಗೆ ಹೊಲಕ್ಕೆ ಹೋಗಿದ್ದ ಪತಿ ಮೋಹನ್ಲಾಲ್ ಹಿಂತಿರುಗಿದ್ದರು. ಪತ್ನಿಯ ನೋವಿನ ಪ್ರತಿಕ್ಷಣವೂ ಜೊತೆ ನಿಂತ ವ್ಯಕ್ತಿ ಈತ. ಆಕೆಯ ಈ ಹೋರಾಟದಲ್ಲಿ ಸದ್ದಿಲ್ಲದೆ ಬೆನ್ನಿಗೆ ನಿಂತು ಬೆಂಬಲ ನೀಡಿದ ಆ ಸರಳ ವ್ಯಕ್ತಿಗೆ ವಂದಿಸಿದೆ. ಮಾತನಾಡುತ್ತ, ಈ ಬಂಜರು ನೆಲದಲ್ಲಿ ಬಾವಿ ತೋಡಿದರೂ ನೀರು ಬಾರದ ಸಾಧ್ಯತೆಯೂ ಇರಬಹುದು ಎಂದು ಅರಿವಾಗತೊಡಗಿತ್ತು. ಬಾವಿ ಈಕೆಯ ಸ್ಥಿತಿಯನ್ನು ಸುಧಾರಿಸುವುದೆ, ಮನಸ್ಸಿನಲ್ಲಿ ಪ್ರಶ್ನೆ ಮೂಡಿತ್ತು.
ಭಾಂವ್ರಿಯ ಆರೋಗ್ಯ ಸರಿ ಇರಲಿಲ್ಲ. ನೂರೊಂದು ಮಾತ್ರೆಗಳು ಆಕೆಯ ಚಾರ್ಪಾಯಿಯ ಬಗಲಿಗಿದ್ದವು. “ಏನಾಗಿದೆ?’ ಕೇಳಿದ್ದೆ. ಬೆನ್ನಿನಲ್ಲಿ ನೋವು ಎಂದೇನೋ ವಿವರಿಸುತ್ತಿರುವುದು ನನಗೆ ಪೂರ್ತಿ ಅರ್ಥವಾಗಲಿಲ್ಲ. ಆಕೆಯನ್ನು ಅಧಿಕ ರಕ್ತದ ಒತ್ತಡ ಕಾಡುತ್ತಿರುವುದು ಮಾತ್ರ ಸ್ಪಷ್ಟವಾಗಿತ್ತು. ಈಗ ಭಾಂವ್ರಿ ಒಳ ಹೋಗಿ ಒಂದು ದೊಡ್ಡ ಕವರ್ ಹಿಡಿದು ಬಂದರು. ಅದರಲ್ಲಿ ಅವರ ಎಂ.ಆರ್.ಐ. ರಿಪೋರ್ಟ್ ಕಂಡು ಆತಂಕವಾಯಿತು. ಭಾಂವ್ರಿ ಇದೇ ತಿಂಗಳು 14ರಂದು ಜಯಪುರದ ಎಸ್.ಎಮ್.ಎಸ್. ಆಸ್ಪತ್ರೆಯಲ್ಲಿ ಮಾಡಿಸಿದ ಬೆನ್ನುಹುರಿಯ ಎಂ.ಆರ್.ಐ. ಸ್ಕ್ಯಾನ್ ರಿಪೋರ್ಟ್ ಅದಾಗಿತ್ತು. ಅದರಲ್ಲಿ ತಪಾಸಣೆಯ ನಂತರ “ಲಂಬರ್ ಸ್ಪಾಂಡಿಲೋಸಿಸ್’ ಎಂದು ಬರೆದಿತ್ತು.
‘ನಿಮ್ಮದು ಬ್ಯಾಂಕ್ ಅಕೌಂಟ್ ಇದೆಯೆ?’ ಭಾಂವ್ರಿಯನ್ನು ಕೇಳಿದೆ. ಪಾಸ್ಬುಕ್ ಒಂದನ್ನು ತಂದು ತೋರಿಸಿದರು. “ಬ್ಯಾಂಕ್ ಆಫ್ ಇಂಡಿಯಾ’ದ ಪಾಸ್ಬುಕ್ ಅದು. ಅಕೌಂಟ್ ನಂಬರ್ ಬರೆದುಕೊಂಡೆ. ತಮ್ಮ “ಸಾಥಿನ್’ ಕೆಲಸವನ್ನು ಅತ್ಯಂತ ಶ್ರದ್ಧೆಯಿಂದ ಮಾಡುವ ಆಕೆ, “ಬಾಲಿಕಾ ಮಂಡಲ್ ಬೈಠಕ್ ಕಾರ್ಯವಾಹಿ ರಿಜಿಸ್ಟರ್’, “ಸ್ವಯಂ ಸಹಾಯತ ಸಮೂಹ್ ಕಾರ್ಯವಾಹಿ ರಿಜಿಸ್ಟರ್’ ನೋಟುಪುಸ್ತಕವನ್ನು ತಂದು ತೋರಿಸಿದರು. ಅದರಲ್ಲಿ ಇವರ ಮೀಟಿಂಗ್ಗಳ ಕಾರ್ಯವಾಹಿ ಬರೆದಿತ್ತು.
ನನ್ನ ಜೊತೆ ಬಂದ ಗೆಳತಿ ಗೀತಾ ಹೇಳಿದರು, “ಈಕೆಯ ಆರೋಗ್ಯದ ಈಗಿನ ಸ್ಥಿತಿಯಲ್ಲಿ ಇಲ್ಲಿ ಬಾವಿ ತೋಡಿಸುವುದರಲ್ಲಿ ಅರ್ಥವಿಲ್ಲ. ಸಾಥಿನ್ ಸಂಬಳ ಸುಮಾರು 2000 ಇದೆ. ಅದರ ಜೊತೆಗೆ ಈಕೆಗೆ ತಿಂಗಳಿಗೆ ಒಂದು, ಒಂದೂವರೆ ಸಾವಿರ ರೂಪಾಯಿ ನಿರಂತರವಾಗಿ ಬರುವಂತಿದ್ದರೆ ಅದು ಹೆಚ್ಚು ಉಪಯೋಗವಾಗ ಬಲ್ಲದು’.
ಆದರೆ, ಹಣವನ್ನು ಸಂಗ್ರಹಿಸಿ ಒಟ್ಟಿಗೆ ಅವರಿಗೆ ಕೊಡುವುದರಿಂದ ಅದು ಆಕೆಯ ಕೈಯಲ್ಲಿ ಉಳಿಯದು ಎಂದು ಇಷ್ಟರಲ್ಲಾಗಲೇ ನಮಗೆ ಅರಿವಾಗಿತ್ತು. ಪ್ರಶಸ್ತಿಗಳು ಬಂದಿದ್ದವು. ಬಹುಶಃ ಅದರಿಂದಲೇ ಈ ಸುಧಾರಿತ ಮನೆ ಇಲ್ಲಿ ನಿಂತಿತ್ತು. ಮಗಳಿಗೆ ಮದುವೆ, ಮಗನಿಗೆ ಓದು ಸಾಗಿರಬೇಕು. ಜಯಪುರದ ಮಹಿಳಾ ಸಂಘಟನೆಗಳ ಬೆಂಬಲ ಸದಾ ಭಾಂವ್ರಿದೇವಿಯನ್ನು ಕಷ್ಟದಲ್ಲಿ ಕಾಪಾಡಿತ್ತು. ಆಕೆಯ ಮಗನನ್ನು ಕೆಲವು ಕಾಲ ತಮ್ಮ ಮನೆಯಲ್ಲೇ ಇಟ್ಟುಕೊಂಡು ಓದಿಸಿದ್ದರು ಕವಿತಾ ಶ್ರೀವಾಸ್ತವ. ಮಹಿಳಾ ಹಕ್ಕುಗಳಿಗಾಗಿ, ಮಾನವ ಹಕ್ಕುಗಳಿಗಾಗಿ ಇನ್ನಿಲ್ಲದ ಹಾಗೆ ಹೋರಾಡುತ್ತಿರುವ ಹೋರಾಟಗಾರ್ತಿ ಕವಿತಾ ಈ ಎರಡು ದಶಕಗಳೂ ಭಾಂವ್ರಿಯ ಜೊತೆ ನಿಂತಿದ್ದಾರೆ. ಆಕೆಯ ಆಸ್ಪತ್ರೆಯ ಖರ್ಚನ್ನೂ ಕಳಕಳಿಯ ಮಹಿಳೆಯೊಬ್ಬರು ವಹಿಸಿಕೊಂಡಿದ್ದರು.
ಪುಟ್ಟಮಕ್ಕಳು ಬೆಳೆಯುತ್ತಿದ್ದ ವಯಸ್ಸಿನಲ್ಲಿ, ಬಹಿಷ್ಕರಿಸಿ ನಿಂತ ಘಳಿಗೆಯಲ್ಲಿ ಅಗತ್ಯಗಳು ನೂರಿದ್ದವು. ಈಗ ಎಲ್ಲರೂ ನೆಲೆ ನಿಂತಿದ್ದಾರೆ. ಉಳಿದಿರುವುದು ಈಕೆ ಮತ್ತು ಗಂಡನ ಬದುಕು. ದಿನದಿಂದ ದಿನಕ್ಕೆ ಕ್ಷೀಣಿಸಿದ ಆರೋಗ್ಯ, ನ್ಯಾಯದ ನೆರಳಿನ್ನೂ ಕಾಣದ ದೀರ್ಘ ಹೋರಾಟದ ಹಾದಿಯಲ್ಲಿ ನಿಂತ ಪತಿ ಪತ್ನಿಯರು.
“ಈ ಬದುಕು ಸಂಜೆಯ ಸಮಯ ಭಾಂವ್ರಿಗಾಗಿ 2 ಲಕ್ಷ ಸಂಗ್ರಹಿಸೋಣ. ಅದನ್ನು ಒಂದು “ಫಿಕ್ಸೆಡ್ ಡಿಪಾಸಿಟ್’ನಲ್ಲಿ ಇಟ್ಟು ಭಾಂವ್ರಿ ಇರುವವರೆಗೂ ತಿಂಗಳಿನ ಬಡ್ಡಿ ಬಂದು ಸೇರುವಂತೆ ಮಾಡೋಣ’ ಗೀತಾ ಅವರ ಸೂಚನೆ ಸೂಕ್ತವಾಗಿ ಕಂಡಿತು. ಹಿಂದೊಮ್ಮೆ ಭಾಂವ್ರಿದೇವಿಯ ಕತೆಯನ್ನು ಅರಿತ ಲಂಡನ್ನಿನ ಮಹಿಳೆಯರು 2.5 ಲಕ್ಷ ಹಣ ಸಂಗ್ರಹಿಸಿ ಆಕೆಗೆ ಕಳುಹಿಸಿದ್ದರು. ಆ ಹಣ ಈಕೆಯ ಬದುಕಿಗೆ ಒದಗಿ ಬಂದಂತೆ ಕಾಣಲಿಲ್ಲ. ಮಗ ಮಹೇಶನೊಡನೆ ಈ ಹಣದ ವಿಷಯದಲ್ಲಿ ಮನಸ್ತಾಪವಿದೆ.
ಹಾಗೆಂದೇ “ಫಿಕ್ಸೆಡ್ ಡಿಪಾಸಿಟ್’ ಯಾರ ಹೆಸರಲ್ಲಿ ಇಡುವುದು ಎಂದು ಯೋಚಿಸಿದೆ. ತಟ್ಟನೆ “ತಾಯಿಮನೆ’ಯ ಆ ಮದರ್ ಇಂಡಿಯಾ ಜ್ಯೋತಿಗೆ ಫೋನ್ ಮಾಡಿದೆ. ಜ್ಯೋತಿಗೆ “ಬ್ಯಾಂಕ್ ಆಫ್ ಇಂಡಿಯಾ’ದಲ್ಲಿ ಆಕೆಯ ಹೆಸರಿನಲ್ಲಿ ಒಂದು ಪ್ರತ್ಯೇಕ ಅಕೌಂಟ್ ತೆರೆಯಲು ಹೇಳಿದೆ. “ಜ್ಯೋತಿ, ಇದು ಭಾಂವ್ರಿದೇವಿಯ ಫಂಡ್ಗಾಗಿ ತೆರೆಯುವ ಅಕೌಂಟ್. ಇದರಲ್ಲಿ ಡಿಸೆಂಬರ್ವರೆಗೆ ಸಂಗ್ರಹವಾಗುವ ಹಣವನ್ನು ಜನವರಿಯಲ್ಲಿ ಫಿಕ್ಸೆಡ್ ಡಿಪಾಸಿಟ್ನಲ್ಲಿ ಇಡೋಣ. ಭಾಂವ್ರಿ ಇರುವವರೆಗೂ ಆಕೆಗೆ ಪ್ರತಿ ತಿಂಗಳು ಬಡ್ಡಿಯ ಹಣ ಸೇರುವಂತೆ ವ್ಯವಸ್ಥೆ ಮಾಡೋಣ. ನೀನು ವಯಸ್ಸಿನಲ್ಲಿ ಚಿಕ್ಕವಳು. ಭಾಂವ್ರಿಯ ನಂತರ ಈ ಹಣ “ತಾಯಿಮನೆ’ಗೆ ಸೇರಬೇಕು’ ಎಂದೆ.
ಭಟೇರಿಯಿಂದ ಆ ರಾತ್ರಿ ಹಿಂತಿರುಗಿ ಬಂದೆವು. ನಂತರದ ದಿನ, ಜಯಪುರದಲ್ಲಿ ಭಾಂವ್ರಿಗೆ ಇನ್ನಿಲ್ಲದ ಹಾಗೆ ನೆರವಿಗೆ ನಿಂತ, ಆಕೆಗೆ ನ್ಯಾಯ ದೊರೆಯಬೇಕೆಂದು ಹೋರಾಡುತ್ತಿರುವ ಕವಿತಾ ಶ್ರೀವಾಸ್ತವ ಅವರ ಮನೆಯನ್ನು ಹುಡುಕಿ ಹೋದೆ. ಅವರ ಮನೆಯಲ್ಲಿ ಅನೇಕ ನಿರ್ಗತಿಕ ಹೆಣ್ಣುಮಕ್ಕಳಿದ್ದರು. ಹಿಂಸೆ, ಅತ್ಯಾಚಾರದಿಂದ ನೊಂದು ರಕ್ಷಣೆ ಬಯಸಿ ಬಂದ ಹೆಣ್ಣುಮಕ್ಕಳಿಗೆ ತಮ್ಮ ಮನೆಯಲ್ಲಿಯೇ ತಾತ್ಕಾಲಿಕ ಆಶ್ರಯ ನೀಡಿ ಕಾಪಿಟ್ಟವರು ಕವಿತಾ. ಸಮಾಜ ಸೇವೆಗೆ ತಮ್ಮ ಬದುಕನ್ನೇ ಮುಡಿಪಿಟ್ಟವರು. ನಾನು ಕುಳಿತಂತೆ ಓರ್ವ ಹೆಣ್ಣುಮಗಳು ಚಹಾ ತಂದು ಕೊಟ್ಟಳು. “ಈಕೆಯ ಮೇಲೆ ಮೂರು ತಿಂಗಳ ಹಿಂದೆ ಸಾಮೂಹಿಕ ಅತ್ಯಾಚಾರ ನಡೆಯಿತು’ ಎಂದು ಹೇಳುವಾಗ ಆ ಎಳೆಯ ಹೆಣ್ಣು ಮಗಳನ್ನು ನೋಡಿ, ಹೊಟ್ಟೆಯಲ್ಲಿ ವಿಪರೀತ ಸಂಕಟವಾಯಿತು. ಆಕೆಗೆ ಆಶ್ರಯ ನೀಡಿ, ಬದುಕಿಗೊಂದು ಮಾರ್ಗ ತೋರಿಸಲು ಕವಿತಾ ಶ್ರಮಿಸುತ್ತಿದ್ದಾರೆ.
ಇಂದಿಗೂ ರಾಜಾಸ್ತಾನದಲ್ಲಿ ಸಾಮೂಹಿಕ ಅತ್ಯಾಚಾರಗಳು ಎಗ್ಗಿಲ್ಲದೆ ನಡೆಯುತ್ತಿವೆ. ಅತ್ಯಾಚಾರಿಗಳ ಧನಬಲ, ರಾಜಕೀಯ ಬಲದೆದುರು ಅಸಹಾಯಕ ಹೆಣ್ಣು ಮಕ್ಕಳಿಗೆ ಕೇಸು ದಾಖಲಿಸುವ ಧೈರ್ಯವಿಲ್ಲ. ದಾಖಲಾಗದ ಇಂತಹ ನೂರಾರು, ಸಾವಿರಾರು ಅತ್ಯಾಚಾರಗಳಿಗೆ ಕೊನೆ ಎಲ್ಲಿ? ದಶಕ ದಶಕಗಳು ಭಾಂವ್ರಿ ನಡೆದು ಬಂದಿರುವ ಕೆಂಡದ ಹಾದಿಯ ಜ್ವಲಂತ ಉದಾಹರಣೆ ಎದುರಿಗೆ ಇರುವಾಗ, ನ್ಯಾಯದ ಬಾಗಿಲು ತಟ್ಟುವ ಧೈರ್ಯ ಯಾರು ಮಾಡಬಲ್ಲರು?
ಕವಿತಾ ಹೇಳಿದರು “21 ವರ್ಷ ಹೈಕೋರ್ಟಿನಲ್ಲಿ ಕೇಸು ಕೊಳೆಯುತ್ತಿದೆ. ನಾವು ಹೋರಾಟ ನಿಲ್ಲಿಸಿಲ್ಲ. ಇನ್ನು ಒಂದು ಅಥವಾ ಎರಡು ವರ್ಷಕ್ಕೆ ತೀರ್ಪು ಬರುವ ಸಂಭಾವನೆ ಇದೆ. ಭಾಂವ್ರಿಯ ಪರ ಆದರೂ, ಆಕೆಯ ವಿರುದ್ಧವಾಗಿ ಆದರೂ, ಭಾಂವ್ರಿಗೆ ಭಟೇರಿಯಲ್ಲಿ ಬದುಕಲು ಬಿಡುವುದಿಲ್ಲ. ಆಕೆಯ ಜೀವಕ್ಕೇ ಅಪಾಯವಿದೆ. ಈಕೆಯ ಮೇಲೆ ಅತ್ಯಾಚಾರ ಮಾಡಿದವರದು ಪ್ರಬಲ ಕುಳ, ರಾಜಕೀಯವಾಗಿ ಅವರು ಶಕ್ತರು. ಅದಕ್ಕೆಂದೇ, ಅಂತಹ ಸಂದರ್ಭಕ್ಕೆ ಭಾಂವ್ರಿ ಮತ್ತು ಆಕೆಯ ಪತಿ ಜಯಪುರಕ್ಕೆ ಬಂದು ನೆಲೆಸಲು ಒಂದು ಸಣ್ಣ ಮನೆ ಮಾಡುವ ಪ್ರಯತ್ನ ನಮ್ಮದು’.
ಹೆಣ್ಣುಮಕ್ಕಳಿಗೆ ಸುರಕ್ಷಣೆಯೇ ಇಲ್ಲದ ಇಂತಹ ಕೆಟ್ಟ ಸಾಮಾಜಿಕ ಸಂದರ್ಭದಲ್ಲಿ, ಭಾಂವ್ರಿಯ ಈ ಚಾರಿತ್ರಿಕ ಹೋರಾಟ ಮತ್ತೂ ಮಹತ್ವದ್ದಾಗಿದೆ. ಹಣದ ಎಷ್ಟೇ ಆಮಿಷ ತೋರಿದರೂ, ಆಕೆ ತನ್ನ ಕೇಸನ್ನು ವಾಪಾಸು ತೆಗೆದುಕೊಂಡಿಲ್ಲ. ಇದು ತನ್ನೊಬ್ಬಳ ಹೋರಾಟ ಅಲ್ಲ ಎಂದು ಆಕೆಗೆ ತಿಳಿದಿದೆ.
ಇದು ನಮ್ಮೆಲ್ಲರ ಹೋರಾಟ ಕೂಡಾ. ಇದು ನಮ್ಮ ಸಮಾಜದ ಪ್ರತಿಯೊಂದು ಹೆಣ್ಣು ಮಗುವೂ ಮರ್ಯಾದೆಯಿಂದ ಬದುಕುವ ಹಕ್ಕನ್ನು ಬೇಡಿದ ಹೋರಾಟ. ಭಾಂವ್ರಿಯ ಈ ಇಳಿ ವಯಸ್ಸಿನಲ್ಲಿ ಆಕೆಗೆ ಸಣ್ಣ ರೀತಿಯಲ್ಲಿಯಾದರೂ ಜೊತೆ ನಿಲ್ಲುವುದು ನಮ್ಮೆಲ್ಲರ ಕರ್ತವ್ಯ ಎಂದು ನಾನು ಭಾವಿಸುತ್ತೇನೆ.
ಹಿಂತಿರುಗಿ ಬಂದು ತಿಂಗಳ ಮೇಲಾಯಿತು. “ಜ್ಯೋತಿ ಅಕೌಂಟ್ ತೆರೆದೆಯಾ?’ ಫೋನ್ ಮಾಡಿ ಕೇಳಿದೆ. ಭಾಂವ್ರಿಯ ಫಂಡ್ಗಾಗಿ ಅಕೌಂಟ್ ತೆರೆದಿದ್ದರು. “ಅಕೌಂಟ್ ನಂಬರ್ ಏನು?’ ಕೇಳಿದೆ. “ಅಕೌಂಟ್ ನಂಬರ್: 842610110007117, ಬ್ಯಾಂಕ್ ಆಫ್ ಇಂಡಿಯಾ, ಎಚ್.ಎಸ್.ಆರ್. ಲೇಔಟ್ ಬ್ರಾಂಚ್, ಬೆಂಗಳೂರು’ ಎಂದರು. ಭಾಂವ್ರಿಯ ಫಂಡ್ಗೆ ತನ್ನ ಪುಟ್ಟ ಕಾಣಿಕೆಯ ಚೆಕ್ ಬರೆದು ಮಗಳು ಕೊಟ್ಟಳು.
ಎರಡು ದಶಕಗಳ ಹಿಂದೆ ನಾವೇ ಕಟ್ಟಿ ಹಾಡಿದ ಜಾಗೃತಿ ಗೀತೆ ಕಿವಿಯಲ್ಲಿ ಮೊಳಗಿತ್ತು
“ಮಥುರಾ ಪ್ರಕರಣ, ಕೋಲಾರದನುಸೂಯ
ತಿಪಟೂರು ಶಶಿಕಲಾ, ಮಾಯಾತ್ಯಾಗಿ
ಕುಷ್ಟಗಿ ಶರಣವ್ವ , ಭಟೇರಿ ಭಾಂವ್ರಿ
ಬೆಳೆದಿದೆ ಪಟ್ಟಿ ನಿರಂತರದಿ.
ನಮ್ಮಕ್ಕ ನಮ್ಮ ತಂಗಿ, ನಮ್ಮವ್ವ ನಮ್ಮ ಸೊಸೆ
ನಮ್ಮಂಗಳದೀ ಮೊಗ್ಗುಗಳು
ನಿರ್ಭೀತಿಯಿಂದ ಹಸನಾಗಿ ಬದುಕಲು
ಬನ್ನಿರಿ ಜೊತೆ ನಿಲ್ಲಿ ಹೋರಾಡುವಾ…’
ಕಡೆಗೂ ಕೋರ್ಟಿನಲ್ಲಿ ಭಾಂವ್ರಿಗೆ ನ್ಯಾಯ ಸಿಗುವುದೋ ಇಲ್ಲವೋ ತಿಳಿಯದು. ಆದರೆ ಆಕೆಯ ಬದುಕು ಸಂಜೆಯಲ್ಲಿ ಒಂದಿಷ್ಟು ಆರ್ಥಿಕ ನೆರವು ನೀಡುವುದು ನಮ್ಮಿಂದ ಸಾಧ್ಯ. ಬನ್ನಿ ಭಾಂವ್ರಿಯೊಡನೆ ಆಕೆಯ ಬದುಕಿನುದ್ದಕ್ಕೆ ನಾವು ಕೈಜೋಡಿಸಿ ನಿಲ್ಲೋಣ.
@ನೇಮಿಚಂದ್ರ



