ಮೂಡಬಿದ್ರೆ : ಇಲ್ಲಿನ ಬಸ್ಸು ನಿಲ್ದಾಣದಿಂದ ವಿದ್ಯಾಗಿರಿ ಕಡೆಗೆ ಆಟೋ ರಿಕ್ಷಾವೊಂದು ಪಲ್ಟಿಯಾಗಿ ಚಾಲಕ ಸಾವನ್ನಪ್ಪಿದ ಘಟನೆ ಮಂಗಳವಾರ ರಾತ್ರಿ ನಡೆದಿದೆ.
ಪುತ್ತಿಗೆ ಪದವು ನಿವಾಸಿ ನಾರಾಯಣ ಕುಲಾಲ್ (45) ದುರ್ಮರಣಕ್ಕೀಡಾದ ಆಟೋ ಚಾಲಕ. ಮೂಡಬಿದ್ರೆ ಬಸ್ಸು ನಿಲ್ದಾಣದ ಕಡೆಯಿಂದ ವಿದ್ಯಾಗಿರಿ ಕಡೆಗೆ ಬಾಡಿಗೆಗೆ ಹೋಗುತ್ತಿದ್ದ ಸಂದರ್ಭ ಗಾಂಧಿನಗರ ಬಳಿ ಅವಘಡ ಸಂಭವಿಸಿದೆ. ಎದುರಿಂದ ಬರುತ್ತಿದ್ದ ವಾಹನವೊಂದಕ್ಕೆ ಜಾಗ ಬಿಟ್ಟುಕೊಡುವ ಸಂದರ್ಭ ಚಾಲಕನ ನಿಯಂತ್ರಣ ತಪ್ಪಿ ರಸ್ತೆ ಬದಿಗೆ ಪಲ್ಟಿ ಹೊಡೆದಿದೆ. ಈ ಸಂದರ್ಭ ಗಂಭೀರ ಗಾಯಗೊಂಡ ನಾರಾಯಣ ಅವರನ್ನು ಮಂಗಳೂರಿನ ಆಸ್ಪತ್ರೆಗೆ ಸಾಗಿಸುವ ಯತ್ನ ನಡೆದಿದೆ. ಆದರೆ ದಾರಿ ಮಧ್ಯೆ ಕೊನೆಯುಸಿರೆಳೆದಿದ್ದಾರೆ. ರಿಕ್ಷಾದಲ್ಲಿದ್ದ ಇತರ ಮೂವರು ಪ್ರಯಾಣಿಕರು ಸಣ್ಣಪುಟ್ಟ ಗಾಯಗಳೊಂದಿಗೆ ಪಾರಾಗಿದ್ದಾರೆ.