ದಾವಣಗೆರೆ : ಕುಂಬಾರ ಸಮಾಜದವರು ಭಿನ್ನ ಭೇದವನ್ನು ಮರೆತು ದೊಡ್ಡ ಪ್ರಮಾಣದಲ್ಲಿ ಸಂಘಟಿತರಾಗಿ ಒಕ್ಕೊರಲಿನಿಂದ ಪ್ರತಿಭಟಿಸುವಂತಹ ಮನೋಭಾವ ಬೆಳೆಸಿಕೊಂಡಾಗ ಮಾತ್ರ ಸಮಾಜ ಅಭಿವೃದ್ಧಿ ಹೊಂದಲು ಸಾಧ್ಯ ಎಂದು ಕನ್ನಡ ಸಾಹಿತ್ಯ ಅಕಾಡೆಮಿ ಮತ್ತು ನೃಪತುಂಗ ಪ್ರಶಸ್ತಿ ಪುರಸ್ಕೃತ ಕುಂಬಾರ ವೀರಭದ್ರಪ್ಪ ಹೇಳಿದರು.
ನಗರದ ಕುವೆಂಪು ಕನ್ನಡ ಭವನದಲ್ಲಿ ಅಖಿಲ ಭಾರತ ಕರ್ನಾಟಕ ಸರ್ವಜ್ಞ ಸಾಂಸ್ಕೃತಿಕ ವೇದಿಕೆ ವತಿಯಿಂದ ಸಿದ್ಧಗಂಗಾ ವಿದ್ಯಾ ಸಂಸ್ಥೆಯ ಶಿವಣ್ಣ ಅವರಿಗೆ ಹಮ್ಮಿಕೊಂಡಿದ್ದ ಅಭಿನಂದನಾ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಕುಂಬಾರ ಎಂದರೆ ಅವಮಾನ ಎಂಬ ಭಾವನೆ ಜನಾಂಗದವರಲ್ಲಿ ಮೂಡಿದೆ. ಇಂತಹ ಮನೋಭಾವನೆಯನ್ನು ಮೊದಲು ಬಿಡಬೇಕು. ಕುಂಬಾರರು ಕುಂಬಾರ ವೃತ್ತಿ ಇಲ್ಲದಿದ್ದರೆ ಸಮಾಜದ ಇರುವಿಕೆ ಸಾಧ್ಯವಿಲ್ಲ. ನಮ್ಮ ಕುಲ ಕಸುಬನ್ನು ಗುರುತಿಸುವಂತಹ ಕೆಲಸವಾಗಬೇಕು ಎಂದು ಕರೆ ನೀಡಿದರು.
ಸಮಾಜದವರು ಹೊಂದಿಕೊಂಡು ಹೋಗುವ ಹಾಗೂ ಜಾಗತೀಕರಣ ಸವಾಲಿಗೆ ಸಮನಾಗಿ ನಿಲ್ಲುವಂತಹ ಕಾರ್ಯವಾಗಬೇಕು. ಮಕ್ಕಳಿಗೆ ಉತ್ತಮ ಶಿಕ್ಷಣ ನೀಡಿ ಉಜ್ವಲ ಭವಿಷ್ಯ ನಿರ್ಮಾಣದತ್ತ ಗಮನಹರಿಸಬೇಕು. ಆರ್ಥಿಕವಾಗಿ ಸಹಾಯ ಮಾಡುವ ಮೂಲಕ ಬಡವರನ್ನೂ ಕೂಡ ಸಮಾಜದ ಮುಖ್ಯವಾಹಿನಿಗೆ ತರಬೇಕು ಎಂದು ಅವರು ಹೇಳಿದರು.
ಕುಂಬಾರರು ಮಾಡಿದ ಮಡಿಕೆ ಚೂರುಗಳಿಂದ ಕುಂಬಾರರ ನಾಗರಿಕತೆಯನ್ನು ಕಂಡುಹಿಡಿಯ ಬಹುದಾಗಿದೆ. ಕನಕದಾಸರು, ವಾಲ್ಮೀಕಿ ಸೇರಿದಂತೆ ಇನ್ನಿತರ ದಾರ್ಶನಿಕರಿಗೆ ಸರಕಾರದಿಂದ ಗೌರವ ದೊರೆತಿದೆ. ಆದರೆ ೧೬ನೇ ಶತಮಾನದ ತತ್ವಜ್ಞಾನಿ ಹಾಗೂ ದಾರ್ಶನಿಕ ಸರ್ವಜ್ಞನಿಗೆ ಮಾನ್ಯತೆ ದೊರೆಯದಿರುವುದು ನೋವಿನ ಸಂಗತಿ ಎಂದರು.
ಜಾತಿಗಣತಿ ಬರೆಸುವಾಗ ವೀರಶೈವ, ಲಿಂಗಾಯತ ಎಂದು ಬರೆಸಬಾರದು. ಹಿಂದೂ ಕುಂಬಾರ ಎಂದು ಬರೆಸಿದರೆ ಸರಕಾರದ ಸೌಲಭ್ಯಗಳು ದೊರೆಯಲಿದೆ. ಕರ್ನಾಟಕ ಲೋಕ ಸೇವಾ ಆಯೋಗದಲ್ಲಿ ಕುಂಬಾರ ಜನಾಂಗದ ಯಾರಾದರೊಬ್ಬ ಸದಸ್ಯರಾಗಿ ಅಧಿಕಾರ ಕಾಣುವಂತಾಗಬೇಕಿತ್ತು. ಆದರೆ ಅದು ಸಾಧ್ಯವಾಗಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು.
ಚಂದ್ರಶೇಖರಪ್ಪ, ಡಾ. ನಾಗರಾಜ್, ಎಚ್ ಎಂ ಹನುಮಗೌಡ, ಮಾಗನೂರು ನಂಜುಡಪ್ಪ, ಕೆ. ಟಿ ಪುಷ್ಪರಾಜ್ ಮುಂತಾದವರು ಉಪಸ್ಥಿತರಿದ್ದರು.