ಭಾರತದ ಪ್ರಮುಖ ಪರೀಕ್ಷೆಗಳಲ್ಲಿ ಒಂದಾದ ಜೆಇಇ- ಮೈನ್ 2014ರ ಪರೀಕ್ಷೆಯಲ್ಲಿ 360ರಲ್ಲಿ 320 ಅಂಕಗಳನ್ನು ಪಡೆದು ಉಡುಪಿ ಮತ್ತು ದ.ಕ. ಜಿಲ್ಲೆಗೆ ಪ್ರಥಮ ಸ್ಥಾನ ಪಡೆದಿದ್ದ ನಗರದ ಸುಮಿತ್ ನಿನ್ನೆ ಪ್ರಕಟಗೊಂಡ ಸಿಇಟಿಯ ಎಂಜಿನಿಯರಿಂಗ್ ವಿಭಾಗದಲ್ಲಿ ತೃತೀಯ ರ್ಯಾಂಕ್ ಪಡೆದು ತನ್ನ ಸಾಧನೆಗೆ ಮತ್ತೊಂದು ಗರಿಯನ್ನು ಸೇರ್ಪಡೆಗೊಳಿಸಿದ್ದಾನೆ. ಸದ್ಯ ಈ ಸಂಭ್ರಮವನ್ನು ಹಂಚಿಕೊಳ್ಳಲು ಆತ ಊರಿನಲ್ಲಿರಲಿಲ್ಲ. ಮತ್ತೊಂದು ಸಾಧನೆಯ ಗುರಿ ಯೊಂದಿಗೆ ಆತ ಮುಂಬೈಯ ಹೋಮಿಬಾಬಾ ಸೆಂಟರ್ ಫೋರ್ ಸಾಯನ್ಸ್ ಎಜುಕೇಶನ್ ಆ್ಯಂಡ್ ರಿಸರ್ಚ್ನಲ್ಲಿ ಕೆಮಿಸ್ಟ್ರಿ ಒಲಿಂಪಿಯಾಡ್ನಲ್ಲಿ ಭಾಗವಹಿಸಿದ್ದರು. ನಗರದ ಶಾರದಾ ಪದವಿ ಪೂರ್ವ ಕಾಲೇಜಿನ ವಿದ್ಯಾರ್ಥಿಯಾಗಿರುವ ಸುಮಿತ್ ನಗರದ ಕುಂಟಿಕಾನದ ಸೆಂಟರ್ ಫಾರ್ ಎಡ್ವಾನ್ಸ್ಡ್ ಲರ್ನಿಂಗ್ (ಸಿಎಫ್ಎಎಲ್)ನಲ್ಲಿ ತರಬೇತು ಪಡೆದು ಜೆಇಇ ಮೈನ್ ಪರೀಕ್ಷೆಯನ್ನು ಎದುರಿಸಿದ್ದ.
ಸುಮಿತ್ ಭಾರತ ಸರಕಾರ ನಡೆಸುವ ಕೆವಿಪಿವೈ ಪರೀಕ್ಷೆ ಯಲ್ಲಿ ದೇಶದಲ್ಲಿ ಏಳನೆ ರ್ಯಾಂಕ್ ಪಡೆದಿದ್ದಾರೆ. ಈ ಸಾಧನೆಯಿಂದ ಬೆಂಗಳೂರಿನ ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ಸಾಯನ್ಸ್ನಲ್ಲಿ ಮುಂದಿನ ವಿದ್ಯಾಭ್ಯಾಸಕ್ಕಾಗಿ ಆಯ್ಕೆಯಾಗಿದ್ದಾರೆ. ಭಾರತ ಸರಕಾರ ನಡೆಸುವ ಅಂತಾರಾಷ್ಟ್ರೀಯ ಒಲಿಂಪಿಯಾರ್ಡ್ಸ್ನ ಭೌತಶಾಸ್ತ್ರ ಹಾಗೂ ರಸಾಯನ ಶಾಸ್ತ್ರ ವಿಭಾಗ ಗಳಲ್ಲಿ ದೇಶದಿಂದ ಆಯ್ಕೆಯಾದ 38 ವಿದ್ಯಾರ್ಥಿ ಗಳಲ್ಲಿ ಸುಮಿತ್ ಓರ್ವ. ಈ ಯಶಸ್ಸಿಗಾಗಿ ಸುಮಿತ್ಗೆ ಚೆನ್ನಾಯ್ ಮೆಥಮಾಟಿಕ್ಸ್ ಇನ್ಸ್ಟಿಟ್ಯೂಟ್ನಲ್ಲಿ ಮುಂದಿನ ವಿದ್ಯಾಭ್ಯಾಸ ಕ್ಕಾಗಿ ಆಯ್ಕೆ ಮಾಡಲಾಗಿದೆ. ಪಿಯುಸಿ ಪರೀಕ್ಷೆಯಲ್ಲಿ ಸುಮಿತ್ ಗಣಿತ, ರಸಾಯನಶಾಸ್ತ್ರ, ಸಂಖ್ಯಾಶಾಸ್ತ್ರಗಳಲ್ಲಿ ತಲಾ 100 ಅಂಕಗಳನ್ನು ಹಾಗೂ ಭೌತಶಾಸ್ತ್ರದಲ್ಲಿ 99 ಅಂಕಗಳನ್ನು ಪಡೆದಿದ್ದ ಎಂದು ಸಿಎಫ್ಎಎಲ್ನ ಪ್ರಾಂಶುಪಾಲೆ ಸೆವರ್ರಿನ್ ರೊಝಾರಿಯೊ ತಿಳಿಸಿದ್ದಾರೆ. ಕೆಎಸ್ಸಾರ್ಟಿಸಿ ಉದ್ಯೋಗಿ ಎಂ. ಬಾಬು ಕುಲಾಲ್ ಹಾಗೂ ಗೃಹಿಣಿ ಅರುಣಾ ಕುಲಾಲ್ ದಂಪತಿಯ ಪುತ್ರನಾಗಿರುವ ಸುಮಿತ್ ಮುಂದೆ ಎಂಜನಿಯರಿಂಗ್ ಕ್ಷೇತ್ರದಲ್ಲಿ ಹೆಚ್ಚಿನ ಸಾಧನೆಯನ್ನು ಮಾಡುವ ಮಹದಾಸೆ ಆತನ ಪೋಷಕರದ್ದು. ‘‘ಆತ ಹೈಸ್ಕೂಲ್ನಿಂದಲೇ ಓದಿನಲ್ಲಿ ಆಸಕ್ತಿ ಚುರುಕಾಗಿದ್ದ. ಹಲವಾರು ಪ್ರಶಸ್ತಿಗಳನ್ನು ಆತ ಪಡೆದಿದ್ದಾನೆ. ಮಧ್ಯಮ ವರ್ಗದ ಕುಟುಂಬದವರಾದ ನಮಗೆ ಆತನ ಸಾಧನೆ ನಿಜಕ್ಕೂ ಹೆಮ್ಮೆ ತಂದಿದೆ. ಐಐಟಿ ಕ್ಷೇತ್ರದಲ್ಲಿಯೇ ಆತ ಮುಂದುವರಿಯುವ ಆಲೋಚನೆ ಹೊಂದಿದ್ದಾನೆ’’ ಎಂದು ಸುಮಿತ್ ತಾಯಿ ಅರುಣಾ ಮಾಧ್ಯಮದ ಜತೆ ಸಂತಸ ಹಂಚಿಕೊಂಡಿದ್ದಾರೆ.


