ಕರಾವಳಿಯಲ್ಲಿ ತಾಲೂಕು ಪಂಚಾಯತ್ ಹಾಗೂ ಜಿಲ್ಲಾ ಪಂಚಾಯತ್ ಚುನಾವಣೆಯ ಕಾವೇರುತ್ತಿದೆ. ಗ್ರಾಮ ಪಂಚಾಯತ್ ಚುನಾವಣೆಯಲ್ಲಿ ರಾಜಕೀಯ ಪಕ್ಷಗಳು ತೆರೆಮರೆಯಲ್ಲಿ ಮಾತ್ರ ಕೆಲಸ ಮಾಡುತ್ತಿದ್ದವು. ಆದರೆ ಈಗ ಪಕ್ಷಗಳ ಅತಿರಥ ಮಹಾರಥರು ತಮ್ಮ ತಮ್ಮ ಅಭ್ಯರ್ಥಿಗಳ ಪರವಾಗಿ ನೇರವಾಗಿ ಕಣಕ್ಕಿಳಿದಿದ್ದಾರೆ. ಎಲ್ಲಾ ಕಡೆ ಜಾತಿ, ಧರ್ಮ, ಹಣ ಶಿಫಾರಸ್ಸುಗಳು ಎದ್ದು ಕಾಣುತ್ತಿವೆ.
ಕರಾವಳಿಯ ಹಿಂದೂ ಸಮುದಾಯದ ಪ್ರಮುಖ ಜಾತಿಗಳಾದ ಬಿಲ್ಲವ, ಬಂಟ, ಕುಲಾಲ, ಬ್ರಾಹ್ಮಣ, ಗಟ್ಟಿ , ಗಾಣಿಗ, ಕೊಠಾರಿ, ಸಫಲಿಗ, ಮಡಿವಾಳ, ಎಸ್ ಸಿ, ಎಸ್ ಟಿ ಸಮುದಾಯದವರು, ಕ್ರಿಶ್ಚಿಯನ್, ಮುಸ್ಲಿಂ ಬಾಂದವರು, ಜೈನರು ಸೀಟಿಗಾಗಿ ಮುಗಿ ಬೀಳುತ್ತಿದ್ದಾರೆ. ಜಿಲ್ಲೆಯಲ್ಲಿ ಬಂಟ್ , ಬಿಲ್ಲವರ ನಂತರ ಅತ್ಯಧಿಕ ಸಂಖ್ಯೆಯಲ್ಲಿರುವ ಕುಲಾಲ ಸಮುದಾಯ ಸಂಘ-ಸಂಸ್ಥೆಗಳು ರಾಜಕೀಯ ಸಮಾನತೆಯ ನ್ಯಾಯ ಬೇಕು ಎಂದು ಹೇಳಿದ ಕೂಗು ರಾಜಕೀಯ ಪಕ್ಷಗಳನ್ನ ಮುಟ್ಟಿದೆ. ಇದರ ಜೊತೆ ಕರಾವಳಿ ಕುಲಾಲ ಯುವವೇದಿಕೆ, ರಾಜ್ಯ ಕುಂಬಾರ ಸಂಘ ಹಾಗೂ ಅದರ ನಾಯಕರು ಹಾಕಿದ ಗುಟುರು ಸಾಕಷ್ಟು ಕೆಲಸ ಮಾಡಿದೆ. ಅವಿಭಜಿತ ದ.ಕ ಜಿಲ್ಲೆಯಲ್ಲಿ 3 ಜಿಲ್ಲಾ ಪಂಚಾಯತ್ ಸೀಟು ಕುಲಾಲ ಸಮುದಾಯಕ್ಕೆ ಸಿಕ್ಕಿದೆ. ಸರಿಸುಮಾರು 10ಕ್ಕೂ ಅಧಿಕ ತಾಲೂಕು ಪಂಚಾಯತ್ ಸೀಟುಗಳು ಕುಲಾಲರಿಗೆ ನೀಡಲಾಗಿದೆ.
ಬಿಜೆಪಿ, ಕಮ್ಮೂನಿಸ್ಟ್ , ಕಾಂಗ್ರೇಸ್ ಪಕ್ಷಗಳಲ್ಲಿ, ಸಂಘ ಪರಿವಾರ, ಡಿವೈಎಫ್ ಐ, ಇಂಟಕ್, ಎಬಿವಿಪಿ, ಭಾರತ ಸೇವಾದಲ, ಎನ್ ಎಸ್ ಯುಐಗಳಲ್ಲಿ ಕುಲಾಲರು ದುಡಿಯುತ್ತಿದ್ದಾರೆ. ಕಾಂಗ್ರೇಸ್ , ಬಿಜೆಪಿಯಲ್ಲಿ ಹೆಚ್ಚು ತೊಡಗಿಸಿಕೂಂಡರೂ ಸಹಾ ಈ ಬಾರಿ ಬಿಜೆಪಿ ಹಾಗೂ ಕಮ್ಮೂನಿಸ್ಟ್ ಪಕ್ಷಗಳು ಕುಲಾಲ ಸಮುದಾಯಕ್ಕೆ ಕೊಟ್ಟ ಪ್ರಾಮುಖ್ಯತೆ ಕಾಂಗ್ರೇಸ್ ಕೊಡುವಲ್ಲಿ ಎಡವಿದೆ. ಕುಲಾಲರಿಗೆ ಜಿ.ಪಂ ಸ್ಥಾನ ಕೊಡದ ಕಾಂಗೈ ಒಂದೋ ಎರಡೋ ತಾ.ಪಂ ಸೀಟು ನೀಡಿ ಕರಾವಳಿಯಲ್ಲಿರುವ ಸುಮಾರು 3 ಲಕ್ಷದಷ್ಟು ಕುಲಾಲರನ್ನು ಕಡೆಗಣಿಸಿದೆ. ಕಾಂಗೈಗಿಂತ ಜಾಸ್ತಿ ತಾ.ಪಂ ಸೀಟುಗಳನ್ನು ಕಮ್ಮೂನಿಸ್ಟ್ ಪಕ್ಷ ಕುಲಾಲರಿಗೆ ನೀಡಿದೆ.
ಬಿಜೆಪಿ ಸುಮಾರು 8ರಿಂದ 10 ತಾ.ಪಂ ಸೀಟು ನೀಡಿದ್ದಲ್ಲದೆ, ಉಡುಪಿ ಹಾಗು ದ.ಕ ಜಿಲ್ಲೆಯ ಪ್ರತಿಷ್ಠಿತ ಜಿಪಂ ಕ್ಷೇತ್ರಗಳಾದ ಕಟೀಲು ಹಾಲಾಡಿ ಹಾಗು ಕುರ್ನಾಡುಗಳಲ್ಲಿ ಕುಲಾಲ ಸಮುದಾಯಕ್ಕೆ ಸೀಟು ನೀಡಿ ಸಮುದಾಯದ ಗೌರವವನ್ನು ಹೆಚ್ಚಿಸಿದೆ. ಸಂಘ ಪರಿವಾರ, ಭಜರಂಗದಳ , ವಿಶ್ವ ಹಿಂದೂ ಪರಿಷತ್ ಗಳಲ್ಲಿ ಹಗಲಿರುಳು ದುಡಿಯುವ ಕುಲಾಲ ಯುವಕರಿಗೆ ಸಾಮಾಜಿಕ ನ್ಯಾಯ ಕೊಟ್ಟಿದೆ. ಆದರೆ ಗುರುಪುರ, ಬಂಟ್ವಾಳ, ಬೆಳ್ತಂಗಡಿ, ಪುತ್ತೂರು, ಮಂಗಳೂರು, ಕಾಪು, ಉಡುಪಿ, ಕುಂದಾಪುರ, ಕಾರ್ಕಳಗಳಲ್ಲಿ ಕಾಂಗೈ ತನ್ನ ಜೊತೆಗಿದ್ದ ಕುಲಾಲ ನಾಯಕರನ್ನು ಕೈಬಿಟ್ಟಿದ್ದು ಎದ್ದು ಕಾಣುತ್ತದೆ. ಬಂಟ್ ಹಾಗು ಬಿಲ್ಲವರ ಬಳಿಕ ಅಧಿಕ ಸಂಖ್ಯೆಯಲ್ಲಿರುವ ಕುಲಾಲರಿಗೆ ಕಾಂಗೈ ಕನಿಷ್ಠ ಒಂದಾದರೂ ಗೆಲ್ಲಬಲ್ಲ ಜಿ.ಪಂ ಸೀಟು ನೀಡಬಹುದಿತ್ತು. ಇದು ಮುಂಬರುವ ದಿನಗಳಲ್ಲಿ ಕಾಂಗೈಗೆ ಮುಳುವಾಗಲಿದೆ ಎಂಬ ಮಾತು ಕಾಂಗೈಯಲ್ಲಿರುವ ಕುಲಾಲ ನಾಯಕರೇ ಹೇಳುತ್ತಿದ್ದಾರೆ.
ಒಟ್ಟಾರೆ ಕುಲಾಲರ ಧ್ವನಿ ಕರಾವಳಿಯ ರಾಜಕೀಯದಲ್ಲಿ ಕೇಳಿ ಬರುತ್ತಿದೆ. ಅದರಲ್ಲೂ ಕುಲಾಲ ಮಹಿಳೆಯರು ರಾಜಕೀಯದಲ್ಲಿ ಮೇಲುಗೈ ಸಾಧಿಸಿರುವುದು ಸ್ಪಷ್ಟವಾಗಿ ಕಾಣುತ್ತಿದೆ. ಬಿಜೆಪಿ ನೀಡಿದ ಎಲ್ಲಾ 3 ಜಿಪಂ ಸೀಟುಗಳು ಕುಲಾಲ ಮಹಿಳೆಯರ ಪಾಲಾಗಿವೆ. ಅಂತೆಯೇ ತಾಪಂದಲ್ಲಿ ಬಿಜೆಪಿ, ಕಮ್ಮೂನಿಸ್ಟ್ ಹಾಗು ಕಾಂಗೈ ನೀಡಿದ ಹಲವು ಸೀಟುಗಳು ಕುಲಾಲ ಮಹಿಳೆಯರ ಪಾಲಾಗಿದೆ.
ಇದು ಕರಾವಳಿಯಲ್ಲಿ ಕುಲಾಲ ಸಂಘಟನೆ ಮಹಿಳಾ ಸಂಘಟನೆ ಮಹಿಳಾ ಶಿಕ್ಷಣ ಹಾಗು ಪುರುಷರು ಮಹಿಳೆಯರ ಹಿಂದೆ ನಿಂತು ಮಾರ್ಗದರ್ಶನ ಮಾಡುವ, ಹೋರಾಡುವ ಹಾಗು ರಾಜಕೀಯ ಮಾಡುವ ಚಾಕಚಕ್ಯತೆಯನ್ನ ತೋರಿಸುತ್ತದೆ. ಕರಾವಳಿ ಕುಲಾಲ ಯುವವೇದಿಕೆ ರಾಜಕೀಯ ನ್ಯಾಯಕ್ಕಾಗಿ ಮಾಡಿದ ಹೋರಾಟಗಳು ಪ್ರತೀ ವಿಧಾನ ಸಭಾ ಕ್ಷೇತ್ರದಲ್ಲಿ ರಾಜಕೀಯ ಹೋರಾಟಕ್ಕಾಗಿ ತಯಾರು ಮಾಡಿದ ಯುವಕರು ಈ ಯಶಸ್ಸಿನ ಹಿಂದಿದ್ದಾರೆ.
ಒಟ್ಟಾರೆ ಕರಾವಳಿಯ ಕುಲಾಲ ಸಮುದಾಯದ ರಾಜಕೀಯ ಬೆಳವಣಿಗೆ ಇಡೀ ರಾಜ್ಯದ ಕುಂಬಾರ ಸಮುದಾಯಕ್ಕೆ ಪ್ರೇರಣೆ ಯಾಗಲಿದೆ. ಒಡಕು-ವೈಮನಸ್ಸು ಬಿಟ್ಟು ಕುಂಬಾರ ಸಮುದಾಯ ಒಗ್ಗಟ್ಟಾಗಲು ಇದು ಸುವರ್ಣ ಕಾಲ.
ಡಾ.ಎಂ.ಅಣ್ಣಯ್ಯ ಕುಲಾಲ್ ಉಳ್ತೂರು











