ಸ್ವಂತದ ಮನೆ ಹೊಂದುವುದು ಪ್ರತಿಯೊಬ್ಬರ ಕನಸು. ಸಾಲ ಸೋಲ ಮಾಡಿ, ಹತ್ತಾರು ಕಡೆಯಿಂದ ಹಣವನ್ನು ಹೊಂದಿಸಿ, ಇಪ್ಪತ್ತೈದು ಕಷ್ಟ ಕಾರ್ಪಣ್ಯಗಳನ್ನು ಸಹಿಸಿ ನಮ್ಮದೇ ಎಂಬ ಮನೆಯೊಂದು ಸಿದ್ಧವಾದ ಬಳಿಕ ಆ ಮನೆಯಲ್ಲಿ ವಾಸ್ತವ್ಯ ಹೂಡುವುದು ಜೀವನದ ಅತ್ಯಂತ ಸಂಭ್ರಮದ ಕ್ಷಣಗಳು.
ಈ ಮನೆ ತಮಗೆ ಸದಾ ನೆಮ್ಮದಿ, ಸಮೃದ್ಧಿ ತರಲಿ, ಮನೆಯಲ್ಲಿ ಸದಾ ಶಾಂತಿ ತುಂಬಿರಲಿ ಎಂಬ ಪ್ರಾರ್ಥನೆಯ ಮೂಲಕ ಮನೆಯನ್ನು ಪ್ರವೇಶಿಸುವುದು ಬಹುತೇಕ ಎಲ್ಲಾ ಧರ್ಮಗಳಲ್ಲಿ ಆಚರಿಸಿಕೊಂಡು ಬಂದಿರುವ ಸಂಪ್ರದಾಯ.
ಹಿಂದೂ ಸಂಪ್ರದಾಯದಲ್ಲಿ ಪ್ರಥಮ ಬಾರಿಗೆ ಮನೆಯನ್ನು ಪ್ರವೇಶಿಸುವ ವಿಧಿಯನ್ನು ‘ಗೃಹ ಪ್ರವೇಶ’ ಎಂದು ಕರೆಯಲಾಗುತ್ತದೆ. ಆದರೆ ಇದಕ್ಕೆ ಒಂದು ನಿಗದಿತ ದಿನ, ವೇಳೆ ಮತ್ತು ವಿಶೇಷ ಪೂಜೆಯನ್ನು ಏರ್ಪಾಡು ಮಾಡಲಾಗುತ್ತದೆ. ಪಂಚಾಂಗವನ್ನು ಪರಿಗಣಿಸಿ ಇದಕ್ಕೆ ಅತಿ ಸೂಕ್ತವಾದ ದಿನವನ್ನು ಪಂಡಿತರು ಸೂಚಿಸುತ್ತಾರೆ.
ಅಂತೆಯೇ ಗ್ರಹಗಳ ಚಲನೆಯನ್ನಾಧರಿಸಿ ಗೃಹಪ್ರವೇಶದ ವೇಳೆಯಾದ ಮುಹೂರ್ತವನ್ನೂ ನಿಗದಿ ಪಡಿಸಲಾಗುತ್ತದೆ. ಈ ಗೃಹ ಪ್ರವೇಶದ ವಿಧಿ ವಿಧಾನಗಳಲ್ಲಿ ಕೆಲವೊಂದು ವಿಧಿಗಳನ್ನು ಚಾಚೂ ತಪ್ಪದೆ ಪಾಲಿಸುತ್ತಾರೆ. ಅದಕ್ಕೆ ತನ್ನದೇ ಆದ ಕ್ರಮಗಳು ಇವೆ. ಇಲ್ಲಿ ನಾವು ಹೊಸ ಮನೆಯನ್ನು ಪ್ರವೇಶಿಸುವ ನಮ್ಮ ಓದುಗರಿಗಾಗಿ ಅವುಗಳನ್ನು ನೀಡಿದ್ದೇವೆ ಓದಿ ತಿಳಿದುಕೊಳ್ಳಿ..
ಪುರಾತನ ಗ್ರಂಥಗಳ ಪ್ರಕಾರ :-
ನೂತನ ಮನೆ ಹೊಸತೋ, ಹಳೆಯದೋ, ಅಥವಾ ಹಳೆಯ ಮನೆಯನ್ನು ಕೆಡವಿ ಹೊಸತು ಕಟ್ಟಿಸಿದ್ದೋ ಎಂಬ ಮಾಹಿತಿಯ ಮೇರೆಗೆ ಪುರಾತನ ಗ್ರಂಥಗಳಲ್ಲಿ ಮೂರು ತರಹದ ಗೃಹ ಪ್ರವೇಶಗಳನ್ನಾಗಿ ವಿಂಗಡಿಸಲಾಗಿದೆ.
1) ಅಪೂರ್ವ: ಇದು ಹೊಸದಾಗಿ ಕಟ್ಟಿರುವ ಮನೆಯಲ್ಲಿ ವಾಸಿಸಲು ಪ್ರಾರಂಭಿಸಲು ಆಚರಿಸುವ ಗೃಹಪ್ರವೇಶವಾಗಿದೆ.
2) ಸಪೂರ್ವ: ಇದು ಈಗಾಗಲೇ ಬೇರೆಯವರು ವಾಸ್ತವ್ಯವಿದ್ದ ಮನೆಯಾಗಿದ್ದು ಅವರಿಂದ ಖರೀದಿಸಿ ಹೊಸದಾಗಿ ವಾಸ್ತವ್ಯ ಹೂಡುವ ಗೃಹಪ್ರವೇಶವಾಗಿದೆ.
3) ದ್ವಂದ್ವ: ಒಂದು ವೇಳೆ ಪ್ರಕೃತಿ ವಿಕೋಪ ಅಥವಾ ಜೀರ್ಣವಾಗಿದ್ದ, ಶಿಥಿಲವಾದ ಕಟ್ಟಡವನ್ನು ಪೂರ್ಣವಾಗಿ ಅಥವಾ ಭಾಗಶಃ ಕೆಡವಿ ಹೊಸದಾಗಿ ಕಟ್ಟಿಸಿದ ಮನೆಯಾದರೆ ಹೊಸದಾಗಿ ವಾಸ್ತವ್ಯ ಹೂಡುವ ಗೃಹಪ್ರವೇಶವಾಗಿದೆ.
ಅಪೂರ್ವ ಗೃಹಪ್ರವೇಶಕ್ಕೆ ಪಂಡಿತರು ತಿಳಿಸಿದ ನಿಗದಿತ ಸಮಯಕ್ಕೆ ಸರಿಯಾಗಿ ಗೃಹಪ್ರವೇಶ ನಡೆಸುವುದು ಅತ್ಯಗತ್ಯವಾಗಿದೆ. ಸಪೂರ್ವ ಮತ್ತು ದ್ವಂದ್ವ ಗೃಹಪ್ರವೇಶದಲ್ಲಿ ಮುಹೂರ್ತದ ಸಮಯಕ್ಕಿಂತಲೂ ಮಂತ್ರಗಳ ಪಠಣಕ್ಕೆ ಹೆಚ್ಚಿನ ಆದ್ಯತೆ ನೀಡಲಾಗಿದೆ.
ಮುಹೂರ್ತಕ್ಕೆ ಅತ್ಯಂತ ಸೂಕ್ತವಾದ ಸಮಯ :-
ಪಂಚಾಂಗದ ಪ್ರಕಾರ ಸೂರ್ಯ ಉತ್ತರಾಯಣ ಸ್ಥಾನದಲ್ಲಿದ್ದಾಗ ಹೊಸದಾಗಿ ಕಟ್ಟಿಸಿರುವ ಮನೆಯ ಗೃಹಪ್ರವೇಶಕ್ಕೆ ಉತ್ತಮ ಸಮಯವಾಗಿದೆ. ಹಳೆಯ ಮತ್ತು ನವೀಕರಿಸಿದ ಮನೆಗಳಿಗೆ ಗುರುಗ್ರಹ ಅಥವಾ ಶುಕ್ರಗ್ರಹಗಳು ಅಸ್ತಮಿಸುವ ಸಮಯ ಅತಿ ಸೂಕ್ತವಾಗಿದೆ. ಇಲ್ಲಿ ತಾರಾಪುಂಜದ ಇತರ ತಾರೆಗಳ ಸ್ಥಿತಿ ಗಣನೆಗೆ ಬರುವುದಿಲ್ಲ. ಈ ಮೂರೂ ಗೃಹಪ್ರವೇಶಗಳಿಗೆ ಯಾವ ತಿಂಗಳು ಸೂಕ್ತ ಎಂಬುದನ್ನು ಚಂದ್ರನ ಚಲನೆಯನ್ನಾಧರಿಸಿದ ಪಂಚಾಂಗವನ್ನು ಅನುಸರಿಸಿ ಸೂಕ್ತವಾದ ತಿಂಗಳನ್ನು ಆಯ್ದುಕೊಳ್ಳಬಹುದು.
ಮಂಗಳ ಮುಹೂರ್ತ :-
ಗೃಹ ಪ್ರವೇಶಕ್ಕೆ ಒಳ್ಳೆಯ ಮುಹೂರ್ತವನ್ನು ಜ್ಯೋತಿಷ್ಯಿಗಳಿಂದ ನಿರ್ಧರಿಸಿಕೊಂಡಷ್ಟು ಒಳ್ಳೆಯದು. ಸೂರ್ಯನು ಉತ್ತರಕ್ಕೆ ಚಲಿಸುವ ಉತ್ತರಾಯಣ ಪುಣ್ಯ ಕಾಲವು ಇದಕ್ಕೆ ಒಳ್ಳೆಯ ಸಮಯ. ಅಲ್ಲದೆ ಅಕ್ಷಯ ತೃತಿಯಾ ಮತ್ತು ವಿಜಯ ದಶಮಿಗಳಂತಹ ಸಾರ್ವತ್ರಿಕ ಪುಣ್ಯ ದಿನಗಳಂದು ಗೃಹ ಪ್ರವೇಶ ಮಾಡಿದರೆ ಮತ್ತಷ್ಟು ಒಳ್ಳೆಯದು ಗೃಹ ಪ್ರವೇಶದ ದಿನ ಬ್ರಾಹ್ಮಿ.
ಗೃಹ ಪ್ರವೇಶಕ್ಕೆ ಬೇಕಾಗಿರುವ ಸಾಮಾಗ್ರಿಗಳು :-
ಗಣಪತಿಯ ವಿಗ್ರಹ ಮತ್ತು ಲಕ್ಷ್ಮೀ ಕಳಶ ಅಥವಾ ನೀರನ್ನು ತುಂಬಿರುವ ಒಂದು ಸಣ್ಣ ಕೊಡ. ತೋರಣ, ಸಾಮಾನ್ಯವಾಗಿ ಮಾವಿನ ಎಲೆಗಳ ತೋರಣ. ಇನ್ನೂ ಜೊತೆಗೆ ಪೂಜೆ ಸಾಮಾನುಗಳಾದ ಅರಿಶಿನ, ಕುಂಕುಮ, ಅಗರಬತ್ತಿ, ಕರ್ಪೂರ, ದೀಪಗಳು, ಗಂಧ, ಹಣ್ಣುಗಳು, ಹೂವುಗಳು, ಸಿಹಿ – ತಿನಿಸು ಮತ್ತು ದೇವರಿಗೆ ನೈವೇದ್ಯಗಳು. ಇನ್ನೂ ಹೋಮವನ್ನು ಮಾಡಲು ಬೇಕಾದ ಸಾಮಾಗ್ರಿಗಳು ಅಂದರೆ ಹೋಮದ ಕುಂಡ (ಕಬ್ಬಿಣದ ಬಾಣಲೆಯಂತದ್ದು, ಇಲ್ಲವಾದಲ್ಲಿ ಇಟ್ಟಿಗೆ ಮತ್ತು ಮರಳನ್ನು ಸಹ ಬಳಸುತ್ತಾರೆ.) ಸೌದೆ, ತುಪ್ಪ, ಹವನದ ಪುಡಿ, ಬೆಂಕಿ ಪೊಟ್ಟಣ ಇತ್ಯಾದಿ. ಹಾಲಿನ ಪಾತ್ರೆ.
ಹೊಸ್ತಿಲು ಪೂಜೆ :-
ಇದು ತುಂಬಾ ಮುಖ್ಯವಾದುದು. ಗಣಪತಿ, ಲಕ್ಷ್ಮೀ ಮತ್ತು ಸರಸ್ವತಿಯರನ್ನು ಆರಾಧಿಸಿ, ನಮ್ಮನ್ನು ದುಷ್ಟ ಶಕ್ತಿಗಳಿಂದ ರಕ್ಷಿಸಿ ಎಂದು ಮನೆಯ ಹೊಸಿಲಿನಲ್ಲಿ ಪೂಜೆ ಮಾಡುತ್ತಾರೆ.
ಗೋಮಾತೆಯ ಪೂಜೆ :-
ಹಿಂದೂ ಧರ್ಮದಲ್ಲಿ ಗೋವು ಎಂದರೆ ಸಾಕ್ಷಾತ್ ಮುಕ್ಕೋಟಿ ದೇವತೆಗಳ ಅವಾಸ ಸ್ಥಾನ. ಆದ್ದರಿಂದ ಗೃಹ ಪ್ರವೇಶದ ದಿನ ಹಸುವಿಗೆ ಹೂವಿನ ಹಾರಗಳಿಂದ ಅಲಂಕರಿಸಿ, ಮನೆಯ ಒಳಗೆ ಕರೆದುಕೊಂಡು ಹೋಗಿ ಪ್ರತಿ ಕೋಣೆಯನ್ನು ಸುತ್ತಾಡಿಸಿ, ಅದರ ಆಶೀರ್ವಾದವನ್ನು ಬೇಡುತ್ತಾರೆ.
ಹಸುವಿನ ಜೊತೆಗೆ ಕರುವಿದ್ದರೆ ಮತ್ತಷ್ಟು ಒಳ್ಳೆಯದು. ಒಂದನೆ ಮಹಡಿ ಅಥವಾ ಇತರೆ ಮಹಡಿಗಳಲ್ಲಿ ಮನೆಯನ್ನೋ ಅಥವಾ ಫ್ಲಾಟ್ ಖರೀದಿಸಿದವರು ಕಾಮಧೇನುವನ್ನು ಹೇಗೆ ಪೂಜೆ ಮಾಡುವುದು ಎಂದು ಚಿಂತಿಸಬೇಕಾಗಿಲ್ಲ. ಕೆಳಗಿನ ಮಹಡಿಯಲ್ಲಿ ಚಪ್ಪರ ಹಾಕಿ ಅಲ್ಲೇ ಗೋಮಾತೆಯನ್ನು ಪೂಜಿಸಿ.
ವಾಸ್ತು ಪೂಜೆ :-
ಮನೆಯ ಸದಸ್ಯರು ಮನೆಯೊಳಗೆ ಕಾಲಿಡುವ ಮುನ್ನ ಮನೆಯ ಹೊರಗೇ ನಡೆಸುವ ವಿಶೇಷ ಪೂಜೆಗೆ ವಾಸ್ತು ಪೂಜೆ ಅಥವಾ ವಾಸ್ತು ದೇವತೆ ಎಂದು ಕರೆಯುತ್ತಾರೆ. ಇದರಲ್ಲಿ ತಾಮ್ರದ ಪಾತ್ರೆಯೊಂದರಲ್ಲಿ ನೀರು ಹಾಕಿ ಅದರಲ್ಲಿ ನವಧಾನ್ಯಗಳು ಮತ್ತು ಒಂದು ರೂಪಾಯಿಯ ಪಾವಲಿಯೊಂದನ್ನು ಹಾಕಿಟ್ಟಿರಲಾಗುತ್ತದೆ.
ಪಾತ್ರೆಯ ಮೇಲೆ ತೆಂಗಿನ ಕಾಯಿಯೊಂದನ್ನಿರಿಸಿ ಕೆಂಪು ಬಟ್ಟೆಯೊಂದನ್ನು ಹೊದಿಸಿ ಬಳಿಕ ಕೆಂಪು ದಾರದಿಂದ ಕಟ್ಟಲಾಗುತ್ತದೆ. ಈ ಕೆಂಪು ದಾರಕ್ಕೆ ಮೋಳಿ ಎಂದು ಕರೆಯುತ್ತಾರೆ. ಪಂಡಿತರು ಪೂಜೆಯನ್ನು ನಿರ್ವಹಿಸಿದ ಬಳಿಕ ಪತಿ ಪತ್ನಿಯರು ಈ ಪಾತ್ರೆಯನ್ನು ಜೊತೆಯಾಗಿ ಹಿಡಿದು ಮಂತ್ರಘೋಷಗಳ ನಡುವೆ ಬಲಗಾಲಿಟ್ಟು ಮನೆಯೊಳಗಡಿಯಿಡುತ್ತಾರೆ. ಬಳಿಕ ಮನೆಯೊಳಗಿನ ಹವನ (ಅಗ್ನಿಕುಂಡ) ದ ಬಳಿ ಇರಿಸುತ್ತಾರೆ.
ವಾಸ್ತು ಶಾಂತಿ :-
ವಾಸ್ತು ಶಾಂತಿ ಅಥವಾ ಗೃಹಶಾಂತಿ ಎಂಬ ವಿಧಿಗೆ ಅಗ್ನಿಕುಂಡ ಅಥವಾ ಹವನದ ಅಗತ್ಯವಿದೆ. ಹವನವನ್ನು ಪೂಜಿಸುವ ಮೂಲಕ ಗ್ರಹಗಳ ಪ್ರಭಾವವನ್ನು ತಡೆಯಬಹುದಾಗಿದ್ದು ಮನೆಯಲ್ಲಿದ್ದ ಋಣಾತ್ಮಕ ಮತ್ತು ದುಷ್ಟ ಶಕ್ತಿಗಳನ್ನು ಹೊಡೆದೋಡಿಸಿ ಮನೆಯೊಳಗೆ ಶಾಂತಿಯುತ ವಾತಾವರಣ ಸೃಷ್ಟಿಸಲು ಸಾಧ್ಯವಾಗುತ್ತದೆ. ಪೂಜೆಯ ಎಲ್ಲಾ ವಿಧಿಗಳು ಸಂಪನ್ನಗೊಂಡ ಬಳಿಕ ಪಂಡಿತರಿಗೆ ಮೊದಲಾಗಿ ಔತಣವನ್ನು ನೀಡಲಾಗುತ್ತದೆ.ಬಳಿಕ ಈ ಎಲ್ಲಾ ವಿಧಿಗಳನ್ನು ನಿರ್ವಹಿಸಿದುದಕ್ಕಾಗಿ ದಕ್ಷಿಣೆ ಎಂಬ ಸೂಕ್ತ ಸಂಭಾವನೆ ನೀಡಲಾಗುತ್ತದೆ.
ಇದರೊಂದಿಗೆ ಇತರ ಪೂಜೆಗಳಾದ ಗಣಪತಿ ಪೂಜೆ, ಸತ್ಯನಾರಾಯಣ ಪೂಜೆ ಅಥವಾ ಲಕ್ಷ್ಮೀಪೂಜೆಗಳನ್ನೂ ನಡೆಸಬಹುದು. ಒಂದು ವೇಳೆ ಪಂಡಿತರು ಇದರಲ್ಲಿ ಯಾವುದಾದರೊಂದು ಪೂಜೆ ನಡೆಸಲು ಸಲಹೆ ನೀಡಿದರೆ ಅದನ್ನು ಪಾಲಿಸುವುದು ಒಳಿತು. ಆದರೆ ವಾಸ್ತುಪೂಜೆ ಮತ್ತು ವಾಸ್ತುಶಾಂತಿಯನ್ನು ಮಾತ್ರ ಕಡ್ಡಾಯವಾಗಿ ಆಚರಿಸಲೇಬೇಕು.
ಗಣಪತಿ ಹೋಮ :-
ಹೋಮ ಕುಂಡವನ್ನು ಹೊತ್ತಿಸಿ, ಅದರಲ್ಲಿ ಮೊದಲು ಗಣಪತಿಯನ್ನು ಆವಾಹಿಸಿ ಪೂಜೆ ಸಲ್ಲಿಸುತ್ತಾರೆ. ಗಣಪತಿಯು ಸರ್ವ ವಿಘ್ನಗಳ ನಿವಾರಕನೆಂದೇ ಖ್ಯಾತಿ ಪಡೆದಿರುವವನು. ಗೃಹ ಪ್ರವೇಶಕ್ಕೆ ಇರುವ ಸರ್ವ ವಿಘ್ನಗಳನ್ನು ನಿವಾರಿಸು ಎಂದು ದೇವರನ್ನು ಈ ಹೋಮದ ಮೂಲಕ ಕೇಳಿಕೊಳ್ಳಲಾಗುತ್ತದೆ.
ನವಗ್ರಹ ಹೋಮ :-
ನವಗ್ರಹಗಳನ್ನು ತೃಪ್ತಿ ಪಡಿಸಲು ಈ ಹೋಮವನ್ನು ಮಾಡಲಾಗುತ್ತದೆ. ಒಂಬತ್ತು ಗ್ರಹಗಳು ಮನೆಯನ್ನು ಕರುಣಿಸಲಿ, ತಮ್ಮ ಕೃಪಾ ಕಟಾಕ್ಷವನ್ನು ಮನೆಯವರ ಮೇಲೆ ತೋರಲಿ ಎಂದು ಈ ಪೂಜೆಯನ್ನು ಮಾಡಲಾಗುತ್ತದೆ.
ಲಕ್ಷ್ಮೀ ಹೋಮ :-
ಲಕ್ಷ್ಮೀಯು ಹೊಸ ಮನೆಯಲ್ಲಿ ಐಶ್ವರ್ಯ, ಸಂಪತ್ತು ಮತ್ತು ಉತ್ತಮ ಆರೋಗ್ಯವನ್ನು ಕರುಣಿಸಲಿ ಎಂದು ಆಕೆಯನ್ನು ಆಹ್ವಾನಿಸುತ್ತ ಈ ಹೋಮವನ್ನು ಮಾಡಲಾಗುತ್ತದೆ.
ಹಾಲು ಉಕ್ಕಿಸುವುದು :-
ಪೂಜೆಯಾದ ನಂತರ ಮನೆಯಲ್ಲಿ ಮೊದಲು ಒಲೆ ಹಚ್ಚಿದ ನಂತರ ಅದರಲ್ಲಿ ಹಾಲನ್ನು ಕಾಯಿಸಬೇಕು. ಗೃಹ ಪ್ರವೇಶದಲ್ಲಿ ಹಾಲನ್ನು ಕಾಯಿಸಿ ಉಕ್ಕಿಸುವ ಸಂಪ್ರದಾಯ ನಡೆದುಕೊಂಡು ಬಂದಿದೆ. ಹಾಲು ಉಕ್ಕಿದಂತೆ ಈ ಮನೆಯಲ್ಲಿ ಸಂತೋಷ ಮತ್ತು ಸಮೃದ್ಧಿ ಉಕ್ಕಲಿ ಎಂಬ ಆಶಯ ಇದರಲ್ಲಿರುತ್ತದೆ. ಆನಂತರ 24ಗಂಟೆಗಳ ಕಾಲ ಈ ಮನೆಯನ್ನು ಯಾವುದೇ ಕಾರಣಕ್ಕು ಖಾಲಿ ಬಿಡಬಾರದು.
ಗೃಹಪ್ರವೇಶದಲ್ಲಿ ಮಾಡಲೇಬೇಕಾದ ಮತ್ತು ಮಾಡಲೇಬಾರದ ವಿಷಯಗಳು :-
ಗೃಹಪ್ರವೇಶ ಈ ಕೆಳಗಿನ ವಿಧಿಗಳನ್ನು ಪೂರೈಸದೆ ಸಂಪೂರ್ಣವಾಗುವುದಿಲ್ಲ:
1) ಮನೆಯ ಎಲ್ಲಾ ಕಿಟಕಿ ಮತ್ತು ಬಾಗಿಲುಗಳು ಪೂರ್ಣವಾಗಿ ಮುಚ್ಚುವಂತಿರಬೇಕು
2) ಮನೆಯ ಛಾವಣಿ ಎಲ್ಲೂ ತೆರೆದಿರಬಾರದು.
3) ವಾಸ್ತು ದೈವಗಳಿಗೆ ಸಲ್ಲಬೇಕಾದ ಪೂಜೆಯನ್ನು ನೆರವೇರಿಸಬೇಕು
4) ಪಂಡಿತರಿಗೆ ಔತಣವನ್ನು ನೀಡಬೇಕು
ಗೃಹಪ್ರವೇಶವನ್ನು ಮನೆಯೊಡತಿ ಗರ್ಭಿಣಿಯಾಗಿದ್ದಾಗ ಮಾಡಲು ಸಾಧ್ಯವಿಲ್ಲ :-
ಒಂದು ವೇಳೆ ಗೃಹಪ್ರವೇಶದ ನಿಬಂಧನೆಗಳನ್ನು ಪಾಲಿಸದೇ ಇದ್ದರೆ ಮನೆಯಲ್ಲಿ ದುಷ್ಟಶಕ್ತಿಗಳ ಆಗಮನದಿಂದ ವಾಸಿಸುವವರಲ್ಲಿ ಅಶಾಂತಿ ಮೂಡಬಹುದು. ಆದ್ದರಿಂದ ಹೊಸದಾಗಿ ಯಾವುದೇ ಮನೆಗೆ ಹೋಗಬೇಕಾದರೆ ಗೃಹಪ್ರವೇಶದ ಎಲ್ಲಾ ವಿಧಿಗಳನ್ನು ಪೂರೈಸುವುದು ಅಗತ್ಯವಾಗಿದೆ.
ಅಲ್ಲದೇ ಪಂಚಾಂಗಗಳಲ್ಲಿ ತಿಳಿಸಿರುವಂತೆಯೇ ಎಲ್ಲಾ ಶಾಸ್ತ್ರ ಮತ್ತು ವಿಧಿಗಳನ್ನು ಪೂರೈಸುವುದೂ ಅಗತ್ಯವಾಗಿದೆ. ಗೃಹಪ್ರವೇಶದ ವಿಧಿಗಳು ಪೂರೈಸಿದ ಬಳಿಕ ಮನೆಯ ಒಡೆಯ ಮತ್ತು ಒಡತಿ ಮೊದಲುಗೊಂಡು ಮನೆಯ ಇತರ ಸದಸ್ಯರು ಮುಂಬಾಗಿಲಿನಿಂದ ಒಳಗಡಿಯುವುದು ಶಾಸ್ತ್ರಸಮ್ಮತವಾಗಿದೆ. ಮುಖ್ಯವಾದ ಇನ್ನೊಂದು ವಿಷಯವೆಂದರೆ ಗೃಹಪ್ರವೇಶವಾದ ಕೆಲವು ದಿನಗಳವರೆಗೆ ಮನೆಗೆ ಬೀಗ ಹಾಕುವಂತಿಲ್ಲ. ಏಕೆಂದರೆ ಈಗ ತಾನೇ ವಾಸ್ತವ್ಯ ಹೂಡಿದ ಮನೆಗೆ ಬೀಗ ಹಾಕಿದರೆ ಅದು ಅಶುಭ ಅಥವಾ ಅಪಶಕುನದ ಸಂಕೇತವಾಗಿದೆ.
ಕೃಪೆ : ಕನ್ನಡಲೋಕ