ಬೆಂಗಳೂರು : ಕುಂಬಾರ ಜನಾಂಗ ಹಿಂದುಳಿದಿದ್ದು ಪರಿಶಿಷ್ಟ ಜಾತಿ (ಎಸ್ಸಿ)ಗೆ ಸೇರಿಸಿ ಅಗತ್ಯ ಮೀಸಲಾತಿ ಕಲ್ಪಿಸಬೇಕಿದೆ. ಅಲ್ಲದೆ, ವಿಧಾನ ಪರಿಷತ್ ಚುನಾವಣೆಯಲ್ಲಿ ಜನಾಂಗದವರನ್ನು ನಾಮ ನಿರ್ದೇಶನ ಮಾಡಲು ಸರ್ಕಾರ ಮುಂದಾಗಬೇಕು ಎಂದು ಸೌಂದರ್ಯ ವಿದ್ಯಾ ಸಂಸ್ಥೆ ಸಂಸ್ಥಾಪಕರು ಹಾಗೂ ಸಮಾಜ ಸೇವಕರಾದ ಸೌಂದರ್ಯ ಮಂಜಪ್ಪ ಆಗ್ರಹಿಸಿದ್ದಾರೆ.
ದೊಡ್ಡಬಳ್ಳಾಪುರ ತಾಲ್ಲೂಕಿನ ಘಾಟಿ ಸುಬ್ರಹ್ಮಣ್ಯ ಕ್ಷೇತ್ರದಲ್ಲಿ ಕುಂಬಾರ ಛತ್ರದ ಅಭಿವೃದ್ಧಿ ಮತ್ತು ವಿವಿಧೋದ್ದೇಶ ಟ್ರಸ್ಟ್ ವತಿಯಿಂದ ಕುಂಬಾರ ಛತ್ರದಲ್ಲಿ ಏರ್ಪಡಿಸಿದ್ದ ವಿಧವೆಯರಿಗೆ ಸಹಾಯಧನ ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಮಾತನಾಡಿದರು.
ವಿಧವೆಯರಿಗೆ ಸಹಾಯಧನಾ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಮಾಜಿ ಶಾಸಕ ಜೆ.ನರಸಿಂಹಸ್ವಾಮಿ, ಕರ್ನಾಟಕದಲ್ಲಿ ಕಡಿಮೆ ಜನಸಂಖ್ಯೆಯಲ್ಲಿರುವ ಕುಂಬಾರ ಜನಾಂಗ ರಾಜಕೀಯವಾಗಿ,ಶೈಕ್ಷಣಿಕವಾಗಿ ಹಿಂದುಳಿದಿದ್ದು ಪಂಚಾಯ್ತಿ ಚುನಾವಣೆಯಲ್ಲಿ ಸ್ಪರ್ಧಿಸಿ ಸಮಾಜದ ಮುಖ್ಯವಾಹಿನಿಗೆ ಬರಬೇಕು, ಕುಂಬಾರ ಜನಾಂಗದ ಮಕ್ಕಳು ಉತ್ತಮ ವಿದ್ಯಾಭ್ಯಾಸ ಮಾಡುವ ಮೂಲಕ ಉನ್ನತ ಹುದ್ದೆಗಳನ್ನು ಪಡೆಯಬೇಕು. ಅಲ್ಲದೆ, ಸಮಾಜದ ಏಳ್ಗೆಗೆ ಶ್ರಮಿಸಬೇಕು ಎಂದು ಸಲಹೆ ನೀಡಿದರು. ಇದೆ ವೇಳೆ ಘಾಟಿ ಸುಬ್ರಹ್ಮಣ್ಯ ಕ್ಷೇತ್ರದಲ್ಲಿನ ಕುಂಬಾರ ಛತ್ರ ನಿರ್ಮಾಣಕ್ಕೆ ಸಹಾಯ ಮಾಡಲಿದ್ದು ಛತ್ರದ ನೆಲಹಾಸಿಗೆ ಗ್ರ್ಯಾನೈಟ್ ಕೊಡಿಸುವುದಾಗಿ ಭರವಸೆ ನೀಡಿದರು.
ಅಧ್ಯಕ್ಷತೆ ವಹಿಸಿ ಮಾತನಾಡಿದ ಕುಂಬಾರ ಛತ್ರದ ಅಭಿವೃದ್ಧಿ ಮತ್ತು ವಿವಿಧೋದ್ದೇಶ ಟ್ರಸ್ಟ್ನ ಅಧ್ಯಕ್ಷ ವೆಂಕಟಾಚಲಯ್ಯ, ಸಮಾಜದವರು ಶೈಕ್ಷಣಿಕ, ಆರ್ಥಿಕವಾಗಿ ಮುಂದುವರಿಯಬೇಕು. ಕಟ್ಟಡ ನಿರ್ಮಾಣ ಕಾರ್ಯದಲ್ಲಿ ಟ್ರಸ್ಟಿಗಳ ಶ್ರಮ ಹೆಚ್ಚಿನದ್ದಾಗಿದೆ. ಈಗಾಗಲೇ ಹಲವು ಮಂದಿ ಧನ ಸಹಾಯ ನೀಡಿರುವುದು ಶ್ಲಾಘನೀಯ. ಸುವ್ಯವಸ್ಥಿತ 3 ಹಂತಸ್ಥಿನ ಕಟ್ಟಡ ನಿರ್ಮಿಸಿ ವಿಧವಾ ಮಹಿಳೆರಿಗೆ ಸ್ವಯಂ ಉದ್ಯೋಗ ಕೈಗೊಳ್ಳಲು ತರಬೇತಿ, ಕೈಗಾರಿಕಾ ಮಳಿಗೆ ನಿರ್ಮಾಣ ಮಾಡಲಾಗುವುದು. ಅಲ್ಲದೆ, ಜನಾಂಗದ ಮೆರಿಟ್ ವಿದ್ಯಾರ್ಥಿಗಳನ್ನು ಟ್ರಸ್ಟ್ ದತ್ತು ಪಡೆಯಲಿದ್ದು ಜನಾಂಗದ ಅಭಿವೃದ್ಧಿಗೆ ಸಂಘಟನೆಯಾಗಬೇಕೆಂದರು.
ಅಖಿಲ ಕರ್ನಾಟಕ ಕುಂಬೇಶ್ವರ ಸೇವಾ ಟ್ರಸ್ಟ್ ಅಧ್ಯಕ್ಷ ಆರ್.ಶ್ರೀನಿವಾಸ್, ಟ್ರಸ್ಟ್ ಕಾರ್ಯದರ್ಶಿ ಎಲ್.ಶ್ರೀನಿವಾಸ್, ಕಲಾಸಿಪಾಳ್ಯಂ ಕುಂಬಾರ ಸಂಘದ ಬಿ.ವಿ.ರಾಮಚಂದ್ರಪ್ಪ, ಕಾರ್ಯದರ್ಶಿ ಗಂಗಲ್ಲಯ್ಯ, ತುಮಕೂರು ಕುಂಬಾರ ಸೇವಾ ಸಹಕಾರ ಬ್ಯಾಂಕ್ ಸ್ಥಾಪಕರಾದ ಸಿದ್ದನಂಜಶೆಟ್ಟರು,ಕುಂಬೇಶ್ವರ ಸಹಕಾರ ಬ್ಯಾಂಕ್ ಸ್ಥಾಪಕರು ಭಾಗವಹಿಸಿದ್ದರು.