ಕರಾವಳಿಯ ಕುಂದಾಪುರ, ಉಡುಪಿ, ಕಾಪು, ಕಾರ್ಕಳ, ಮೂಡಬಿದಿರೆ, ಸುರತ್ಕಲ್, ಬೆಳ್ತಂಗಡಿ, ಮಂಗಳೂರು, ಉಳ್ಳಾಲ, ಬಂಟ್ವಾಳ, ಪುತ್ತೂರು, ಸುಳ್ಯಗಳಲ್ಲಿ ಸುಮಾರು 3 ಲಕ್ಷ ಕುಲಾಲ/ಕುಂಬಾರ ಜನಸಂಖ್ಯೆ ಇದೆ. ರಾಜ್ಯದ ಮೈಸೂರು, ಬೆಂಗಳೂರು, ಹಾಸನ, ಕೋಲಾರ, ಮಲೆನಾಡು, ಹೈದ್ರಾಬಾದ್ ಕರ್ನಾಟಕ, ಉತ್ತರ ಕರ್ನಾಟಕ ಭಾಗದಲ್ಲಿ ಸುಮಾರು 25 ಲಕ್ಷ ಕುಂಬಾರಿದ್ದಾರೆ. ನೂರಾರು ನಾಯಕರು ಬಿಜೆಪಿ, ಕಾಂಗ್ರೆಸ್, .ಜ.ದಳ, ಕಮ್ಯೂನಿಸ್ಟ್ ಪಕ್ಷಗಳಲ್ಲಿ ಇಂದಲ್ಲ ನಾಳೆ ವಿಧಾನಸಭೆ, ವಿಧಾನ ಪರಿಷತ್ ಗೆ ನಮ್ಮನ್ನು ಟಿಕೇಟು ಕೊಟ್ಟುಆಯ್ಕೆ ಮಾಡುತ್ತಾರೆ ಎಂದು ದಶಕಗಳಿಂದ ಕಾಯುತ್ತಲೇ ಇದ್ದಾರೆ.
ವಿ.ಪರಿಷತ್ ಚುನಾವಣೆ ಸದ್ದಿಲ್ಲದೇ ಮುಗಿದೇ ಹೋಯಿತು. ಕುಂಬಾರರ ಹೆಸರು ಎಲ್ಲೂ ಬರಲೇ ಇಲ್ಲ.ಈಗ ಜಿಲ್ಲಾ ಪಂಚಾಯತ್ ಹಾಗೂ ತಾಲೂಕು ಪಂಚಾಯತ್ ಚುನಾವಣೆ ಬಂದಿದೆ. ಅವಕಾಶ ವಂಚಿತ ಕುಂಬಾರರನ್ನು ನಿಲ್ಲಿಸಿ-ಗೆಲ್ಲಿಸಿ ಜಿ.ಪಂ ಹಾಗೂ ತಾ.ಪಂನಲ್ಲಿ ರಾಜ್ಯವ್ಯಾಪಿ ಕುಂಬಾರ ಪ್ರತಿನಿಧಿಗಳಿಗೆ ಅಧಿಕಾರವನ್ನ ಚಲಾಯಿಸುವ ಸಾಮಾಜಿಕ ನ್ಯಾಯ ಕೊಡಿಸುವ ಜವಾಬ್ದಾರಿಗಳು ಎಲ್ಲಾ ರಾಜಕೀಯ ಪಕ್ಷಗಳ ಮೇಲಿದೆ.
ರಾಜ್ಯವ್ಯಾಪಿ ಹುಟ್ಟಿ ಬೆಳೆದು ನಿಂತಿರುವ ಕುಂಬಾರ ಸಂಘಗಳು,ಕುಲಾಲ ಸಂಘಗಳು, ಕುಂಬಾರರ ಮಠ- ಮಂದಿರ-ದೇವಸ್ಥಾನಗಳು ಬ್ಯಾಂಕ್ ಗಳ ನೇತಾರರು ಏಕ ಧ್ವನಿಯಲ್ಲಿ ಕುಂಬಾರರಿಗೆ ರಾಜಕೀಯ ನ್ಯಾಯಕೊಡುವಂತೆ ಹಕ್ಕೊತ್ತಾಯ ಮಾಡಲೇಬೇಕಾದ ಅನಿವಾರ್ಯತೆ ಬಂದಿದೆ. ಇದು ಮಾಡು ಇಲ್ಲವೇ ಮಡಿ ಪರಿಸ್ಥಿತಿ. ಪ್ರತೀ ತಾಲೂಕಿನ ಸಂಘಗಳು ಅಲ್ಲಿಯ ಕುಂಬಾರ ರಾಜಕೀಯ ನಾಯಕರುಗಳಿಗೆ ಅವರವರು ಇರುವ ಪಕ್ಷದಲ್ಲೇ ಆವಕಾಶವನ್ನ ನೀಡುವಂತೆ ಅಲ್ಲಿಯ ನಾಯಕರುಗಳಿಗೆ ರಾಜಕೀಯ ಗಾಡ್ ಫಾದರ್ ಆಗಿ ಕೆಲಸ ಮಾಡಲೇ ಬೇಕು.
ನಮ್ಮ ಸಮುದಾಯ ದ ಸಂಘಟನೆಗಳು ಹಿಂದಿನಿಂದ ನೆಚ್ಚಿಕೊಂಡು ಬಂದ ಕೇವಲ ಧಾರ್ಮಿಕ, ಸಾಮಾಜಿಕ ಹಾಗೂ ಬ್ಯಾಂಕಿಂಕ್ ಹೋರಾಟಗಳಿಂದ ಸಮಾಜವನ್ನು ಮೇಲಕ್ಕೆತ್ತಲು ಸಾಧ್ಯವಿಲ್ಲ. ಶೈಕ್ಷಣಿಕ ಹಾಗೂ ರಾಜಕೀಯ ಶಕ್ತಿ ಬೇಕು ಎಂಬುದು ನಮಗೆಲ್ಲಾ ಸ್ಪಷ್ಟವಾಗಿ ಅರಿವಾಗಿದೆ. ಈ ಅರಿವನ್ನು ಸಂಘ ಸಂಸ್ಥೆಗಳು ಚಳುವಳಿಯನ್ನಾಗಿ, ಹೋರಾಟವನ್ನಾಗಿ ಕೈಗೆತ್ತಿಕೊಂಡು ರಾಜಕೀಯ ನಾಯಕರಲ್ಲಿ ನಮ್ಮ ನಾಯಕರಿಗೆ, ನಮ್ಮ ಯುವಕರಿಗೆ ಯಾಕೆ ಕೊಟ್ಟಿಲ್ಲ ಅಂತ ಎದೆ ಉಬ್ಬಿಸಿ ಕೇಳಬೇಕಾಗಿದೆ. ಸಂಘ, ದೇವಾಲಯ ಹಾಗೂ ಬ್ಯಾಂಕ್ ನವರು ಚುನಾವಣೆಗೆ ನಿಲ್ಲುವ ಸಮುದಾಯದ ಯುವ ಮುಂದಾಳುಗಳಿಗೆ ಎಲ್ಲಾ ರೀತಿಯ ಶಕ್ತಿ ತುಂಬಿಸಿ ಕೊಡಬೇಕಾಗಿದೆ. ಎಲ್ಲಾ ಸಂಘಟನೆಗಳು ನಮ್ಮ ಯುವಕರಿಗೆ ಅವರವರ ತಾಲೂಕಿನಲ್ಲಿ ಬೆನ್ನುತಟ್ಟಿ ಪಕ್ಷ ಮರೆತು ರಾಜಕೀಯದ ಗಾಢ್ ಫಾದರ್ ಆಗಲೇ ಬೇಕಾಗಿದೆ.
ಇತ್ತೀಚೆಗೆ ಕರಾವಳಿಗೆ ಬಂದಿದ್ದ ರಾಜ್ಯ ಕುಂಬಾರ ನಾಯಕರು ಹಾಗೂ ಕರಾವಳಿ ಕುಲಾಲ/ಕುಂಬಾರರ ಯುವವೇದಿಕೆಯ ನಾಯಕರು ಕುಂಬಾರರಿಗೆ ರಾಜಕೀಯ ಶಕ್ತಿ ಕೊಡಿ ಅಂತ ಕರೆಕೊಟ್ಟು, ಕರಾವಳಿಯ ಎಲ್ಲಾ ಪಕ್ಷಗಳ ಜಿಲ್ಲೆ ರಾಜ್ಯ ಹಾಗೂ ರಾಷ್ಟ್ರಮಟ್ಟದ ನಾಯಕಲ್ಲಿ ಹಕ್ಕೊತ್ತಾಯ ಮಾಡಿದಂತೆ ರಾಜ್ಯದ ಪ್ರತೀ ತಾಲೂಕು ಹಾಗು ಜಿಲ್ಲಾ ಸಂಘಗಳು ಸಿಡಿದೆದ್ದು ರಾಜಕೀಯ ಸ್ಥಾನಮಾನಕ್ಕೆ ಜಿ.ಪಂ ಹಾಗು ತಾ.ಪಂ ಚುನಾವಣೆಯಲ್ಲಿ ಸಮುದಾಯದವರಿಗೆ ಟಿಕೇಟೂ ಕೊಡಿಸಿ ಗೆಲ್ಲಿಸಿದಾಗಲೇ ಕುಂಬಾರರ ಧ್ವನಿ ಸರಕಾರಗಳಿಗೆ ಮುಟ್ಟಲು ಸಾಧ್ಯ. ಇಂದಿಲ್ಲ ಅಂದರೆ ಇನ್ನೆಂದಿಗೂ ಇರದು. ಚಳಿಬಿಟ್ಟು ಮೈಕೊಡವಿ ಹೋರಾಟಕ್ಕೆ ಧುಮುಕಲೇ ಬೇಕು.
ಡಾ.ಎಂ. ಅಣ್ಣಯ್ಯ ಕುಲಾಲ್ ಉಳ್ತೂರು



