ಮಂಗಳೂರು : ಕುಲಾಲ ಸಮಾಜದ ಮುಖಂಡ, ಸ್ವರ್ಣ ಕುಂಭ ವಿವಿಧೋದ್ದೇಶ ಸಹಕಾರಿ ಸಂಘ ಸುರತ್ಕಲ್ ಇದರ ಸ್ಥಾಪಕ ಹಾಗೂ ಅಧ್ಯಕ್ಷರಾಗಿದ್ದ ಎಂ. ಆರ್. ನಾರಾಯಣ ಅವರು ನಿಧನರಾದರು. ಮಂಗಳೂರಿನ ತಮ್ಮ ನಿವಾಸದಲ್ಲಿ ಅವರು ಜನವರಿ ೨ರಂದು ಹೃದಯಾಘಾತಕ್ಕೆ ಬಲಿಯಾದರು. ಅವರಿಗೆ ೭೦ ವರ್ಷ ವಯಸ್ಸಾಗಿತ್ತು .
ಎಂ ಆರ್ ನಾರಾಯಣ ಅವರು ಮೂಲತಃ ಬಂಟ್ವಾಳ ತಾಲೂಕಿನ ವೀರಕಂಭ ಕುಡ್ತ ಮೊಗೇರು ಗ್ರಾಮದ ಮುಂಡಾಜೆಯ ಬಾರೆಬೆಟ್ಟಿನವರು. ಊರ ಉಗ್ರಾಣಿಯಾಗಿದ್ದ ದೂಮಪ್ಪ ಅವರ ಪುತ್ರರು. ನಾರಾಯಣ ಅವರು ನಿಷ್ಠೂರವಾದಿ ಹಾಗೂ ನ್ಯಾಯ ಪರ ಹೋರಾಟಗಾರರಾಗಿದ್ದರು.
ಬಂಟ್ವಾಳ ಭೂ ಅಭಿವೃದ್ದಿ ಬ್ಯಾಂಕಿನ ಅಧೀಕ್ಷಕರಾಗಿ ಉಚ್ಛ ಮಟ್ಟದ ಸೇವೆ ಮಾಡಿ ಪ್ರಶಸ್ತಿ ಪಡೆದಿದ್ದರು. ಅಮ್ಮೆಂಬಳ ಬಾಳಪ್ಪನವರ ಒಡನಾಡಿ ಹಾಗೂ ಆಪ್ತ ಅಭಿಮಾನಿಯಾಗಿದ್ದ ಅವರು ಬಾಳಪ್ಪ ನವರ ಜೊತೆ ಸೇರಿ ಬಂಟ್ವಾಳ ಸಮಾಜಸೇವಾ ಸಹಕಾರಿ ಬ್ಯಾಂಕನ್ನು ಸ್ಥಾಪಿಸುವಲ್ಲಿ ಪ್ರಮುಖ ಪಾತ್ರವಹಿಸಿದ್ದರು. ಮಡಿಕೆ ಮಾಡುವ ವೃತ್ತಿಯನ್ನು ಉಳಿಸಿ ಬೆಳೆಸಲು ಸಾಕಷ್ಟು ಪ್ರಯತ್ನಿಸಿದ್ದರು.
ನಾರಾಯಣ ಅವರು ಕರಾವಳಿ ಕುಲಾಲ-ಕುಂಬಾರ ವೇದಿಕೆಯ ಗೌರವ ಸಲಹೆಗಾರರಾಗಿ, ರಾಜ್ಯ ಕುಂಬಾರ ಸಂಘದ ಕರಾವಳಿ ವಿಭಾಗದ ಅಧ್ಯಕ್ಷರೂ ಆಗಿದ್ದರು. ಪ್ರಾಥಮಿಕ ಕೃಷಿ ಸಹಕಾರಿ ಬ್ಯಾಂಕಿನ ನಿವೃತ್ತ ಕಾರ್ಯದರ್ಶಿಯಾಗಿ, ಸುರತ್ಕಲ್ ಕುಲಾಲ ಸಂಘದ ಮತ್ತು ಕುಂಬಾರರ ಗುಡಿ ಕೈಗಾರಿಕಾ ಸಹಕಾರ ಸಂಘದ ಅಧ್ಯಕ್ಷರಾಗಿ, ಬಂಟ್ವಾಳ ಸಮಾಜ ಸೇವಾ ಸಹಕಾರಿ ಬ್ಯಾಂಕ್ , ಬಂಟ್ವಾಳ ಪ್ರಾಥಮಿಕ ಕೃಷಿ ಸಹಕಾರಿ ಬ್ಯಾಂಕ್ ಮತ್ತು ದ ಕ ಜಿಲ್ಲಾ ಮೂಲ್ಯರ ಯಾನೆ ಕುಲಾಲರ ಸಂಘದ ನಿರ್ದೇಶಕರಾಗಿ, ಕುಲಶೇಖರ ವೀರನಾರಾಯಣ ದೇವಸ್ಥಾನದ ಟ್ರಸ್ಟಿಯಾಗಿ, ಕುಳಾಯಿ ಬರ್ಕೆ ಉಪ್ಯಾನ್ ಮೂಲಸ್ಥಾನದ ಅಧ್ಯಕ್ಷರಾಗಿ ಸೇವೆ ಸಲ್ಲಿಸಿದ್ದರು.
ಮೃತರು ಪತ್ನಿ ಮತ್ತು ನಾಲ್ವರು ಪುತ್ರಿಯರನ್ನು ಮತ್ತು ಅಪಾರ ಬಂಧು -ಬಳಗವನ್ನು ಅಗಲಿದ್ದಾರೆ.
ಸಂತಾಪ :
ಎಂ. ಆರ್ . ನಾರಾಯಣ ಅವರ ನಿಧನಕ್ಕೆ ರಾಜ್ಯ ಕುಂಬಾರ ಸಂಘದ ಅಧ್ಯಕ್ಷ ಶಿವಕುಮಾರ್ ಚೌಡಶೆಟ್ಟಿ, ಕಾರ್ಯಾಧ್ಯಕ್ಷ ಡಾ. ಅಣ್ಣಯ್ಯ ಕುಲಾಲ್ , ಕರಾವಳಿ ಕುಲಾಲ- ಕುಂಬಾರರ ಯುವ ವೇದಿಕೆಯ ಅಧ್ಯಕ್ಷ ತೇಜಸ್ವೀರಾಜ್ , ಗಂಗಾಧರ ಬಂಜನ್, ಡಾ. ಎಂ. ವಿ. ಕುಲಾಲ್ , ಬಂಟ್ವಾಳ ಸಮಾಜ ಸೇವಾ ಸಹಕಾರಿ ಬ್ಯಾಂಕಿನ ನಿರ್ದೇಶಕ ದಯಾನಂದ ಬೆಳ್ಳೂರು, ಪುತ್ತೂರು ಕುಂಬಾರರ ಗುಡಿ ಕೈಗಾರಿಕಾ ಸಹಕಾರಿ ಸಂಘದ ಅಧ್ಯಕ್ಷ ಭಾಸ್ಕರ ಪೆರುವಾಯಿ , ಕುಳಾಯಿ ಕುಲಾಲ ಸಂಘದ ಅಧ್ಯಕ್ಷ ಜನಾರ್ಧನ ಸಾಲ್ಯಾನ್ ಮುಂತಾದ ಗಣ್ಯರು ಸಂತಾಪ ಸೂಚಿಸಿದರು.