ಪುತ್ತೂರು : ಸುಳ್ಯದಿಂದ ಪುತ್ತೂರು ಕಡೆಗೆ ಬರುತ್ತಿದ್ದ ಕೆಎಸ್ಆರ್ಟಿಸಿ ಬಸ್(ಕೆಎ 57ಎಫ್ 1324) ಕೌಡಿಚ್ಚಾರ್ ಸಮೀಪ ಸೇತುವೆ ಬಳಿಯಲ್ಲಿ ನಡೆದುಕೊಂಡು ಹೋಗುತ್ತಿದ್ದ ಸ್ಥಳೀಯ ನಿವಾಸಿ ದೂಮಪ್ಪ ಮೂಲ್ಯ(62ವ.) ಎಂಬವರಿಗೆ ಡಿಕ್ಕಿ ಹೊಡೆದು ಅವರ ಸ್ಥಳದಲ್ಲೇ ಮೃತಪಟ್ಟ ಘಟನೆ ದ.28ರಂದು ರಾತ್ರಿ ವೇಳೆಗೆ ನಡೆದಿದೆ.
ಕೌಡಿಚ್ಚಾರ್ ನಿವಾಸಿ ದೂಮಪ್ಪ ಮೂಲ್ಯರವರು ತನ್ನ ಮನೆಯಿಂದ ಕೌಡಿಚ್ಚಾರ್ ಆನಂದ ಗೌಡರವರ ಮನೆಗೆಂದು ರಸ್ತೆ ಬದಿಯಲ್ಲಿ ನಡೆದುಕೊಂಡು ಬರುತ್ತಿದ್ದಾಗ ಕೌಡಿಚ್ಚಾರ್ ಸೇತುವೆ ಬಳಿಯಲ್ಲಿ ಬಸ್ ಡಿಕ್ಕಿ ಹೊಡೆದು ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಬಸ್ನ ಹಿಂಭಾಗ ಪಾದಚಾರಿಗೆ ಡಿಕ್ಕಿ ಹೊಡೆದಿದ್ದು, ಡಿಕ್ಕಿ ಹೊಡೆದ ರಭಸಕ್ಕೆ ಸೇತುವೆ ಬಳಿಯಲ್ಲಿಯೇ ದೂಮಪ್ಪ ಮೂಲ್ಯರು ಕುಸಿದು ಬಿದ್ದು, ವಿಪರೀತ ರಕ್ತ ಸ್ರಾವದಿಂದಾಗಿ ಕ್ಷಣಾರ್ಧದಲ್ಲೇ ಉಸಿರು ನಿಂತು ಹೋಗಿದೆ. ಘಟನಾ ಸ್ಥಳಕ್ಕೆ ಸಂಪ್ಯ ಎಸ್.ಐ ರವಿ ರವರು ಭೇಟಿ ನೀಡಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.
ದೂಮಪ್ಪ ಮೂಲ್ಯರು ಕೌಡಿಚ್ಚಾರ್ ಶ್ರೀ ಕೃಷ್ಣ ಭಜನಾ ಮಂದಿರದ ಆಡಳಿತ ಸಮಿತಿಯ ಸದಸ್ಯರಾಗಿದ್ದರು. ಕೂಲಿ ಕಾರ್ಮಿಕನಾಗಿದ್ದ ಮೃತ ದೂಮಪ್ಪ ಮೂಲ್ಯರು ಪತ್ನಿ ಗೀತಾ ಮಕ್ಕಳಾದ ಪವಿತ್ರ, ಶ್ವೇತಾ, ಚೇತನ್, ಪ್ರದೀಪ್ರವರನ್ನು ಅಗಲಿದ್ದಾರೆ.
ಗೃಹಪ್ರವೇಶದ ಮನೆಗೆ ಹೋಗುತ್ತಿದ್ದರು : ಕೌಡಿಚ್ಚಾರ್ ನಿವಾಸಿ ಆನಂದ ಗೌಡರವರ ಗೃಹಪ್ರವೇಶ ಕಾರ್ಯಕ್ರಮವು ದ.೨೮ರಂದು ಮಧ್ಯಾಹ್ನ ನಡೆದಿತ್ತು. ದೂಮಪ್ಪ ಮೂಲ್ಯರವರು ಸಂಜೆ ಆನಂದ ಗೌಡರ ಮನೆಗೆ ಬರುತ್ತಿದ್ದಾಗ ಮನೆಯ ಎದುರು ಭಾಗದಲ್ಲೇ ಬಸ್ನಡಿಗೆ ಬಿದ್ದು ಮೃತಪಟ್ಟಿದ್ದಾರೆ.
ನಿಲ್ಲಿಸಿದ್ದ ಬೈಕ್ಗೆ ಕೆಎಸ್ಆರ್ಟಿಸಿ ಬಸ್ ಢಿಕ್ಕಿ : ಘಟನಾ ಸ್ಥಳದಲ್ಲಿ ನೂರಾರು ಜನ ಜಮಾಯಿಸಿದ್ದರು. ಈ ಸಂದರ್ಭದಲ್ಲಿ ಸೇತುವೆ ಬಳಿಯಲ್ಲಿ ನಿಲ್ಲಿಸಿದ್ದ ಕೌಡಿಚ್ಚಾರ್ ದುರ್ಗಾಪ್ರಸಾದ್ರವರ ಬೈಕ್ಗೆ ಪುತ್ತೂರಿನಿಂದ ಸುಳ್ಯ ಕಡೆಗೆ ಹೋಗುತ್ತಿದ್ದ ಕೆಎಸ್ಆರ್ಟಿಸಿ ಬಸ್ ಢಿಕ್ಕಿ ಹೊಡೆದ ಘಟನೆಯೂ ನಡೆಯಿತು. ಆಗ ಅಲ್ಲಿ ಸೇರಿದ್ದ ಜನರು ಬಸ್ ಚಾಲಕನನ್ನು ತರಾಟೆಗೆ ತೆಗೆದುಕೊಂಡು ತುಸು ಉದ್ವಿಗ್ನ ಪರಿಸ್ಥಿತಿ ನಿರ್ಮಾಣವಾಯಿತು. ಕೆಲ ಹೊತ್ತು ವಾಹನ ಸಂಚಾರಕ್ಕೂ ಅಡ್ಡಿಯಾಯಿತು.