ಕೀಳರಿಮೆಯಿಂದ ಹೊರಬಂದಾಗ ಪ್ರಕಾಶಿಸಲು ಸಾಧ್ಯ : ಮಾಣಿಲ ಶ್ರೀ
ವಿಟ್ಲ : ಕುಲಾಲರು ಹಿಂದುಳಿದ ವರ್ಗ ಎಂಬ ಕೀಳರಿಮೆಯಿಂದ ಹೊರಬಂದು ಕ್ರಿಯಾಶೀಲರಾದಾಗ ಮಾತ್ರ ಸಮಾಜದ ಮುಖ್ಯವಾಹಿನಿಯಲ್ಲಿ ಪ್ರಕಾಶಿಸಲು ಸಾಧ್ಯ ಎಂದು ಮಾಣಿಲ ಶ್ರೀಧಾಮದ ಶ್ರೀ ಮೋಹನದಾಸ ಪರಮಹಂಸ ಸ್ಮಾಮೀಜಿ ಹೇಳಿದರು.
ವಿಟ್ಲ ಕುಲಾಲ ಸಂಘದ ನಿವೇಶನದಲ್ಲಿ ಇತ್ತೀಚಿಗೆ ನಡೆದ ವಿಟ್ಲ ಕುಲಾಲ ಸಂಘದದ 17ನೇ ವಾರ್ಷಿಕೋತ್ಸವ ಹಾಗೂ ಶ್ರೀ ಸತ್ಯನಾರಾಯಣ ಪೂಜೆ ಬಳಿಕ ನಡೆದ ಸಭೆಯಲ್ಲಿ ಆಶೀರ್ವಚನ ನೀಡಿದರು.
ನಮ್ಮ ಸಂಘ ಎಂಬ ಮನೋಭಾವನೆ ಮೂಡಿದಾಗ ಮಾತ್ರ ಯಾವುದೇ ಸಂಘಟನೆಗಳು ಸಮಾಜದ ಮಧ್ಯೆ ಸುಭದ್ರವಾಗಿ ಎದ್ದು ನಿಲ್ಲಬಹುದು. ಐಶಾರಾಮಿ ಆಹಾರ ಪದಾರ್ಥಗಳಿಗೆ, ಮಾಡುವೆ ಇನ್ನಿತರ ಸಮಾರಂಭಗಳಿಗೆ ದುಂದು ವೆಚ್ಚ ಮಾಡುವ ಜನರು ಸೇವಾ ಕಾರ್ಯಗಳಿಗೆ ಕೊಡುವ ಮನಸ್ಸು ಮಾಡದಿರುವುದು ಖೇದಕರ. ಭಾವನೆ ಮತ್ತು ಮನಸ್ಸು ಒಂದಾದಾಗ ಉತ್ತಮ ಕಾರ್ಯ ನಡೆಯಲು ಸಾಧ್ಯ. ಮೇ ತಿಂಗಳಿನೊಳಗೆ ಸಂಘದ ಕಟ್ಟಡ ನಿರ್ಮಾಣವಾಗುವಲ್ಲಿ ಪ್ರತಿಯೊಬ್ಬರೂ ಕಟಿಬದ್ಧರಾಗಬೇಕು ಎಂದರು. ಅರಣ್ಯ ಇಲಾಖೆಯ ನಿವೃತ್ತ ಅಧೀಕ್ಷಕ ಭಾಸ್ಕರ ಕೆ. ಮಾತನಾಡಿ ಶಿಕ್ಷಣದ ಜೊತೆಗೆ ನಮ್ಮ ಆರೋಗ್ಯದ ಮೇಲೂ ಕಾಳಜಿ ಇರಬೇಕು. ಸ್ಪಷ್ಟ ಗುರಿಯೊಂದಿಗೆ ಮುನ್ನಡೆಯಬೇಕು ಎಂದರು.
ಮಹಿಳೆಯರಿಲ್ಲದ ಸಮಾಜವನ್ನು ಕಲ್ಪಿಸಲು ಅಸಾಧ್ಯ. ಮಹಿಳೆಯರು ಸಮಾಜದಲ್ಲಿ ಸಮಾನ ಅವಕಾಶವನ್ನು ಪಡೆಯುವ ನಿಟ್ಟಿನಲ್ಲಿ ಪ್ರಯತ್ನಿಸಬೇಕು. ಸ್ವ-ಉದ್ಯೋಗಕ್ಕೆ ಒಟ್ಟು ನೀಡುತ್ತಾ ಸ್ವಾವಲಂಬನೆ ಪಡೆಯಬೇಕು ಎಂದು ಬಿ.ಸಿ ರೋಡು ಆದರ್ಶ ಕಾಲೇಜು ಉಪನ್ಯಾಸಕಿ ಧನಶ್ರೀ ತಿಳಿಸಿದರು.
ವಿಟ್ಲ ಕುಲಾಲ ಸಂಘದ ಅಧ್ಯಕ್ಷ ವಸಂತ ಕುಲಾಲ್ ಅಧ್ಯಕ್ಷತೆ ವಹಿಸಿದ್ದರು. ಸಮಾರಂಭದಲ್ಲಿ ಪುತ್ತೂರು ಕುಂಬಾರರ ಗುಡಿ ಕೈಗಾರಿಕಾ ಸಂಘದ ಅಧ್ಯಕ್ಷ ಭಾಸ್ಕರ ಪೆರುವಾಯಿ, ವಿಟ್ಲ ಕುಲಾಲ ಮಹಿಳಾ ಘಟಕದ ಅಧ್ಯಕ್ಷೆ ಮೀನಾಕ್ಷಿ ನಾರಾಯಣ ಪುಣಚ ಭಾಗವಹಿಸಿದ್ದರು.
ವಿಟ್ಲ ಹೋಬಳಿ ವ್ಯಾಪ್ತಿಯ ಕುಲಾಲ ಸಮಾಜದ ಗ್ರಾಪಂ ಸದಸ್ಯರನ್ನು ಗೌರವಿಸಲಾಯಿತು. ಪ್ರತಿಭಾ ಪುರಸ್ಕಾರ, ವಿದ್ಯಾರ್ಥಿ ವೇತನ ನೀಡಲಾಯಿತು.
ವಿಟ್ಲ ಕುಲಾಲ ಸಂಘದ ಸ್ಥಾಪಕ ಅಧ್ಯಕ್ಷ ರಮಾನಾಥ ವಿಟ್ಲ ಸ್ವಾಗತಿಸಿದರು. ರೇವತಿ ರವೀಂದ್ರ ವಿಟ್ಲ ಸ್ವಾಗತಿಸಿದರು. ನಾರಾಯಣ ಮೂಲ್ಯ ಪ್ರಾಸ್ತಾವಿಕ ಮಾತನಾಡಿದರು. ಕಾರ್ಯದರ್ಶಿ ದಿವಾಕರ ಕೋಡಿ ವರದಿ ಮಂಡಿಸಿದರು. ವೀರಪ್ಪ ಮೂಲ್ಯ ಮಲೆತ್ತಡ್ಕ ಕಾರ್ಯಕ್ರಮ ನಿರೂಪಿಸಿದರೆ, ಜಗದೀಶ ವಿಟ್ಲ, ಉದಯ ಎಂ. ಪೆರುವಾಯಿ ಸಹಕರಿಸಿದರು.