ಖಾನಾಪುರ ಸಿವಿಪಿಐ ಸಂಸ್ಥೆಯಲ್ಲಿ ಮಣ್ಣು ಮಿಶ್ರಣಕ್ಕೆ ಯಂತ್ರ
ಖಾನಾಪುರ: ಪ್ರಧಾನಿ ನರೇಂದ್ರ ಮೋದಿ ಅವರು ಸ್ವದೇಶದಲ್ಲಿ ನಿರ್ಮಾಣಗೊಂಡ ವಸ್ತುಗಳನ್ನು ಬಳಸುವಂತೆ ನೀಡಿದ ಕರೆಗೆ ಸ್ಪಂದಿಸಿದ ಪಟ್ಟಣದ ಕೇಂದ್ರೀಯ ಗ್ರಾಮೀಣ ಕುಂಬಾರಿಕೆ ಸಂಸ್ಥೆ (ಸಿವಿಪಿಐ) ಕುಂಬಾರರಿಗೆ ಮಣ್ಣಿನ ಕಲಾಕೃತಿಗಳನ್ನು ತಯಾರಿಸಲು ಅಗತ್ಯವಾದ ಸೌರಚಾಲಿತ ಕುಂಬಾರ ಚಕ್ರ ಮತ್ತು ಮಣ್ಣು ಕಲೆಸುವ ಯಂತ್ರಗಳ ಸುಧಾರಿತ ಮತ್ತು ವೈಜ್ಞಾನಿಕ ಮಾದರಿಗಳ ಆವಿಷ್ಕಾರ ಮಾಡುವ ಮೂಲಕ ವಿದ್ಯುತ್ ಸಮಸ್ಯೆ ಇರುವ ಗ್ರಾಮೀಣ ಭಾಗದ ಕುಂಬಾರರಿಗೆ ಅನುಕೂಲ ಕಲ್ಪಿಸುವಲ್ಲಿ ಮಹತ್ವದ ಹೆಜ್ಜೆ ಇಟ್ಟಿದೆ.
ಸಿವಿಪಿಐ ಸಂಸ್ಥೆಯ ಪ್ರಶಿಕ್ಷಣಾರ್ಥಿ ಮತ್ತು ತಾಲ್ಲೂಕಿನ ಗರ್ಲಗುಂಜಿ ಗ್ರಾಮಸ್ಥ ನಂದಕುಮಾರ ನಿಟ್ಟೂರಕರ ತಮ್ಮ ಜಾಣ್ಮೆಯನ್ನು ಉಪಯೋಗಿಸಿ ನಿರ್ಮಿಸಿದ ಸೌರಶಕ್ತಿಯನ್ನು ಬಳಸಿ ಕುಂಬಾರಿಕೆಗೆ ಅಗತ್ಯವುಳ್ಳ ಆಕೃತಿಗಳನ್ನು ತಯಾರಿಸುವ 600 ಆರ್.ಪಿ.ಎಂ ಸಾಮರ್ಥ್ಯದ ಸೌರಚಾಲಿತ ಕುಂಬಾರ ಚಕ್ರ ಮತ್ತು ಅತ್ಯಾಧುನಿಕ ತಂತ್ರಜ್ಞಾನ ಬಳಸಿ ಕುಂಬಾರರಿಗೆ ಸ್ವಲ್ಪ ಸಮಯದಲ್ಲಿ ಸುಲಭ ವಿಧಾನದಲ್ಲಿ ಮಣ್ಣು ಕಲಿಸುವ ಯಂತ್ರಗಳನ್ನು ಆವಿಷ್ಕರಿಸಿದ್ದಾರೆ.
ಈ ಯಂತ್ರಗಳ ಪ್ರಾತ್ಯಕ್ಷತೆ ಕಾರ್ಯಕ್ರಮಕ್ಕೆ ಖಾದಿ ಮತ್ತು ಗ್ರಾಮೋದ್ಯೋಗ ಸಂಸ್ಥೆಯ ದಕ್ಷಿಣ ಭಾರತ ಪ್ರಾಂತ್ಯದ ಮುಂಬೈ ಕೇಂದ್ರ ಕಚೇರಿಯ ಹಿರಿಯ ಕಾರ್ಯಪಾಲಕ ಅಧಿಕಾರಿ ವೈ.ಕೆ. ಬಾರಾಮತಿಕರ ಆಗಮಿಸಿ ಯಂತ್ರಗಳ ಕಾರ್ಯವೈಖರಿಯನ್ನು ವೀಕ್ಷಿಸಿ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ಖಾದಿ ಮತ್ತು ಗ್ರಾಮೋದ್ಯೋಗ ಬೋರ್ಡ್ ವತಿಯಿಂದ ಯಂತ್ರಗಳನ್ನು ಖರೀದಿಸ ಬಯಸುವ ಗ್ರಾಮೀಣ ಭಾಗದ ಕುಂಬಾರರಿಗೆ ಸರ್ಕಾರದಿಂದ ರಿಯಾಯಿತಿ ದೊರಕಿಸಿಕೊಡುವ ಬಗ್ಗೆ ಕೇಂದ್ರ ಖಾದಿ ಬೋರ್ಡ್ ಅಧ್ಯಕ್ಷ ವಿನಯ ಕುಮಾರ್ ಸಕ್ಸೇನ್ ಅವರೊಡನೆ ಚರ್ಚಿಸಿ ಸಕಾರಾತ್ಮಕವಾಗಿ ಸ್ಪಂದಿಸುವುದಾಗಿ ತಿಳಿಸಿದ್ದಾರೆ.
ಸಿವಿಪಿಐ ಸಂಸ್ಥೆಯ ಪ್ರಾಂಶುಪಾಲ ರಾಮರತನ್ ಪ್ರಜಾಪತಿ, ಸಂಪನ್ಮೂಲ ವ್ಯಕ್ತಿ ಸಚ್ಚಿದಾನಂದ ಕಾಶಿಕರ ಅವರು ಯಂತ್ರಗಳನ್ನು ವೀಕ್ಷಿಸಿ ಅವುಗಳ ಬಳಕೆಯಿಂದ ಕುಂಬಾರರಿಗೆ ಸಮಯ ಮತ್ತು ಶ್ರಮದಲ್ಲಿ ಉಳಿತಾಯ ಆಗಲಿದೆ ಎಂಬ ವಿಶ್ವಾಸ ವ್ಯಕ್ತಪಡಿಸಿದ್ದಾರೆ.