ಗುಬ್ಬಿ : ಸಮಾಜದಲ್ಲಿ ಎಲ್ಲಾ ವರ್ಗದ ಜನರಲ್ಲಿ ಸಹೋದರರಂತೆ ಬೆರೆತು ಬದುಕು ಸಾಗಿಸುತ್ತಿರುವ ಕುಂಬಾರ ವೃತ್ತಿ ನಶಿಸುತ್ತಿದ್ದು, ಜನಾಂಗ ತೊಂದರೆಗೆ ಒಳಗಾಗಿದೆ ಎಂದು ಶಾಸಕ ಎಸ್.ಆರ್.ಶ್ರೀನಿವಾಸ್ ವಿಷಾದಿಸಿದರು.
ತಾಲ್ಲೂಕಿನ ಬಿದರೆ ಗ್ರಾಮದಲ್ಲಿ ಶ್ರೀ ಕಾಲಭೈರವೇಶ್ವರ, ಶ್ರೀ ಕುಂಭೇಶ್ವರ ಮತ್ತು ಪಪ್ಪೂರಮ್ಮ ದೇವಿ ನೂತನ ದೇವಾಲಯದ ಕಟ್ಟಡದ ಉದ್ಘಾಟನೆ ಹಾಗೂ ಅಷ್ಟಬಂಧನ ಮಹಾ ಕುಂಭಾಭಿಷೇಕ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ವೃತ್ತಿಯಿಂದ ಕುಂಬಾರ ಜನಾಂಗ ಜೀವನ ಸಾಗಿಸಲು ಕಷ್ಟಕರವಾಗಿತ್ತು. ಈ ಜನಾಂಗದ ಅಭಿವೃದ್ಧಿಗೆ ಆಡಳಿತ ನಡೆಸಿದ ಸರ್ಕಾರ ಸಹಕರಿಸಿಲ್ಲ, ಇತ್ತೀಚೆಗೆ ಬೆಳೆಯುತ್ತಿರುವ ಜನಾಂಗದ ಯುವಕರು ಆರ್ಥಿಕವಾಗಿ, ಶೈಕ್ಷಣಿಕವಾಗಿ, ರಾಜಕೀಯವಾಗಿ ಗುರುತಿಸಿಕೊಂಡಾಗ ಹಿಂದುಳಿದ ಜನಾಂಗ ಮುಂದೆ ಬರಲು ಸಾಧ್ಯ ಎಂದರು.
ನೊಣವಿನಕೆರೆ ಕಾಡಸಿದ್ದೇಶ್ವರ ಮಠದ ಕರಿವೃಷಭ ದೇಶಿಕೇಂದ್ರ ಸ್ವಾಮೀಜಿ ಮಾತನಾಡಿ, ಧರ್ಮದ ತಳಹದಿ ಮೇಲೆ ನಿಂತಿರುವ ಸಮಾಜ ಜಾತಿ ಭೇದ ಮರೆತು ಎಲ್ಲರಲ್ಲಿ ಒಂದಾಗಿ ಸಮಾಜದ ಅಭಿವೃದ್ಧಿಗೆ ಮುಂದಾಗಬೇಕೆಂದರು.
ರಾಜಕಾರಣದಲ್ಲಿ ಧರ್ಮವಿರಬೇಕೇ ಹೊರತು ಧರ್ಮವೇ ರಾಜಕಾರಣವಾಗ ಬಾರದು. ಹಲವು ವರ್ಷಗಳ ಇತಿಹಾಸವಿರುವ ಕಾಲಭೈರವೇಶ್ವರ ದೇವಾಲಯದ ಜೀರ್ಣೋದ್ಧಾರಕ್ಕೆ ರಾಜ್ಯದ ಹಲವು ಮೊಲೆಗಳಿಂದ ಸಮುದಾಯದ ಬಾಂಧವರು ಆಗಮಿಸಿ ಒಗ್ಗಟ್ಟು ಪ್ರದರ್ಶನ ಮಾಡಿರುವುದು ಶ್ಲಾಘನೀಯ ಎಂದರು.
ಕುಂಬಾರ ಸಂಘದ ಅಧ್ಯಕ್ಷ ಸಿದ್ದನಂಜಶೆಟ್ಟರು ಮಾತನಾಡಿ, ದೇವಾಲಯದ ಮೂಲ ಈಗಿನ ಆಂಧ್ರದ ಕಡಪ ಜಿಲ್ಲೆಯ ಪುಲಿವೆಂದಲು ತಾಲ್ಲೂಕಿನ ಕೊಂಡರೆಡ್ಡಿಪಲ್ಲಿ ಮೋಪುರುಂಠವಾಗಿದೆ. ಈ ದೇವಾವಯಕ್ಕೆ 500 ವರ್ಷಗಳ ಇತಿಹಾಸವಿದೆ. ಆದರೆ, ಅಲ್ಲಿದ್ದ ನಮ್ಮ ಪೂರ್ವಜರು ಅನಿವಾರ್ಯ ಕಾರಣಗಳಿಂದ ಬಿದರೆ ಗ್ರಾಮಕ್ಕೆ ಬಂದು ನೆಲೆಸಿ ದೇವರನ್ನು ಪ್ರತಿಷ್ಠಾಪಿಸಿದೆ ಅನೇಕ ಕುರುಹುಗಳಿವೆ ಎಂದರು.
ನಮ್ಮ ಜನಾಂಗದಲ್ಲಿ ಹಲವು ಒಳ ಪಂಗಡಗಳಿದ್ದು ಜನಾಂಗ ಒಂದೇ ಎಂಬ ಭಾವನೆಯಿಂದ ಧರ್ಮ ಕಾರ್ಯಗಳಲ್ಲಿ ಭಾಗವಹಿಸುತ್ತಿದ್ದೇವೆಂದರು. ಕಾರ್ಯಕ್ರಮದಲ್ಲಿ ಕೆ. ಮುನಿಸ್ವಾಮಿ, ಮಂಜುನಾಥ್, ನಿವೃತ್ತ ಎಸಿಪಿ ಕೃಷ್ಣಪ್ಪ, ದೇವರಾಜು, ನಂಜುಂಡಯ್ಯ, ತಿಮ್ಮಯ್ಯ, ನಂಜೇಶ್, ದೇವಾಲಯದ ಟ್ರಸ್ಟಿಗಳು ಗ್ರಾಮದ ಮುಖಂಡರು ಮತ್ತಿತರರು ಉಪಸ್ಥಿತರಿದ್ದರು.