ಕುಲ ಎನ್ನುವುದು ಜನಪದ ಬದುಕಿನ ಒಂದು ವಿಶಿಷ್ಟ ಸಂಗತಿ. ಪ್ರಾದಿಮಕಾಲ ಕಳೆದು ಶಿಲಾಪೂರ್ವ ನವಶಿಲಾಯುಗಗಳು ಮೊದಲುಗೊಂಡು ಮಾನವ ಗುಂಪುಗಳು ವಿವಿಧ ಭೂ-ಭೌಗೋಳಿಕ ಪ್ರದೇಶಗಳಿಗೆ ಚೆದುರಿ ವಿಭಿನ್ನ ವೃತ್ತಿ ಕೈಕೊಂಡಾಗ ತಮ್ಮ ತಮ್ಮ ಗುಂಪನ್ನು ಒಂದೊಂದು ಸಂಕೇತದ ಮೂಲಕ ಗುರುತಿಸಿಕೊಳ್ಳುತ್ತ ಬಂದರು. ಆಗ ಒಂದು ಮರ, ಒಂದು ಪಕ್ಷಿ, ಒಂದು ಬಂಡೆ, ಒಂದು ಪಶು, ಪ್ರಾಣಿ ಅವರವರ ಗುಂಪಿನ ವಿಶಿಷ್ಟ ಗುರುತು, ಸಂಕೇತ. ಆ ಸಂಕೇತ ಅವರ ರಕ್ಷಣೆ ಪೋಷಣೆಗೆ ಆಧಾರವಾಗಿ ಕಾಲಾನಂತರ ಅದು ಅವರ ಕುಲಸಂಕೇತವಾಗಿ ರೂಪುಗೊಂಡಿತು. ಕುಲಸಂಕೇತ ಅವರ ಕೇವಲ ಗುರುತಿನ ಕುರುಹಾಗಿ ಉಳಿಯದೆ ಅದೊಂದು ಅವರ ಪಾಲಿಗೆ ಪವಿತ್ರ ವಸ್ತು ಎನ್ನುವ ನಂಬಿಕೆ ಬೆಳೆದು ಅದನ್ನೇ ಆ ಜನಪದ ವೃಂದವು ಆರಾಧಿಸಲು ತೊಡಗಿತು. ಇದು ಜಾನಪದದ ದೃಷ್ಟಿಯಿಂದ ತುಂಬ ವಿಶಿಷ್ಟ ಪ್ರಕ್ರಿಯೆಯಾಗಿದ್ದು ಇದನ್ನೇ ಕುಲಸಂಕೇತಾರಾಧನೆ ಎಂದು ಗುರುತಿಸಬಹುದಾಗಿದೆ.
ಕುಲದೇವತಾರಾಧನೆಯ ಇನ್ನೊಂದು ಮಹತ್ವದ ಅಂಶವೆಂದರೆ ಬುಡಕಟ್ಟುಗಳು ವಿವಿಧ ಕುಲಗುಂಪುಗಳಾದುದು. ಈ ಕುಲಗುಂಪು ಆಯಾ “ಬಳಿ” ಗೆ ಆಧಾರವಾಯಿತು. ಅದೇ ಮುಂದೆ ಶಿಷ್ಟಪದ ಸಮಾಜದಲ್ಲಿ “ಗೋತ್ರ”ವಾಯಿತು. ಒಂದೇ “ಬಳಿ” ಗೆ (ತುಳುವಿನಲ್ಲಿ `ಬರಿ’)ಸೇರಿದ ಗಂಡು ಮತ್ತು ಹೆಣ್ಣು ಮದುವೆಯಾಗಬಾರದು ಎನ್ನುವ ಆದಿಮಾನವ ಸಮಾಜದ ನಂಬಿಕೆ ಇಂದಿನವರೆಗೂ ಮುಂದುವರೆದಿರುವದನ್ನು ನಾವು ಕಾಣುತ್ತೇವೆ. ಒಂದು ಕುಲಸಂಕೇತವುಳ್ಳ ವೃಂದ, ರಕ್ತಸಂಬಂಧದ ದೃಷ್ಟಿಯಿಂದ ಸೋದರರಾಗುತ್ತಾರೆ. ಒಂದೇ ಕುಲಗುಂಪಿನ ಕರುಳಬಳ್ಳಿಯಲ್ಲಿ ವಿವಾಹವಾದರೆ ಕುಲಗುಂಪಿನ ನಾಶ ಎನ್ನುವುದರಿಂದ ಸಗೋತ್ರ ವಿವಾಹಕ್ಕೂ ನಿಷೇಧ ಹೇರಲಾಯಿತು. ‘ಗೋತ್ರ’ ಶಬ್ದಕ್ಕೆ ಹಲವಾರು ಅರ್ಥಗಳಿದ್ದರೂ ಪ್ರಕೃತ ಸಂದರ್ಭದಲ್ಲಿ ಇದನ್ನು ಕುಲ, ವಂಶ, ಸಂತತಿ ಎಂಬ ಅರ್ಥದಲ್ಲಿ ಗ್ರಹಿಸಬೇಕಾಗಿದೆ. ಹಾಗೆಯೇ ’ಬರಿ’ ಎಂಬ ಪದವು ಬಡಿ, ಬದಿ, ಪಕ್ಷ, ಮಗ್ಗಲು ಎಂಬರ್ಥವನ್ನಿತ್ತು ಯಾವ ವಂಶಕ್ಕೆ ಸೇರಿದ್ದು ಎಂಬ ಸೂಚಿತಾರ್ಥವನ್ನೀಯುತ್ತದೆ.
ದ.ಕ.-ಉಡುಪಿ ಜಿಲ್ಲೆಯ ದ್ರಾವಿಡ ಸಂಸ್ಕೃತಿಗೆ ಸೇರಿದ ಬಿಲ್ಲವ, ಬಂಟ , ಕುಡುವ, ನಾಡವ, ಮೊಗವೀರ, ದೇವಾಡಿಗ ಮೊದಲಾದವರಲ್ಲಿ ಇರುವಂತೆ ಕುಲಾಲ ಸಮಾಜದಲ್ಲಿ ಕೂಡಾ ಬಳಿ ಪದ್ಧತಿ ಕಾಣುತ್ತೇವೆ. ಮದುವೆ ಕಾರ್ಯಗಳು ನಡೆಯಬೇಕಾದರೆ ಕುಲ-ಗೋತ್ರಗಳ ಆಧಾರದ ಮೇಲೆ ನಡೆಯುತ್ತವೆ. ಒಂದೊಂದು ಸಮಾಜದಲ್ಲಿ ಅನೇಕ ಕುಟುಂಬಗಳಿರುವುದರಿಂದ ಈ ಕುಟುಂಬಗಳನ್ನು ಪ್ರತ್ಯೇಕ ಪ್ರತ್ಯೇಕವಾಗಿ ಗುರುತಿಸಲು ಬೇರೆ ಬೇರೆ ಹೆಸರಿನ ಅಗತ್ಯತೆ ಉಂಟಾಗಿ ಕುಲ-ಗೋತ್ರದ ಹೆಸರಿನ ಉಗಮಕ್ಕೆ ಕಾರಣವಾಗಿದೆ ಎಂಬುದರಲ್ಲಿ ಸತ್ಯತೆ ಇದೆ ಎನ್ನಬಹುದು.
ಇಂದು ಕುಲಾಲ ಸಮಾಜದಲ್ಲಿ ಅನೇಕ ’ಬಳಿ’ಗಳ ನಾಮಧೇಯ ಹೊಂದಿದ ಕುಟುಂಬಗಳನ್ನು ತುಳುನಾಡಿನಲ್ಲಿ ಕಾಣಬಹುದು. ಇಲ್ಲಿ ಪ್ರಮುಖವಾಗಿ ಗಮನಿಸಬೇಕಾದ ಅಂಶವೇನೆಂದರೆ ಒಂದೇ ಜಾತಿಯ ,ಒಂದು ಬಳಿಗೆ ಸೇರಿದವರೆಲ್ಲರೂ ಒಂದೇ ರಕ್ತದ ಕುಟುಂಬದವರಾಗಿರುತ್ತಾರೆ ಎಂಬುದು ವೈಜ್ಞಾನಿಕವಾಗಿ ನಡೆದ ಹಲವು ಸಂಶೋಧನೆಗಳು ಕೂಡ ಇದಕ್ಕೆ ಪುಷ್ಟಿ ನೀಡುತ್ತವೆ. ಸಂಸ್ಕೃತಿಯೊಳಗೆ ಕೆಲವು ಉಪ-ಸಂಸ್ಕೃತಿ ಇದ್ದಂತೆ, ಉಪ-ಸಂಸ್ಕೃತಿಯೊಳಗೆ ಹಲವು ಜಾತಿಗಳಿರುವಂತೆ ; ಹಲವು ಜಾತಿಗಳೊಳಗೆ ಅನೇಕ ಕುಟುಂಬಳಿದ್ದು, ಈ ಅನೇಕ ಕುಟುಂಬದಲ್ಲಿ ಬೇರೆ ಬೇರೆ ಕುಟುಂಬಕ್ಕೊಂದರಂತೆ ಬಳಿಗಳಿರುವುದು ಸರ್ವೇ ಸಾಮಾನ್ಯವಾಗಿ ಕೇಳುವ ಸಂಗತಿ. ಜನರು ತಮ್ಮ ಬದುಕಿನ ನಿರ್ವಹಣೆಯಲ್ಲಿ ವಿವಿಧ ಉದ್ಯೋಗ, ವೃತ್ತಿ, ಕಸುಬುಗಳಿಗನುಗುಣವಾಗಿ ಹುಟ್ಟಿಕೊಂಡ ಜಾತಿ ವ್ಯವಸ್ಥೆಯಲ್ಲಿ ಕುಂಬಾರಿಕೆ ವೃತ್ತಿಯನ್ನು ಬದುಕಿನಾಸರೆಯಾಗಿ ಸ್ವೀಕರಿಸಿದ ದ.ಕ., ಉಡುಪಿ ಜಿಲ್ಲೆಯ ಕುಲಾಲರಲ್ಲೂ ಇತರ ಜಾತಿಗಳಲ್ಲಿ ಇರುವಂತೆ ಅನೇಕ ’ಬಳಿ’ ಪ್ರಚಲಿತಲ್ಲಿದೆ. ಒಂದೊಂದು ಬಳಿಗೆ ಸಂಬಂಧಿಸಿದ ನಾಗ – ಭೂತ – ಮುಂತಾದ ದೈವಗಳ ಮೂಲಸ್ಥಾನ ಆದಿ – ಆಲಡೆ ಎಂದು ಕರೆಯಲಾಗುವ ಸ್ಥಳಗಳೂ ಇವೆ.
ಕರಾವಳಿ ಭಾಗದಲ್ಲಿ ಕುಲಾಲರ ಸಂಸ್ಕೃತಿಯು ಮಾತೃಮೂಲೀಯ ಕುಟುಂಬ ಪದ್ಧತಿಯನ್ನು ಹೊಂದಿದೆ. ಇಲ್ಲಿ ಕೌಟುಂಬಿಕ ನೆಲೆಯಲ್ಲಿ ಮಹಿಳೆಗೆ ಪ್ರಧಾನವಾದ ಸ್ಥಾನವಿದೆ. ಅಳಿಯ ಸಂತಾನದ ಕಟ್ಟಳೆಯನ್ನು ಅನುಸರಿಸುವ ನಮ್ಮಲ್ಲಿ ಮಾತೃಪ್ರಧಾನ ಪರಿಕಲ್ಪನೆಯು ಬಳಕೆಯಲ್ಲಿದೆ. ಬಂಧುತ್ವದ ಸಂದರ್ಭದಲ್ಲಿ ಮುಖ್ಯವಾಗಿ ತಾಯಿಯ ಬಳಿಯು ಗಂಡು-ಹೆಣ್ಣು ಮಕ್ಕಳಿಬ್ಬರಿಗೂ ಬರುತ್ತದೆ. ತಂದೆಯ ಬಳಿಯು ಇಲ್ಲಿ ಅಷ್ಟು ಮುಖ್ಯವಾಗಿಲ್ಲ. ಮದುವೆಯ ವಿಚಾರಕ್ಕೆ ಬಂದರೆ ಕುಲಾಲರಲ್ಲಿ ಒಳಬಾಂಧವ್ಯಕ್ಕೆ ಒತ್ತು ಕೊಡುತ್ತಿದ್ದುದು ಹೆಚ್ಚಾಗಿ ಕಂಡು ಬರುತ್ತದೆ. ಮದುವೆಯ ಸಂದರ್ಭದಲ್ಲಿ ತಂದೆಯ ಬಳಿಯ ಹುಡುಗನನ್ನು, ಹುಡುಗಿ ಮದುವೆ ಆಗಬಹುದು ಆದರೆ ತಾಯಿಯ ಬಳಿಯ ಹೆಣ್ಣು ಅದೇ ಬಳಿಯ ಗಂಡನ್ನು ಮದುವೆಯಾಗಲು ನಮ್ಮಲ್ಲಿ ನಿಷೇಧವನ್ನು ಹೇರಲಾಗಿದೆ.
ಹಿಂದೆ ಹೆಚ್ಚಾಗಿ ಬಳಿಯನ್ನು ಯಾವುದಾದರೊಂದು ವಸ್ತು, ಸಸ್ಯ, ವೃಕ್ಷ ಅಥವಾ ಪ್ರಾಣಿ ಸಂಬಂಧವಾಗಿ ಹೇಳಿಕೊಳ್ಳುತ್ತಿದ್ದರೂ, ಕೆಲವೊಂದು ಊರಿನ ಹೆಸರು ಕಾಲಕ್ರಮೇಣ ಹೊಸ ಸ್ವರೂಪ ಪಡೆದಿರುವಂತೆ ಈ ಬಳಿ ಹೆಸರುಗಳೂ ಮೂಲಾರ್ಥ ಕಳೆದುಕೊಂಡಿದೆ. ಕುಲಾಲ ಸಮಾಜದಲ್ಲಿ ಬಂಗೇರ, ಬಂಜನ್, ಅಂಚನ್, ಸಾಲ್ಯಾನ್, ಕರ್ಕೇರ, ಕರ್ಮರನ್, ಉಪ್ಯಾನ್, ಕಡಂಬರನ್ , ಕುಕ್ಯಾನ್, ಗುಂಡರನ್, ಗುಜರನ್, ಬೊಲ್ಯಟನ್, ಕಿರೋಡಿಯನ್, ಕರಂಬೇರನ್, ಮುಂಡರನ್ ಎಂಬಿತ್ಯಾದಿ ಒಟ್ಟು 27 ಬಳಿಗಳು ಇವೆ ಎಂದು ತಿಳಿದು ಬಂದಿದೆ. ಇವುಗಳಲ್ಲಿ `ಉಪ್ಯನ್’ `ಉಪ್ಯಾನ್ ‘ ಉಪ್ಪೆನ್ನ’ ಎಂಬ ಹೆಸರಿನಿಂದ ಕರೆಯುವ ಬಳಿಯೂ ಒಂದು. ಈ ಹೆಸರು ಯಾವ ವಸ್ತುವನ್ನು ಸಂಕೇತವಾಗಿಸಿ ಇಟ್ಟಿದ್ದರೋ ಈಗ ಯಾರಿಗೂ ತಿಳಿದಿಲ್ಲ. ಆದರೆ ಮನುಷ್ಯನ ಕಲ್ಪನೆಯ ಮೂಸೆಯಲ್ಲಿ ಅಪಾರ್ಥವಿರುವುದಿಂದಲೋ ಏನೋ ಇಂದು ಈ ಬಳಿಯ ಹೆಣ್ಣು ಮಕ್ಕಳು ಮದುವೆ ವಿಚಾರದಲ್ಲಿ ಸಂಕಷ್ಟವನ್ನು ಎದುರಿಸುವಂತಾಗಿದೆ. ಇದು ಕೇವಲ ಕುಲಾಲ ಸಮುದಾಯದಲ್ಲಷ್ಟೇ ಅಲ್ಲ ಉಪ್ಯಾನ್ ಬಳಿಯ ಕುರಿತಾಗಿ ಆಧಾರವಿಲ್ಲದ ಕಾರಣ ನೀಡಿ, ವಧುವನ್ನು ತಿರಸ್ಕರಿಸಲಾಗುತ್ತಿರುವುದು ಹಿಂದಿನಿಂದಲೂ ಇತರ ಜಾತಿಯಲ್ಲೂ ನಡೆದುಬಂದಿದೆ. ಹೀಗಾಗಿ ಬಳಿಯ ಕಾರಣದಿಂದ ಅದೆಷ್ಟೊ ಯುವತಿಯರು ಪ್ರಾಯಪೂರ್ತಿಯಾದರೂ ಕಂಕಣಭಾಗ್ಯ ಕೂಡಿ ಬರದೇ ಕೊರಗುತ್ತಿರುವುದು ಬಹಿರಂಗ ಸತ್ಯ.
ಉಪ್ಯಾನ್ ಬಳಿ ಸಹಿತ ಕೆಲವು ಬಳಿಯ ಹೆಣ್ಣು ಮಕ್ಕಳನ್ನು ತಿರಸ್ಕರಿಸುವವರಲ್ಲಿ ಅದಕ್ಕೆ ಸಕಾರಣಗಳು ಇಲ್ಲ. `ಆ ಬಳಿ ಕೆಟ್ಟದ್ದು ಎಂದು ನಮ್ಮ ಹಿರಿಯರು ಹೇಳುತ್ತಿದ್ದರು’ ಎಂಬ ಪೊಳ್ಳು ಕಾರಣ ಹೇಳುತ್ತಾರೆ. `ಅವರನ್ನು ಮದುವೆಯಾದರೆ ಅವರ ಜೀವನ ಚೆನ್ನಾಗಿರದೆ ಉಪ್ಪಿನಂತೆ ಕರಗಿ ಹೋಗುತ್ತದೆಯಂತೆ’ ಎಂದು ಈ ಬಳಿಗೆ ಉಪ್ಪನ್ನು ಸಂಕೇತವಾಗಿಸಿ ಅಪನಂಬಿಕೆಯನ್ನು ಕೆಲವರು ಹರಿಬಿಟ್ಟಿದ್ದಾರೆ. ಇದನ್ನು ಕೆಲ ಮೂಢರು ಇಂದಿಗೂ ನಂಬುತ್ತಿರುವುದು ಮಾತ್ರ ವಿಪರ್ಯಾಸ. ಈ ಬಗ್ಗೆ ಮಾತೆತ್ತಿದರೆ, ಸಮಾಜದಲ್ಲಿ ಮತ್ತಷ್ಟು ಅವಕೃಪೆಗೆ ಒಳಗಾಗಬಹುದು ಎಂಬ ಭೀತಿಯಿಂದಿದ್ದ, ಈ ಬಳಿಯ ಯುವಕ/ಯುವತಿಯರು ಈಗ ಫೇಸ್ ಬುಕ್ , ವಾಟ್ಸಪ್ ನಂಥ ಸಾಮಾಜಿಕ ತಾಣದಲ್ಲಿ ಬಹಿರಂಗವಾಗಿ ಮಾತನಾಡತೊಡಗಿದ್ದಾರೆ . ಉಪ್ಯಾನ್ ಬಳಿ ಕುರಿತಂತೆ ಇರುವ ಮೂಢನಂಬಿಕೆಯನ್ನು ತೊಲಗಿಸಿ, ಜನರಲ್ಲಿ ಜಾಗೃತಿ ಮೂಡಿಸುವ ಕೆಲಸಕ್ಕೂ ಮುಂದಾಗಿರುವುದು ಸ್ವಾಗತಾರ್ಹ ಬೆಳವಣಿಗೆ. ತಮಗಾಗುತ್ತಿರುವ ತಿರಸ್ಕಾರ, ಅವಮಾನವನ್ನು ಸಹಿಸಿ ಅದೆಷ್ಟು ವರ್ಷ ಸಹಿಸಿಕೊಳ್ಳಲು ಸಾಧ್ಯ ಅಲ್ಲವೇ ? ಮುಂದಿನ ಪೀಳಿಗೆ ಆ ನೋವು, ಅಪಮಾನ, ಹಿಂಸೆಗಳನ್ನು ಇನ್ನೆಂದಿಗೂ ಅನುಭವಿಸಬಾರದು ಎನ್ನುವ ಕಾಳಜಿ ಮೆಚ್ಚುವಂಥದ್ದೇ. ಅದಕ್ಕೆ ಬೆಂಬಲ ಸೂಚಿಸಬೇಕಾದುದು ಎಲ್ಲರ ಕರ್ತವ್ಯ.
ಎಲ್ಲಾ ವಿವಾಹ ಸಂಬಂಧಗಳು ಯಶಸ್ವಿಯಾಗಬೇಕೆಂದೇನೂ ಇಲ್ಲ. ಇದಕ್ಕೆ ಪೂರಕವಾಗಿ ಯಾವುದೋ ಕಾಲದಲ್ಲಿ ಉಪ್ಯಾನ್ ಬಳಿಯ ಒಂದೆರಡು ಪ್ರಕರಣಗಳಲ್ಲಿ ಕೆಟ್ಟದೇನೋ ನಡೆದಿರಲೂಬಹುದು. ಹಾಗಂತ ಈ ಬಳಿಯೇ ಕೆಟ್ಟದ್ದು ಎನ್ನಲು ಯಾವುದೇ ಆಧಾರಗಳಿಲ್ಲ. ವಿಜ್ಞಾನದಲ್ಲಿ ಗುಣಗಳ ವೈವಿಧ್ಯ ವೈಶಿಷ್ಟ್ಯಗಳಿಗಾಗಿ ಸ್ವಕೀಯ ಪರಾಗಸ್ಪರ್ಶಕ್ಕಿಂತಲೂ, ಪರಕೀಯ ಪರಾಗಸ್ಪರ್ಶಕ್ಕೆ ಹೆಚ್ಚು ಮಹತ್ವ. ಅದೇ ರೀತಿ ಇಲ್ಲಿಯೂ ಬೇರೆ ಬೇರೆ ಗೋತ್ರದವರು ಸಂಬಂಧ ಬೆಳೆಸುವುದರಿಂದ ಮುಂದಿನ ಸಂತಾನ ಒಂದೇ ಬಗೆಯ ವೈಶಿಷ್ಟ್ಯಗಳ ಪಡಿಯಚ್ಚಾಗದೆ ಬಗೆ ಬಗೆಯ ವೈವಿಧ್ಯ ವೈಶಿಷ್ಟ್ಯಗಳಿಂದ ಕೂಡಿ ಸತ್ವಯುತವಾಗಿರುತ್ತದೆಂದೇ ಪೂರ್ವಜರು `ಬಳಿ ಪದ್ಧತಿ’ಯನ್ನು ಜಾರಿಗೆ ತಂದಿದ್ದಾರೆ . ಅವರ ಮನಸ್ಸಿನಲ್ಲಿ ಯಾವ ಬಳಿಯೂ ಶ್ರೇಷ್ಠ -ಕನಿಷ್ಠ ಎಂಬುದು ಖಂಡಿತಾ ಇದ್ದಿರಲಿಲ್ಲ . ಆದರೆ ಯಾವುದೋ ವಿಕೃತ ಮನಸ್ಥಿತಿಯ ಕೆಲವರು ತಮ್ಮ ಸ್ವಾರ್ಥಕ್ಕಾಗಿಯೋ, ಕುಚೋದ್ಯಕ್ಕಾಗಿಯೋ ಹರಿಬಿಟ್ಟ ವದಂತಿ ಇಂದು ಎಲ್ಲೆಡೆ ಹರಡಿ ಕೆಲ ಕುಟುಂಬಕ್ಕೇ ಮಾರಕವೆಂಬಂತಾಗಿದೆ.
ಉಪ್ಯಾನ್ ಬಳಿಯ ಬಗೆಗಿನ ತಪ್ಪು ಕಲ್ಪನೆ ಬಗ್ಗೆ ಹಿಂದೊಮ್ಮೆ ಫೇಸ್ ಬುಕ್ ನಲ್ಲಿ ಬರೆದಿದ್ದೆ. ಆಗ ಹಲವರು ಇದಕ್ಕೆ ಬೆಂಬಲ ಸೂಚಿಸಿದ್ದರು. ಅಲ್ಲದೆ ಈ ಬಳಿಯ ಯುವತಿಯರನ್ನು ಮದುವೆಯಾದ ಹಲವರು ನೆಮ್ಮದಿಯ ಜೀವನ ನಡೆಸುತ್ತಿದ್ದೇವೆ. ಇಂಥ ನಂಬಿಕೆಯಲ್ಲಿ ಯಾವುದೇ ಹುರುಳಿಲ್ಲ ಎಂದಿದ್ದರು. ಇನ್ನು ಹಲ ಯುವಕರು ಮದುವೆಯಾಗುವಾಗ ಉಪ್ಯಾನ್ ಬಳಿಯ ಹೆಣ್ಣನ್ನೇ ಆರಿಸುವುದಾಗಿಯೂ ಈ ಬಗೆಗಿನ ಮೂಢನಂಬಿಕೆಯನ್ನು ತೊಡೆದುಹಾಕಿ, ಈ ಸಮಸ್ಯೆಯ ಪರಿಹಾರಕ್ಕೆ ಶ್ರಮಿಸುವುದಾಗಿಯೂ ತಿಳಿಸಿದ್ದರು. ಇನ್ನು ಹಲವರು ಈ ಬಗ್ಗೆ ಚರ್ಚಿಸಿದಷ್ಟೂ ಸಮಸ್ಯೆ ಜಟಿಲವಾಗುತ್ತದೆ ಎಂದೂ ಎಚ್ಚರಿಸಿದ್ದರು. ಆದರೆ ಕಣ್ಣೆದುರೇ ಆಗುತ್ತಿರುವ ಸಾಮಾಜಿಕ ತುಷ್ಟೀಕರಣವನ್ನು ನೋಡಿ ಸುಮ್ಮನಿದ್ದರೆ ಅನ್ಯಾಯಕ್ಕೆ ಬೆಂಬಲಿಸಿದಂತೆ ಆಗುವುದಿಲ್ಲವೇ ?
ಜಾತಕ ತಾಳೆ ಹಾಕುವುದು, ಜ್ಯೋತಿಷಿಗಳಲ್ಲಿ ಗಂಡು-ಹೆಣ್ಣಿನ ಕಣಿ ಕೇಳುವುದು ಇವೆಲ್ಲಾ ಈಗ ತುಂಬಾ ಕಡಿಮೆಯಾಗುತ್ತಿದೆ. ಸ್ವಾನುಭವದಿಂದ ಜನರು ಈಗ ಜಾತಕ, ಜ್ಯೋತಿಷಿ, ಬರಿ, ಗೋತ್ರ ಇವುಗಳಲ್ಲಿ ವೇಗವಾಗಿ ನಂಬಿಕೆ ಕಳೆದುಕೊಳ್ಳುತ್ತಿದ್ದಾರೆ. ಇದು ಒಂದು ದೃಷ್ಟಿಯಲ್ಲಿ ಸ್ವಾಗತಾರ್ಹ ಬೆಳವಣಿಗೆ. ಒಂದು ಗೋತ್ರದ ಒಂದೋ ಎರಡೋ ಕುಟುಂಬಗಳಿದ್ದ ಕಾಲದಲ್ಲಿ ಅಣ್ಣನೇ ತಂಗಿಯನ್ನು ಮದುವೆಯಾಗುವಂತಾಗಿ ವೈವಿಧ್ಯ ವೈಶಿಷ್ಟ್ಯಗಳಿಗೆ ಅವಕಾಶ ಆಗುವುದಿಲ್ಲವೆಂದೇ ಪೂರ್ವಿಕರು ಸಗೋತ್ರ ಅಥವಾ ಒಂದೇ ಬಳಿಯ ವಿವಾಹವೂ ಸಲ್ಲದೆಂದರು ಅಷ್ಟೆ. ಆದರೆ ಸಾವಿರಾರು ವರ್ಷಗಳ ಈ ಸುದೀರ್ಘ ಅವಧಿಯಲ್ಲಿ ಪ್ರತಿಯೊಂದು ಬಳಿಯಲ್ಲೂ ಸಾವಿರಾರು ವೈವಿಧ್ಯ ವೈಶಿಷ್ಟ್ಯಗಳು ಕಾಣಿಸಿಕೊಂಡಿರುವುದರಿಂದ, ಅಣ್ಣನೇ ತಂಗಿಯನ್ನು ಮದುವೆಯಾಗುವಂತಹ ಪ್ರಮೇಯ ಉದ್ಭವಿಸುವುದೇ ಇಲ್ಲ. ಹಾಗಾಗಿ ಸಗೋತ್ರ ವಿವಾಹದಿಂದ ಭಾವೀ ಸಂತಾನ ಸತ್ವಹೀನವಾಗುತ್ತದೆಂಬ ಮಾತು ಸುಳ್ಳಾಗುತ್ತಿದೆ. ಉಪ್ಯಾನ್ ಅಂತಲ್ಲ, ಇತರ ಎಲ್ಲ ಬಳಿ/ಗೋತ್ರಗಳ ಬಗ್ಗೆಯೂ ನಾಗರಿಕ ಸಮಾಜ ಇನ್ನಷ್ಟು ಪ್ರಜ್ಞಾವಂತಿಕೆ ಬೆಳೆಸಿಕೊಳ್ಳಬೇಕು. ಈ ಬಗ್ಗೆ ಜನರಲ್ಲಿ ಅಚ್ಚೊತ್ತಿರುವ ಕುರುಡು ನಂಬಿಕೆಯನ್ನು ತೊಲಗಿಸಲು ಪಣ ತೊಡಬೇಕಾಗಿದೆ.
ದಿನೇಶ್ ಬಂಗೇರ ಇರ್ವತ್ತೂರು


