ವಿಟ್ಲ : ಲಾರಿ ಹಾಗೂ ಆಟೋ ರಿಕ್ಷಾ ನಡುವೆ ಸಂಭವಿಸಿದ ಅಪಘಾತದಲ್ಲಿ ರಿಕ್ಷಾ ಪ್ರಯಾಣಿಕರೋರ್ವರು ಗಾಯಗೊಂಡ ಘಟನೆ ಇಲ್ಲಿನ ಪೆರುವಾಯಿ ಸಮೀಪದ ಕೊಲ್ಲತ್ತಡ್ಕದಲ್ಲಿ ಗುರುವಾರ ನಡೆದಿದೆ.
ಗಾಯಾಳುವನ್ನು ಸ್ಥಳೀಯ ನಿವಾಸಿ ರಾಮ ಮೂಲ್ಯ ಎಂದು ಗುರುತಿಸಲಾಗಿದೆ. ಪೆರುವಾಯಿ ಪೇಟೆಯಿಂದ ಮಾಣಿಲ ಕಡೆಗೆ ತೆರಳುತ್ತಿದ್ದ ರಿಕ್ಷಾ ಹಾಗೂ ವಿರುದ್ಧ ದಿಕ್ಕಿನಿಂದ ಬಂದ ಲಾರಿ ಪರಸ್ಪರ ಡಿಕ್ಕಿಯಾಗಿದ್ದು, ಘಟನೆಯಲ್ಲಿ ರಿಕ್ಷಾದ ಮುಂಭಾಗ ಸಂಪೂರ್ಣ ಜಖಂಗೊಂಡಿದೆ. ಗಾಯಾಳುವನ್ನು ಆಸ್ಪತ್ರೆಯಲ್ಲಿ ಚಿಕಿತ್ಸೆಗೊಳಪಡಿಸಲಾಗಿದ್ದು, ರಿಕ್ಷಾ ಚಾಲಕ ಹಸೈನಾರ್ ಎಂಬವರು ನೀಡಿದ ದೂರಿನನ್ವಯ ವಿಟ್ಲ ಠಾಣೆ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಆತ್ಮಹತ್ಯೆ
ಬಂಟ್ವಾಳ: ತಾಲೂಕಿನ ಮಾರ್ನಬೈಲು ಸಮೀಪದ ನೀಲ್ಯ ನಿವಾಸಿ ಕೇಶವ ಮೂಲ್ಯ(40) ಎಂಬವರು ವಿಷ ಸೇವಿಸಿದ ಬಳಿಕ ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿದ ಘಟನೆ ನಡೆದಿದೆ.
ಇವರು ಕಳೆದ ಎರಡು ದಿನಗಳ ಹಿಂದೆಯಷ್ಟೇ ಮನೆಯಲ್ಲಿ ಯಾರೂ ಇಲ್ಲದಾಗ ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ್ದರು. ವಿಷ ಸೇವಿಸಿ ಒದ್ದಾಡುತ್ತಿದ್ದ ವೇಳೆ ಅವರನ್ನು ಮಂಗಳೂರಿನ ಫಾದರ್ ಮುಲ್ಲರ್ಸ್ ಆಸ್ಪತ್ರೆಗೆ ದಾಖಲಿಸಲಾಗಿತ್ತು.
ಸ್ಥಳೀಯ ಪಣೋಲಿಬೈಲು ಎಂಬಲ್ಲಿ ದುಡಿಯುತ್ತಿದ್ದ ಇವರು ಕಳೆದ ಎಂಟು ವರ್ಷಗಳ ಹಿಂದೆ ವಿವಾಹವಾಗಿದ್ದು, ಪತ್ನಿ ವೀರಕಂಭ ಸಹಕಾರಿ ಸಂಸ್ಥೆಯಲ್ಲಿ ದುಡಿಯುತ್ತಿದ್ದಾರೆ. ಇವರಿಗೆ ಒಂದೂವರೆ ವರ್ಷ ಹರೆಯದ ಹೆಣ್ಣು ಮಗು ಇದೆ ಎಂದು ನಗರ ಠಾಣೆ ಪೊಲೀಸರು ತಿಳಿಸಿದ್ದಾರೆ. ಕೇಶವ ಮೂಲ್ಯರ ಅಣ್ಣ ಜಯಂತ ಮೂಲ್ಯ ಮೂರು ತಿಂಗಳ ಹಿಂದೆ ನಿಧನರಾಗಿದ್ದು, ಇದರ ನಂತರ ಅವರು ಮಾನಸಿಕ ಖಿನ್ನತೆಗೊಳಗಾಗಿದ್ದರು. ಇದೇ ಕಾರಣದಿಂದ ಜೀವನದಲ್ಲಿ ಜುಗುಪ್ಸೆಗೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆನ್ನಲಾಗಿದೆ.