ಭಾರತೀಯ ನಾರಿ ಅಂದಾಕ್ಷಣ, ನೆನಪಿಗೆ ಬರುವವಳೇ ಸೀರೆಯುಟ್ಟ ನಾರಿ. ನಮ್ಮ ದೇಶೀಯ ಸಂಸ್ಕೃತಿಯ ಜೀವಾಳವೇ ಸೀರೆ. ನೀರೆಯ ಅಂದದ ಉಡುಪಾದ ಸೀರೆಗೆ ಅದರದ್ದೇ ಆದ ಗೌರವಗಳಿವೆ. ಅಂದಗಾತಿಯರ ಅಂದವನ್ನು ಮತ್ತಷ್ಟು ಹೆಚ್ಚಿಸುವ ಸೀರೆಗೆ ಮತ್ತು ಸೀರೆಯುಡುವ ಶೈಲಿಗೆ ವಿದೇಶಿಯರೂ ಮನಸೋತಿದ್ದಾರೆ.
ನಮ್ಮ ಭಾರತೀಯ ಸಂಸ್ಕೃತಿಯ ಉಡುಗೆ ತೊಡುಗೆಗಳಲ್ಲಿಯೇ ಅತ್ಯಂತ ಪುರಾತನ ಉಡುಗೆ ಸೀರೆ. ಅನಾದಿ ಕಾಲದಿಂದ ಸೀರೆಯು ನಮ್ಮ ದೇಶದ ಮಹಿಳೆಯರ ಪ್ರಮುಖ ಉಡುಗೆ. ಸೀರೆಯ ಬಳಕೆ ಎಲ್ಲಿಂದ ಪ್ರಾರಂಭವಾಯಿತು ಎಂಬುದರ ಕುರಿತು ಸ್ಪಷ್ಟ ಮಾಹಿತಿ ಎಲ್ಲಿಯೂ ಇಲ್ಲ. ಆದರೆ, ಕ್ರಿಸ್ತ ಪೂರ್ವ 2000 ವರ್ಷಗಳ ಹಿಂದಿನ ಶಿಲಾಶಾಸನಗಳಲ್ಲಿ, ವೇದ ಪುರಾಣಗಳಲ್ಲಿ ಸೀರೆಯ ಉಲ್ಲೇಖವಿದೆ. ಈ ಉಲ್ಲೇಖಗಳು, ಅತ್ಯಂತ ಪುರಾತನ ಕಾಲದಿಂದ ಭಾರತದಲ್ಲಿ ಸೀರೆಯ ಬಳಕೆ ಇತ್ತು ಎನ್ನುವುದರ ಕುರಿತು ಸಾಕಷ್ಟು ಪುರಾವೆಗಳನ್ನು ಒದಗಿಸಿವೆ. ಹೇಗೆ ಹಿಂದೂ, ಸಂಪ್ರದಾಯ, ನಂಬಿಕೆ, ಸಂಸ್ಕೃತಿಗೆ ನಿರ್ದಿಷ್ಟ ಸಂಸ್ಥಾಪಕರಿಲ್ಲವೋ, ಹಾಗೇ ಸೀರೆಯ ಉಡುಗೆಗೂ ಕೂಡ ನಿರ್ದಿಷ್ಟ ನಿರ್ಮಾತೃರಿಲ್ಲ. ಇದು ಅನಾದಿಯಿಂದ ಸಂಸ್ಕೃತಿಯೊಂದಿಗೇ ಸಾಗಿ ಬಂದ ಉಡುಪು.
ಉತ್ತರ ಭಾರತ ಹಾಗೂ ದಕ್ಷಿಣ ಭಾರತದಲ್ಲಿ ಸರಿ ಸುಮಾರು ಏಕಕಾಲದಲ್ಲಿ ಬೆಳವಣಿಗೆಯಾಯಿತೆಂದು ನಂಬಲಾಗಿರುವ ಸೀರೆ, ಭಾರತೀಯ ಸಂಸ್ಕೃತಿಯ ಪ್ರತೀಕಗಳಲ್ಲಿ ಒಂದಾಗಿ ಪರಿಗಣಿತವಾಗಿದೆ.
ಸೀರೆಯನ್ನುಡುವ ಸಂಸ್ಕೃತಿ ಭಾರತದಲ್ಲಿ ನಾಲ್ಕು ಸಾವಿರ ವರ್ಷಗಳಿಂದ ಬಳಕೆಯಲ್ಲಿದ್ದು, ಅದು ಇಂದಿಗೂ ಮುಂದುವರಿದಿದೆ. ನಾಲ್ಕು ಸಾವಿರ ವರ್ಷಗಳಿಂದ ಭಾರತ ಎಷ್ಟೇ ಸಂಸ್ಕೃತಿಗಳ ಪ್ರಭಾವಗಳಿಗೆ ಒಳಪಟ್ಟರೂ, ಎಷ್ಟೇ ವಿದೇಶಿ ರಾಜರುಗಳ ಆಡಳಿತವನ್ನು ಕಂಡರೂ ನಮ್ಮ ನೆಲದ ನಾರಿಯರ ಉಡುಗೆ ಮಾತ್ರ ಬದಲಾಗಲೇ ಇಲ್ಲ. ಇದು ಕೇವಲ ಸಾಂದರ್ಭಿಕ ಉಡುಪಾಗಿರದೇ ದೇಶದ ಬಹುತೇಕ ಸ್ತ್ರೀಯರ ದಿನನಿತ್ಯದ ಉಡುಪಾಗಿದೆ. ಸಾಮಾನ್ಯವಾಗಿ 1 ಮೀಟರ್ ಅಗಲ ಹಾಗೂ 5.5 ಮೀಟರ್ ಉದ್ದವಿರುವ ಈ ಬಟ್ಟೆ ಎಲ್ಲ ನಾರಿಯರಿಗೂ ಒಪ್ಪುವ ಉಡುಪು.
ಭಾರತ ದೇಶದ ನೆರಯ ದೇಶಗಳಾದ ಬಾಂಗ್ಲಾದೇಶ, ನೇಪಾಳ, ಶ್ರೀಲಂಕಾ, ಭೂತಾನ್, ಬರ್ಮಾದಲ್ಲಿಯೂ ಸೀರೆಯುಡುವ ಸಂಸ್ಕೃತಿ ಇದೆ. ಸೀರೆಯ ಸಂಸ್ಕೃತಿ ಇಡೀ ಭಾರತದಾದ್ಯಂತ ಬಳಕೆಯಲ್ಲಿದ್ದರೂ ಕೂಡ ಸೀರೆಯುಡುವ ಶೈಲಿ ಮಾತ್ರ ಪ್ರದೇಶದಿಂದ ಪ್ರದೇಶಕ್ಕೆ ಭಿನ್ನ. ನೀವಿ ಶೈಲಿ, ಗುಜರಾತಿ ಶೈಲಿ, ಬೆಂಗಾಲಿ ಶೈಲಿ, ಆಂಧ್ರಾ ಶೈಲಿ, ಕರ್ನಾಟಕದ ಕೂರ್ಗಿ ಶೈಲಿ, ಮರಾಠಿ ಶೈಲಿ, ಕೇರಳದ ಶೈಲಿ ಹೀಗೆ ಭಾರತದಲ್ಲಿಯೇ ವಿಭಿನ್ನ ಶೈಲಿಗಳಿವೆ. ಆದರೆ ಇಡೀ ಭಾರತವೇ ಸೀರೆಯನ್ನು ಒಪ್ಪಿಕೊಂಡಿದೆ, ಅಪ್ಪಿಕೊಂಡಿದೆ ಅನ್ನೋದು ಸತ್ಯದ ಮಾತು.
ಹಾಗೇ, ನಾಲ್ಕು ಸಾವಿರ ವರ್ಷಗಳಿಂದ ಭಾರತದ ನಾರಿಯರ ಉಡುಪಾಗಿ ಗುರುತಿಸಿಕೊಂಡ ಸೀರೆ, ಈಗ ನಿಧಾನವಾಗಿ ಸಾಂದರ್ಭಿಕ ಉಡುಪಾಗಿ ಪರಿಗಣಿಸಲ್ಪಡುತ್ತಿದೆ. ಪಾಶ್ಚಾತ್ಯ ಉಡುಪುಗಳಿಗೆ ಮನಸೋತಿರುವ ಇಂದಿನ ಯುವ ಪೀಳಿಗೆ ಭಾರತೀಯ ಸಂಸ್ಕೃತಿಯ ಜೀವಾಳವಾಗಿರುವ ಸೀರೆಯಂತಹ ಸುಂದರ ಉಡುಪನ್ನು ಮರೆಯುತ್ತಿದ್ದಾರೆ ಎಂಬುದೂ ಕೂಡ ವಾಸ್ತವ ಸತ್ಯ.
ಹಿಂದೂ ದೇವತೆಗಳ ಉಡುಪು ಕೂಡ ಸೀರೆಯೇ. ದೇವತೆಗಳನ್ನು ನಾವು ಎಂದಿಗೂ ಬೇರೆ ಉಡುಗೆಗಳಲ್ಲಿ ಕಲ್ಪಿಸಿಕೊಳ್ಳಲು ಸಾಧ್ಯವೇ ಇಲ್ಲ. ಹಾಗೇ ನಮ್ಮ ನಮ್ಮ ತಾಯಂದಿರನ್ನು ಕೂಡ ಚಿಕ್ಕಂದಿನಿಂದ ಸೀರೆಯಲ್ಲಿಯೇ ನೋಡಿದ ಅಭ್ಯಾಸ ನಮಗೆ. ಅಮ್ಮ ಅಂದಾಕ್ಷಣ ಸೀರೆಯುಟ್ಟು ನಗುತ್ತಿರುವ ಅಮ್ಮನ ಮುಖವೇ ನೆನಪಿಗೆ ಬರುತ್ತದೆ. ಅಮ್ಮನ ಸೀರೆಯ ಸೆರಗು ಹಿಡಿದು ಆಟವಾಡಿದ ದಿನಗಳು ನೆನಪಿಗೆ ಬುರುತ್ತವೆ. ಇಂಥಹ ಭಾವನಾತ್ಮಕ ಸಂಬಂಧಗಳು ಸೀರೆಯ ಸುತ್ತವಿದೆ. ನಮ್ಮ ದೇಶದ ಸೀರೆಗೆ ತಾಯಿಯ ಸ್ಥಾನವಿದೆ, ಅಷ್ಟೇ ಮಮತೆಯ ಭಾವನೆಯಿರುವ ಸೀರೆ ಭಾರತ ಮಾತೆಯ ಹೆಮ್ಮೆಯ ಉಡುಪು ಎಂಬುದರಲ್ಲಿ ಎರಡು ಮಾತಿಲ್ಲ.