ಉಡುಪಿ : ಇದು ಗುಡಿಸಲಿನಲ್ಲಿ, ಚಿಮಣಿ ಬೆಳಕಿನ ಕೆಳಗೆ ಕಷ್ಟಪಟ್ಟು ಓದಿ ಅರಳಿದ ಪ್ರತಿಭೆ. ಈ ಪ್ರತಿಭೆಗೆ ಮುಂದೆ ಎಂಜಿನಿಯರ್ ಆಗುವ ಕನಸು. ಆದರೆ ಕನಸು ನನಸಾಗುವ ದಿಕ್ಕಿನಲ್ಲಿ ಆಕೆ ಎದುರಿಸಬೇಕಿರುವ ಸಂಕಷ್ಟ ಒಂದೆರಡಲ್ಲ. ಇವುಗಳನ್ನು ಎದುರಿಸಿ ಆಕೆ ಗುರಿ ತಲುಪುತ್ತಾಳಾ ಎಂಬುದೇ ಈಗಿನ ಆತಂಕ.
ಈ ಪ್ರತಿಭೆಯ ಹೆಸರು ಸಂಗೀತಾ. ಪಡುಬೆಳ್ಳೆಯ ಶ್ರೀನಾರಾಯಣಗುರು ಕನ್ನಡ ಮಾಧ್ಯಮ ಪ್ರೌಢ ಶಾಲೆಯಲ್ಲಿ ಓದಿದ ಈಕೆ ಕಳೆದ ಎಸೆಸೆಲ್ಸಿ ಪರೀಕ್ಷೆಯಲ್ಲಿ 538 (ಶೇ.86.8) ಅಂಕ ಗಳಿಸಿ ವಿಶಿಷ್ಟ ಶ್ರೇಣಿಯಲ್ಲಿ ಉತ್ತೀರ್ಣರಾಗಿದ್ದಾರೆ. ಕನ್ನಡದಲ್ಲಿ 121, ಇಂಗ್ಲಿಷ್ನಲ್ಲಿ 87, ಹಿಂದಿ-97, ಗಣಿತ-71, ವಿಜ್ಞಾನ-83, ಸಮಾಜ -79 ವಿಷಯವಾರು ಸಂಗೀತಾ ಗಳಿಸಿದ ಒಟ್ಟು ಅಂಕ. ಮುಂದೆ ಕಾಲೇಜಿಗೆ ಹೋಗಬೇಕು, ವಿಜ್ಞಾನ ವಿಭಾಗದಲ್ಲಿ ಕಲಿತು ಎಂಜಿನಿಯರ್ ಆಗಬೇಕು ಎಂದು ಭದ್ರವಿಲ್ಲದ ಗುಡಿಸಲಿನ ಚಿಮಿಣಿ ದೀಪದ ಕೆಳಗೆ ಕುಳಿತು ಈಕೆ ಕನಸು ಕಾಣುತ್ತಿದ್ದಾಳೆ.

ಆದರೆ, ತಾಯಿ ಅನಕ್ಷರಸ್ಥೆ. ತಂದೆ ಮೃತಪಟ್ಟಿದ್ದಾರೆ. ಮನೆಯಿದ್ದೂ ಇಲ್ಲದಂತಹ ಪರಿಸ್ಥಿತಿ. ಕೂಲಿ ಕೆಲಸ ಮಾಡಿ ಜೀವನ ಸಾಗಿಸುತ್ತಿರುವ ಗಿರಿಜಾ ಮೂಲ್ಯರಿಗೆ ಒಂದು ಗಂಡು ಎರಡು ಹೆಣ್ಣು ಮಕ್ಕಳು. ಸಂಗೀತಾ ಪಡುಬೆಳ್ಳೆ ಶ್ರೀನಾರಾಯಣಗುರು ಕನ್ನಡ ಮಾಧ್ಯಮ ಪ್ರೌಢ ಶಾಲೆ ಯಲ್ಲಿ ಈಗ ಎಸೆಸೆಲ್ಸಿ ಶಿಕ್ಷಣ ಮುಗಿಸಿದ್ದಾರೆ. ಶಿರ್ವ ಗ್ರಾಮಕ್ಕೆ ಸೇರಿದ ಬಂಟಕಲ್ಲು ಅರಸೀಕಟ್ಟೆ ಸಮೀಪದ ಪೊದ ಮಲೆಯಲ್ಲಿ ವಾಸವಾಗಿರುವ ಗಿರಿಜಾ ಮೂಲ್ಯ (ದಿ.ರಾಜು ಮೂಲ್ಯರ ಪತ್ನಿ)ರ ಮನೆಯ ಸ್ಥಿತಿ ಚಿಂತಾಜನಕ!. ವಾಸಿಸುವ ಸ್ಥಳದ ಬಗ್ಗೆ ಯಾವುದೇ ದಾಖಲೆಗಳಿಲ್ಲ. ಹತ್ತು ವರ್ಷಗಳ ಹಿಂದೆ ಬಾಯಿ ಮಾತಿನಲ್ಲಿ ಒಬ್ಬರಿಂದ ಇಪ್ಪತ್ತು ಸೆಂಟ್ಸ್ ಸ್ಥಳವನ್ನು ಅಂದಿನ ಧಾರಣೆಯಂತೆ ಖರೀದಿಸಿ ಮಣ್ಣಿನ ಇಟ್ಟಿಗೆಯಿಂದ ಅರ್ಧಂಬರ್ಧ ಗೋಡೆ ಕಟ್ಟಿ, ಹಳೆಯ ರೀಪು, ಪಕ್ಕಾಸಿಗೆ, ತಗಡು ಸೀಟು, ಹಳೆಯ ಹಂಚು ಹೊದಿಸಿ ಸೂರು ನಿರ್ಮಿಸಿ ಕೊಂಡಿದ್ದಾರೆ. ಹಿಂದೆ ನೀಡಿದ ಹಣಕ್ಕೆ ಬಡ್ಡಿ ಸೇರಿಸಿ ನೀಡುತ್ತೇವೆ ಎಂದು ಹಿಂದೆ ಸ್ಥಳ ನೀಡಿದವರು ಈಗ ಜಾಗ ಖಾಲಿ ಮಾಡುವಂತೆ ಒತ್ತಾಯಿಸುತ್ತಿದ್ದಾರೆ.
ಅತ್ತ ಮಕ್ಕಳ ಭವಿಷ್ಯದ ವಿದ್ಯಾಭ್ಯಾಸದ ಚಿಂತೆ, ಇನ್ನೊಂದೆಡೆ ಮನೆಯ ಸಮಸ್ಯೆ. ಮತ್ತೊಂದೆಡೆ ಜೀವನ ನಿರ್ವಹಣೆಯ ಸಂದಿಗ್ದತೆ ಇದು ಗಿರಿಜಾ ಮೂಲ್ಯರ ವ್ಯತೆಯ ಕತೆಯಾದರೆ, ಉನ್ನತ ಶಿಕ್ಷಣ ಪಡೆಯಬೇಕು ಎಂದು ಕನಸು ಕಾಣುತ್ತಿರುವ ಸಂಗೀತಾ ಹಾಗೂ ಆಕೆಯ ತಂಗಿ, ಸದ್ಯ ಎಸೆಸೆಲ್ಸಿ ಕಲಿಯುತ್ತಿರುವ ಸಾರಿಕಾಳ ಶಿಕ್ಷಣಕ್ಕೆ ಸಹೃದಯಿಗಳ ಸಹಕಾರ ಬೇಕಾಗಿದೆ. ಉಡುಪಿ ಶ್ರೀಸೋದೆ ವಾದಿರಾಜ ಮಠದ ಆಡಳಿತಕ್ಕೆ ಒಳಪಟ್ಟ ಇನ್ನಂಜೆ ಎಸ್.ವಿ.ಎಚ್. ಪದವಿ ಪೂರ್ವ ಕಾಲೇಜಿನಲ್ಲಿ ಸಂಗೀತಾಳ ಪಿಯುಸಿ ಶಿಕ್ಷಣಕ್ಕೆ ಆಡಳಿತ ಮಂಡಳಿಯಿಂದ ಪ್ರೋತ್ಸಾಹದ ಭರವಸೆ ಸಿಕ್ಕಿದೆ. ಇವಳ ಪ್ರತಿಭೆಯನ್ನು ಗುರುತಿಸಿ, `ಕುಲಾಲ್ ವರ್ಲ್ಡ್ ಸ್ನೇಹಿತರು ಹಾಗೂ ಬಂಟಕಲ್ಲು ಫ್ರೆಂಡ್ಸ್ ಸದಸ್ಯರು ಒಂದಿಷ್ಟು ಹಣವನ್ನು ಸಂಗ್ರಹಿಸಿ ನೀಡಿದ್ದಾರೆ. ಆಸಕ್ತ ಸಹೃದಯಿ ವಿದ್ಯಾ ಭಿಮಾನಿಗಳು ಸಂಗೀತಾಳ ಉಳಿತಾಯ ಖಾತೆ (ಬಂಟಕಲ್ಲು ಕರ್ಣಾಟಕ ಬ್ಯಾಂಕ್ -0822500100417801)ಗೆ ಸಹಾಯ ನೀಡಬಹುದು. (ಮಾಹಿತಿಗಾಗಿ ಸಂಗೀತಾಳ ಚಿಕ್ಕಮ್ಮ ಲೀಲಾ ಮೂಲ್ಯ- ಮೊಬೈಲ್-9611307447 ಸಂಪರ್ಕಿಸಬಹುದು)




