ಅವನ ಹೆಸರು ಕಾಶೀಮಸಾಬ. ಅವನದು ಮುಸ್ಲಿಂ ಕುಟುಂಬ. ಅವನ ಹೆಂಡತಿ ಹೆಸರು ಕುಂಬಾರ ಮಲಕವ್ವ. ಅಪ್ಪಟ ವೀರಶೈವೆ. ಕಾಶೀಮ ಮಲಕವ್ವಳ ಕೈ ಹಿಡಿದಾಗ ಆಕೆಗೆ ೨೩ರ ಹರೆಯ. ಅವನಿಗೂ ಚಿಮ್ಮುವ ಹಂಗಾಮ. ಅಷ್ಟೊತ್ತಿಗಾಗಲೇ ಆಕೆ ಮೂರು ಗಂಡು ಮಕ್ಕಳ ತಾಯಿ. ನಮ್ಮ ಹೈದರಾಬಾದ್ ಕರ್ನಾಟಕಕ್ಕೆ ಸ್ವಾತಂತ್ರ್ಯ ಸಿಕ್ಕಿದ್ದು ೧೯೪೭ರಲ್ಲಿ ಅಲ್ಲ , ೧೯೪೮ರ ಸೆಪ್ಟೆಂಬರ್ ೧೮ರಂದು. ಈ ವರ್ಷಾವಧಿ ನಿಜಾಮನ ಸೈತಾನರು ನಡೆಸಿದ ಉಪಟಳದ ಬಗ್ಗೆ ಇನ್ನೊಮ್ಮೆ ಬರೆಯುವೆ. ರಜಾಕಾರರ ಹಾವಳಿಯಲ್ಲಿ ಮಲಕವ್ವಳ ಗಂಡ ಕುಂಬಾರ ಚನ್ನಬಸವಣ್ಣ ತುಬಾಕಿಗೆ ತುತ್ತಾದ. ಮಡದಿ ಮಲಕವ್ವ ಮತ್ತು ಗಂಡುಮಕ್ಕಳಿಗೆ ಆತ ಬಿಟ್ಟುಹೋದ ಆಸ್ತಿ ಎಂದರೆ ಎರಡೂ ಹೊತ್ತಿಗೂ ಸಾಕಾಗುವಷ್ಟು ಉಪವಾಸ. ವಿಧವೆ ಮಾಲಕವ್ವಳ ಅಸಹಾಯಕತೆ ಕಂಡು ಯುವಕ ಕಾಶೀಮನ ಕರುಳು ಚುರುಗುಟ್ಟಿತು. ಅವಳ ಕೈ ಹಿಡಿದ, ಕೂಡಿದ, ಮದುವೆಗೆ ಮುಂದಾದ. ಎರಡೂ ಕಡೆಯ ಜಾತಿ ಸಮಾಜಗಳು ಕ್ರೂರ ತೊಡಕಾದವು. ಹೀಗಾಗಿ ಅವರ ದಾಂಪತ್ಯ ಸಂಬಂಧಗಳು ವಿವಾಹವೊಂದನ್ನು ಹೊರತುಪಡಿಸಿ ಪಕ್ಕಾ ಆದರ್ಶಮಯವಾಗಿದ್ದವು.
ಮಾಂಸಾಹಾರಿಯಾಗಿದ್ದ ಕಾಶೀಮನಿಗೆ ಆಕೆ ಸಂಕೋಚ ಬದಿಗೊತ್ತಿ ಅಡುಗೆ ಮಾಡಿ ಬಡಿಸುತ್ತಿದ್ದಳು. ಆದರೆ ಆಕೆ ಮಾಂಸದಡುಗೆ ಉಣ್ಣುತ್ತಿರಲಿಲ್ಲ. ಅವನ ಒತ್ತಾಯವೂ ಇರಲಿಲ್ಲ. ಪರಸ್ಪರ ತಿಳುವಳಿಕೆ ಆಳಗೊಂಡಿತ್ತು. ದುಡಿಮೆ ಕಕುಲಾತಿಯ ಸಮಬಾಳು ಹುರಿಗೊಂಡಿತ್ತು. ಮಲಕವ್ವ ಬಸುರಿಯಾದಳು. ಕಾಶೀಮನಿಗೆ ತನ್ನ ಜಾತಿಯಲ್ಲಿ ಹೆಣ್ಣು ಹುಡುಕಿ ಕೂಡಲೇ ಲಗ್ನ ಮಾಡುವ ಹಿಕಮತ್ತು ಅವರ ಕುಟುಂಬ ಸಮಾಜದಲ್ಲಿ ಹೊಯ್ದಾಡತೊಡಗಿತು. ಆತನ ಅಪ್ಪ ಅಮ್ಮ, ಅಣ್ಣ ಗಜಮು ನಿಂತರೂ ಕಾಶೀಮ ಒಪ್ಪಲಿಲ್ಲ. ಬೇಕಾದರೆ ಮಲಕವ್ವಳಿಗೇ ತಾಳಿ ಕಟ್ಟುತ್ತೇನೆಂಬ ಶಪಥ! ಇತ್ತ ಇವಳ ಜಾತಿಯ ಸಮಾಜದ್ದೂ ತೊಡಕು! ಹೀಗೆ ಪರಿಸ್ಥಿತಿ ಬಿರುಸಿಗೆ ಬಿತ್ತು. ದಿನಗಳುರುಳಿದವು, ಮಲಕವ್ವ ಹೆಣ್ಣು ಮಗುವಿಗೆ ಜನ್ಮ ನೀಡಿದಳು. ತೋಬಾ ತೋಬಾ ಹೇಳಬಾರದು. ಆಡಿಕೊಳ್ಳುವ ಬಾಯಿಗಳು ಮರಗುಟ್ಟುವಂತೆ ಒದರಾಡಿದವು. ಅವರು ಸಮಷ್ಠಿ ದೃಷ್ಠಿಯಲ್ಲಿ ಕುಲಗೆಟ್ಟವರು. ಇಂತಹ ಘೋರ ಅಪಮಾನಗಳ ನಡುವೆಯೂ ಆಕೆ ಮಲಕವ್ವಳಾಗೇ, ಈತ ಕಾಶೀಮನಾಗೇ ತಮ್ಮ ತಮ್ಮ ವ್ಯಕ್ತಿತ್ವ ಉಳಿಸಿಕೊಂಡರು.
ಹೀಗೆ ಹತ್ತು ವರ್ಷಗಳು ಕಳೆದವು. ವಿಧವೆ ಮಲಕವ್ವ ತಾಳಿ ಇಲ್ಲದೇ ನಾಲ್ಕು ಹೆಣ್ಣು ಮಕ್ಕಳ ತಾಯಿಯಾದಳು. ನಮ್ಮ ಬಹುಪಾಲು ಬುದ್ಧಿಜೀವಿಗಳ ಭಾಷಣಗಳಲ್ಲಿ ಡೊಕ್ಕು ಹೊಡೆದಿರುತ್ತದೆ. ಈ ಇಬ್ಬರೂ ಅನಕ್ಷರಸ್ಥರಿಗೂ ಅರ್ಧ ಶತಮಾನದ ಹಿಂದೆಯೇ ತಾವು ಮಾಡುತ್ತಿರುವ ಕ್ರಾಂತಿಯ ಕಿಂಚಿತ್ತೂ ಅರಿವಿರಲಿಲ್ಲ. ವಿಧವಾ ವಿವಾಹ, ಕೋಮು ಸೌಹಾರ್ದತೆ ಮುಂತಾಗಿ ಕೊಂಬು ಕಿತ್ತಿದ್ದ ಕಳಗಿಯಂತೆ ಭಾಷಣ ಕುಟ್ಟಿ ಮಾಧ್ಯಮಗಳಿಗೆ ನಿತ್ಯ ಚಿತ್ರಾನ್ನವಾಗಿರುವ ಜಗದ್ಗುರುಗಳ ಯಾವೊಂದು ಪ್ರಭಾವಗಳಿಲ್ಲದೇ ಅವರು ಅಪ್ಪಟ ಮನುಷ್ಯರಾಗಿ, ಪ್ರೇಮಿಗಳಾಗಿ ಬಾಳಿದರು. ಮತಾಂಧ ಕರ್ಮಠಗಳನ್ನು ಯಾತರ ಮಾತಿಗೂ ದಾಸ್ಯಕ್ಕೆ ತಂದು ತಮಗೂ, ಮಕ್ಕಳಿಗೂ ಕಿರಿಕಿರಿ ಮಾಡಿಕೊಳ್ಳಲಿಲ್ಲ. ಹೌದು ಜೀವಪರ ಬದುಕೇ ಅಂತಹದ್ದು ಯಾರಗೊಡವೇ ಎನ್ನದೇ, ಅಪ್ಪಟ ಪ್ರೀತಿಯ ಜಾಡು ಬಿಡದೇ ಪ್ರಾಣಕ್ಕೆ ಪ್ರಾಣ ಕೊಡುವ ಛಲ, ಜಾತಿ, ಮತ, ಧರ್ಮಗಳ ಗೋಡೆ ಕೆಡವಿ ಪ್ರೀತಿ, ಅಂತಃಕರಣದ ಕರುಳಿನ ಕುಡಿಯೊಡೆದು ಬೆಳೆಯುತ್ತಿದೆ. ಅಂತೆಯೇ ಅವರು ಹಂಚಿಕೊಂಡ ಪ್ರೀತಿ ಅದಮ್ಯ ತೋರಿದ ಮಾನವೀಯತೆ ಅನನ್ಯ. ಅವಳ ಮೊದಲ ಗಂಡನಿಗೆ ಹುಟ್ಟಿದ ಗಂಡು ಮಕ್ಕಳು ದೊಡ್ಡವರಾದಾಗ ಕಾಶೀಮ ಖರ್ಚಿಟ್ಟು ಮಲಕವ್ವಳ ಕುಲಸ್ತರ ಸಂಪ್ರದಾಯಗಳಲ್ಲೇ ಮದುವೆ ಮಾಡಿದ.
ಹೆಣ್ಣು ಮಕ್ಕಳು ದೊಡ್ಡವರಾದರು. ಅವರಿಗೆ ಮದುವೆ ಮಾಡಬೇಕು. ಆಗ ಶುರುವಾಯ್ತು ನೋಡ್ರಿ ಘೋರ ಸಮಸ್ಯೆ! ಜಾತಿ ಧರ್ಮ ಕಟ್ಟಳೆಗಳು ಒಬ್ಬುಳಿಯಾಗಿ ಭೂಮಿಗೂ, ಮುಗಿಲಿಗೂ ಏಕಾಗಿ ನಿಂತು ಇವರನ್ನು ಕಾಡತೊಡಗಿದವು. ಮಲಕವ್ವ ಮುಸಲ್ಮಾನ ಧರ್ಮಕ್ಕೆ ಮತಾಂತರಗೊಂಡು ಕಾಶೀಮನಿಗೆ ಅಧಿಕೃತ ಹೆಂಡತಿಯಾದರೇ ಆ ಹುಡುಗಿಯರ ಮದುವೆ ಸಾಧ್ಯ ಎನ್ನುವಂತಾಗಿದೆ. ಆಗಲೇ ಅವರು ಕೂಡಿಕೊಂಡು ಇಪ್ಪತ್ತು ವರ್ಷಗಳೇ ತುಂಬಿವೆ. ಸಮಷ್ಟಿ ಬಾಯಲ್ಲಿ ಇಟ್ಟುಕೊಂಡವಳನ್ನು ಈಗ ಕಟ್ಟಿಕೊಳ್ಳಬೇಕು. ಕುಟುಂಬದಿಂದ ದೂರಾಗಿದ್ದ ಕಾಶೀಮ ಮೌಲ್ವಿಗಳ ಮೊರೆ ಹೊಕ್ಕ. ಮಕ್ಕಳೇ ನಿಂತು ಅಪ್ಪ ಅಮ್ಮಗಳ ನಿಖಾ ಮಾಡುವ ವಿಧಾನ ಆರಂಭ. ಆಮಂಗಳಕಾರಕ (?) ವಿಧವೆಗೆ ತಾಳಿ ಕಟ್ಟುವುದು ಶುಭವಲ್ಲವೆಂದು ಹಿಂದು ಧರ್ಮ ಪಂಡಿತರೊಬ್ಬರ ತಕರಾರು. ಪ್ರಯುಕ್ತ ಕಾಶೀಮನ ಮಂಗಳಕಾರಕ (?) ಕೈಗಳಿಂದ ಎಕ್ಕೆ ಗಿಡವೊಂದಕ್ಕೆ ತಾಳಿ ಕಟ್ಟಿಸಿ ಮೊದಲು ಗಿಡದೊಂದಿಗೆ ಲಗ್ನ ಮಾಡಿದರು. ನಂತರ ಮಲಕವ್ವಳೊಂದಿಗೆ ಉಡಕಿಯ ತಾಳಿ ಕಟ್ಟಿಸಿದರು. ಮಲಕವ್ವಗೆ ಮೊಹಸೀನಾಬಿ ಎಂದು ಮೌಲ್ವಿಗಳು ಪುನರ್ ನಾಮಕರಣ ಮಾಡಿದರು. ಆ ಮೂಲಕ ಅವಳಿಗೆ ಧರ್ಮ ಸಮ್ಮತಿ ಸಿಕ್ಕಿತು. ಇಪ್ಪತ್ತು ವರ್ಷಗಳ ಅವರ ನಿರ್ಮಲ ಪ್ರೀತಿಯ ಬದುಕನ್ನು ಧರ್ಮಸಮ್ಮತಿ ಅಣಕಿಸಿದಂತಿತ್ತು.
ಮಲಕವ್ವ ಮರುದಿನವೇ ಐದೆಳೆಸರದ ಕರಿಮಣಿಯನ್ನು ತೆಗೆದಿಟ್ಟಳು. ಕಾಶೀಮನೇ ಅವಳನ್ನು ಮೋಹಸೀನಾ ಎಂದು ಕರೆಯಲಿಲ್ಲ. ಆಕೆ ಮಲಕವ್ವ ಎನ್ನುವುದನ್ನು ಆತ ಮರೆಯಲಿಲ್ಲ. ಜನ ಮತ್ತು ಆಕೆಯೂ ಕೂಡ ಮರೆಯಲಿಲ್ಲ. ಆದರೆ ಧರ್ಮಸಮ್ಮತಿಯಿಂದ ಹೆಣ್ಣುಮಕ್ಕಳ ಮದುವೆಗೆ ಹಾದಿ ಸುಗಮವಾಯಿತು. ಅವರಿಗೆ ಅಷ್ಟು ಸಾಕಿತ್ತು. ಎಲ್ಲ ಮಕ್ಕಳ ಮದುವೆಯೂ ಆಯಿತು. ಅವರಿಬ್ಬರಲ್ಲಿಯ ಮಾನವ್ಯದ ಮಧುರ ಪ್ರೀತಿ ಎಲ್ಲೂ ಮುಕ್ಕಾಗಲಿಲ್ಲ. ಒಲವು ತುಂಬಿದ ಇಬ್ಬರ ವ್ಯಕ್ತಿತ್ವಗಳು ಪರಸ್ಪರ ಪಕ್ವವಾಗಿ ಮುಗಿಲೆತ್ತರ ಬೆಳೆದಿದ್ದವು. ಅದೊಂದು ಪ್ರಬುದ್ಧ ಸ್ನೇಹವಾಗಿತ್ತು. ಯಾವ ಘೋಷಣೆ ಇಲ್ಲದೇ ಅವರು ಮಾಡಿದ ಈ ಮೌನಕ್ರಾಂತಿ ಅಲ್ಲಿನ ಯಾರಿಗೂ, ಅಷ್ಟೇ ಯಾಕೆ ಸ್ವತಃ ಅವರಿಗೂ ಕ್ರಾಂತಿ ಎನಿಸಲಿಲ್ಲ.
ಎರಡು ವೃದ್ಧ ಜೀವಗಳು ಹಳಾರ ಆದಂತೆ ನಿರಮ್ಮಳವಾಗಿ ಉಸಿರಾಡತೊಡಗಿದವು. ಗಂಡುಮಕ್ಕಳು ತಮ್ಮ ತಮ್ಮ ಸಂಸಾರಗಳೊಂದಿಗೆ ಬೇರೆಯೇ ಇದ್ದರು. ಕಾಶೀಮನಿಗೆ ಕ್ಷಯ, ಅಸ್ಥಮ ಗಂಟು ಬಿದ್ದವು. ಜೊತೆಗೆ ಆತನಿಗೆ ದಾರೂ (ಸರಾಯಿ) ಕುಡಿಯುವ, ತಂಬಾಕು ಸೇದುವ ತಲಬು ಮಿತಿ ಮೀರಿತು. ಅವನ ಎದೆಗೂಡಿನಿಂದ ಸಾಗಿಬರುವ ಬಟ್ಟಲು ಬಟ್ಟಲು ಕಫವನ್ನು ಮಲಕವ್ವ ಬೊಗಸೆಯಲ್ಲೇ ತುಂಬಿ ಚೆಲ್ಲುತ್ತಿದ್ದಳು. ದವಾಖಾನೆಗೂ ತೋರಿಸಿದಳು. ಕೂಸಿನಂತೆ ಕಾಶೀಮನ ಉಪಚರಿಸಿದಳು. ಪಾಪ ಹಿಂದಿನ ಜಲ್ಮದಾಗ ಈಕಿ ಕಾಶೀಮನ ಋಣ ತಿಂದಾಳ ಎಂದು ಜನ ಕನಿಕರ ತೋರುತ್ತಿದ್ದರು. ಒಂದಿನ ಸಮ ರಾತ್ರಿ ಕಾಶೀಮ ಮಲಕವ್ವಳ ಕೈಯನ್ನು ಹಿಡಿದುಕೊಂಡೇ ಪ್ರಾಣಬಿಟ್ಟ. ಅವಳಿಗಾದ ಆಘಾತ ಅಕ್ಷರಗಳಿಗೆ ನಿಲುಕದು, ಮಲಕವ್ವಳ ಮಕ್ಕಳೆಲ್ಲ ಹಾಡಾಡಿಕೊಂಡು ಅತ್ತು ಎದೆಯ ಒತ್ತಡ ಸತ್ತ ಜೀವದೊಂದಿಗೆ ಹಂಚಿಕೊಂಡರು. ಕಾಶೀಮನ ಸಾವಿನ ನೆನಪಲ್ಲಿ ನಿತ್ಯವೂ ಮಲಕವ್ವ ನವೆದು ನವೆದು ತನ್ನ ಸಾವಿಗೆ ಸನಿಹವಾಗತೊಡಗಿದಳು. ಕ್ರೂರವಾದ ಪರದೇಶಿತನ ಕಾಡತೊಡಗಿತು. ಮೊನ್ನೆ ಬೇಸಿಗೆ ಸೂಟಿಗೆ ಊರಿಗೆ ಹೋಗಿದ್ದಾಗ ಮಲಕವ್ವ ಸತ್ತ ಸುದ್ದಿ ತಿಳಿಯಿತು. ಅವಳನ್ನು ಮುಸಲ್ಮಾನ ಧರ್ಮ ಪದ್ಧತಿ ಪ್ರಕಾರ ಮಣ್ಣು ಮಾಡಿದರಂತೆ. ಅವಳ ಬದುಕಿನ ಅಂತಿಯ ಯಾತ್ರೆಗೆ ಅವಳ ಮೊದಲ ಗಂಡನ ಮಕ್ಕಳು ಹೆತ್ತಮ್ಮ ಮಲಕವ್ವಳ ಹೆಣಕ್ಕೆ ಬರಲಿಲ್ಲವಂತೆ. ಶುದ್ಧ ಅಮಾನವೀಯ ಧರ್ಮಪ್ರಜ್ಞೆ ಅವರಿಗೆ ಕಾಡಿದ್ದಾದರೂ ಹೇಗೆ? ಎಂದು ಈಗಲೂ ನನ್ನನ್ನು ಕಾಡುತ್ತಿದೆ. ಕುಂಬಾರ ಮಲಕವ್ವ ಮತ್ತು ಕಾಶೀಮ ಮಾಡಿದ ಕ್ರಾಂತಿ ಪುಸ್ತಕ ಸಿದ್ಧಾಂತ ಓದಿಕೊಂಡ ನಮ್ಮಂಥ ಮಿದುಳು ಕತ್ತರಿಸುವ ಅಕ್ಷರಸ್ಥರಿಗೆ ಪಾಠವಾಗುವುದು ಯಾವಾಗ?
* ಮಲ್ಲಿಕಾರ್ಜುನ ಕಡಕೋಳ