ಅಪಘಾತದಲ್ಲಿ ಮಿದುಳು ನಿಷ್ಕ್ರಿಯಗೊಂಡ 21 ವರ್ಷದ ಯುವಕ ವರ್ಷಿತ್ ಕುಲಾಲ್ ಅಂಗಾಂಗ ದಾನ!
ಮಂಗಳೂರು(ಕುಲಾಲ್ ವರ್ಲ್ಡ್ ಡಾಟ್ ಕಾಮ್) : ಅಪಾರ ದುಃಖದ ಕತ್ತಲೆಯಲ್ಲೂ ಮಾನವೀಯತೆಯ ದಿವ್ಯ ಬೆಳಕೊಂದು ಮೂಡಿಬಂದಿದೆ. ಕುತ್ತಾರುವಿನ ಆಯೆರೆಬೆಟ್ಟು ನಿವಾಸಿ ಗೋಪಾಲ ಹಾಗೂ ವೇದಾವತಿ ದಂಪತಿಯ 21 ವರ್ಷದ ಕಿರಿಯ ಪುತ್ರ ವರ್ಷಿತ್ ಕುಲಾಲ್, ಸೋಮವಾರ ರಾತ್ರಿ ಸಂಭವಿಸಿದ ಭೀಕರ ರಸ್ತೆ ಅಪಘಾತದಲ್ಲಿ ತೀವ್ರವಾಗಿ ಗಾಯಗೊಂಡು, ದೇರಳಕಟ್ಟೆಯ ಯೆನೆಪೋಯ ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಕಾರಿಯಾಗದೆ ಮಿದುಳು ನಿಷ್ಕ್ರಿಯಗೊಂಡಾಗ (ಬ್ರೈನ್ ಡೆಡ್) ಇಡೀ ಕುಟುಂಬವೇ ಆಘಾತದ ಕಡಲಿನಲ್ಲಿ ಮುಳುಗಿಹೋಯಿತು. ಉಜ್ವಲ ಭವಿಷ್ಯವಿರಬೇಕಾಗಿದ್ದ ಚಿಕ್ಕ ವಯಸ್ಸಿನ ಮಗನನ್ನು ಕಳೆದುಕೊಳ್ಳುವ ಕಠೋರ ಸತ್ಯ ಎದುರಾದಾಗ ಯಾವ ಹೆತ್ತವರ ಹೃದಯ ತಾನೆ ನಜ್ಜುಗುಜ್ಜಾಗುವುದಿಲ್ಲ?
ಆದರೆ, ಕರುಳು ಹಿಂಡುವಂತಹ ಆ ಅಸಹನೀಯ ವೇದನೆಯ ಸಮಯದಲ್ಲೂ ವರ್ಷಿತ್ ಅವರ ಪೋಷಕರು ತೋರಿದ ಔದಾರ್ಯ ಮತ್ತು ಮಹಾನ್ ತ್ಯಾಗ ಇಡೀ ಸಮಾಜಕ್ಕೇ ಮಾದರಿಯಾಗಿದೆ. ತಮ್ಮ ಮಗ ಇನ್ನು ಹಿಂತಿರುಗಿ ಬಾರನೆಂಬ ದುಃಖದ ನಡುವೆಯೂ, ಆತನ ಅಗಲಿಕೆಯನ್ನು ಇತರರ ಬಾಳಿನ ಹೊಸ ಭರವಸೆಯನ್ನಾಗಿ ಮಾಡಲು ನಿರ್ಧರಿಸಿದ ಪೋಷಕರು, ವರ್ಷಿತ್ ಅವರ ಅಂಗಾಂಗಗಳನ್ನು ದಾನ ಮಾಡಲು ಒಪ್ಪಿಗೆ ನೀಡಿದರು. ‘ಗ್ರೀನ್ ಕಾರಿಡಾರ್’ ಮೂಲಕ ವರ್ಷಿತ್ ಅವರ ಹೃದಯ, ಮೂತ್ರಪಿಂಡ, ಯಕೃತ್ತು ಹಾಗೂ ಶ್ವಾಸಕೋಶಗಳು ಸಾವು-ಬದುಕಿನ ನಡುವೆ ಹೋರಾಡುತ್ತಿದ್ದ ಜೀವಗಳಿಗೆ ನವಜೀವನವನ್ನು ಕರುಣಿಸಲಿವೆ.
ತಮ್ಮ ಬದುಕಿನ ದೀಪ ಆರಿಹೋದರೂ, ಇತರ ನಾಲ್ಕಾರು ಮನೆಗಳಲ್ಲಿ ಹೊಸ ಬೆಳಕನ್ನು ಹೊತ್ತಿಸಿ ನಿರ್ಮಲ ಮನಸ್ಸಿನಿಂದ ತೆರಳಿದ ಯುವಕ ವರ್ಷಿತ್ ಕುಲಾಲ್, ಈ ಲೋಕವನ್ನು ಅಗಲಿದ್ದರೂ ದಾನ ನೀಡಿದ ಪ್ರತಿಯೊಂದು ಜೀವದ ಉಸಿರಿನಲ್ಲಿಯೂ ಸದಾ ಅಮರನಾಗಿ ಬಾಳಲಿದ್ದಾನೆ. ಆತನ ಹೆತ್ತವರ ಈ ಮಹಾನ್ ಕಾರ್ಯ ಮಾನವೀಯತೆಯ ನಿಜವಾದ ತಪಸ್ಸಿನಂತೆ ಸದಾ ಮನೆಮಾತಾಗಿ ಉಳಿಯಲಿದೆ.
ನಡೆದಿದ್ದೇನು ?
ಫ್ಯಾಬ್ರಿಕೇಷನ್ ಕೆಲಸ ಮಾಡಿಕೊಂಡಿದ್ದ ವರ್ಷಿತ್ ಅವಿವಾಹಿತರಾಗಿದ್ದು, ತಂದೆ, ತಾಯಿ ಹಾಗೂ ಒಬ್ಬ ಸಹೋದರನನ್ನು ಅಗಲಿದ್ದಾರೆ. ಸೋಮವಾರ ರಾತ್ರಿ ಸುಮಾರು 7:30 ರ ವೇಳೆಗೆ ವರ್ಷಿತ್ ಕುಲಾಲ್ ಅವರು ಬೈಕಿನಲ್ಲಿ ಮನೆಗೆ ತೆರಳುತ್ತಿದ್ದರು. ಈ ವೇಳೆ ಕುತ್ತಾರುವಿನ ಕೊರಗಜ್ಜನ ಆದಿ ಕ್ಷೇತ್ರದ ಬಳಿ ರಾಣಿಪುರದಿಂದ ಕುತ್ತಾರುವಿನತ್ತ ವೇಗವಾಗಿ ಧಾವಿಸುತ್ತಿದ್ದ ಸ್ಕೂಟರ್ ಹಾಗೂ ವರ್ಷಿತ್ ಅವರ ಬೈಕ್ ನಡುವೆ ಮುಖಾಮುಖಿ ಢಿಕ್ಕಿ ಸಂಭವಿಸಿತ್ತು. ಢಿಕ್ಕಿಯ ಭೀಕರ ರಭಸಕ್ಕೆ ವರ್ಷಿತ್ ರಸ್ತೆಗೆ ಎಸೆಯಲ್ಪಟ್ಟಿದ್ದು, ಅವರ ತಲೆಗೆ ಗಂಭೀರ ಸ್ವರೂಪದ ಗಾಯವಾಗಿತ್ತು. ತಕ್ಷಣವೇ ಅವರನ್ನು ದೇರಳಕಟ್ಟೆಯ ಯೆನೆಪೋಯ ಆಸ್ಪತ್ರೆಗೆ ದಾಖಲಿಸಲಾಗಿತ್ತು.

