ಕಾರ್ಕಳ (ಕುಲಾಲ ವರ್ಲ್ಡ್ ಡಾಟ್ ಕಾಮ್) ನಿಟ್ಟೆಯ ಅಪ್ಪ-ಮಗಳನ್ನು ಬಳಿ ತೆಗೆದುಕೊಂಡ ಘಟನೆ ನೆನಪಿನಿಂದ ಮಾಸುವ ಮುನ್ನವೇ ಇನ್ನೊಂದು ಆಘಾತಕಾರಿ ಸುದ್ದಿ ಅಪ್ಪಳಿಸಿದೆ. ಮಿಯ್ಯಾರು ಕುಂಟಿಬೈಲ್ ರಸ್ತೆಯಲ್ಲಿ ನಡೆದ ಇನ್ನೊಂದು ಭೀಕರ ಅಪಘಾತವೊಂದು ಒಂದು ಸುಂದರ ಕುಟುಂಬದ ಕನಸನ್ನು ನುಚ್ಚುನೂರು ಮಾಡಿದೆ. ವಿದೇಶದಲ್ಲಿ ದುಡಿದು, ಮರಳಿ ಊರಿಗೆ ಬಂದು ಕುಟುಂಬದೊಂದಿಗೆ ಕಾಲ ಕಳೆಯುತ್ತಿದ್ದ ಕೆರ್ವಾಶೆ ಗ್ರಾಮದ ಪೂಜಾರಟ್ಟ ಮನೆ ನಿವಾಸಿ, ಅಪಾರ ಸ್ನೇಹಜೀವಿ ಹಾಗೂ ಸಜ್ಜನ ವ್ಯಕ್ತಿತ್ವದ ಸುಕೇಶ್ ಬಂಗೇರ (36) ಅವರು ರಸ್ತೆ ಅಪಘಾತದಲ್ಲಿ ಅಕಾಲಿಕ ಮರಣವನ್ನಪ್ಪಿದ್ದಾರೆ. ಮಿಯ್ಯಾರು ಕುಂಟಿಬೈಲ್ ರಸ್ತೆ ನೀರಿನ ಟ್ಯಾಂಕ್ ಎದುರು ಬೈಕ್ ಹಾಗೂ ಸ್ಕೂಟಿ ಮಧ್ಯೆ ಮುಖಾಮುಖಿ ಡಿಕ್ಕಿ ಸಂಭವಿಸಿದ್ದು ಪರಿಣಾಮ ಬೈಕ್ ಸವಾರರಾಗಿದ್ದ ಸುಕೇಶ್ ರಸ್ತೆಗೆಸೆಯಲ್ಪಟ್ಟು ಅಸುನೀಗಿದ್ದಾರೆ.
ಕುಟುಂಬದ ಬೆನ್ನೆಲುಬಾಗಿದ್ದ ಸುಕೇಶ್ ಅವರ ಸಾವು ಕೆರ್ವಾಶೆ ಗ್ರಾಮಸ್ಥರನ್ನು ಕಣ್ಣೀರಲ್ಲಿ ಮುಳುಗಿಸಿದೆ. ನೂರು ಕನಸುಗಳನ್ನು ಹೊತ್ತು, ಕಡಲಾಚೆಯ ದೇಶದಲ್ಲಿ ಬೆವರು ಸುರಿಸಿ, ತನ್ನವರೊಂದಿಗೆ ಸುಖವಾಗಿ ಬಾಳಬೇಕೆಂದು ಕೆಲವೇ ತಿಂಗಳ ಹಿಂದೆ ಊರಿಗೆ ಮರಳಿದ್ದ ಸುಕೇಶ್ ಬಂಗೇರ ಇಂದು ನೆನಪು ಮಾತ್ರ. ಮಿಯ್ಯಾರಿನ ಆ ಒಂದು ಕ್ಷಣದ ಅಪಘಾತ, ಕೆರ್ವಾಶೆಯ ಒಂದು ಕುಟುಂಬದ ಆಧಾರಸ್ತಂಭವನ್ನೇ ಕಿತ್ತುಕೊಂಡಿದೆ. ಮನೆಯಿಂದ ಹೊರಟ್ಟಿದವನು ಮರಳಿ ಬರುತ್ತಾನೆಂದು ಕಾದಿದ್ದ ತಾಯಿ ಮತ್ತು ಪತ್ನಿಯ ಪಾಲಿಗೆ ವಿಧಿ ಇಂದು ಬಾರದ ಲೋಕದ ದಾರಿ ತೋರಿಸಿದ್ದಾನೆ. “ವಿದೇಶದ ದುಡಿಮೆ ಮುಗಿಸಿ ಊರಿಗೆ ಬಂದವನಿಗೆ ವಿಧಿ ವಿಶ್ರಾಂತಿ ನೀಡಿದ್ದು ಹೀಗಾ?” ಎಂಬ ಪ್ರಶ್ನೆ ಇಂದು ಪ್ರತಿಯೊಬ್ಬರ ಕಣ್ಣನ್ನು ತೇವಗೊಳಿಸುತ್ತಿದೆ. ಸುಕೇಶ್ ಬಂಗೇರ ಅವರ ಆತ್ಮಕ್ಕೆ ಚಿರಶಾಂತಿ ಸಿಗಲಿ, ಅವರ ಅಗಲಿಕೆಯ ನೋವನ್ನು ಭರಿಸುವ ಶಕ್ತಿಯನ್ನು ಆ ದೇವರು ಅವರ ಕುಟುಂಬಕ್ಕೆ ನೀಡಲಿ ಎಂದು ಪ್ರಾರ್ಥಿಸೋಣ. ಭಾವಪೂರ್ಣ ಶ್ರದ್ಧಾಂಜಲಿ..

