ಕಾರ್ಕಳ(ಕುಲಾಲ ವರ್ಲ್ಡ್ ಡಾಟ್ ಕಾಮ್): ಆ ಕರಾಳ ಸಂಜೆ ದಿನ ವಿಧಿಯಾಟಕ್ಕೆ ಒಂದು ಸುಂದರ ಸಂಸಾರವೇ ಕಮರಿ ಹೋಗಿದೆ. ಭವಿಷ್ಯದ ಸುಂದರ ಕನಸುಗಳನ್ನು ಹೊತ್ತು ಸಿಇಟಿ ಪರೀಕ್ಷೆ ಬರೆದು, ತಂದೆಯ ಹೆಗಲ ಮೇಲೆ ಕೈಹಾಕಿ ಮನೆಗೆ ಮರಳುತ್ತಿದ್ದ ಆ ಮುಗ್ಧ ಜೀವ ಪ್ರೇರಣಾಳಿಗೆ, ತನ್ನ ತಂದೆಯ ಜೊತೆಗಿನ ಆ ಪಯಣವೇ ಕೊನೆಯದಾಗುತ್ತದೆ ಎಂದು ತಿಳಿದಿರಲಿಲ್ಲ.
ನಿಟ್ಟೆ ಸಮುದಾಯ ಆರೋಗ್ಯ ಕೇಂದ್ರದ ಬಳಿ ಅಜಾಗರೂಕತೆಯಿಂದ ಬಂದ ಕಾರು ಅಪ್ಪಳಿಸಿದಾಗ, ರಸ್ತೆಯ ಮೇಲೆ ಬಿದ್ದಿದ್ದು ಕೇವಲ ಎರಡು ದೇಹಗಳಲ್ಲ; ಆ ಮನೆಯ ಭವಿಷ್ಯ ಮತ್ತು ನೂರು ಆಸೆಗಳು. ಆಸ್ಪತ್ರೆಯ ಐಸಿಯುವಿನಲ್ಲಿ ಸಾವು ಬದುಕಿನ ನಡುವೆ ಹೋರಾಡುತ್ತಿದ್ದ ಪ್ರೇರಣಾ, ಅಪ್ಪ ಹೋದ ಮೂರೇ ದಿನಕ್ಕೆ ತಾನೂ ಅಪ್ಪನ ಹಾದಿಯನ್ನೇ ಹಿಡಿದಿದ್ದಾಳೆ. ತಂದೆ ನವೀನ್ಚಂದ್ರ ಮೂಲ್ಯ ಅವರು ಮಗಳನ್ನು ಅಗಲಿ ಹೋದ ನೋವಿನ ನಡುವೆಯೇ, ಈಗ ಮಗಳೂ ಇಹಲೋಕ ತ್ಯಜಿಸಿರುವುದು ಆ ಕುಟುಂಬದ ಪಾಲಿಗೆ ಭರಿಸಲಾಗದ ಘೋರ ದುರಂತ.
ಮನೆಯ ಆಧಾರಸ್ತಂಭವಾಗಿದ್ದ ತಂದೆ ಮತ್ತು ಏಕೈಕ ಮಗಳನ್ನು ಕಳೆದುಕೊಂಡ ಆ ತಾಯಿಯ ಒಡಲ ಕಿಚ್ಚು, ಸಂಬಂಧಿಕರ ಆಕ್ರಂದನ ಮುಗಿಲು ಮುಟ್ಟಿದೆ. ವಿದ್ಯಾರ್ಥಿಗಳ ಬೇಜವಾಬ್ದಾರಿತನಕ್ಕೆ ಬಲಿಯಾದ ಈ ಎರಡು ಜೀವಗಳ ಸಾವು ಇಡೀ ಕಾರ್ಕಳವನ್ನು ಶೋಕಸಾಗರದಲ್ಲಿ ಮುಳುಗಿಸಿದೆ. ಪ್ರೇರಣಾಳ ಬದುಕು ಪರೀಕ್ಷೆಯ ಫಲಿತಾಂಶಕ್ಕಾಗಿ ಕಾಯುವ ಮೊದಲೇ, ವಿಧಿಯ ಕ್ರೂರ ಪರೀಕ್ಷೆಯಲ್ಲಿ ಸೋತು ಮರೆಯಾಗಿರುವುದು ನೆನೆದರೆ ಕಣ್ಣಾಲಿಗಳು ತೇವಗೊಳ್ಳುತ್ತವೆ. ಆ ಕುಟುಂಬಕ್ಕೆ ಈ ನೋವನ್ನು ಸಹಿಸುವ ಶಕ್ತಿಯನ್ನು ದೇವರು ನೀಡಲಿ.

