ಮುದ್ದೇಬಿಹಾಳ (ಕುಲಾಲ ವರ್ಲ್ಡ್ ಡಾಟ್ ಕಾಮ್): ಮುದ್ದೇಬಿಹಾಳ ತಾಲ್ಲೂಕಿನ ಬಿದರಕುಂದಿ ಗ್ರಾಮದ ಸರ್ಕಾರಿ ಪ್ರೌಢಶಾಲೆಯ ಒಂಬತ್ತನೇ ತರಗತಿಯ ಪ್ರತಿಭಾನ್ವಿತ ವಿದ್ಯಾರ್ಥಿನಿ ಗ್ರಂಥಿಕಾ ಕುಂಬಾರ, ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ISRO) ಆಯೋಜಿಸಿರುವ ಪ್ರತಿಷ್ಠಿತ ‘ಯುವಿಕಾ-2026’ (ಯುವ ವಿಜ್ಞಾನಿ ಕಾರ್ಯಕ್ರಮ) ಕ್ಕೆ ಆಯ್ಕೆಯಾಗುವ ಮೂಲಕ ನಾಡಿಗೆ ಕೀರ್ತಿ ತಂದಿದ್ದಾರೆ.
ಈ ಅಸಾಧಾರಣ ಸಾಧನೆಯನ್ನು ಸಂಭ್ರಮಿಸಲು ಭಾನುವಾರ ಸಂಜೆ ಪಟ್ಟಣದ ಶ್ರೀ ಪವಾಡ ಬಸವೇಶ್ವರ ಆಶ್ರಮದ ಆವರಣದಲ್ಲಿ ಕುಂಬಾರ ಸಮಾಜದ ವತಿಯಿಂದ ವಿಶೇಷ ಸನ್ಮಾನ ಸಮಾರಂಭವನ್ನು ಹಮ್ಮಿಕೊಳ್ಳಲಾಗಿತ್ತು. ಗ್ರಂಥಿಕಾ ಅವರಿಗೆ ಶಾಲು ಹೊದಿಸಿ, ಸಿಹಿ ಹಂಚುವ ಮೂಲಕ ಸಮಾಜದ ಮುಖಂಡರು ಗೌರವ ಸಲ್ಲಿಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ಮುಖ್ಯಶಿಕ್ಷಕ ಶಿವಾನಂದ ಕುಂಬಾರ ಅವರು, ಗ್ರಾಮೀಣ ಭಾಗದ ವಿದ್ಯಾರ್ಥಿನಿಯೊಬ್ಬಳು ರಾಷ್ಟ್ರಮಟ್ಟದ ಇಸ್ರೋ ಕಾರ್ಯಕ್ರಮಕ್ಕೆ ಆಯ್ಕೆಯಾಗಿರುವುದು ಇಡೀ ತಾಲ್ಲೂಕಿಗೆ ಹೆಮ್ಮೆಯ ವಿಷಯವಾಗಿದ್ದು, ಈ ಸಾಧನೆ ಉಳಿದ ವಿದ್ಯಾರ್ಥಿಗಳಲ್ಲಿ ವಿಜ್ಞಾನದ ಬಗ್ಗೆ ಆಸಕ್ತಿ ಮೂಡಿಸಲು ಸ್ಫೂರ್ತಿಯಾಗಲಿ ಎಂದು ಆಶಿಸಿದರು.
ಕಾರ್ಯಕ್ರಮದಲ್ಲಿ ಸಮಾಜದ ಹಿರಿಯರಾದ ಸಂಗಣ್ಣ ಕುಂಬಾರ, ಬಸವರಾಜ ಕುಂಬಾರ (ಗೋನಾಳ), ಗ್ರಂಥಿಕಾ ಅವರ ತಂದೆ ಮಂಜುನಾಥ ಕುಂಬಾರ ಹಾಗೂ ಪ್ರಮುಖರಾದ ರಾಜಶೇಖರ, ಪತ್ರಕರ್ತ ಬಸವರಾಜ, ಅಂಬಣ್ಣ, ಮಲ್ಲಣ್ಣ, ಶರಣಬಸಪ್ಪ, ಮುತ್ತು ಕುಂಬಾರ ಮತ್ತು ವೀರೇಶ ಚಲವಾದಿ ಉಪಸ್ಥಿತರಿದ್ದು ವಿದ್ಯಾರ್ಥಿನಿಯ ಭವಿಷ್ಯಕ್ಕೆ ಶುಭ ಹಾರೈಸಿದರು.


