ಬೆಳ್ತಂಗಡಿ(ಕುಲಾಲ ವರ್ಲ್ಡ್ ಡಾಟ್ ಕಾಮ್): ಗುರುವಾಯನಕೆರೆಯ ಕುಲಾಲ ಮಂದಿರವು ಭಾನುವಾರ ಭಕ್ತಿ ಮತ್ತು ಸಂಭ್ರಮದ ಸಮಾಗಮಕ್ಕೆ ಸಾಕ್ಷಿಯಾಯಿತು. ಬೆಳ್ತಂಗಡಿ ತಾಲೂಕು ಮೂಲ್ಯರ ಯಾನೆ ಕುಂಬಾರರ ಸೇವಾ ಸಂಘದ ವತಿಯಿಂದ ಆಯೋಜಿಸಲಾಗಿದ್ದ ‘ಸಾಮೂಹಿಕ ಶ್ರೀ ಸತ್ಯನಾರಾಯಣ ಪೂಜೆ’ ಕಾರ್ಯಕ್ರಮವು ಅತ್ಯಂತ ಶ್ರದ್ಧಾಭಕ್ತಿಗಳಿಂದ ಸಂಪನ್ನಗೊಂಡಿತು.
ಬೆಳಿಗ್ಗೆಯಿಂದಲೇ ಮಂತ್ರಘೋಷಗಳೊಂದಿಗೆ ಆರಂಭವಾದ ಪೂಜಾ ವಿಧಿವಿಧಾನಗಳು ಮಧ್ಯಾಹ್ನದ ಹೊತ್ತಿಗೆ ಭಕ್ತಾದಿಗಳ ಸಮ್ಮುಖದಲ್ಲಿ ಮಂಗಲಗೊಂಡವು. ಈ ಧಾರ್ಮಿಕ ಕಾರ್ಯಕ್ರಮವು ಕೇವಲ ಪೂಜೆಗೆ ಸೀಮಿತವಾಗದೆ, ಸಮಾಜದ ಪ್ರತಿಭೆಗಳನ್ನು ಪ್ರೋತ್ಸಾಹಿಸುವ ವೇದಿಕೆಯೂ ಆಯಿತು. ಈ ಬಾರಿಯ ಎಸ್ಎಸ್ಎಲ್ಸಿ ಪರೀಕ್ಷೆಯಲ್ಲಿ ಅತ್ಯುತ್ತಮ ಸಾಧನೆಗೈದ ಸಿಂಚನಾ ಸಿ. ಇವಳನ್ನು ಸಂಘದ ವತಿಯಿಂದ ಆತ್ಮೀಯವಾಗಿ ಸನ್ಮಾನಿಸಿ ಗೌರವಿಸಲಾಯಿತು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಸೋಮಯ್ಯ ಮೂಲ್ಯ ಹನೈನಡೆ ಅವರು ಮಾತನಾಡಿ, ಸಂಘಟನೆಯ ಶಕ್ತಿಯೇ ಸಮಾಜದ ಏಳಿಗೆಗೆ ಮೂಲಾಧಾರ ಎಂದರು. ವಿದ್ಯಾರ್ಥಿಗಳ ಶಿಕ್ಷಣಕ್ಕೆ ಪ್ರೋತ್ಸಾಹ ನೀಡುವುದು ಮತ್ತು ಆರೋಗ್ಯದ ಸಂಕಷ್ಟದಲ್ಲಿರುವವರಿಗೆ ನೆರವಾಗುವುದು ನಮ್ಮ ಮುಂದಿನ ಗುರಿ ಎಂದು ತಿಳಿಸಿದ ಅವರು, ಹೊಸದಾಗಿ ಖರೀದಿಸಿರುವ ಜಾಗದಲ್ಲಿ ಸಮಾಜ ಭವನ ನಿರ್ಮಿಸುವ ಮಹತ್ಕಾರ್ಯಕ್ಕೆ ಎಲ್ಲರೂ ಒಂದಾಗಿ ಕೈಜೋಡಿಸಬೇಕೆಂದು ಕರೆ ನೀಡಿದರು.
ಈ ವಿಶೇಷ ಸಂದರ್ಭದಲ್ಲಿ ವಿಧಾನ ಪರಿಷತ್ ಶಾಸಕರಾದ ಪ್ರತಾಪಸಿಂಹ ನಾಯಕ್, ಧಾರ್ಮಿಕ ಮುಖಂಡ ಕಿರಣ್ ಚಂದ್ರ ಪುಷ್ಪಗಿರಿ, ಬೆಸ್ಟ್ ಫೌಂಡೇಷನ್ ಅಧ್ಯಕ್ಷ ರಕ್ಷೀತ್ ಶಿವರಾಂ ಹಾಗೂ ಪುತ್ತೂರು ಕುಂಬಾರರ ಸಹಕಾರ ಸಂಘದ ಅಧ್ಯಕ್ಷ ಭಾಸ್ಕರ ಮೂಲ್ಯ ಪೆರುವಾಯಿ ಭೇಟಿ ನೀಡಿ ಶುಭ ಹಾರೈಸಿದರು. ಸಂಘದ ಪ್ರಧಾನ ಕಾರ್ಯದರ್ಶಿ ಸುಧೀರ್ ಕೆ.ಎನ್., ಗಣ್ಯರಾದ ಹೆಚ್. ಪದ್ಮಕುಮಾರ್ ಹಾಗೂ ಸಂಘದ ಪದಾಧಿಕಾರಿಗಳು ಉಪಸ್ಥಿತರಿದ್ದು ಕಾರ್ಯಕ್ರಮದ ಯಶಸ್ಸಿಗೆ ಶ್ರಮಿಸಿದರು.

