ಬಾಗಲಕೋಟೆ(ಕುಲಾಲ ವರ್ಲ್ಡ್ ಡಾಟ್ ಕಾಮ್): ಜಿಲ್ಲೆಯ ಹಿಪ್ಪರಗಿಯ ಮೊರಾರ್ಜಿ ದೇಸಾಯಿ ವಸತಿ ಶಾಲೆಯ ಪ್ರತಿಭಾವಂತ ವಿದ್ಯಾರ್ಥಿ ನವೀನ ಕುಂಬಾರ, ಪ್ರಸಕ್ತ ಸಾಲಿನ ಎಸ್ಎಸ್ಎಲ್ಸಿ ಪರೀಕ್ಷೆಯಲ್ಲಿ 625 ಅಂಕಗಳಿಗೆ 621 (99.36%) ಅಂಕಗಳನ್ನು ಗಳಿಸುವ ಮೂಲಕ ರಾಜ್ಯಕ್ಕೆ 5ನೇ Rank ಹಾಗೂ ಬಾಗಲಕೋಟೆ ಜಿಲ್ಲೆಗೆ ಪ್ರಥಮ ಸ್ಥಾನ ಪಡೆದು ನಾಡಿನ ಗಮನ ಸೆಳೆದಿದ್ದಾನೆ. ಈ ಮೂಲಕ ತನ್ನ ಶಾಲೆ ಹಾಗೂ ಸಮುದಾಯದ ಕೀರ್ತಿಯನ್ನು ಉತ್ತುಂಗಕ್ಕೇರಿಸಿದ ವಿದ್ಯಾರ್ಥಿಯ ಅಪ್ರತಿಮ ಸಾಧನೆಯನ್ನು ಮೆಚ್ಚಿ, ಜಮಖಂಡಿಯ ಮಾನ್ಯ ಕ್ಷೇತ್ರ ಶಿಕ್ಷಣಾಧಿಕಾರಿಗಳು ತಮ್ಮ ಕಚೇರಿಯಲ್ಲಿ ನವೀನನನ್ನು ಆತ್ಮೀಯವಾಗಿ ಸನ್ಮಾನಿಸಿ ಶುಭ ಹಾರೈಸಿದರು.
ವಿದ್ಯಾರ್ಥಿಯ ಶ್ರಮ ಮತ್ತು ಸಾಧನೆಯನ್ನು ಗೌರವಿಸುವ ಸಲುವಾಗಿ ಶಾಲೆಯ ಪ್ರಾಂಶುಪಾಲರಾದ ಜೆ. ಬೆಸ್ತರ, ಶಿಕ್ಷಕರುಗಳಾದ ಮುರಳೀಧರ ಮೀಶಿ, ಎ.ಆರ್. ಹಿಪ್ಪರಗಿ ಹಾಗೂ ಎಸ್.ಎಲ್. ಸಂಕನಗೌಡ ಅವರು ಸ್ವತಃ ವಿದ್ಯಾರ್ಥಿಯ ಮನೆಗೆ ಭೇಟಿ ನೀಡಿ, ಕುಟುಂಬಸ್ಥರ ಸಮ್ಮುಖದಲ್ಲಿ ನವೀನನಿಗೆ ಸನ್ಮಾನಿಸಿ ಹೃತ್ಪೂರ್ವಕ ಅಭಿನಂದನೆಗಳನ್ನು ಸಲ್ಲಿಸಿದರು. ಗ್ರಾಮೀಣ ಭಾಗದ ಪ್ರತಿಭೆಯೊಂದು ರಾಜ್ಯ ಮಟ್ಟದಲ್ಲಿ ಮಿಂಚಿರುವುದು ಜಿಲ್ಲೆಯಾದ್ಯಂತ ಹರ್ಷದ ವಾತಾವರಣ ನಿರ್ಮಿಸಿದೆ.


