ಶಿವಮೊಗ್ಗ(ಕುಲಾಲ ವರ್ಲ್ಡ್ ಡಾಟ್ ಕಾಮ್): ಸಾಮಾನ್ಯವಾಗಿ ಅನೇಕ ಜಾತಿ ಸಂಘಟನೆಗಳು ಸರ್ಕಾರದಿಂದ ಸಿಎ ಸೈಟ್ (Civic Amenities Site) ಅಥವಾ ಜಮೀನು ಪಡೆಯಲು ವರ್ಷಗಟ್ಟಲೆ ಕಚೇರಿಗಳಿಗೆ ಅಲೆಯುತ್ತವೆ. ಮಂತ್ರಿ, ಮುಖ್ಯಮಂತ್ರಿಯಂತಹ ಪ್ರಭಾವಿ ರಾಜಕಾರಣಿಗಳ ಶಿಫಾರಸ್ಸು ಇದ್ದರೂ ಜಮೀನು ಸಿಗದೆ ಪರದಾಡುವವರ ಸಂಖ್ಯೆಯೇ ಹೆಚ್ಚು. ಆದರೆ ಇದಕ್ಕೆ ಭಿನ್ನವಾಗಿ, ಶಿವಮೊಗ್ಗದ ಕುಂಬಾರ ಸಂಘವು ಯಾರ ಮುಂದೆಯೂ ಕೈಚಾಚದೆ ಸ್ವಾವಲಂಬನೆಯ ಮೂಲಕ ಬೃಹತ್ ಬಡಾವಣೆಯನ್ನು ನಿರ್ಮಿಸಿ ಹೊಸ ಇತಿಹಾಸ ಸೃಷ್ಟಿಸಿದೆ.
ಸ್ವಂತ ಶಕ್ತಿಯ ಮೇಲೆ ನಿರ್ಮಾಣವಾದ ಬಡಾವಣೆ
ಶಿವಮೊಗ್ಗ ತಾಲೂಕು ಕುಂಬಾರರ ಸಂಘ ಸದಸ್ಯರು ಸೇರಿ ತಮ್ಮ ತಮ್ಮ ಕೈಯಿಂದ ಸ್ವಲ್ಪ ಸ್ವಲ್ಪ ಹಣ ಹಾಕಿ ಶಿವಮೊಗ್ಗ ನಗರದ ಕಲ್ಲೂರು ಗ್ರಾಮದಲ್ಲಿ (ಔಟರ್ ರಿಂಗ್ ರೋಡ್) ಸರ್ವಜ್ಞ ಬಡಾವಣೆ ಸುಮಾರು 5.30 ಎಕರೆ ಜಾಗದಲ್ಲಿ 110 ನಿವೇಶನಗಳನ್ನು ಹಂಚಿದ್ದಾರೆ. ಜೊತೆಗೆ ಕುಂಬಾರ ಸಮಾಜದ ಸಂಘಕ್ಕೆ ಒಂದು ಸಮುದಾಯ ಭವನ ಕಟ್ಟಲಿಕ್ಕೆ ಸುಮಾರು 11,000/ಅಡಿ ನಿವೇಶನವನ್ನಅದೇ ಜಾಗದಲ್ಲಿ
ಕಾದಿರಿಸಿದ್ದಾರೆ. ನೂರು ಕುಂಬಾರರ ಮನೆಯನ್ನು ಒಂದೇ ಕಡೆ ಕಟ್ಟಿ , ಸರ್ವಜ್ಞರ ಹೆಸರಲ್ಲಿ ಕುಂಬಾರರ ಬಡಾವಣೆ ಮಾಡಿ ಒಂದು ಮಾದರಿ ಸಂಘಟನಾ ಶಕ್ತಿ ತೋರಿಸಿದ್ದಾರೆ.
ಹೋರಾಟದ ಹಾದಿಯಲ್ಲಿ ಒಗ್ಗಟ್ಟಿನ ಬಲ
ಈ ಮಹತ್ಕಾರ್ಯದ ಹಿಂದೆ ಯಾವುದೇ ದೊಡ್ಡ ಶ್ರೀಮಂತರ ಕೈವಾಡವಿಲ್ಲ. ಬದಲಿಗೆ ಕೆಳಮಟ್ಟದಿಂದ ಬಂದು ಹೋರಾಟದ ಬದುಕು ನಡೆಸುತ್ತಿರುವ ವ್ಯಕ್ತಿಗಳ ಇಚ್ಛಾಶಕ್ತಿಯಿದೆ. ಸಂಘದ ಅಧ್ಯಕ್ಷರಾದ ಮಣಿ ಎಸ್., ಕಾರ್ಯದರ್ಶಿ ಶ್ರೀನಿವಾಸ ಎಂ.ಕೆ., ಖಜಾಂಜಿ ರವೀಂದ್ರ ಕೆ.ಟಿ., ನಿರ್ದೇಶಕ ಪದ್ಮನಾಭ ಕೆ.ಬಿ. ಹಾಗೂ ಎಲ್ಲಾ ಸದಸ್ಯರ ನಿಸ್ವಾರ್ಥ ಶ್ರಮದಿಂದಾಗಿ ಈ ಕನಸು ನನಸಾಗಿದೆ.
ಬಡಾವಣೆಯ ವಿಶೇಷತೆಗಳು
115 ನಿವೇಶನಗಳು: ಒಟ್ಟು 115 ಸುಸಜ್ಜಿತ ನಿವೇಶನಗಳನ್ನು ಮಾಡಿ ಸಮಾಜದ ಬಂಧುಗಳಿಗೆ ಹಂಚಲಾಗಿದೆ.
ಸಮುದಾಯ ಭವನ: ಸಂಘದ ಚಟುವಟಿಕೆಗಳಿಗಾಗಿ ಸುಮಾರು 11,000 ಚದರ ಅಡಿಯ ಜಾಗವನ್ನು ಪ್ರತ್ಯೇಕವಾಗಿ ಕಾದಿರಿಸಲಾಗಿದೆ.
ಮೂಲಸೌಕರ್ಯ: ಪ್ರತಿ ನಿವೇಶನಕ್ಕೂ ಈಗಾಗಲೇ ನೀರು, ವಿದ್ಯುತ್ ಮತ್ತು ಒಳಚರಂಡಿ (Drainage) ಸಂಪರ್ಕವನ್ನು ಕಲ್ಪಿಸಲಾಗಿದೆ.
ಸರ್ಕಾರಕ್ಕೆ ಕೊಡುಗೆ: ಬಡಾವಣೆಯ ನಿಯಮದಂತೆ 0.75 ಸೆಂಟ್ಸ್ ಜಾಗವನ್ನು ಸಿಎ ಸೈಟ್ ಹಾಗೂ ಉದ್ಯಾನವನಕ್ಕಾಗಿ ಮೀಸಲಿಡಲಾಗಿದೆ.
ರಾಜಕಾರಣಿಗಳ ಹಿಂದೆ ಬಿದ್ದು ಸಮಯ ವ್ಯರ್ಥ ಮಾಡುವ ಬದಲು, ಸಮಾಜ ಸಂಘಟಿತವಾಗಿ ನಿಂತರೆ ಅಸಾಧ್ಯವಾದುದನ್ನು ಸಾಧಿಸಬಹುದು ಎಂಬುದಕ್ಕೆ ಈ ಬಡಾವಣೆಯೇ ಸಾಕ್ಷಿ. ಯಾವುದೇ ಲಾಭದ ಉದ್ದೇಶವಿಲ್ಲದೆ, ಸಮಾಜದ ಹಿತದೃಷ್ಟಿಯಿಂದ ಮಾಡಿರುವ ಈ ಕೆಲಸ ನಿಜಕ್ಕೂ ಅದ್ಭುತ. ಹೀಗೆ ನಮಗೆ ಅರಿವಿಲ್ಲದೇ ಇರುವ ತಿಳಿಯದೇ ತೆರೆಮರೆಯಲ್ಲಿ ಇದೆ ರೀತಿ ಸೇವೆ ಮಾಡಿದ ಸಂಘಟನೆಗಳು ತುಂಬಾ ಇದ್ದಿರಬಹುದು. ಆದರೆ ಕಳೆದ ಮೂರು ದಶಕಗಳಿಂದ ರಾಜ್ಯ ಹಾಗು ರಾಷ್ಟ್ರಮಟ್ಟದಲ್ಲಿ ಸಂಘಟನೆಗಾಗಿ ತಿರುಗಾಟ ಮಾಡುತ್ತಿರುವ ನನಗೆ ಇಷ್ಟು ದೊಡ್ಡ ಸಮಾಜಮುಖಿ ಸ್ವಾರ್ಥರಹಿತ ಹಾಗು ಲಾಭ ರಹಿತ ಮತ್ತು ವ್ಯವಹಾರ ರಹಿತ, ಸಂಘಟನಾ ಸೇವೆಯನ್ನು ಲಾಭವಿಲ್ಲದೇ ಸ್ವಾರ್ಥ ಇಲ್ಲದೇ ಸಮಾಜದ ಒಗ್ಗಟ್ಟಿಗಾಗಿ ಮಾಡಿದ್ದು ನಿಜಕ್ಕೂ ಅನುಕರಣೀಯ ಮಾದರಿ ಕೆಲಸ ಅನ್ನಿಸಿದೆ. ಯಾವುದೇ ಶಾಸಕ ಸಂಸದ ಮಾಡಲಾಗದ ಕೆಲಸವನ್ನು ಒಂದು ಸಣ್ಣ ಕುಂಬಾರ ಸಂಘ ಮಾಡಿದೆ. ಅದಕ್ಕೆಲ್ಲಾ ಇಚ್ವಾ ಶಕ್ತಿ ಬೇಕು. ರಾಜಕಾರಣಿಗಳ ಹಿಂದೆ ಬೀಳುವುದಕ್ಕಿಂತ ನಾವೇ ಒಗ್ಗಟ್ಟಾಗಿ ಶಕ್ತಿಯಾಗಿ ನಿಲ್ಲಲು ಕಲಿಯಬೇಕಾಗಿದೆ. ಒಟ್ಟಿನಲ್ಲಿ, ನೂರು ಕುಂಬಾರ ಕುಟುಂಬಗಳು ಒಂದೇ ಕಡೆ ವಾಸಿಸುವಂತೆ ಮಾಡಿ, ‘ಕಾಯಕವೇ ಕೈಲಾಸ’ ಎಂಬ ತತ್ವವನ್ನು ಪಾಲಿಸುತ್ತಿರುವ ಶಿವಮೊಗ್ಗದ ಕುಂಬಾರ ಸಂಘ ಈಗ ಇಡೀ ರಾಜ್ಯಕ್ಕೆ ಸಂಘಟನಾ ಶಕ್ತಿಯ ಮಾದರಿಯಾಗಿ ನಿಂತಿದೆ.
ಡಾ. ಅಣ್ಣಯ್ಯ ಕುಲಾಲ್ ಉಳ್ತೂರು



