ಮುಂಬಯಿ(ಕುಲಾಲ ವರ್ಲ್ಡ್ ಡಾಟ್ ಕಾಮ್) : ಕುಲಾಲ/ಕುಂಬಾರ ಸಮುದಾಯದ ಅಪ್ರತಿಮ ನಾಯಕ, ದಾನಿ ಹಾಗೂ ಹಿರಿಯ ವೈದ್ಯರಾಗಿದ್ದ ದಿವಂಗತ ಡಾ. ಹೆಚ್. ಎಂ. ಸುಬ್ಬಯ್ಯ ಅವರ ಧರ್ಮಪತ್ನಿ ಶ್ರೀಮತಿ ಶಾಂತಾ ಸುಬ್ಬಯ್ಯ ಅವರು ವಿಧಿವಶರಾಗಿದ್ದಾರೆ.
ಪತಿಯ ಸಮಾಜಸೇವೆಯಲ್ಲಿ ಬೆನ್ನೆಲುಬಾಗಿದ್ದ ಚೇತನ
ಮೂಲತಃ ಮೂಡಬಿದ್ರೆಯ ಪುತ್ತಿಗೆ ಪದವು ಗ್ರಾಮದವರಾದ ಡಾ. ಸುಬ್ಬಯ್ಯ ಅವರು ಮುಂಬೈನಲ್ಲಿ ವೈದ್ಯರಾಗಿ ಜನಾನುರಾಗಿಯಾಗಿದ್ದರು. ಮುಂಬೈ ಕುಲಾಲ ಸಂಘದ ಮಾಜಿ ಅಧ್ಯಕ್ಷರಾಗಿ, ಮಂಗಳೂರಿನ ಕುಲಾಲ ಭವನದ ನಿರ್ಮಾಣದ ರೂವಾರಿಯಾಗಿ ಅವರು ಮಾಡಿದ ಸಾಧನೆಗಳ ಹಿಂದೆ ಪತ್ನಿ ಶಾಂತಾ ಅವರ ಮೌನ ಬೆಂಬಲ ಅಪಾರವಾಗಿತ್ತು. ಗೃಹಿಣಿಯಾಗಿದ್ದರೂ, ಪತಿಯ ಸಾಮಾಜಿಕ ಹಾಗೂ ಶೈಕ್ಷಣಿಕ ಕಳಕಳಿಯ ಎಲ್ಲಾ ಕಾರ್ಯಕ್ರಮಗಳಲ್ಲಿ ಸಕ್ರಿಯವಾಗಿ ಸಹಕರಿಸುತ್ತಾ, ಕುಟುಂಬದ ಶಕ್ತಿಯಾಗಿ ಅವರು ಗುರುತಿಸಿಕೊಂಡಿದ್ದರು.
ಗಣ್ಯರ ಸಂತಾಪ
ಸಮಾಜದ ಹಿರಿಯರ ಅಗಲಿಕೆಗೆ ಕುಲಾಲ ಸಂಘ ಮುಂಬಯಿ , ಅಖಿಲ ಕರ್ನಾಟಕ ಕುಂಭ ವೈದ್ಯರ ಒಕ್ಕೂಟ(ರಿ), ಬೆಂಗಳೂರು ತೀವ್ರ ಶೋಕ ವ್ಯಕ್ತಪಡಿಸಿದೆ. ಮುಂಬೈ ಕುಲಾಲ ಸಂಘದ ಜ್ಯೋತಿ ಕೋ-ಆಪರೇಟಿವ್ ಸೊಸೈಟಿಯ ಸ್ಥಾಪನೆಯಿಂದ ಹಿಡಿದು ಸಮುದಾಯದ ಏಳಿಗೆಗಾಗಿ ಡಾ. ಸುಬ್ಬಯ್ಯ ದಂಪತಿಗಳು ನೀಡಿದ ಕೊಡುಗೆಯನ್ನು ಈ ಸಂದರ್ಭದಲ್ಲಿ ಸ್ಮರಿಸಲಾಗಿದೆ.

