ಬೆಂಗಳೂರು(ಕುಲಾಲ ವರ್ಲ್ಡ್ ಡಾಟ್ ಕಾಮ್): ಕರ್ನಾಟಕ ರಾಜ್ಯ ಕುಲಾಲ ಕುಂಬಾರ ಯುವ ವೇದಿಕೆ ಮತ್ತು ಮಹಿಳಾ ಸಂಘಟನೆಗಳ ಒಕ್ಕೂಟ( ರಿ) ಜಿಲ್ಲಾ ಸಮಿತಿ ದ.ಕ. ಇದರ ಜಿಲ್ಲಾ ಅಧ್ಯಕ್ಷರಾದ ಅನಿಲ್ ದಾಸ್ ಅವರು ಕನ್ನಡ ಪ್ರಭ, ಏಷ್ಯಾನೆಟ್ ಸುವರ್ಣ ಟಿವಿಯವರು ನೀಡುವ 2026ನೇ ಸಾಲಿನ ಪ್ರತಿಷ್ಠಿತ ‘ಸುವರ್ಣ ಕನ್ನಡಿಗ’ ಪ್ರಶಸ್ತಿಗೆ ಆಯ್ಕೆಯಾಗಿದ್ದಾರೆ.
ದ.ಕ.ಜಿಲ್ಲೆಯಿಂದ ಮೂವರು ಸಾಧಕರು ಈ ಪ್ರಶಸ್ತಿಗೆ ಆಯ್ಕೆಯಾಗಿದ್ದಾರೆ. ಕನ್ನಡ ಸೇವೆ, ಆರೋಗ್ಯ, ಸಹಕಾರಿ ಹಾಗೂ ಸಾಮಾಜಿಕ ಸೇವೆಯ ಕ್ಷೇತ್ರಗಳಲ್ಲಿ ವಿಶಿಷ್ಟ ಸಾಧನೆಗೈದು ಸಮಾಜದ ವಿವಿಧ ಹಂತಗಳ ಮೇಲೆ ಸ್ಪಷ್ಟ ಹಾಗೂ ಸಕಾರಾತ್ಮಕ ಪ್ರಭಾವ ಬೀರಿರುವ ಬಹುಮುಖ ವ್ಯಕ್ತಿತ್ವದ ಚಿಂತನೆ ಕ್ರಿಯಾಶೀಲತೆ ಮತ್ತು ಮಾನವೀಯತೆಗಳ ಭಾವದ ಮೂಲಕ ದಕ್ಷಿಣ ಕನ್ನಡ ಜಿಲ್ಲೆಯಾದ್ಯಂತ ತನ್ನದೇ ಆದ ವಿಶಿಷ್ಟ ಗುರುತನ್ನು ಅನಿಲ್ ದಾಸ್ ನಿರ್ಮಿಸಿದ್ದಾರೆ. ಮಾ. 28ರಂದು ಬೆಂಗಳೂರಿನಲ್ಲಿ ಪ್ರಶಸ್ತಿ ಪ್ರದಾನ ನಡೆಯಲಿದೆ. ಸಮಾರಂಭದಲ್ಲಿ ಹಲವಾರು ಗಣ್ಯರು ಭಾಗವಹಿಸಲಿದ್ದಾರೆ. ಏಷ್ಯಾನೆಟ್ ಸುವರ್ಣ ನ್ಯೂಸ್ ಮತ್ತು ಕನ್ನಡಪ್ರಭ ದಿನಪತ್ರಿಕೆ ಸಂಯುಕ್ತವಾಗಿ ಪ್ರದಾನ ಮಾಡುವ ಈ ಪ್ರಶಸ್ತಿಯು ನಾಡು, ನುಡಿ ಹಾಗೂ ಸಮಾಜದ ಅಭಿವೃದ್ಧಿಗೆ ಮಹತ್ವದ ಕೊಡುಗೆ ನೀಡಿದ ಸಾಧಕರಿಗೆ ನೀಡಲಾಗುವ ಅತ್ಯಂತ ಮಾನ್ಯತೆಯ ಗೌರವಗಳಲ್ಲಿ ಒಂದಾಗಿದೆ.

