ಕಾಸರಗೋಡು(ಕುಲಾಲ ವರ್ಲ್ಡ್ ಡಾಟ್ ಕಾಮ್): ತುಳು ಮಾತೃಭಾಷೆಯ ಕುಲಾಲರನ್ನು ಒ.ಇ.ಸಿ.ಜಾತಿ ಲಿಸ್ಟ್ ನಲ್ಲಿ ಸೇರ್ಪಡೆಗೊಳಿಸಿ ಕೇರಳ ಸರಕಾರ ಆದೇಶ ಹೊರಡಿಸಿದೆ.
ಸರಕಾರದ ಈ ಆದೇಶದಿಂದ ಕೇರಳದಲ್ಲಿ ವಿದ್ಯಾಭ್ಯಾಸ ಮಾಡುವ ಒ.ಇ.ಸಿ.ವಿಭಾಗದಲ್ಲಿ ಬರುವ ವಿದ್ಯಾರ್ಥಿಗಳಿಗೆ ಶೈಕ್ಷಣಿಕ ಮೀಸಲಾತಿ ಮತ್ತು ವಿದ್ಯಾರ್ಥಿ ವೇತನ ಲಭಿಸುತ್ತದೆ. ಕುಂಬಾರಿಕೆಗೆ ಸಂಬಂಧಪಟ್ಟ ಮಲಯಾಳಂ ಮಾತೃಭಾಷೆಯ ಕುಶವನ್ ,ಕುಲಾಲನ್ ,ಕುಂಬಾರನ್, ವೇಲನ್, ಓಡನ್, ಆಂದ್ರ ನಾಯರ್, ಅಂದುರು ನಾಯರ್…ಹೆಸರುಗಳು ಈ ಲಿಸ್ಟ್ ನಲ್ಲಿ ಇದ್ದರೂ ತುಳು ಮಾತೃಭಾಷೆಯ ಕುಲಾಲ ಹೆಸರು ಅಧಿಕೃತವಾಗಿ ಸೇರ್ಪಡೆ ಆಗಿರಲಿಲ್ಲ. ಆದರೆ ಒಬಿಸಿಯಲ್ಲಿ ಮತ್ತು ಇ ಡಿಸ್ಟ್ರಿಕ್ಟ್ ಪೋರ್ಟಲ್ ನಲ್ಲಿ ಕುಲಾಲ ಹೆಸರು ಇರುವ ಕಾರಣ ಇಲ್ಲಿ ತನಕ ಮಕ್ಕಳಿಗೆ ಸರ್ಟಿಫಿಕೇಟ್ ,ವಿದ್ಯಾರ್ಥಿ ವೇತನ ಲಭಿಸುತ್ತಿತ್ತು. ಸರಕಾರದ ಆದೇಶವೊಂದರ ಪ್ರಕಾರ ಕಳೆದ ಎಪ್ರಿಲ್ ತಿಂಗಳಿನಲ್ಲಿ ಪ್ರಮಾಣ ಪತ್ರ ನೀಡುವ ಇ ಡಿಸ್ಟ್ರಿಕ್ಟ್ ಪೋರ್ಟಲ್ ನ ಒ.ಇ.ಸಿ.ಲಿಸ್ಟ್ ನಿಂದ ಕುಲಾಲ ಹೆಸರನ್ನು ತೆಗೆಯಲಾಯಿತು. ಇದರಿಂದ ಇಲ್ಲಿನ ವಿದ್ಯಾರ್ಥಿ ಗಳು ಸರ್ಟಿಫಿಕೆಟ್ ಸಿಗದೆ ಸಂಕಷ್ಟಕ್ಕೆ ಒಳಗಾದರು. ಒ.ಇ.ಸಿ.ಬದಲಿಗೆ ಒ.ಬಿ.ಸಿ.ತೆಗೆಯಬೇಕಾದ ಅನಿವಾರ್ಯತೆ ಬಂತು. ಇದರಿಂದ ಶೈಕ್ಷಣಿಕ ಮೀಸಲಾತಿ ವಿದ್ಯಾರ್ಥಿ ವೇತನ ಲಭಿಸಲಿಕ್ಕಿಲ್ಲ ಎಂಬ ಆತಂಕ ಮೂಡಿತು. ಈ ಸಮಸ್ಯೆ ಜ್ವಲಂತವಾಗಿರುವ ಸಂದರ್ಭದಲ್ಲಿಯೇ ಕುಲಾಲ ರನ್ನು ಒಇಸಿ ಯಲ್ಲಿ ಸೇರಿಸಬೇಕೆಂಬ ಬೇಡಿಕೆಯನ್ನೊಳಗೊಂಡ ಮನವಿ ತಯಾರಿಸಿ ಮಿತ್ರ ಹಾಗೂ ಅಕ್ಷಯ ಕೋ ಆರ್ಡಿನೇಟರ್ ಅಶೋಕ ಕೋರಿಕ್ಕಾರ್ ಗೆ ನೀಡಿದೆ. ಇದನ್ನು ಪೈವಳಿಕೆ ಕುಲಾಲ ಸಂಘದ ಮೂಲಕ ಸರಕಾರಕ್ಕೆ ಕಳುಹಿಸಲಾಯಿತು. ಆ ಸಂದರ್ಭದಲ್ಲಿ ಮಂಜೇಶ್ವರ ಕುಲಾಲ ವೇದಿಕೆಯಲ್ಲಿ ಸಕ್ರಿಯವಾಗಿದ್ದ ಸೋಮಶೇಖರ್ ಈ ವಿಷಯದ ಕುರಿತು ಅತೀವ ಕಾಳಜಿ ವಹಿಸಿದ್ದರು. ವೇದಿಕೆಯ ಮೂಲಕವೂ ಮಾಸ್ ಪಿಟಿಶನ್ ತಯಾರಿಸಿ ಸರಕಾರಕ್ಕೆ ಸಲ್ಲಿಸಲಾಯಿತು. ಕಾಸರಗೋಡು ಜಿಲ್ಲಾ ಕುಲಾಲ ಸಂಘದ ಕಡೆಯಿಂದಲೂ ಸರಕಾರಕ್ಕೆ ಮನವಿ ಸಲ್ಲಿಸಲಾಯಿತು.

ತದನಂತರ ಈ ವಿಷಯದಲ್ಲಿ ಅರಿವು ಮೂಡಿಸಲು ಮತ್ತು ಮನವಿಯ ಕುರಿತು ಸರಕಾರಕ್ಕೆ ಒತ್ತಾಯ ಮಾಡಲು ಮಂಜೇಶ್ವರ ಕುಲಾಲ ವೇದಿಕೆಯ ಮುತುವರ್ಜಿ ಯಿಂದ ಕಾರ್ಯಕ್ರಮಗಳನ್ನು ನಡೆಸಲಾಯಿತು. ಈ ಕಾರ್ಯಕ್ರಮದಲ್ಲಿ ಕೇರಳ ಮಣ್ ಪಾತ್ರ ನಿರ್ಮಾಣ ಸಭಾ ಸಂಘಟನೆಯ(ಕೆ.ಎಂ.ಎಸ್.ಎಸ್.) ರಾಜೇಶ್ ಪಾಲಂಗಾಟ್ ಮೊದಲಾದ ಪದಾಧಿಕಾರಿಗಳು ಭಾಗವಹಿಸಿ ಕುಲಾಲವನ್ನು ಒ ಇ ಸಿ ಯಲ್ಲಿ ಸೇರಿಸುವ ಕುರಿತ ಪ್ರಯತ್ನಿಸುವುದಾಗಿ ತಿಳಿಸಿದ್ದರು. ಈ ವಿಷಯದಲ್ಲಿ ಕೇರಳ ಹೈಕೋರ್ಟ್ ರಿಜಿಸ್ಟ್ರಾರ್ ದಿನೇಶ್ ಕೊಡಂಗೆಯವರ ಅವಿರತ ಪ್ರಯತ್ನದಿಂದ ಕೆ.ಎಂ.ಎಸ್.ಎಸ್.ಜೊತೆ ತುಳು ಕುಲಾಲರ ಸಮಸ್ಯೆಯನ್ನು ಹಂಚುವ ಅವಕಾಶ ಲಭಿಸಿತು. ಕೆ.ಎಂ.ಎಸ್.ಎಸ್.ಸಂಘಟನೆಯ ಮನವಿಯಲ್ಲಿಯೂ ಕುಲಾಲ, ಕುಲಾಲ ನಾಯರ್ ಜಾತಿಯನ್ನು ಒ.ಇ.ಸಿ.ಯಲ್ಲಿ ಸೇರಿಸಬೇಕೆಂಬ ಬೇಡಿಕೆ ಇತ್ತು. ಈ ಎಲ್ಲಾ ಮನವಿಗಳ ಕುರಿತು ಡೈರೆಕ್ಟರ್ ಓಪ್ ಬಿಸಿಡಿಡಿ ಡಿಪಾರ್ಟ್ ಮೆಂಟ್, ಒಬಿಸಿ ಕಮಿಷನ್ ಹಾಗೂ ಕಿರ್ತಾಡ್ಸ್ ಸರಕಾರಕ್ಕೆ ನೀಡಿದ ವರದಿಯಲ್ಲಿ ಕುಲಾಲ, ಕುಲಾಲ ನಾಯರ್ ನ್ನು ಒ ಇ ಸಿ ಯಲ್ಲಿ ಸೇರಿಸಬೇಕು ಎಂಬ ವಿಷಯವನ್ನು ಒತ್ತಿ ಹೇಳಿತು. ಎಲ್ಲವನ್ನೂ ಪರಿಶೀಲಿಸಿದ ಸರಕಾರ ದಿನಾಂಕ 15.03.2026ರಂದು ಕುಲಾಲ, ಕುಲಾಲ ನಾಯರ್ ನ್ನು ಒ ಇ ಸಿ ಗೆ ಸೇರಿಸಿ ಮಹತ್ವದ ಆದೇಶ ಹೊರಡಿಸಿತು. ಇದರಿಂದ ಹಲವು ವರ್ಷಗಳ ಬೇಡಿಕೆ ಈಡೇರಿತು. ವಿದ್ಯಾರ್ಥಿ ವೇತನ, ಮೀಸಲಾತಿ ಪಡೆಯಲು ಅರ್ಹತೆ ಇದ್ದೂ ಸರ್ಟಿಫಿಕೇಟ್ ಸಿಗದೆ ಆತಂತ್ರರಾಗಿದ್ದ ವಿದ್ಯಾರ್ಥಿಗಳ ಶೈಕ್ಷಣಿಕ ಸಮಸ್ಯೆ ಪರಿಹಾರವಾಯಿತು.ಈ ನಿಟ್ಟಿನಲ್ಲಿ ಶ್ರಮಿಸಿದ, ಸಹಕರಿಸಿದ ಕೆ.ಎಂ.ಎಸ್.ಎಸ್ ,ಪೈವಳಿಕೆ ಕುಲಾಲ ಸಂಘ, ಕುಲಾಲ ವೇದಿಕೆ, ಮಂಜೇಶ್ವರ ಹಾಗೂ ಕಾಸರಗೋಡು ಜಿಲ್ಲಾ ಕುಲಾಲ ಸಂಘದ ಎಲ್ಲರಿಗೂ ಹೃತ್ಪೂರ್ವಕ ಧನ್ಯವಾದಗಳು. ಆದೇಶ ಹೊರಡಿಸಿದ ಸಂಬಂಧ ಪಟ್ಟ ಇಲಾಖೆಗೆ ಕೃತಜ್ಞತೆಗಳು.


