ಮೈಸೂರು(ಕುಲಾಲ ವರ್ಲ್ಡ್ ಡಾಟ್ ಕಾಮ್) : 60 ವರ್ಷ ಆದ್ರೆ ನಮ್ಮ ಜೀವನ ಮುಗೀತು, ಮಕ್ಕಳು ನಮ್ಮನ್ನು ನೋಡಿಕೊಳ್ತಾರೆ. ನಮ್ಮ ಕೈನಲ್ಲಿ ಏನು ಆಗಲ್ಲ ಅಂದುಕೊಳ್ಳುವವರೇ ಹೆಚ್ಚು. ಆದ್ರೆ ಮೈಸೂರು (Mysuru) ತಾಲೂಕು ಸಮೀಪದ ನಗರ್ಲೆ ಗ್ರಾಮದ ನಿವಾಸಿಗಳಾದ ನಾಗಮ್ಮ ಹಾಗೂ ಸಿದ್ದಪ್ಪ ವೃದ್ಧ ದಂಪತಿ ಕಳೆದ 15 ವರ್ಷಗಳಿಂದ ಮಡಿಕೆ (Pot) ತಯಾರಿಸಿ ಮಾರಾಟ (Sale) ಮಾಡುವ ಮೂಲಕ ತಮ್ಮ ಜೀವನವನ್ನು ಸಾಗಿಸುತ್ತಿದ್ದಾರೆ.
ಮಡಿಕೆ ತಯಾರಿಸುವ ಕೆಲಸ
ಆರ್ಥಿಕವಾಗಿ ಬಲಹೀನ ಸ್ಥಿತಿಯಲ್ಲಿರುವ ಈ ದಂಪತಿ ತಮ್ಮ ಜಮೀನಿನಲ್ಲೇ ಸಣ್ಣ ಗುಡಿಸಲು ನಿರ್ಮಿಸಿಕೊಂಡು ಅಲ್ಲಿ ಮಡಿಕೆ ತಯಾರಿಸುವ ಕೆಲಸವನ್ನು ಮಾಡುತ್ತಿದ್ದಾರೆ. ಪ್ರತಿದಿನವೂ ಟಿ. ನರಸೀಪುರ ಭಾಗದಿಂದ ಉತ್ತಮ ಗುಣಮಟ್ಟದ ಮಣ್ಣನ್ನು ತಂದು ಪರಂಪರೆಯಿಂದ ಬಳಕೆಯಾಗುತ್ತಿರುವ ಚಕ್ರದ ಸಹಾಯದಿಂದ ಮಡಿಕೆಗಳನ್ನು ತಯಾರಿಸುತ್ತಾರೆ.
ಶ್ರಮದಾಯಕ ಕೆಲಸ
ಮಡಿಕೆ ತಯಾರಿಕೆ ಸಂಪೂರ್ಣವಾಗಿ ಕೈಕೆಲಸವಾಗಿದ್ದು ಬಹಳ ಶ್ರಮದಾಯಕವಾದ ಕೆಲಸವಾಗಿದೆ. ಬೆಳಿಗ್ಗೆಯಿಂದಲೇ ಕೆಲಸ ಪ್ರಾರಂಭಿಸುವ ನಾಗಮ್ಮ ಮತ್ತು ಸಿದ್ದಪ್ಪ ಮಣ್ಣು ಸಿದ್ಧಪಡಿಸಿ, ಚಕ್ರದ ಮೇಲೆ ಮಡಿಕೆ ರೂಪಿಸಿ ನಂತರ ಅದನ್ನು ಒಣಗಿಸಿ ಮಾರಾಟಕ್ಕೆ ಸಿದ್ಧಪಡಿಸುತ್ತಾರೆ.
ಮಡಿಕೆ ಕೊಳ್ಳುವ ಪ್ರಯಾಣಿಕರು
ಈ ರೀತಿ ತಯಾರಿಸಿದ ಮಡಿಕೆಗಳನ್ನು ಟಿ. ನರಸೀಪುರಕ್ಕೆ ಹೋಗುವ ರಸ್ತೆಯ ಬದಿಯಲ್ಲಿ ಇಟ್ಟು ಮಾರಾಟ ಮಾಡುತ್ತಾರೆ. ಮಡಿಕೆಗಳ ಗಾತ್ರ ಮತ್ತು ವಿನ್ಯಾಸಕ್ಕೆ ಅನುಗುಣವಾಗಿ 70ರಿಂದ 200 ರೂಪಾಯಿ ವರೆಗೆ ಮಾರಾಟ ಮಾಡಲಾಗುತ್ತದೆ. ಸ್ಥಳೀಯ ಜನರು ಹಾಗೂ ಪ್ರಯಾಣಿಕರು ಇವರಿಂದ ಮಡಿಕೆಗಳನ್ನು ಖರೀದಿಸುತ್ತಾರೆ.
ಕುಂಬಾರಿಕೆಯ ವೃತ್ತಿ
ವಯಸ್ಸು ಹೆಚ್ಚಾದರೂ ಕೂಡ ಶ್ರಮವನ್ನು ಬಿಡದೆ ಕೆಲಸ ಮಾಡುತ್ತಿರುವ ಈ ವೃದ್ಧ ದಂಪತಿಗಳು ಪರಂಪರೆಯ ಕುಂಬಾರಿಕೆಯ ವೃತ್ತಿಯನ್ನು ಉಳಿಸಿಕೊಂಡು ಜೀವನ ನಡೆಸುತ್ತಿರುವುದು ವಿಶೇಷವಾಗಿದೆ. ಆದಾಗ್ಯೂ, ಇವರಿಗೆ ಶಾಶ್ವತ ಅಂಗಡಿ ಅಥವಾ ಸರ್ಕಾರಿ ನೆರವು ದೊರಕಿದರೆ ಇನ್ನಷ್ಟು ಸುಲಭವಾಗಿ ಜೀವನ ನಡೆಸಲು ಸಹಾಯವಾಗುತ್ತದೆ ಎಂದು ಸ್ಥಳೀಯರು ಅಭಿಪ್ರಾಯಪಡುತ್ತಾರೆ. ಪರಂಪರೆಯ ವೃತ್ತಿಯನ್ನು ಉಳಿಸಿಕೊಂಡು ಕಷ್ಟಪಟ್ಟು ಬದುಕು ಸಾಗಿಸುತ್ತಿರುವ ನಾಗಮ್ಮ ಮತ್ತು ಸಿದ್ದಪ್ಪ ದಂಪತಿಗಳ ಜೀವನ ಕಥೆ ಹಲವರಿಗೆ ಪ್ರೇರಣೆಯಾಗಿದೆ.

