ಒಂದೂರಿನಲ್ಲಿ ಒಬ್ಬ ಅಗಸನಿದ್ದ. ಅವನು ಪ್ರಾಮಾಣಿಕನೂ ಕಷ್ಟಪಟ್ಟು ದುಡಿಯುವವನೂ ಆಗಿದ್ದ. ಅವನು ಒಗೆದ ಬಟ್ಟೆಗಳು ಬೆಳ್ಳಗಾಗುತ್ತವೆಂದು ಊರಿನ ಜನ ನಂಬಿದ್ದರು. ಇದರಿಂದ ದಿನೇದಿನೇ ಅವನ ವ್ಯಾಪಾರ ವೃದ್ಧಿಯಾಗತೊಡಗಿತು.
ಅದೇ ಊರಿನಲ್ಲಿ ಒಬ್ಬ ಕುಂಬಾರನಿದ್ದ. ಅವನು ಸೋಮಾರಿ. ಅಗಸನ ಏಳಿಗೆ ಕಂಡು ಅವನಿಗೆ ಅಸೂಯೆ ಆಯಿತು. ಹೇಗಾದರೂ ಮಾಡಿ ಅಗಸನನ್ನು ಬಡವನನ್ನಾಗಿ ಮಾಡಬೇಕು ಎಂದು ಅವನು ಯೋಚಿಸಿದ. ಆ ಊರಿನ ರಾಜನ ಬಳಿ ಕಂದು ಬಣ್ಣದ ಆನೆಯೊಂದಿತ್ತು. ಆದರೆ ರಾಜನಿಗೆ ಬಿಳಿಯ ಆನೆಯ ಮೇಲೆ ತುಂಬಾ ವ್ಯಾಮೋಹ. “ನನ್ನ ಹತ್ತಿರ ಒಂದು ಬಿಳಿಯ ಆನೆಯಿದ್ದರೆ ಎಷ್ಟು ಚೆನ್ನಾಗಿರುತ್ತಿತ್ತು” ಎಂದು ಅವನು ಪೆದೇಪದೇ ಕಂಡವರಲ್ಲೆಲ್ಲಾ ಹೇಳಿಕೊಳ್ಳುತ್ತಿದ್ದ . ಈ ಮಾತು ಕುಂಬಾರನ ಕಿವಿಗೂ ಬಿತ್ತು. ಅಗಸನಿಗೆ ಬುದ್ಧಿ ಕಲಿಸಲು ಒಳ್ಳೆಯ ಸಮಯ ಸಿಕ್ಕಿತು ಎಂದುಕೊಳ್ಳುತ್ತಾ ಕುಂಬಾರ ರಾಜನ ಅರಮನೆಗೆ ಹೋದ. “ಮಹಾಪ್ರಭೂ, ಬಿಳಿಯ ಆನೆ ಕಂಡರೆ ನಿಮಗೆ ತುಂಬಾ ಇಷ್ಟವೆಂದು ಕೇಳಿದೆ. ನಮ್ಮೂರಿನ ಅಗಸ ಎಲ್ಲರ ಬಟ್ಟೆಗಳನ್ನೂ ಬೆಳ್ಳಗೆ ಮಾಡಿಕೊಡುತ್ತಾನೆ. ನಿಮ್ಮ ಆನೇನ ಬೆಳ್ಳಗೆ ಮಾಡಿಕೊಡಲು ಅವನಿಗೇನೂ ಕಷ್ಟವಾಗದು” ಎಂದ ಕುಂಬಾರ. ರಾಜನಿಗೆ ಸಂತೋಷ ಆಯಿತು. “ಹೌದಲ್ಲವೇ? ಈ ವಿಷಯ ನಂಗೆ ಹೊಳೆಯಲೇ ಇಲ್ಲ” ಎನ್ನುತ್ತಾ ಅಗಸನಿಗೆ ಹೇಳಿಕಳುಹಿಸಿ, ತನ್ನ ಆನೆಯನ್ನು ಬೆಳ್ಳಗೆ ಮಾಡಿಕೊಡಬೇಕೆಂದು ಆಜ್ಞೆಮಾಡಿದ.
ಅಗಸನಿಗೆ ದಿಗ್ಭ್ರಮೆಯಾಯಿತು. ಇಲ್ಲ, ಎಂದರೆ ರಾಜನ ಕೋಪಕ್ಕೆ ಬಲಿಯಾಗಬೇಕಾಗುತ್ತದೆ ಎಂದು ಯೋಚಿಸುತ್ತಾ, ಒಂದು ಉಪಾಯ ಹೂಡಿದ.
“ಆನೆಯನ್ನು ತೊಳೆಯೋಷ್ಟು ದೊಡ್ಡ ಪಾತ್ರೆ ನನ್ನ ಹತ್ತಿರ ಇಲ್ಲ ಮಹಾಪ್ರಭು. ಅಂಥ ಒಂದು ಪಾತ್ರೆ ಮಾಡಿಸಿ ಕೊಡಿ” ಎಂದ ಅಗಸ.
ರಾಜ ಕುಂಬಾರನಿಗೆ ಹೇಳಿ ಕಳುಹಿಸಿ ಅಂಥ ದೊಡ್ಡ ಪಾತ್ರೆಸಿದ್ಧಪಡಿಸುವಂತೆ ಅಪ್ಪಣೆ ಕೊಟ್ಟ. ಕುಂಬಾರ ತನ್ನ ಹೆಂಡತಿ ಮಕ್ಕಳು, ಬಂಧುಬಳಗ ಎಲ್ಲರನ್ನೂ ಸೇರಿಸಿಕೊಂಡು ಒಂದುವಾರ ಕೆಲಸ ಮಾಡಿ ಅಂಥ ಪಾತ್ರೆಯನ್ನು ತಯಾರಿಸಿಕೊಟ್ಟ. ಅಗಸ ಪಾತ್ರೆಯ ತುಂಬ ನೀರು ತುಂಬಿ, ಆನೆಯನ್ನು ಅದರೊಳಗೆ ನಿಲ್ಲಿಸುವಂತೆ ಮಾವುತನಿಗೆ ಹೇಳಿದ. ಆನೆ ಪಾತ್ರೆಯಲ್ಲಿ ಕಾಲಿಟ್ಟೊಡನೆ ಅದರ ಭಾರಕ್ಕೆ ಪಾತ್ರೆ ಒಡೆದುಹೋಯಿತು.
“ಪಾತ್ರೆ ಆನೆಯ ಭಾರ ತಡೆಯೋಷ್ಟು ದಪ್ಪಗಿರಬೇಕು ಮಹಾಪ್ರಭೂ” ಎಂದ ಅಗಸ. ಕುಂಬಾರನಿಗೆ ಮತ್ತೆ ಆಜ್ಞೆ ಹೊರಟಿತು.
ಮತ್ತೆ ಕುಂಬಾರ ಕಷ್ಟಪಟ್ಟು ಬಹಳ ದಪ್ಪಗಿನ ಪಾತ್ರೆ ತಯಾರಿಸಿ ಕೊಟ್ಟ. ಅದಕ್ಕೆ ನೀರು ತುಂಬಿದ ಬಳಿಕ ಮಾವುತ ಆನೆಯನ್ನು ಅದರಲ್ಲಿ ನಿಲ್ಲಿಸಿದ. ಅದನ್ನು ಉಬ್ಬೆಗೆ ಹಾಕಲು ಅಗಸ ಪಾತ್ರೆಯ ಕೆಳಗೆ ಬೆಂಕಿ ಹಾಕಿದ. ಆದರೆ ಪಾತ್ರೆ ತುಂಬ ದಪ್ಪಗಿದ್ದುದರಿಂದ ಇಡೀ ದಿನ ಬೆಂಕಿ ಹಾಕಿದರೂ ನೀರು ಬೆಚ್ಚಗಾಗಲಿಲ್ಲ. ಆಗಸ ಹೇಳಿದ:
“ಮಹಾಪ್ರಭೂ, ಪಾತ್ರೆ ಗಟ್ಟಿಯಾಗೂ ಇರಬೇಕು, ತೆಳ್ಳಗೂ ಇರಬೇಕು. ಅಂಥ ಪಾತ್ರೆಯಿದ್ದರೆ ಮಾತ್ರ ಆನೆಯನ್ನು ಬೆಳ್ಳಗೆ ಮಾಡಲು ಸಾಧ್ಯ”
ರಾಜನ ಅನುಜ್ಞೆಯಂತೆ ಕುಂಬಾರ ಪಾತ್ರೆಗಳನ್ನು ಮಾಡಿಮಾಡಿ ಸೋತ. ಆದರೆ ಆನೆಯನ್ನು ಬೆಳ್ಳಗೆ ಮಾಡಲು ಸಾಧ್ಯವಾಗುವಂತಹ ಪಾತ್ರೆಯನ್ನು ಸಿದ್ಧಗೊಳಿಸಲು ಆಗಲೇ ಇಲ್ಲ. ರಾಜ ಸಿಟ್ಟುಗೊಂಡು ಕುಂಬಾರನನ್ನು ಊರಿನಿಂದ ಹೊರಗೆ ಹಾಕಿದ.
ಇನ್ನೊಬ್ಬರ ಏಳಿಗೆಯನ್ನು ಕಂಡು ಅಸೂಯೆ ಪಡಬಾರದು, ಎಂಬ ಪಾಠವನ್ನು ಕುಂಬಾರ ಕಲಿತ.