ಬೆಳ್ತಂಗಡಿ(ಕುಲಾಲ ವರ್ಲ್ಡ್ ಡಾಟ್ ಕಾಮ್) : ಬೆಳ್ತಂಗಡಿ ಅಗ್ನಿಶಾಮಕ ದಳದ ದಕ್ಷ ಮತ್ತು ಪ್ರಾಮಾಣಿಕ ಪ್ರಮುಖ ಅಗ್ನಿಶಾಮಕ ರಾಜೇಶ್ ಪಿ ಅವರಿಗೆ 2025 ನೇ ಸಾಲಿನ ಮುಖ್ಯಮಂತ್ರಿ ಚಿನ್ನದ ಪದಕ ಲಭಿಸಿದೆ.
ಕಾರ್ಕಳ ಹೊಸ್ಮಾರಿನರಾದ ರಾಜೇಶ್ ಅವರು ಕರ್ನಾಟಕ ರಾಜ್ಯ ಅಗ್ನಿಶಾಮಕ ಮತ್ತು ತುರ್ತು ಸೇವೆಗಳ ಇಲಾಖೆಗೆ ಅಗ್ನಿಶಾಮಕ ಹುದ್ದೆಗೆ 2008 ರಲ್ಲಿ ಸೇರ್ಪಡೆಗೊಂಡು ಬುನಾದಿ ತರಬೇತಿಯನ್ನು ಶಿವಮೊಗ್ಗದ ಮಾಚೇನಹಳ್ಳಿ ಕೆ. ಎಸ್. ಆರ್. ಪಿ 8ನೇ ಪಡೆ ಇಲ್ಲಿ ಪೂರ್ಣಗೊಳಿಸಿ, ಪಾಂಡೇಶ್ವರ ಅಗ್ನಿಶಾಮಕ ಠಾಣೆಗೆ ಸ್ಥಳ ನಿಯುಕ್ತಿಗೊಂಡು ಕರ್ತವ್ಯ ನಿರ್ವಹಿಸಿದ್ದರು. ಬಳಿಕ ಕದ್ರಿ ಅಗ್ನಿಶಾಮಕ ಠಾಣೆಗೆ ವರ್ಗಾವಣೆಗೊಂಡು ನಂತರ 2025 ನೇ ಸಾಲಿನಲ್ಲಿ ಪ್ರಮುಖ ಅಗ್ನಿಶಾಮಕ ಹುದ್ದೆಗೆ ಪದೋನ್ನತಿ ಹೊಂದಿ ಬೆಳ್ತಂಗಡಿ ಅಗ್ನಿಶಾಮಕ ಠಾಣೆಗೆ ಸ್ಥಳ ನಿಯೋಜನೆಗೊಂಡು ಪ್ರಸ್ತುತ ಇಲ್ಲಿಯವರೆಗೆ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಕರ್ನಾಟಕ ರಾಜ್ಯ ಅಗ್ನಿಶಾಮಕ ಮತ್ತು ತುರ್ತು ಸೇವೆಗಳ ಇಲಾಖೆಯಲ್ಲಿ ಸುಮಾರು 17 ವರ್ಷಗಳ ಕಾಲ ಸುದೀರ್ಘ ಸೇವೆಯನ್ನು ಸಲ್ಲಿಸಿದ ಇವರಿಗೆ ಸೇವಾ ಅವಧಿಯಲ್ಲಿ 12000 ನಗದು ಬಹುಮಾನ ಲಭಿಸಿರುತ್ತದೆ. 2025ನೇ ಸಾಲಿನಲ್ಲಿ ಕರ್ನಾಟಕ ರಾಜ್ಯ ಅಗ್ನಿಶಾಮಕ ಮತ್ತು ತುರ್ತು ಸೇವೆಗಳ ಇಲಾಖೆಯ ಮಾನ್ಯ ಮುಖ್ಯಮಂತ್ರಿಯವರ ಪದಕ ಲಭಿಸಿದೆ.



