ಪೊಸಳ್ಳಿ, ದೈಪಲ, ಕಾಮಾಜೆ, ಕುಲಾಲರಮಠ ಸಂಪರ್ಕ ರಸ್ತೆಗೆ ಡಾ.ಬಾಳಪ್ಪ ಹೆಸರು; ಅಭಿವೃದ್ಧಿಗೆ ನೆರವು: ಶಾಸಕ ರಾಜೇಶ್ ನಾಯ್ಕ್
ಬಿ.ಸಿ.ರೋಡಿನ ನಾರಾಯಣ ಗುರು ವೃತ್ತದ ಬಳಿಯಿಂದ ಪೊಸಳ್ಳಿ, ದೈಪಲ, ಕಾಮಾಜೆ, ಕುಲಾಲರ ಮಠ ಸಂಪರ್ಕ ರಸ್ತೆಗೆ ಸ್ವಾತಂತ್ರ್ಯಯೋಧ ಡಾ.ಅಮ್ಮೆಂಬಳ ಬಾಳಪ್ಪ ರಸ್ತೆ ಎಂಬ ನಾಮಕರಣದ ಫಲಕ ಅನಾವರಣ ಕಾರ್ಯಕ್ರಮ ಅವರ 104 ನೇ ಜನ್ಮದಿನದ ಅಂಗವಾಗಿ ಸೋಮವಾರ ನಡೆಯಿತು.
ಬಂಟ್ವಾಳ ಶಾಸಕ ರಾಜೇಶ್ ನಾಯ್ಕ್ ಉಳಿಪ್ಪಾಡಿಗುತ್ತು ನಾಮಫಲಕ ಅನಾವರಣಗೊಳಿಸಿ ಮಾತನಾಡಿ, ರಸ್ತೆ ಅಭಿವೃದ್ಧಿಗೆ ತನ್ನ ಶಾಸಕರ ನಿಧಿಯಿಂದ ಅನುದಾನ ಒದಗಿಸುವುದಾಗಿ ಹೇಳಿದರು. ನಾಮಫಲಕ ಅನಾವರಣಗೊಳಿಸಿದ ನಂತರ ಜವಾಬ್ದಾರಿ ಹೆಚ್ಚುತ್ತದೆ, ರಸ್ತೆಯನ್ನು ಇನ್ನಷ್ಟು ಅಭಿವೃದ್ಧಿಗೊಳಿಸಿ,ಅದನ್ನು ಸುವ್ಯವಸ್ಥಿತವಾಗಿ ನಿರ್ವಹಿಸಿದರೆ, ಹೆಸರಿಟ್ಟದ್ದು ಸಾರ್ಥಕವಾಗುತ್ತದೆ ಎಂದರು.
ಬಿಎಸ್ ಎಫ್ ನಿವೃತ್ತ ಕಮಾಂಡರ್ ಚಂದಪ್ಪ ಮೂಲ್ಯ ಮುಖ್ಯ ಅತಿಥಿಯಾಗಿ ಭಾಗವಹಿಸಿ ಮಾತನಾಡಿ ಅಮ್ಮೆಂಬಳ ಬಾಳಪ್ಪ ಅವರ ಹೆಸರು ಚಿರಸ್ಥಾಯಗೊಳಿಸುವ ನಿಟ್ಟಿನಲ್ಲಿ ಶಾಶ್ವತವಾದ ಕೆಲಸ ಆಗಬೇಕಿದ್ದು ಪ್ರಸ್ತುತ ದಿನಗಳಲ್ಲಿ ಹಂತಹಂತವಾಗಿ ನಡೆಯುತ್ತಿದೆ ಎಂದರು.
ಬಂಟ್ವಾಳ ನಗರ ಯೋಜನ ಪ್ರಾಧಿಕಾರ ಅಧ್ಯಕ್ಷ ಬೇಬಿ ಕುಂದರ್ ಶುಭ ಹಾರೈಸಿದರು. ಬಂಟ್ವಾಳ ತಾಲೂಕು ಕುಲಾಲ ಸುಧಾರಕ ಸಂಘದ ಅಧ್ಯಕ್ಷ ರಮೇಶ್ ಸಾಲ್ಯಾನ್ ಸಂಚಯಗಿರಿ ಅಧ್ಯಕ್ಷತೆ ವಹಿಸಿದ್ದರು.
ಮಂಗಳೂರು ವಿವಿ ಸಿಂಡಿಕೇಟ್ ಸದಸ್ಯ ಸುರೇಶ್ ಕುಮಾರ್ ನಾವೂರು, ಬಂಟ್ವಾಳ ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಪ್ರಶಾಂತ್ ಪುಂಜಾಲಕಟ್ಟೆ, ಸಮಾಜ ಸೇವಾ ಸಹಕಾರಿ ಸಂಘದ ಅಧ್ಯಕ್ಷ ಸುರೇಶ್ ಕುಲಾಲ್ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಸಂಘದ ಕಾರ್ಯದರ್ಶಿ ಯಾದವ ಕುಲಾಲ್ ಅಗ್ರಬೈಲು ಸ್ವಾಗತಿಸಿದರು, ಸದಸ್ಯ ಮಚ್ಚೇಂದ್ರ ಸಾಲ್ಯಾನ್ ವಂದಿಸಿದರು, ಕಟ್ಟಡ ಸಮಿತಿ ಗೌರವಾಧ್ಯಕ್ಷ ನಾರಾಯಣ ಸಿ.ಪೆರ್ನೆ ಕಾರ್ಯಕ್ರಮ ನಿರೂಪಿಸಿದರು. ಬೂಡಾ ಸದಸ್ಯ ಮನೋಹರ ನೇರಂಬೋಳು, ಕಟ್ಟಡ ಸಮಿತಿ ಜತೆಕಾರ್ಯದರ್ಶಿ ಲಕ್ಷ್ಮಣ ಅಗ್ರಬೈಲು, ಸಿವಿಲ್ ಇಂಜಿನಿಯರ್ ಸತೀಶ್ ಕುಲಾಲ್, ಸ್ಥಳೀಯರಾದ ಜನಾರ್ಧನ ಪೊಸಳ್ಳಿ ಕಾರ್ಯಕ್ರಮಕ್ಕೆ ಸಹಕರಿಸಿದರು.


ಮಂಗಳೂರು ವಿವಿಯಲ್ಲಿ ಅಮ್ಮೆಂಬಳ ಬಾಳಪ್ಪ ಜನ್ಮ ದಿನಾಚರಣೆ
ಸಾಮಾಜಿಕ ಬದ್ಧತೆಯೊಂದಿಗೆ ಬದುಕಿದ ಅಮ್ಮೆಂಬಳ ಬಾಳಪ್ಪರ ಬದುಕು ಮಾದರಿ: ಸ್ಪೀಕರ್ ಯು.ಟಿ. ಖಾದರ್
ಮಂಗಳೂರು: ವಿದ್ಯಾವಂತರೇ ಹೆಚ್ಚು ಸಮಾಜ ಕಂಟಕರಾಗಿ ಕಾಣುತ್ತಿರುವ ಕಾಲಘಟ್ಟದಲ್ಲಿ ಮೆಡಿಕಲ್, ಇಂಜಿನಿಯ ರಿಂಗ್, ಕಾನೂನು, ಪದವಿ ಶಿಕ್ಷಣವನ್ನು ನೀಡುವ ಸಾಕಷ್ಟು ಕೇಂದ್ರಗಳಿವೆ.ಆದರೆ ವಿದ್ಯಾರ್ಥಿಗಳನ್ನು ಸತ್ಪ್ರಜೆ ಮಾಡುವ ಕೇಂದ್ರಗಳು ನಮ್ಮಲಿ ಕೊರತೆ ಇದೆ. ಇಂತಹ ಸಂದರ್ಭದಲ್ಲಿ ತ್ಯಾಗ, ತಾಳ್ಮೆ, ಪ್ರಾಮಾಣಿಕತೆ, ಸಾಮಾಜಿಕ ಬದ್ಧತೆಯ ಮೂಲಕ ಸಮಾಜಸೇವೆ ಮಾಡಿದ ಅಮ್ಮೆಂಬಳ ಬಾಳಪ್ಪರಂತಹ ಸಾಧಕರ ಬದುಕು ಸಮಾಜಕ್ಕೆ ಮಾದರಿ ಎಂದು ಕರ್ನಾಟಕ ವಿಧಾನಸಭೆಯ ಸಭಾಪತಿ ಯು.ಟಿ.ಖಾದರ್ ಹೇಳಿದರು.
ಅವರು ಸೋಮವಾರ ಮಂಗಳೂರು ವಿಶ್ವವಿದ್ಯಾನಿಲಯದ ಎಸ್ ವಿ ಪಿ ಕನ್ನಡ ಅಧ್ಯಯನ ಸಂಸ್ಥೆ ಮತ್ತು ಸ್ವಾತಂತ್ರ್ಯ ಯೋಧ ಡಾ.ಅಮ್ಮೆಂಬಳ ಬಾಳಪ್ಪ ಪ್ರತಿಷ್ಠಾನ ರಿ. ಮತ್ತು ಇತಿಹಾಸ ವಿಭಾಗ ವಿಶ್ವವಿದ್ಯಾನಿಲಯ ಕಾಲೇಜು, ಮಂಗಳೂರು ಸಂಯುಕ್ತ ಆಶ್ರಯದಲ್ಲಿ ನಡೆದ ಸ್ವಾತಂತ್ರ್ಯ ಹೋರಾಟಗಾರ, ಪತ್ರಕರ್ತ, ಕಾರ್ಮಿಕ ಮುಖಂಡ ಡಾ.ಅಮ್ಮೆಂಬಳ ಬಾಳಪ್ಪ ಜನ್ಮದಿನಾಚರಣೆ ಕಾರ್ಯಕ್ರಮವನ್ನು ವಿವಿ ಕಾಲೇಜಿನ ರವೀಂದ್ರ ಕಲಾಭವನದಲ್ಲಿ ಉದ್ಘಾಟಿಸಿ ಮಾತನಾಡಿದರು.
ಸಮಾಜಕ್ಕೆ ಪೂರಕವಾದ ಕಾರ್ಯಗಳಲ್ಲಿ ತೊಡಗುವುದು ಬಿಟ್ಟು ಇಂದು ನಮ್ಮ ಅರ್ಧ ಆಯುಷ್ಯ ಮಾತನಾಡುವುದು, ಸಮಸ್ಯೆ ಸೃಷ್ಟಿಸುವುದು, ಸಮಸ್ಯೆಯನ್ನು ಪರಿಹರಿಸಿಕೊಳ್ಳುವುದರಲ್ಲಿ ಕಳೆದು ಬಿಡುತ್ತೇವೆ. ದೇವರ ಎದುರು ಎಲ್ಲರೂ ಸಮಾನರು. ದೇವರ ಆಶಯದಲ್ಲಿ ಎಂದೂ ತಾರತಮ್ಯವಿಲ್ಲ ಎಂಬುದನ್ನು ಮನಗಂಡ ಸಮಾಜವಾದಿಯಾಗಿದ್ದರು ಬಾಳಪ್ಪನವರು ಎಂದರು.
ವಿಶೇಷ ಉಪನ್ಯಾಸ ನೀಡಿದ ಬಂಟ್ವಾಳ ರಾಣಿ ಅಬ್ಬಕ್ಕ ಅಧ್ಯಯನ ಕೇಂದ್ರದ ನಿರ್ದೇಶಕ ಡಾ. ತುಕಾರಾಮ್ ಪೂಜಾರಿ ಬಾಳಪ್ಪರು ಗಾಂಧೀಜಿಯವರ ಅಪ್ಪಟ ಅಭಿಮಾನಿಯಾಗಿದ್ದರು. ಕ್ವಿಟ್ ಇಂಡಿಯಾ ಚಳುವಳಿಯಲ್ಲಿ ಭಾಗವಹಿಸಿ ಜೈಲುವಾಸ ಅನುಭವಿಸಿದ್ದರು. ಸ್ಥಾನಾಪೇಕ್ಷೆ ಬಿಟ್ಟು ತತ್ವಾಪೇಕ್ಷಿಯಾದ ಬಾಳಪ್ಪರ ಬದುಕು ನಮಗೆ ಮಾರ್ಗದರ್ಶಿ ಜಾರ್ಜ್ ಫರ್ನಾಂಡೀಸ್ ರಂತಹ ಮುತ್ಸದ್ದಿಗೆ ಬಾಳಪ್ಪರು ರಾಜಕೀಯ ಗುರುಗಳಾಗಿದ್ದರು ಎಂದರು.

ವಿವಿಯಲ್ಲಿ ಅಧ್ಯಯನ ಕೇಂದ್ರ:
ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿದ ಮಂಗಳೂರು ವಿವಿ ಕುಲಪತಿ ಪ್ರೊ.ಪಿ.ಎಲ್ ಧರ್ಮ ಮಾತನಾಡಿ ಅಸಮಾನತೆಯಿಂದ ಸಮಾಜವನ್ನು ಪಾರುಮಾಡಬೇಕೆಂಬ ಆಶಯ ಬಾಳಪ್ಪರದ್ದಾಗಿತ್ತು. ಅವರ ಸಾಮಾಜಿಕ, ರಾಜಕೀಯ, ಆರ್ಥಿಕ ಸ್ವಾತಂತ್ರ್ಯದ ಕಲ್ಪನೆಗಳನ್ನು ಅರ್ಥಮಾಡಿಕೊಳ್ಳಬೇಕು. ಅವರ ಬಗೆಗೆ ಸಂಶೋಧನೆಗಳು ನಡೆಯಬೇಕು ಎಂದರು. ಸಾರ್ವಜನಿಕರ ಸಹಕಾರದಿಂದ ಮಂಗಳೂರು ವಿವಿಯಲ್ಲಿ ಡಾ.ಅಮ್ಮೆಂಬಳ ಬಾಳಪ್ಪ ಅಧ್ಯಯನ ಕೇಂದ್ರ ಸ್ಥಾಪಿಸಲಾಗುವುದು ಎಂದರು.
ಸಮಾರಂಭದಲ್ಲಿ ಕಾರ್ಯಕ್ರಮದ ಮುಖ್ಯ ಸಂಯೋಜಕರಾದ ವಿವಿ ಸಿಂಡಿಕೇಟ್ ಸದಸ್ಯ ಸುರೇಶ್ ಕುಮಾರ್ ಬಿ. ನಾವೂರು, ಅಮ್ಮೆಂಬಳ ಬಾಳಪ್ಪ ಸೇವಾ ಪ್ರತಿಷ್ಠಾನದ ಸದಸ್ಯ ಚಂದಪ್ಪ ಮೂಲ್ಯ, ದ.ಕ ಜಿಲ್ಲಾ ಮೂಲ್ಯರ ಯಾನೆ ಕುಲಾಲರ ಮಾತೃ ಸಂಘದ ಅಧ್ಯಕ್ಷ ಮಯೂರ್ ಉಲ್ಲಾಳ್, ಸಿಂಡಿಕೇಟ್ ಸದಸ್ಯ ರಘುರಾಜ್ ಕದ್ರಿ, ಅಚ್ಯುತ ಗಟ್ಟಿ ಎಸ್ ವಿಪಿ ಕನ್ನಡ ಅಧ್ಯಯನ ಸಂಸ್ಥೆಯ ಅಧ್ಯಕ್ಷ ಡಾ. ನಾಗಪ್ಪ ಗೌಡ, ವಿವಿ ಕಾಲೇಜಿನ ಪ್ರಾಂಶುಪಾಲ ಪ್ರೊ.ಗಣಪತಿ ಗೌಡ, ಇತಿಹಾಸ ವಿಭಾಗದ ಮುಖ್ಯಸ್ಥ ಪ್ರೊ.ಜಯರಾಜ್ ಮೊದಲಾದವರು ಉಪಸ್ಥಿತರಿದ್ದರು. ಡಾ.ಯಶುಕುಮಾರ್ ನಿರೂಪಿಸಿದರು.
