ಬಂಟ್ವಾಳ(ಕುಲಾಲ ವರ್ಲ್ಡ್ ಡಾಟ್ ಕಾಮ್): ಬದುಕಿಗೋಸ್ಕರ ಟೈಲರಿಂಗ್ ವೃತ್ತಿ ಮಾಡುತ್ತಾ, ರಾತ್ರಿ ಹಗಲೆನ್ನದೆ ಬಟ್ಟೆ ಹೊಲಿಯುತ್ತಾ, ಸ್ವಾವಲಂಬಿಯಾಗಿ ತನ್ನ ಕಾಲ ಮೇಲೆ ನಿಂತುಕೊಳ್ಳುವ ಹುಮ್ಮಸ್ಸಿನಲ್ಲಿದ್ದ ಈ ಕುಟುಂಬದ ರಕ್ಷಾ ಅವರ ಎರಡು ಟೈಲರಿಂಗ್ ಮೆಶಿನ್ ಗಳು ಬೆಂಕಿಯ ಕೆನ್ನಾಲಿಗೆಗೆ ಸುಟ್ಟು ಭಸ್ಮವಾಗಿದೆ.
ಬಿ.ಸಿ.ರೋಡಿನ ಗೂಡಿನಬಳಿಯ ಬಳಕ ಎಂಬಲ್ಲಿ ಸೋಮವಾರ ಬೆಳಗ್ಗೆ ಆಕಸ್ಮಿಕವಾಗಿ ಹೊತ್ತಿಕೊಂಡ ಬೆಂಕಿ ಅಪಾರ ಪ್ರಮಾಣದ ದಿರಿಸುಗಳನ್ನು ಸುಟ್ಟುಹಾಕಿದ್ದಷ್ಟೇ ಅಲ್ಲ, ಟೈಲರಿಂಗ್ ಮೆಷಿನ್ ನನ್ನೂ ಹೊತ್ತಿಸಿದೆ. ರಕ್ಷಾ ಬಟ್ಟೆ ಹೊಲಿಯುವುದಷ್ಟೇ ಅಲ್ಲ, ಮಾರಾಟವನ್ನೂ ಮಾಡುತ್ತಾ, ಕಷ್ಟಪಟ್ಟು ದುಡಿದು ಪುಟ್ಟ ಬಟ್ಟೆ ಮಳಿಗೆಯನ್ನೂ ಆರಂಭಿಸಿದ್ದರು. ಸಮಾಜದಲ್ಲಿ ಸ್ವಂತ ಕಾಲ ಮೇಲೆ ನಿಲ್ಲುವ ಕನಸುಕಂಗಳ ಯುವತಿಯ ಕನಸಿಗೆ ಅಕ್ಷರಶಃ ಅಗ್ನಿ ಆಕಸ್ಮಿಕ ಕೊಳ್ಳಿ ಇಟ್ಟಂತಾಗಿದ್ದು, ಇದೀಗ ಸಮಾಜದ ಸಹಕಾರ ಅವರಿಗೆ ಬೇಕಾಗಿದೆ.
ಚಾರ್ಲಿ ಡಿಸೋಜ ಅವರ ಮಹಡಿ ಮನೆಯಲ್ಲಿ ಬಾಡಿಗೆಗೆ ವಿಜಯ್ ಕುಲಾಲ್ ಮತ್ತು ಕುಟುಂಬ ಇದೆ. ಅವರ ಪತ್ನಿ ಹಾಗೂ ಮೂವರು ಮಕ್ಕಳೊಂದಿಗೆ ಇದ್ದು, ಹಿಂದೆ ಎಲೆಕ್ಟ್ರಿಶಿಯನ್ ವೃತ್ತಿ ಮಾಡುತ್ತಿದ್ದು, ಪ್ರಸ್ತುತ ಅನಾರೋಗ್ಯದಿಂದ ಮನೆಯಲ್ಲಿದ್ದಾರೆ. ಮೂವರು ಹೆಣ್ಣುಮಕ್ಕಳ ಪೈಕಿ ರಕ್ಷಾ ಟೈಲರಿಂಗ್ ವೃತ್ತಿ ನಡೆಸುತ್ತಿದ್ದು ಬಿ.ಸಿ.ರೋಡಿನಲ್ಲಿ ಪುಟ್ಟ ಜವಳಿ ಮಳಿಗೆಯನ್ನು ಆರಂಭಿಸಿದ್ದರು. ಬೆಂಕಿ ಆಕಸ್ಮಿಕವಾದಾಗ ವಿಜಯ್ ಹಾಗೂ ಅವರ ಪುತ್ರಿ ರಕ್ಷಾ ಮನೆಯಲ್ಲಿದ್ದರೆ, ಪತ್ನಿ ಹೊರಗೆ ತೆರಳಿದ್ದರು. ಅವರು ಸಹಾಯಕ್ಕಾಗಿ ಮನೆಯಿಂದ ಹೊರಗೆ ಬಂದ ಸಂದರ್ಭ ಬೆಂಕಿಯನ್ನು ಗಮನಿಸಿದ ಸ್ಥಳೀಯರು ಇಬ್ಬರನ್ನೂ ಮನೆಯಿಂದ ಹೊರಗೆ ಕರೆತಂದಿದ್ದಾರೆ. ಇಲ್ಲದಿದ್ದರೆ ಮತ್ತೊಂದು ಅನಾಹುತವೇ ನಡೆದುಹೋಗುತ್ತಿತ್ತು. ಆದರೆ, ಹೊಲಿಗೆಗೆಂದು ಹಾಗು ಮಾರಾಟಕ್ಕೆಂದು ಇಟ್ಟಿದ್ದ ಬಟ್ಟೆಗಳು, ಉಡುಗೆ, ತೊಡುಗಗೆಗಳು ಅಷ್ಟು ಹೊತ್ತಿನಲ್ಲೇ ಬೆಂಕಿಯ ಕೆನ್ನಾಲಿಗೆಗೆ ಭಸ್ಮವಾಗಿವೆ.. ಅವರ ಬದುಕಿಗೆ ಆಧಾರವಾಗಿದ್ದ ಎರಡು ಟೈಲರಿಂಗ್ ಮೆಷಿನ್ ಗಳು ಸುಟ್ಟುಹೋಗಿದ್ದು ದುರಂತ.
ಪ್ರಸ್ತುತ ಈ ಕುಟುಂಬಕ್ಕೆ ಇದೀಗ ಬದುಕು ಸಾಗಿಸುವುದೇ ದೊಡ್ಡ ಸವಾಲಾಗಿ ಪರಿಣಮಿಸಿದೆ. ಆಕಸ್ಮಿಕ ಅವಘಡದಿಂದ ಮನೆಮದ್ದು, ಉದ್ಯೋಗ ಸಾಧನಗಳು, ಆದಾಯದ ಮೂಲ ಎಲ್ಲವೂ ನಾಶವಾಗಿದ್ದು, ಕುಟುಂಬ ಸಂಪೂರ್ಣ ನಿರಾಶ್ರಯ ಸ್ಥಿತಿಗೆ ತಲುಪಿದೆ. ಈ ದುರ್ಘಟನೆಗೆ ಒಳಗಾದ ಕುಟುಂಬದ ಪುನರ್ವಸತಿ, ಚಿಕಿತ್ಸಾ ವೆಚ್ಚ ಹಾಗೂ ಜೀವನೋಪಾಯ ಪುನರ್ಸ್ಥಾಪನೆಗಾಗಿ ಮಾನವೀಯ ನೆಲೆಯಲ್ಲಿ ಸಹೃದಯಿಗಳ ಸಹಕಾರ ಅತ್ಯಂತ ಅಗತ್ಯವಾಗಿದೆ. ದಯವಿಟ್ಟು ಈ ಸಂಕಷ್ಟದ ಸಂದರ್ಭದಲ್ಲಿ ಕೈಜೋಡಿಸಿ , ಸಾಧ್ಯವಾದಷ್ಟು ನೆರವು ನೀಡುವ ಮೂಲಕ ಬದುಕಿಗೆ ಆಶಾಕಿರಣವಾಗುವಂತೆ ಕುಟುಂಬ ವಿನಂತಿ ಮಾಡಿದೆ.
Name : SRI RAKSHA
AC NO:83700200001246
IFSC :BARB0VJJAKR
BRANCH :JAKRIBETTU, BANTWAL


