ಈ ಹಿಂದಿನಿಂದಲೂ ವಿಧಾನ ಸಭೆ ಹಾಗೂ ವಿಧಾನ ಪರಿಷತ್ ಚುನಾವಣೆಯಲ್ಲಿ ಕಾಂಗ್ರೆಸ್ , ಬಿಜೆಪಿ ಮತ್ತು ಜೆಡಿಎಸ್ ಪಕ್ಷಗಳು ಟಿಕೆಟ್ ಹಂಚಿಕೆಯಲ್ಲಿ ಕುಲಾಲ ಸಮುದಾಯವನ್ನು ಕಡೆಗಣಿಸುತ್ತಲೇ ಬಂದಿದೆ. ಅವಿಭಜಿತ ದ.ಕ ಕ್ಷೇತ್ರದಿಂದ ಬಲಿಷ್ಠ ಬಿಲ್ಲವ, ಬಂಟ ಇಲ್ಲವೇ ಅಲ್ಪಸಂಖ್ಯಾತ ಸಮುದಾಯದ ಅಭ್ಯರ್ಥಿಗಳಿಗೆ ಮತ್ತೆ ಮತ್ತೆ ಮಣೆ ಹಾಕುತ್ತಲೇ ಬಂದಿರುವ ಪಕ್ಷಗಳು ಹಿಂದುಳಿದ ಕುಲಾಲ ಸಮುದಾಯವನ್ನು ಕೇವಲ ಓಟ್ ಬ್ಯಾಂಕಾಗಿ ಉಪಯೋಗಿಸಿಕೊಳ್ಳುತ್ತಿದೆ. ಡಿ.27ರಂದು ನಡೆಯಲಿರುವ ವಿಧಾನ ಪರಿಷತ್ ಚುನಾವಣೆಯಲ್ಲಿ ಅವಿಭಜಿತ ದ.ಕ. ಕ್ಷೇತ್ರದಿಂದ ಪಕ್ಷಗಳು ಕುಂಬಾರ/ಕುಲಾಲ ಸಮುದಾಯದ ಅಭ್ಯರ್ಥಿಗೆ ಟಿಕೆಟ್ ನೀಡುವ ಮೂಲಕ ವರ್ಷಗಳಿಂದ ಆಗುತ್ತಿರುವ ಅನ್ಯಾಯಕ್ಕೆ ತಾರ್ಕಿಕ ಅಂತ್ಯವನ್ನು ನೀಡಬೇಕಾಗಿದೆ.
ಅವಿಭಜಿತ ದ.ಕ. ಕ್ಷೇತ್ರದಲ್ಲಿ ಬಿಜೆಪಿ ಹಾಗೂ ಕಾಂಗ್ರೆಸ್ ಪಕ್ಷದಲ್ಲಿ ಕುಲಾಲ ಸಮುದಾಯದ ಬೆಂಬಲಿಗರು ಸಾಕಷ್ಟು ಸಂಖ್ಯೆಯಲ್ಲಿದ್ದಾರೆ. ಅಲ್ಲದೆ ಸ್ಥಳೀಯಾಡಳಿತ ಚುನಾವಣೆಯಲ್ಲೂ ಈ ಸಮುದಾಯದ ಕಾರ್ಯಕರ್ತರು ಹೆಚ್ಚಿನ ಸಂಖ್ಯೆಯಲ್ಲಿ ಆರಿಸಿ ಬಂದಿದ್ದಾರೆ. ಆದರೆ ಉನ್ನತ ರಾಜಕೀಯ ಸ್ಥಾನಮಾನದ ವಿಚಾರಕ್ಕೆ ಬಂದಾಗ ಕರಾವಳಿಯಲ್ಲಿ ಸರಿಸುಮಾರು ೩ ಲಕ್ಷ ಜನಸಂಖ್ಯೆ ಇರುವ ಕುಲಾಲ ಸಮುದಾಯದ ಸ್ಥಿತಿ ಆಟಕ್ಕುಂಟು ಲೆಕ್ಕಕ್ಕಿಲ್ಲ ಎಂಬಂತಾಗಿದೆ. ರಾಜಕೀಯ ಪಕ್ಷಗಳು ಕುಲಾಲರನ್ನು ಮನೆ ಮನೆಗೆ ಕರಪತ್ರ ಹಂಚಲು, ಪೋಸ್ಟರ್ , ಬ್ಯಾನರ್ ಕಟ್ಟಲು ಮಾತ್ರ ಉಪಯೋಗಿಸಿಕೊಳ್ಳುತ್ತ ಬಂದಿದೆ. ಇನ್ನು ಪ್ರೀತಿ, ವಿಶ್ವಾಸಕ್ಕೆ, ಸಂಘಟನೆಗೆ ತತ್ವನಿಷ್ಠರಾಗಿ ದುಡಿದು ಪ್ರಾಣವನ್ನೇ ಅರ್ಪಿಸಲು ಸಿದ್ಧರಿರುವ ಸಮುದಾಯದ ಯುವಕರನ್ನು ಬಳಸಿಕೊಂಡು ಕೆಲ ಪಕ್ಷಗಳು ತಮ್ಮ ಸಂಘಟನೆಗಳ ಪದಾಧಿಕಾರಿ ಹುದ್ದೆಗಳನ್ನು ನೀಡಿ, ಮುಂಗೈಗೆ ಬೆಣ್ಣೆ ಸವರುವ ಕೆಲಸವನ್ನಷ್ಟೇ ಮಾಡುತ್ತಿದೆ. ಹೀಗಾಗಿ ಪಕ್ಷ ಸಂಘಟನೆ ಹಾಗೂ ಅನಿವಾರ್ಯವಾದಾಗ ರಕ್ತಪಾತಗಳಿಗೆ ಕೊರಳೊಡ್ಡಲು ಮಾತ್ರ ಕುಲಾಲ ಸಮಾಜದ ವ್ಯಕ್ತಿಗಳು ಆ ಪಕ್ಷಗಳಿಗೆ ಅಗತ್ಯ ಎಂಬ ಮಾತನ್ನು ವಿಷಾದದಿಂದಲೇ ಹೇಳಬೇಕಾಗಿದೆ.
ಕರಾವಳಿಯಲ್ಲಿ ಕುಲಾಲ ಸಮುದಾಯದ ಮಟ್ಟಿಗೆ ಅವಕಾಶ ನೀಡುವಲ್ಲಿ ಆಶಾಕಿರಣವಾದ ಬಿಜೆಪಿಯು ವಿಧಾನ ಪರಿಷತ್ ಚುನಾವಣೆಗೆ ಅವಿಭಜಿತ ದ.ಕ ಕ್ಷೇತ್ರದ ಅಭ್ಯರ್ಥಿಯಾಗಿ ಕಳೆದ ಬಾರಿಯಂತೆ ಈ ಸಲವೂ ಕೋಟ ಶ್ರೀನಿವಾಸ ಪೂಜಾರಿಗೆ ಟಿಕೆಟ್ ನೀಡಲು ಉದ್ದೇಶಿಸಿದೆ. ಕಳೆದ ಬಾರಿ ಇವರು ರಾಜ್ಯದಲ್ಲೇ ಪ್ರಥಮ ಎಂಬ೦ತೆ ಅವಿರೋಧವಾಗಿ ಆಯ್ಕೆಯಾಗಿದ್ದರು. ಈ ಬಾರಿ ಮತ್ತೆ ಬಿಲ್ಲವ ಸಮುದಾಯಕ್ಕೆ ಅವಕಾಶ ನೀಡುವುದರ ಬದಲು ಇತರ ಸಮುದಾಯಕ್ಕೂ ಒಂದು ಅವಕಾಶ ನೀಡಬಹುದಿತ್ತು. ಆ ಮುಖಾಂತರ ಸಾಮಾಜಿಕ ನ್ಯಾಯಕ್ಕೆ ಬೆಲೆ ಕೊಡಬಹುದಿತ್ತು. ಆದರೆ ಪಕ್ಷದ ವರಿಷ್ಠರು ಈ ನಿಟ್ಟಿನಲ್ಲಿ ಯೋಚನೆ ಮಾಡುತ್ತಿಲ್ಲ.
ಅತ್ತ ಕಾಂಗ್ರೆಸ್ ಕೂಡಾ ಹಲವು ವರ್ಷಗಳಿಂದ ಕುಲಾಲ ಸಮುದಾಯದವರನ್ನು ಕಡೆಗಣಿಸುತ್ತಲೇ ಬಂದಿದೆ. ನಾಯಕರ ಈ ತುಷ್ಟೀಕರಣ ನೀತಿಯಿಂದಾಗಿಯೇ ಸಮುದಾಯದ ಯುವಕರು ಇತ್ತೀಚೆಗೆ ಈ ಪಕ್ಷದಿಂದ ವಿಮುಖರಾಗುತ್ತಿದ್ದಾರೆ ಎಂಬ ಸಾಮಾನ್ಯ ಪ್ರಜ್ಞೆ ಕೂಡಾ ಪಕ್ಷದ ಮುಖಂಡರಿಗೆ ಇದ್ದಂತಿಲ್ಲ. ಈ ಹಿಂದೆ ನಡೆದ ವಿಧಾನ ಪರಿಷತ್ ಚುನಾವಣೆಯಲ್ಲಿ ಕಾಂಗ್ರೆಸ್ ಬಂಟ ಸಮುದಾಯದಿಂದ ಇಬ್ಬರು, ಕ್ರೈಸ್ತ ಸಮುದಾಯದ ಇಬ್ಬರು, ಮುಸ್ಲಿಂ, ಗೌಡ ಸಾರಸ್ವತ ಹಾಗೂ ಗೌಡ ಸಮಾಜದ ಒಬ್ಬರಿಗೆ ಟಿಕೆಟ್ ನೀಡಿದೆ. ಕರಾವಳಿಯಲ್ಲಿ ಕುಲಾಲ ಸಮಾಜದ ಹೆಚ್ಚಿನ ಜನ ಸಂಖ್ಯೆಯಿದ್ದರೂ ಇವರಿಗೆ ಸೂಕ್ತ ಅವಕಾಶ ನೀಡುತ್ತಿಲ್ಲ. ಪ್ರಸ್ತುತ ವಿಧಾನ ಪರಿಷತ್ ಸದಸ್ಯರಾಗಿರುವ ಕುಂದಾಪುರದ ಪ್ರತಾಪಚಂದ್ರ ಶೆಟ್ಟರು ನಾಲ್ಕು ಬಾರಿ ಶಾಸಕರಾಗಿ, ೨ ಬಾರಿ ವಿಧಾನ ಪರಿಷತ್ ಸದಸ್ಯರಾಗಿ ಆಯ್ಕೆಗೊಂಡವರು. ಈ ಬಾರಿ ಅವರು ಸ್ಪರ್ಧಿಸುವುದಿಲ್ಲ ಎಂದು ಅವಳಿ ಜಿಲ್ಲೆಗಳ ಎಲ್ಲಾ ಜನ ಪ್ರತಿನಿಧಿಗಳಿಗೆ ಅಭಿನಂದನಾ ಪತ್ರವನ್ನೂ ಬರೆದಿದ್ದಾರೆ. ಆದರೂ ಈ ಬಾರಿ ಮತ್ತೆ ಅವರಿಗೆ ಸ್ಪರ್ಧಿಸಲು ಒತ್ತಾಯಿಸಲಾಗುತ್ತಿದೆ ಎಂದರೆ ಉಳಿದ ಸಮಾಜದ ಮುಖಂಡರಿಗೆ ಅಂತಹ ಯೋಗ್ಯತೆ ಇಲ್ಲ ಎಂಬಂತಾಗಲಿಲ್ಲವೇ ?
ಸ್ವಾತಂತ್ರ್ಯಕ್ಕಾಗಿ ಬ್ರಿಟಿಷರ ವಿರುದ್ಧ ಹೋರಾಡಿದ ಹೋರಾಟಗಾರ, ಪಕ್ಷದ ಏಳಿಗೆಗಾಗಿ ಹಗಲಿರುಳು ದುಡಿದ ದಿ. ಅಮ್ಮೆಂಬಳ ಬಾಳಪ್ಪರಂತಹ ಮುತ್ಸದ್ದಿ ನಾಯಕರನ್ನು ಕಡೆಗಣಿಸಿದ ಜೆಡಿಎಸ್ ಇಂದು ಕರಾವಳಿಯಲ್ಲಿ ತನ್ನ ಅಸ್ತಿತ್ವಕ್ಕಾಗಿ ಪರದಾಡುತ್ತಿದೆ. ಬಾಳಪ್ಪರಂತಹವರು ಈ ಪಕ್ಷಕ್ಕೆ ಬಹುದೊಡ್ಡ ಆಸ್ತಿಯಾಗಿದ್ದರು. ಅಂಥವರನ್ನು ಕಡೆಗಣಿಸಿದ ಫಲವೇನು ಎಂಬ ಸಂಗತಿ ಬಹುಶಃ ಆ ಪಕ್ಷಕ್ಕೆ ಈಗ ಅರ್ಥವಾಗಿರಬಹುದು. ಕುಲಾಲ ಸಮುದಾಯ ಬಹುಸಂಖ್ಯೆಯಲ್ಲಿರುವ ಬಂಟ್ವಾಳದಂತಹ ಪ್ರದೇಶದಲ್ಲಿ ಬಾಳಪ್ಪರಿಗೆ ಸೂಕ್ತ ಸ್ಥಾನಮಾನ ನೀಡಿದ್ದರೆ
ಅಲ್ಲಿ ಜೆಡಿಎಸ್ ಇನ್ನಷ್ಟು ಬಲಿಷ್ಠವಾಗುತ್ತಿತ್ತು. ಪ್ರಸ್ತುತ ಕುಲಾಲ ಸಮಾಜದ ಸೌಂದರ್ಯ ರಮೇಶರಂಥವರು ಆ ಪಕ್ಷದಲ್ಲಿ ಗುರುತಿಸಿಕೊಂಡು ಸಂಘಟನೆಗೆ ಪ್ರಯತ್ನಿಸುತ್ತಿದ್ದಾರೆ. ಮುಂದಾದರೂ ಪಕ್ಷ ಎಚ್ಚೆತ್ತುಕೊಳ್ಳಬೇಕಾಗಿದೆ. ಬಾಳಪ್ಪರ ವಂಶದ ಕುಡಿ, ಪಾದರಸದಂತೆ ಓಡಾಡುವ ಯುವ ನಾಯಕ ತೇಜಸ್ವೀರಾಜ್ ರಂಥವರಿಗೆ ಕಾಂಗ್ರೆಸ್ ನಲ್ಲಿ ಸೂಕ್ತ ಅವಕಾಶ ನೀಡಬೇಕಾಗಿದೆ.
ಬಿಜೆಪಿಯಲ್ಲಿ ಗುರುತಿಸಿಕೊಂಡಿರುವ ವೈದ್ಯ, ಪ್ರಾಧ್ಯಾಪಕ, ಕನ್ನಡ ಪರ ಹೋರಾಟಗಾರ, ಸಂಘಟನಾ ಚತುರ ಅಣ್ಣಯ್ಯ ಕುಲಾಲ್ ರಂತವರನ್ನು ಉನ್ನತ ಹುದ್ದೆ ನೀಡುವ ಮೂಲಕ ಪಕ್ಷ ಪರಿಣಾಮಕಾರಿಯಾಗಿ ಬಳಸಿಕೊಳ್ಳಬೇಕು. ಹೀಗೆ ಪಟ್ಟಿ ಮಾಡುತ್ತಾ ಹೋದರೆ ಅವಿಭಜಿತ ಜಿಲ್ಲೆಯಲ್ಲಿ ತಳಮಟ್ಟದಿಂದ ದುಡಿದ ಅರ್ಹತೆಯುಳ್ಳ ನಿಷ್ಠಾವಂತರ ಪಟ್ಟಿ ಬಹಳ ದೊಡ್ಡದಿದೆ.
ಇಂದಿನ ಕಾಲಘಟ್ಟದಲ್ಲಿ ಸಂಘಟಿತ ಹೋರಾಟವಿಲ್ಲದೆ ಯಾವುದೂ ಸುಲಭದಲ್ಲಿ ದಕ್ಕುವುದಿಲ್ಲ. ಹೀಗಾಗಿ ಕುಲಾಲ ಸಮುದಾಯದ ಮುಖಂಡರು ನಮಗೆ ರಾಜಕೀಯ ಪ್ರಾತಿನಿಧ್ಯ ನೀಡಿ ಎಂದು ಸಂದರ್ಭ ಸಿಕ್ಕಾಗಲೆಲ್ಲಾ ಸಭೆ ಸಮಾರಂಭಗಳಲ್ಲಿ ಹಕ್ಕೊತ್ತಾಯಗಳನ್ನು ಮಾಡುತ್ತಲೇ ಬಂದಿದ್ದಾರೆ. ಆದರೆ ಅದು ಯಾವುದೇ ಪರಿಣಾಮ ಬೀರದೇ ಅದು ಅರಣ್ಯರೋದನವೆಂಬಂತಾಗಿದೆಯಲ್ಲದೆ ಈ ಕೂಗು ಸಂಬಂಧಪಟ್ಟವರ ಕಿವಿಗೆ ಬೀಳುತ್ತಿಲ್ಲ. ಕುಲಾಲ ಸಮುದಾಯದಲ್ಲಿ ಪಕ್ಷಗಳಿಗೆ ದೊಡ್ಡ ಮೊತ್ತದ ಫಂಡ್ ನೀಡಬಲ್ಲ ಆರ್ಥಿಕ ಬಲ ಇಲ್ಲದೇ ಇರುವುದನ್ನು ಒಪ್ಪಿಕೊಂಡರೂ ಸಂಘಟನೆ, ಆಡಳಿತ ನಡೆಸುವ ಬುದ್ಧಿವಂತಿಕೆ, ನಾಯಕತ್ವಕ್ಕೆ , ಇಚ್ಛಾಶಕ್ತಿಗೇನೂ ಖಂಡಿತಾ ಕೊರತೆಯಿಲ್ಲ.
ಕಳೆದ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿಯು ಸುರತ್ಕಲ್ ಅಥವಾ ಮೂಡಬಿದ್ರೆ ಕ್ಷೇತ್ರದಲ್ಲಿ ಕಸ್ತೂರಿ ಪಂಜರಂತಹ ಕುಲಾಲ ಸಮಾಜದ ಮುಖಂಡರಿಗೆ ಟಿಕೆಟ್ ನೀಡಬಹುದೆಂದು ಅಂದಾಜಿಸಲಾಗಿತ್ತು. ಈ ಕುರಿತು ಸಮಾಜದ ಮುಖಂಡರಲ್ಲಿ ಚರ್ಚೆಯನ್ನು ನಡೆಸಿದ್ದರೂ ಕೊನೆ ಕ್ಷಣದಲ್ಲಿ ಅವಕಾಶ ಕೈತಪ್ಪಿ, `ಮುಂದಿನ ಬಾರಿ ಗ್ಯಾರಂಟಿ’ ಎಂಬ ಭರವಸೆ ಮಾತುಗಳು ಕೇಳಿ ಬಂತು. ಪ್ರತಿ ಚುನಾವಣೆಯ ಸಂದರ್ಭದಲ್ಲಿಯೂ ಇಂಥಾ ಆಶಾ ಮನೋಭಾವ, ಭರವಸೆಯನ್ನು ಮೂಡಿಸಿ ಪಕ್ಷವು ಬಳಿಕ ಮರೆತು ಬಿಡುತ್ತಿವೆ. ಕನಿಷ್ಠ ನಿಗಮ ಮಂಡಳಿಗಳಿಗೂ ನಾಮನಿರ್ದೇಶನಗೊಳ್ಳುವ ಅವಕಾಶವನ್ನೂ ಪಕ್ಷಗಳು ನಮ್ಮ ಸಮುದಾಯಕ್ಕೆ ನೀಡುತ್ತಿಲ್ಲ. ಇದಕ್ಕೆಲ್ಲಾ ಮುಂದೆ ಬೀದಿಗಿಳಿದು ಹೋರಾಟ ಮಾಡುವ ದುಃಸ್ಥಿತಿ ಬಂದರೂ ಆಶ್ಚರ್ಯವಿಲ್ಲ.
ಎಲ್ಲಾ ಪಕ್ಷಗಳ ವರಿಷ್ಟರು ಒಂದು ವಿಚಾರ ನೆನಪಿಡಬೇಕು. ಕುಲಾಲ ಸಮುದಾಯದವರನ್ನು ಬೇಕಾದಾಗ ಉಪಯೋಗಿಸಿ ಬೇಡವಾದಾಗ ಎಸೆದುಬಿಡುವ ಪ್ರವೃತ್ತಿಯ ರಾಜಕಾರಣಿಗಳಿಗೆ ತಕ್ಕ ಪಾಠ ಕಲಿಸುವಷ್ಟು ತಾಕತ್ತು ನಮ್ಮಲ್ಲಿದೆ. ಕರಾವಳಿಯಲ್ಲಿ ಬಂಟರು ಹಾಗೂ ಬಿಲ್ಲವರನ್ನು ಬಿಟ್ಟರೆ ಚುನಾವಣೆಯಲ್ಲಿ ನಿರ್ಣಾಯಕ ಪಾತ್ರ ವಹಿಸುವಷ್ಟು ಜನಸಂಖ್ಯಾ ಬಾಹುಳ್ಯವನ್ನೂ ಕುಲಾಲ ಸಮುದಾಯ ಹೊಂದಿದೆ.
ದಿನೇಶ್ ಬಂಗೇರ ಇರ್ವತ್ತೂರು



