ಉಡುಪಿ : ಶಬರಿಮಲೆಗೆ ಹೋಗಲೆಂದು ಪ್ರಥಮ ಬಾರಿಗೆ ಮಾಲೆ ಧರಿಸಿದ್ದ ಇಬ್ಬರು ಅಯ್ಯಪ್ಪ ಮಾಲಾ ವೃತಧಾರಿಗಳು ಕರಂಬಳ್ಳಿ ವೆಂಕಟರಮಣ ದೇವಳದ ಕೆರೆಯಲ್ಲಿ ಮುಳುಗಿ ಮೃತಪಟ್ಟ ಘಟನೆ ರವಿವಾರ ಮಧ್ಯಾಹ್ನ ಸಂಭವಿಸಿದೆ.
ಕುಂಜಿಬೆಟ್ಟು ಪಡುಸಗ್ರಿಯ ಕೀರ್ತಿನಗರ ಗೋಪಾಲ ಮೂಲ್ಯ-ಇಂದಿರಾ ದಂಪತಿ ಮಗ ಅಶೋಕ್ ಮೂಲ್ಯ (29) ಮತ್ತು ಕೃಷ್ಣಮೂರ್ತಿ-ವಸಂತಿ ದಂಪತಿ ಮಗ ಉದಯ ಮೂಲ್ಯ (೨೭) ಮೃತಪಟ್ಟವರು. ಇವರು ಪರಸ್ಪರ ಸಂಬಂಧಿಕರಾಗಿದ್ದು ಅವಿವಾಹಿತರು.
ಅಶೋಕ್ ಅವರು ಕಡಿಯಾಳಿಯಲ್ಲಿ ಗಾಡಿ ಕ್ಯಾಂಟೀನ್ ನಡೆಸುತ್ತಿದ್ದರು. ಉದಯ ಅವರು ಮಣಿಪಾಲ ಪ್ರೆಸ್ ನಲ್ಲಿ ಕೆಲಸ ಮಾಡುತ್ತಿದ್ದರು. ಅಶೋಕ್ ಮೂಲ್ಯ ,ಉದಯ ಮೂಲ್ಯ ಹಾಗೂ ಗಣೇಶ ಎಂಬ ಮೂವರು ಸ್ವಾಮಿಗಳು ನ. ೨೯ರ ಭಾನುವಾರ ಮಧ್ಯಾಹ್ನ ಶರಣು ಕರೆಯುವ ಮೊದಲು ಸ್ನಾನ ಮಾಡಲೆಂದು ಕರಂಬಳ್ಳಿ ವೆಂಕಟರಮಣ ದೇವಳದ ಕೆರೆಗೆ ತೆರಳಿದ್ದರು. ಕೆರೆಯ ನೀರಲ್ಲಿದ್ದಾಗ ಅಶೋಕ್ ಅವರು ಕಾಲು ಜಾರಿ ಆಳಕ್ಕೆ ಬಿದ್ದು ರಕ್ಷಣೆಗಾಗಿ ಮೊರೆ ಇಟ್ಟಿದ್ದರು. ಆಗ ಅವರನ್ನು ಹಿಡಿಯಲು ಉದಯ ಅವರು ಮುಂದಕ್ಕೆ ಧಾವಿಸಿದ್ದರು. ಈ ವೇಳೆ ಇಬ್ಬರೂ ಮುಳುಗಿದರು ಎಂದು ಅಲ್ಲಿದ್ದ ಇನ್ನೋರ್ವ ವೃತಧಾರಿ ಗಣೇಶ ಅವರು ವಿವರಿಸಿದ್ದಾಗಿ ಸ್ಥಳೀಯರು ತಿಳಿಸಿದ್ದಾರೆ.
ಸಾರ್ವಜನಿಕರು ಸೇರಿ ಒಬ್ಬರ ಮೃತದೇಹವನ್ನು ಮೇಲಕ್ಕೆತ್ತಿದ್ದರು. ಆದರೆ ಎಷ್ಟು ಹುಡುಕಾಡಿದರೂ ಇನ್ನೊಂದು ದೇಹ ಪತ್ತೆಯಾಗಿರಲಿಲ್ಲ. ಮಧ್ಯಾಹ್ನದ ವೇಳೆಗೆ ಉಡುಪಿ ಅಗ್ನಿಶಾಮಕ ದಳದವರು ಬಂದು ಇನ್ನೊಂದು ಮೃತದೇಹವನ್ನು ಮೇಲಕ್ಕೆ ಎತ್ತಿದ್ದಾರೆ. ಮೃತಪಟ್ಟ ಉದಯ ಅವರಿಗೆ ಸಹೋದರ ಮತ್ತು ಸಹೋದರಿ ಇದ್ದರೆ, ಅಶೋಕ ಅವರಿಗೆ ಇಬ್ಬರು ಸಹೋದರಿಯರು ಇದ್ದಾರೆ.
ಪ್ರಭಾರ ಅಗ್ನಿಶಾಮಕ ಅಧಿಕಾರಿ ಕಿಶೋರ್ ಕುಮಾರ್, ಸುಧೀರ್, ಸಿಬಂದಿಗಳಾದ ನಾಗೇಶ್, ಶ್ರೀಪಾದ ಕವಣೇಕರ್, ಸುಬ್ರಹ್ಮಣ್ಯ ಶೆಟ್ಟಿಗಾರ್, ಹೋಮ್ಗಾರ್ಡ್ ಕೃಷ್ಣ ಅವರು ಕಾರ್ಯಾಚರಣೆಯಲ್ಲಿ ಭಾಗಿಯಾಗಿದ್ದರು. ವಿಷಯ ತಿಳಿದ ಕಂದಾಯ ಸಚಿವರ ಸಂಸದೀಯ ಕಾರ್ಯದರ್ಶಿ, ಶಾಸಕ ಪ್ರಮೋದ್ ಮಧ್ವರಾಜ್ ಅವರು ಅಜ್ಜರಕಾಡು ಜಿಲ್ಲಾಸ್ಪತ್ರೆಯ ಶವಾಗಾರಕ್ಕೆ ತೆರಳಿ ಮೃತದೇಹವನ್ನು ವೀಕ್ಷಿಸಿದರು.
ಚಿತ್ರ ಕೃಪೆ : daijiworld.com