ಉಡುಪಿ(ಕುಲಾಲ್ ವರ್ಲ್ಡ್ ಡಾಟ್ ಕಾಮ್): ಪುತ್ತೂರು ಶಾಸಕ ಆಶೋಕ್ ಕುಮಾರ್ ರೈ ಅವರು ಕಾಪು ಸಮೀಪದ ಕುತ್ಯಾರು ಗ್ರಾಮದ ನಿವಾಸಿ ಸತೀಶ್ ಕುಲಾಲ್ ಮತ್ತು ಸುಜಾತಾ ಕುಲಾಲ್ ದಂಪತಿಯ ಪುತ್ರ ಸಾಕ್ಷಾತ್ ಕುಲಾಲ್ ಅವರ ಪದವಿ ಹಾಗೂ ಉನ್ನತ ಶಿಕ್ಷಣದ ಜವಾಬ್ದಾರಿ ವಹಿಸಿಕೊಳ್ಳುವುದಾಗಿ ಹೇಳಿದ್ದಾರೆ. ಈ ಕುರಿತಂತೆ ಅವರು ತಮ್ಮ ಫೇಸ್ ಬುಕ್ ವಾಲ್ ನಲ್ಲಿ ಹೆಚ್ಚಿನ ಮಾಹಿತಿ ನೀಡಿದ್ದಾರೆ.

ಉಡುಪಿಯ ಆ ಹುಡುಗನ ಕರೆ ಬಂದಿತ್ತು……
ಅವನ ಬದುಕು ಬಂಗಾರವಾಗಲಿ ಅಂತ ಮನ ಬಯಸಿತ್ತು….
ನನಗೆ ಆ ನಿರೀಕ್ಷೆಯಿತ್ತು….. ಸಹಾಯ ಮಾಡಬೇಕೆಂಬ ತೀವ್ರವಾದ ಅಪೇಕ್ಷೆಯೂ ಇತ್ತು….. ಜೊತೆಗೆ ಈ ವಿಚಾರದಲ್ಲಿ ಸ್ವಲ್ಪ ಒತ್ತಡವೂ ಇತ್ತು…! ಯಾಕೆಂದರೆ ಈ ಹುಡುಗನ ವಿಚಾರವಾಗಿ ನಾನು ನನ್ನ ಸಾಮಾಜಿಕ ಜಾಲತಾಣದಲ್ಲಿ ಬರೆದು ಹಂಚಿಕೊಂಡ ಬರಹ ಮತ್ತು ಆ ಹುಡುಗನೊಂದಿಗೆ ನಾನು ತೆಗೆಸಿಕೊಂಡಿದ್ದ ಫೋಟೋ ಅದಾಗಲೇ ವೈರಲ್ ಆಗಿತ್ತು….!
ನನ್ನ ನಿರೀಕ್ಷೆಯಂತೆಯೇ ಆ ಹುಡುಗ ಕರೆ ಮಾಡಿದ…. ಹುಡುಗನ ಮುಂದಿನ ಶಿಕ್ಷಣದ ಬಗ್ಗೆ ನಾನು ಅವನ ಜೊತೆಗೆ ಮಾತಾಡಿದೆ. ಇಂಜಿನಿಯರಿಂಗ್ ಶಿಕ್ಷಣ ಪಡೆಯುವಂತೆ ಸೂಚಿಸಿದೆ… ಮತ್ತು ಅದಕ್ಕೆ ತಗುಲುವ ಸಂಪೂರ್ಣ ವೆಚ್ಚವನ್ನು ಕೂಡಾ ನಾನೇ ಭರಿಸುತ್ತೇನೆ ಅಂತ ಕೂಡಾ ಮಾತುಕೊಟ್ಟೆ…
ಆದರೆ ಆ ಹುಡುಗ ತಾನು ಬಿಕಾಂ ಪದವಿ ಶಿಕ್ಷಣ ಪಡೆಯುವುದಾಗಿ ತನ್ನ ಮನದ ಇಂಗಿತ ವ್ಯಕ್ತಪಡಿಸಿದ. ನಾನು ಕೂಡಾ ಅವನ ಇಚ್ಛೆಗೆ ಸಮ್ಮತಿ ಸೂಚಿಸಿದೆ. ಅವನ ಬಿಕಾಂ ಪದವಿಯ ಜೊತೆಗೆ ಮುಂದಿನ ಉನ್ನತ ಶಿಕ್ಷಣದ ಖರ್ಚು ವೆಚ್ಚವನ್ನೂ ನಾನೇ ನೋಡಿಕೊಳ್ಳುತ್ತೇನೆ ಎಂಬ ಭರವಸೆ ನೀಡಿದೆ. ಆ ಹುಡುಗನ ಜೊತೆಗೆ ಮಾತಾಡಿದ ನಂತರ ಮನಸ್ಸಿಗೆ ಒಂಥರಾ ನಿರಾಳ ಭಾವ…. ನಿನ್ನೆಯಿಂದಲೂ ಮನಸ್ಸಿನ ಮೂಲೆಯಲ್ಲಿ ಎಲ್ಲೋ ಇದ್ದ ಒತ್ತಡವೂ ಸಂಪೂರ್ಣವಾಗಿ ಮಾಯವಾಯಿತು..!
ಸಾಮಾಜಿಕ ಜಾಲತಾಣದಲ್ಲಿ ಈ ಹುಡುಗನ ಕುರಿತಾಗಿ ನಾನು ಬರೆದ ಬರಹವನ್ನು ಹಂಚಿಕೊಂಡ ನನ್ನ ಎಲ್ಲಾ ಅಭಿಮಾನಿಗಳಿಗೂ, ಹಿತೈಷಿಗಳಿಗೂ ನನ್ನ ಹೃದಯಪೂರ್ವಕ ಕೃತಜ್ಞತೆಗಳು…. ಯಾಕೆಂದರೆ ಈ ಮೂಲಕ ಯಾರೂ ಕೂಡಾ ಇಂಥಹ ಸಣ್ಣ ಪುಟ್ಟ ಸಹಾಯಗಳನ್ನು ಮಾಡಿ ನಮ್ಮ ಸುತ್ತಲಿನ ಸಮಾಜಕ್ಕೆ ಅಳಿಲು ಸೇವೆಯನ್ನಾದರೂ ಮಾಡಬಹುದು ಎಂಬ ಒಂದು ಸತ್ಸಂದೇಶವನ್ನು ಹರಡುವ ಕೆಲಸ ಮಾಡಿದ್ದೀರಿ…. ಎಲ್ಲರೂ ತಮ್ಮ ಶಕ್ತ್ಯಾನುಸಾರ ನಮ್ಮ ಸುತ್ತಮುತ್ತಲೇ ಇರುವ ಅರ್ಹ ಅಸಹಾಯಕರಿಗೆ ಮಾಡುವ ಸಹಾಯ ನಾವು ಆ ಪರಮಾತ್ಮನಿಗೆ ಸಲ್ಲಿಸುವ ನಿಜವಾದ ಪೂಜೆ….
ಹಾಗೆಯೇ ನಮ್ಮಿಂದ ಕಿಂಚಿತ್ ಸಹಾಯವನ್ನು ಪಡೆದವರು, ತಮ್ಮ ಕಷ್ಟಗಳನ್ನು ಪರಿಹರಿಸಿಕೊಂಡು ಮುಂದಕ್ಕೆ ತಾವು ಈ ಸಮಾಜದಲ್ಲಿ ನೆಲೆ ಕಂಡುಕೊಂಡ ಮೇಲೆ, ತಾವೂ ಕೂಡಾ ಇತರರಿಗೆ ಇದೇ ರೀತಿಯ ಸಣ್ಣ ಪುಟ್ಟ ಸಹಾಯ ಮಾಡಿದರೆ, ಅದರಿಂದ ಒಂದು ಸದೃಢ, ಸುಭಿಕ್ಷ ಸಮಾಜ ನಿರ್ಮಾಣ ಸಾಧ್ಯ…
ನನ್ನ ಬದುಕಿನ ಉದ್ದೇಶವೂ ಅದೇ… ಈಗ ಈ ಉಡುಪಿಯ ಹುಡುಗನೂ ಒಳ್ಳೆಯ ಶಿಕ್ಷಣ ಪಡೆದು, ಉನ್ನತಾಭ್ಯಾಸವನ್ನೂ ಮಾಡಿ, ಮುಂದಕ್ಕೆ ಸಮಾಜದಲ್ಲಿ ಒಂದು ಉತ್ತಮ ಸ್ಥಾನಮಾನ ಪಡೆದು, ಆ ಬಳಿಕ ತನ್ನಂತೆಯೇ ತೊಂದರೆಯಲ್ಲಿರುವ ಒಂದಷ್ಟು ಹುಡುಗರ ಶಿಕ್ಷಣಕ್ಕೆ ನೆರವಾದರೆ ಅದಕ್ಕಿಂತ ಸಂತೋಷದ ವಿಚಾರವೇನಿದೆ…. ಇಂಥದ್ದೊಂದು ವಿಷಯವನ್ನು ನಾವು ನಮ್ಮ ಸುತ್ತಮುತ್ತಲಿನ ಜನರೊಂದಿಗೆ ಹಂಚಿಕೊಂಡು ಅವರಲ್ಲಿಯೂ ಸ್ಪೂರ್ತಿ ತುಂಬುವ ಕೆಲಸ ಮಾಡಿದರೆ ಸಾಕು ಅಲ್ಲವೇ…?
ಅಶೋಕ್ ಕುಮಾರ್ ರೈ
ಶಾಸಕರು, ಪುತ್ತೂರು ವಿಧಾನಸಭಾ ಕ್ಷೇತ್ರ.

