ಮಂಗಳೂರು : ಹಿರಿಯ ಪತ್ರಕರ್ತ, `ಕುಲಾಲ್ ವರ್ಲ್ಡ್ ಡಾಟ್ ಕಾಂ’ನ ಗೌರವ ಸಂಪಾದಕ ಚಿದಂಬರ ಬೈಕಂಪಾಡಿ ಅವರಿಗೆ ಕರ್ನಾಟಕ ಮಾಧ್ಯಮ ಅಕಾಡೆಮಿಯ 2015ನೇ ಸಾಲಿನ ವಾರ್ಷಿಕ ಪ್ರಶಸ್ತಿಯನ್ನು ಪ್ರದಾನ ಮಾಡಲಾಯಿತು.
ಅನಾರೋಗ್ಯದಿಂದ ಚೇತರಿಸಿಕೊಳ್ಳುತ್ತಿರುವ ಚಿದಂಬರ ಅವರ ಮಂಗಳೂರಿನ ನಿವಾಸಕ್ಕೆ ಅಕಾಡೆಮಿ ಅಧ್ಯಕ್ಷ ಪೊನ್ನಪ್ಪ ನೇತೃತ್ವದ ತಂದ ಭೇಟಿ ನೀಡಿ ಪ್ರಶಸ್ತಿ ಪ್ರದಾನ ಮಾಡಿ ಗೌರವಿಸಿತು.
ಅಕಾಡೆಮಿ ಕಾರ್ಯದರ್ಶಿ ಎಸ್ ಶಂಕರಪ್ಪ, ಕಂಟೀರವ ಸ್ಟುಡಿಯೋ ಅಧ್ಯಕ್ಷೆ ವಿಜಯಲಕ್ಷ್ಮೀ ಅರಸ್, ದ.ಕ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಜಗನ್ನಾಥ ಶೆಟ್ಟಿ ಬಾಳ, ಉಪಾಧ್ಯಕ್ಷ ಸುಕೇಶ್ ಕುಮಾರ್, ಕಲಾವಿದ ಮೈಮ್ ರಾಮದಾಸ್ ಈ ಸಂದರ್ಭ ಉಪಸ್ಥಿತರಿದ್ದರು.
1980 ಮತ್ತು 90ರ ದಶಕದಲ್ಲಿ ` ಮುಂಗಾರು’ ದಿನಪತ್ರಿಕೆಯ ಮೂಲಕ ಪತ್ರಿಕೋದ್ಯಮದಲ್ಲಿ ಭದ್ರವಾಗಿ ನೆಲೆಯೂರಿದ ಚಿದಂಬರ ಬೈಕಂಪಾಡಿ ತಮ್ಮ ಬರವಣಿಗೆ ಮೂಲಕ ಕರಾವಳಿಯ ಸಾಮಾಜಿಕ ತಲ್ಲಣಗಳನ್ನೂ ತೆರೆದಿಟ್ಟವರು.
ಅಕ್ಷರ ಸಂತ ಹರೇಕಳ ಹಾಜಬ್ಬ ಅವರನ್ನು `ಕನ್ನಡಪ್ರಭ’ ಮೂಲಕ ನಾಡಿಗೆ ಪರಿಚಯಿಸಿ ಕೊಟ್ಟವರು. ಇದೇ ಪತ್ರಿಕೆಯಲ್ಲಿ ಪ್ರಕಟವಾಗುತ್ತಿದ್ದ ಹಾಸ್ಯ ಬರಹಗಳಿಗೆ `ಕೋಲ್ಯ’ ಎಂಬ ಕಾಲ್ಪನಿಕ ವ್ಯಕ್ತಿಯನ್ನು ಪರಿಚಯಿಸಿದ್ದು ಚಿದಂಬರ ಬೈಕಂಪಾಡಿ. ದೃಶ್ಯ ಮಾಧ್ಯಮದಲ್ಲೂ ತಮ್ಮದೇ ಛಾಪನ್ನು ಮೂಡಿಸಿರುವ ಅವರು, ಸ್ಥಳೀಯ ವಾಹಿನಿಯಲ್ಲಿ `ಸುದ್ದಿಗೊಂದು ಗುದ್ದು’ ಎಂಬ ಅಂಕಣದಿಂದ ಮನೆ ಮಾತಾಗಿದ್ದರು. `ಮುಂಗಾರು’ ಪತ್ರಿಕೆಯ ಸಂಪಾದಕರಾಗಿದ್ದ ವಡ್ಡರ್ಸೆ ರಘುರಾಮ ಶೆಟ್ಟಿ ಹಾಗೂ ಹಿರಿಯ ಪತ್ರಕರ್ತರಾಗಿದ್ದ ಪ. ಗೋ ಕುರಿತ ಅವರ ಅಂಕಣ ಬರಹಗಳು ಹಾಗೂ ಪುಸ್ತಕಗಳು ಪತ್ರಿಕೋದ್ಯಮದ ವಿದ್ಯಾರ್ಥಿಗಳಿಗೆ ಮಾರ್ಗದರ್ಶಿಗಳಾಗಿವೆ. ಬಂಡಾಯ ಸಾಹಿತ್ಯದಲ್ಲೂ ಕೈಯ್ಯಾಡಿಸಿರುವ ಅವರು, `ಕಪ್ಪು ಹುಡುಗ’ ಕವನ ಸಂಕಲನ ಮತ್ತು ಸಣ್ಣ ಕಥೆಗಳನ್ನೂ ರಚಿಸಿದ್ದಾರೆ.
ಚಿದಂಬರ ಬೈಕಂಪಾಡಿಗೆ ಮಾಧ್ಯಮ ಅಕಾಡೆಮಿ ಪ್ರಶಸ್ತಿ ಪ್ರದಾನ
Kulal news
1 Min Read