ಬೆಂಗಳೂರು(ಕುಲಾಲ್ ವರ್ಲ್ಡ್ ಡಾಟ್ ಕಾಮ್): ಯುರೋಪಿಯನ್ ಕಮಿಷನ್, ಶಿಕ್ಷಣ ಮತ್ತು ಡೈರೆಕ್ಟರ್ ಜನರಲ್ ವತಿಯಿಂದ `ಮೂಲ ಮತ್ತು ಜೀವನದ ವಿಕಸನ’ ಕ್ಕೆ ಕೇಂದ್ರೀಕರಿಸಿದ ಸಂಶೋಧನಾ ಪ್ರಸ್ತಾಪಕ್ಕಾಗಿ ಪೆರ್ಡೂರು ಬೈರಂಪಳ್ಳಿಯ ಡಾ. ಕೆ. ವಿ ಸಂದೀಪ್ ಕುಲಾಲ್ ಅವರನ್ನು ಅಂತಾರಾಷ್ಟ್ರೀಯ ಮಟ್ಟದ `ಮೇರಿ ಕ್ಯೂರೋ ಫೆಲೋಶಿಪ್’ ಗಾಗಿ ಆಯ್ಕೆ ಮಾಡಲಾಗಿದೆ.
ಈ ಫೆಲೋಶಿಪ್ ಗಾಗಿ ಪ್ರಪಂಚದಾದ್ಯಂತ ಸಾವಿರಾರು ಸಂಶೋಧಕರು ಅರ್ಜಿ ಸಲ್ಲಿಸಿದ್ದು, ಇವರಲ್ಲಿ ಆಯ್ಕೆಯಾದ ಹದಿನೇಳು ಮಂದಿ ಪೋಸ್ಟ್ ಡಾಕ್ರ್ಟಾಲ್ ಅಭ್ಯರ್ಥಿಗಳಲ್ಲಿ ಸಂದೀಪ್ ಕುಲಾಲ್ ಕೂಡಾ ಒಬ್ಬರಾಗಿದ್ದಾರೆ. ಅದರಂತೆ ಪ್ರಸ್ತುತ ಇವರು ನೆದರ್ ಲ್ಯಾಂಡ್ ನ ಲೈಡೆನ್ ವಿಶ್ವವಿದ್ಯಾಲಯದಲ್ಲಿ ತಮ್ಮ ಸಂಶೋಧನಾ ಕಾರ್ಯವನ್ನು ಆರಂಭಿಸಿದ್ದಾರೆ.
ನೊಬೆಲ್ ಪಡೆದ ಮೊದಲ ಮಹಿಳೆ ಹಾಗೂ ವಿಭಿನ್ನ ಕ್ಷೇತ್ರಗಳಲ್ಲಿ ಸಂಶೋಧನೆಗಾಗಿ ಎರಡು ನೊಬೆಲ್ ಪಡೆದ ಜಗತ್ತಿನ ಮೊದಲ ವಿಜ್ಞಾನಿ ಮೇರಿ ಕ್ಯೂರಿ ಅವರ ಹೆಸರಿನಲ್ಲಿ ಅತೀ ಪ್ರತಿಭಾವಂತ ಸಂಶೋಧಕರಿಗೆ ಯುರೋಪಿಯನ್ ಒಕ್ಕೂಟದ ವತಿಯಿಂದ ನೀಡಲಾಗುವ ಈ ಫೆಲೋಶಿಪ್ ಅತೀ ಪ್ರತಿಷ್ಠಿತ ಎಂದು ಪರಿಗಣಿಸಲಾಗಿದೆ. ಕುಲಾಲ ಸಾಧಕನೊಬ್ಬ ಇಂಥ ಫೆಲೋಶಿಪ್ ಪುರಸ್ಕೃತರಾಗಿರುವುದು ಸಮುದಾಯಕ್ಕೆ ಮಾತ್ರವಲ್ಲದೆ ನಾಡಿಗೇ ಹೆಮ್ಮೆಯ ಸಂಗತಿ.
ಪರಿಚಯ :
ಡಾ. ಕೆ. ವಿ ಸಂದೀಪ್ ಕುಲಾಲ್ ಅವರು ತಿರುವನಂತಪುರದ ಸಿಎಸ್ ಐ ಆರ್ -ಎನ್ ಐ ಐ ಎಸ್ಟಿ (National Institute for Interdisciplinary Science and Technology (NIIST)ಸಂಸ್ಥೆಯಲ್ಲಿ ಫಂಕ್ಷನಲ್ ಫುಲ್ಲರೀನ್ಸ್ ಆಂಡ್ ಡಿಎನ್ ಎ ಸೆಲ್ಫ್- ಎಸೇಂಬ್ಲಿ (functional fullerenes and dna self assembly) ಎಂಬ ವಿಷಯದ ಬಗ್ಗೆ ಮಂಡಿಸಿದ ಪ್ರಬಂಧಕ್ಕೆ ಪಿಎಚ್ ಡಿ ಪದವಿ ಪಡೆಡಿದ್ದಾರೆ. ಅಲ್ಲದೆ ಈ ಹಿಂದೆ ಚೀನದ ಶಾಂಘೈ ನಲ್ಲಿರುವ ಶಾಂಘೈ ಜಿಯಾವೋ ಟಾಂಗ್ (Shanghai Jiao Tong University) ವಿಶ್ವವಿದ್ಯಾಲಯದಲ್ಲಿ `ಡಿಎನ್ಎ ನ್ಯಾನೋ ಮೆಟೀರಿಯಲ್ಸ್’ ಕುರಿತಾದ ಸಂಶೋಧನೆ ನಡೆಸಲು ಪೋಸ್ಟ್ ಡಾಕ್ಟರಲ್ ಫೆಲೋಶಿಪ್ ಪಡೆಡಿದ್ದಾರೆ.
ಉಡುಪಿ ಜಿಲ್ಲೆಯ ಪೆರ್ಡೂರಿನ ಸಮೀಪದ ಬೈರಂಪಳ್ಳಿ ನಡಿಬೆಟ್ಟು ವಿಠಲ ಮೂಲ್ಯ ಹಾಗೂ ಗುಲಾಬಿ ದಂಪತಿಯ ಸುಪುತ್ರನಾಗಿರುವ ಸಂದೀಪ್, ಪೆರ್ಡೂರಿನಲ್ಲಿ ಪ್ರೌಢಶಾಲಾ ಶಿಕ್ಷಣ, ಹಿರಿಯಡಕ ಸರಕಾರಿ ಕಾಲೇಜಿನಲ್ಲಿ ಪದವಿಪೂರ್ವ ಶಿಕ್ಷಣ, ಉಡುಪಿ ಎಂಜಿಎಂ ಕಾಲೇಜಿನಲ್ಲಿ ಬಿಎಸ್ಸಿ ಪದವಿ ಮತ್ತು ಮಂಗಳೂರು ವಿಶ್ವವಿದ್ಯಾಲಯದಲ್ಲಿ ರಸಾಯನ ಶಾಸ್ತ್ರ ವಿಭಾಗದಲ್ಲಿ ಎರಡನೇ ರ್ಯಾಂಕ್ ನೊಂದಿಗೆ ಎಂಎಸ್ಸಿ ಪದವಿ ಪಡೆದಿದ್ದಾರೆ.
(ಮಾಹಿತಿ : ಡಾ. ಆನಂದ ಕುಲಾಲ್, ಅಸೋಸಿಯೇಟ್ ಪ್ರೊಫೆಸರ್, PPISR ಬೆಂಗಳೂರು)