ಉಡುಪಿ : ಯಕ್ಷಗಾನ ಕಲೆ-ಕಲಾವಿದರ ಕ್ಷೇಮಚಿಂತನೆಗೆ ಶ್ರಮಿಸುತ್ತಿರುವ ಉಡುಪಿ ‘ಯಕ್ಷಗಾನ ಕಲಾರಂಗ’ ದ ಅನೇಕ ಕಾರ್ಯ ಚಟುವಟಿಕೆಗಳಲ್ಲಿ ಪ್ರಶಸ್ತಿ ಪ್ರದಾನ ಸಮಾರಂಭಕ್ಕೆ ವಿಶಿಷ್ಟ ಮಹತ್ವವಿದೆ. ಒಂದೇ ವೇದಿಕೆಯಲ್ಲಿ ಹದಿನೆಂಟು ಪ್ರಶಸ್ತಿಗಳು ಪ್ರದಾನವಾಗಲಿದ್ದು, ಕುಲಾಲ ಸಮಾಜದ ಇಬ್ಬರು ಕಲಾವಿದರು ಈ ಬಾರಿ ಪ್ರಶಸ್ತಿಗೆ ಆಯ್ಕೆಯಾಗಿದ್ದಾರೆ. ಗಾವಳಿ ಶೀನ ಕುಲಾಲ್ ಮತ್ತು ದಾಸನಡ್ಕ ರಾಮ ಕುಲಾಲ್ ಪ್ರಶಸ್ತಿಗೆ ಆಯ್ಕೆಯಾದವರು.
ಕೋಟ ವೈಕುಂಠ ಸ್ಮರಣಾರ್ಥ ಗಾವಳಿ ಶೀನ ಕುಲಾಲ್ ಹಾಗೂ ಪಡಾರು ನರಸಿಂಹ ಶಾಸ್ತ್ರಿ ಸ್ಮರಣಾರ್ಥ ದಾಸನಡ್ಕ ರಾಮ ಕುಲಾಲ್ ‘ಯಕ್ಷಗಾನ ಕಲಾರಂಗ ಪ್ರಶಸ್ತಿ’ ಪಡೆಯಲಿದ್ದಾರೆ. ವಿವಿಧ ಗಣ್ಯರ ಸ್ಮರಣಾರ್ಥ ಮತ್ತು ಗೌರವಾರ್ಥ ಸ್ಥಾಪಿಸಲಾದ ರೂ. 10000/- ನಗದು ಪುರಸ್ಕಾರದ ‘ಯಕ್ಷಗಾನ ಕಲಾರಂಗ’ ಪ್ರಶಸ್ತಿಯನ್ನು ನೀಡಿ ಗೌರವಿಸಲಾಗುವುದು. ಒಟ್ಟು 16 ಯಕ್ಷ ಕಲಾವಿದರು ಪ್ರಶಸ್ತಿ ಸ್ವೀಕರಿಸಲಿದ್ದಾರೆ.
ನವೆಂಬರ್ 22, ಭಾನುವಾರ ಸಂಜೆ 5.00 ಗಂಟೆಗೆ ಉಡುಪಿಯ ಶ್ರೀಕೃಷ್ಣ ಮಠದ ರಾಜಾಂಗಣದಲ್ಲಿ ಪರ್ಯಾಯ ಕಾಣಿಯೂರು ಮಠಾಧೀಶರಾದ ವಿದ್ಯಾವಲ್ಲಭತೀರ್ಥ ಶ್ರೀಪಾದರ ಅಧ್ಯಕ್ಷತೆಯಲ್ಲಿ ನಡೆಯಲಿರುವ ಈ ಸಮಾರಂಭದಲ್ಲಿ ಪೇಜಾವರ ಮಠಾಧೀಶರಾದ ವಿಶ್ವೇಶತೀರ್ಥ ಶ್ರೀಪಾದರು ಪ್ರಶಸ್ತಿ ಪ್ರದಾನ ಮಾಡಲಿದ್ದು ಪೇಜಾವರ ಮಠದ ವಿಶ್ವಪ್ರಸನ್ನತೀರ್ಥ ಶ್ರೀಪಾದರು ಅನುಗ್ರಹ ಸಂದೇಶ ನೀಡಲಿದ್ದಾರೆ.
ಕರ್ನಾಟಕ ಬ್ಯಾಂಕಿನ ಜನರಲ್ ಮೆನೇಜರ್ ರಾಘವೇಂದ್ರ ಭಟ್ ಎಂ. ಸಂಸ್ಥೆಯ ವಾರ್ಷಿಕ ಸಂಚಿಕೆ ‘ಕಲಾಂತರಂಗ’ ಬಿಡುಗಡೆ ಮಾಡಲಿದ್ದಾರೆ. ದೀರ್ಘಕಾಲ ಸಂಸ್ಥೆಯ ಉಪಾಧ್ಯಕ್ಷರಾಗಿ ಸೇವೆ ಸಲ್ಲಿಸಿದ ಹಿರಿಯ ಶಿಕ್ಷಣತಜ್ಞ ಪ್ರೊ| ಜಿ. ಆರ್. ರೈ ಅವರ ಕುರಿತ ಪರಿಚಯಾತ್ಮಕ ಪುಸ್ತಕ ‘ಗತ್ತಿಲ್ಲದ ಗುತ್ತಿನವರು’ ಪುಸ್ತಕವನ್ನು ದುಬೈಯಲ್ಲಿ ಉದ್ಯಮಿಯಾಗಿರುವ ಸತೀಶ್ ವೆಂಕಟರಮಣ ಅನಾವರಣಗೊಳಿಸಲಿದ್ದಾರೆ. ಭಟ್ಕಳದ ‘ಯಕ್ಷ ರಕ್ಷ’ ದ ಅಧ್ಯಕ್ಷರಾದ ಡಾ. ಐ. ಆರ್. ಭಟ್ ಶುಭಾಶಂಸನೆ ಮಾಡಲಿದ್ದು ಪ್ರೊ| ಜಿ. ಆರ್. ರೈ ಸಂಸ್ಮರಣ ಭಾಷಣ ನಡೆಸಿಕೊಡಲಿದ್ದಾರೆ.