ಮಂಗಳೂರು(ಕುಲಾಲ್ ವರ್ಲ್ಡ್ ಡಾಟ್ ಕಾಮ್): 2022-23 ನೇ ಸಾಲಿನ ದೇವರಾಜ ಅರಸು ಪ್ರಶಸ್ತಿ ಘೋಷಣೆಯಾಗಿದೆ. ರಾಜ್ಯ ಸರ್ಕಾರ ದಕ್ಷಿಣ ಕನ್ನಡ ಜಿಲ್ಲೆಯ ಡಾ. ಅಣ್ಣಯ್ಯ ಕುಲಾಲ್ ಅವರಿಗೆ ಪ್ರಶಸ್ತಿ ಘೋಷಣೆ ಮಾಡಿದೆ. ಆಗಸ್ಟ್ 20ರಂದು ವಿಧಾನಸೌಧದ ಬ್ಯಾಂಕ್ವೆಟ್ ಹಾಲ್ನಲ್ಲಿ ಆಯೋಜಿಸಲಾದ ಕಾರ್ಯಕ್ರಮದಲ್ಲಿ ಪ್ರಶಸ್ತಿ ನೀಡಲಾಗಿದೆ. ಕರ್ನಾಟಕ ರಾಜ್ಯದ ಮಾಜಿ ಮುಖ್ಯ ಮಂತ್ರಿಗಳಾದ ಡಿ.ದೇವರಾಜ ಅರಸುರವರ ಜನ್ಮದಿನಾಚರಣೆಯನ್ನು ಪ್ರತಿ ವರ್ಷ ಆಗಸ್ಟ್ 20 ರಂದು ಆಚರಿಸಲಾಗುತ್ತಿದ್ದು, ಅದರಂತೆ 2022-23 ನೇ ಸಾಲಿನಲ್ಲಿ ಆಗಸ್ಟ್ 20ರಂದು ಡಿ.ದೇವರಾಜ ಅರಸುರವರ 107ನೇ ಜನ್ಮ ದಿನಾಚರಣೆಯನ್ನು ಆಚರಿಸಲಾಗುತ್ತಿದೆ.
ಈ ಸಂದರ್ಭದಲ್ಲಿ ಹಿಂದುಳಿದ ವರ್ಗಗಳ ಶ್ರೇಯೋಭಿವೃದ್ದಿಗೆ ಶ್ರಮಿಸಿರುವ ವ್ಯಕ್ತಿ/ಸಂಘ ಸಂಸ್ಥೆಗಳಿಗೆ ರಾಜ್ಯ ಮಟ್ಟದಲ್ಲಿ ಡಿ ದೇವರಾಜ ಅರಸು ಪ್ರಶಸ್ತಿಯನ್ನು ನೀಡಲಾಗುತ್ತಿದೆ. ಸದ್ಯ ಈ ವರ್ಷದ ಈ ಪ್ರಶಸ್ತಿಗೆ ಡಾ. ಅಣ್ಣಯ್ಯ ಕುಲಾಲ್ ಆಯ್ಕೆಯಾಗಿದ್ದಾರೆ. ಈ ಪ್ರಶಸ್ತಿಯು ರೂ.5.00 ಲಕ್ಷ ನಗದು ಹಾಗೂ ಪ್ರಶಸ್ತಿ ಪತ್ರ ಒಳಗೊಂಡಿದೆ. ರಾಜ್ಯಮಟ್ಟದಲ್ಲಿ ಡಿ.ದೇವರಾಜ ಅರಸುರವರ ಜನ್ಮದಿನಾಚರಣೆಯನ್ನು ಅರ್ಥಪೂರ್ಣವಾಗಿ ಮೂರು ದಿನಗಳ ಕಾಲ ಆಚರಿಸಲಾಗುತ್ತದೆ. ಆಗಸ್ಟ್ 20ರಂದು ಬೆಳ್ಳಿಗೆ 10.00 ಗಂಟೆಗೆ ಮುಖ್ಯಮಂತ್ರಿಗಳು ವಿಧಾನಸೌಧದ ಪಶ್ಚಿಮ ದ್ವಾರದಲ್ಲಿರುವ ಡಿ.ದೇವರಾಜ ಅರಸುರವರ ಪ್ರತಿಮೆಗೆ ಮಾಲಾರ್ಪಣೆ ನೆರವೇರಿಸಲಿದ್ದಾರೆ. ಬಳಿಕ ವಿಧಾನಸೌಧದ ಬ್ಯಾಂಕ್ವೆಟ್ ಹಾಲ್ನಲ್ಲಿ ಬೆಳ್ಳಿಗೆ 10.30 ಗಂಟೆಗೆ ಸಾರ್ವಜನಿಕ ಸಮಾರಂಭವನ್ನು ಆಯೋಜಿಸಲಾಗಿದೆ. ಕಾರ್ಯಕ್ರಮದಲ್ಲಿ ಮುಖ್ಯಮಂತ್ರಿಗಳನ್ನೊಳಗೊಂಡಂತೆ ವಿವಿಧ ಇಲಾಖೆಗಳ ಸಚಿವರು ಹಾಗೂ ನಾಡಿನ ಇತರೆ ಗಣ್ಯರು ಭಾಗವಹಿಸಲಿದ್ದಾರೆ.