ಬೆಳ್ತಂಗಡಿ(ಕುಲಾಲ್ ವರ್ಲ್ಡ್ ಡಾಟ್ ಕಾಮ್) : ಬೆಳ್ತಂಗಡಿ ತಾಲೂಕು ಮೂಲ್ಯರ ಯಾನೆ ಕುಂಬಾರರ ಸೇವಾ ಸಂಘ ಇದರ ನೂತನ ಸಮುದಾಯ ಭವನಕ್ಕೆ ಬೆಳ್ತಂಗಡಿ ಕ್ಷೇತ್ರದ ಶಾಸಕ ಹರೀಶ್ ಪೂಂಜ ಅವರು ಮಂಜೂರುಗೊಳಿಸಿದ ರೂ.1.50 ಕೋಟಿ ಅನುದಾನವನ್ನು ವಿನಿಯೋಗಿಸುವ ಬಗ್ಗೆ `ಕಟ್ಟಡ ಸಮಿತಿ ರಚನೆ’ ಸಭೆಯು ಮೇ 1ರಂದು ಗುರುವಾಯನಕೆರೆ ಕುಲಾಲ ಮಂದಿರದಲ್ಲಿ ಜರುಗಿತು.
ಕಾರ್ಯಕ್ರಮವನ್ನು ದೀಪ ಬೆಳಗಿಸಿ ಉದ್ಘಾಟಿಸಿದ ಶಾಸಕ ಹರೀಶ್ ಪೂಂಜ ಅವರು ಮಾತನಾಡಿ, ಬೆಳ್ತಂಗಡಿ ಕ್ರೀಡಾಂಗಣದಲ್ಲಿ ನಡೆದ ಹಕ್ಕೋತ್ತಾಯ ಸಮಾವೇಶದಲ್ಲಿ ನಾನು ಸಭಾ ಭವನ ನಿರ್ಮಾಣಕ್ಕೆ ಮಾಡಿದ ಘೋಷಣೆಯನ್ನು ಈಡೇರಿಸಿದ್ದೇನೆ. ನನ್ನ ಬೇಡಿಕೆಯನ್ನು ಹಿಂದಿನ ಮುಖ್ಯಮಂತ್ರಿಯವರಾದ ಯಡಿಯೂರಪ್ಪ ಅವರ ಮುಂದಿಟ್ಟಾಗ ತಕ್ಷಣ ಸ್ಪಂದಿಸಿ ಅವರು ರೂ.1.50 ಕೋಟಿ ಮಂಜೂರುಗೊಳಿಸಿದ್ದಾರೆ ಎಂದು ತಿಳಿಸಿದರು.
ಸಮುದಾಯ ಭವನ ಕುಲಾಲ ಸಮಾಜಕ್ಕೆ ಶಕ್ತಿ ತುಂಬುವ ಭವನವಾಗಲಿದೆ. ಪ್ರಥಮವಾಗಿ ಇದರ ನಿರ್ಮಾಣಕ್ಕೆ ಜಾಗದ ಅಗತ್ಯತೆ ಇದೆ. ಇದನ್ನು ಖರೀದಿಸಿ, ಸಂಘದ ಹೆಸರಿಗೆ ಮಾಡುವ ಕಾರ್ಯ ಆಗಬೇಕು. ಇದರ ಕಾಮಗಾರಿ ಮುಂದಿನ ಜನವರಿ-ಫೆಬ್ರವರಿಯಲ್ಲಿ ಪೂರ್ತಿಯಾಗಿ ಉದ್ಘಾಟನೆಗೊಳ್ಳಬೇಕು ಎಂಬುದು ನನ್ನ ಬಯಕೆಯಾಗಿದೆ. ಈ ನಿಟ್ಟಿನಲ್ಲಿ ತಾಲೂಕು ಕುಲಾಲ ಸಂಘದ ಅಧ್ಯಕ್ಷರು ಮತ್ತು ಪದಾಧಿಕಾರಿಗಳು ಪ್ರಯತ್ನಿಸಬೇಕು ಎಂದು ತಿಳಿಸಿದರು.
ತಾಲೂಕಿನಲ್ಲಿ ಸುಮಾರು ೮ ಸಾವಿರ ಕುಲಾಲ-ಕುಂಬಾರ ಕುಟುಂಬಗಳಿದ್ದು, ಪ್ರತಿ ಮನೆಯವರು ಇದಕ್ಕೆ ಸಹಕಾರ ನೀಡಬೇಕು. ಮುಂದಿನ ದಿನಗಳಲ್ಲಿ ಈ ಸಮುದಾಯ ಭವನದಿಂದ ಬರುವ ಆದಾಯ ಕುಲಾಲ ಸಮಾಜದ ಶ್ರೇಯೋಭಿವೃದ್ಧಿಗೆ ಬಳಕೆಯಾಗಬೇಕು, ಸಮಾಜದ ಬಡ ಕುಟುಂಬದ ಮಕ್ಕಳ ಶಿಕ್ಷಣ, ಮನೆ ನಿರ್ಮಾಣ, ಆರೋಗ್ಯ ಸೇವಾ ಕಾರ್ಯಗಳಿಗೆ ವಿನಿಯೋಗವಾಗಬೇಕು ಎಂದು ಸಲಹೆ ನೀಡಿದರು.
37 ಸೆಂಟ್ಸ್ ಜಾಗ ಖರೀದಿ:
ಅಧ್ಯಕ್ಷತೆ ವಹಿಸಿದ್ದ ಸಂಘದ ಅಧ್ಯಕ್ಷ ಹರೀಶ್ ಕಾರಿಂಜ ಅವರು ಮಾತನಾಡಿ, ಬೆಳ್ತಂಗಡಿಯಲ್ಲಿ ನಡೆದ ಹಕ್ಕೋತ್ತಾಯ ಸಭೆಯಲ್ಲಿ ನೀಡಿದ ಭರವಸೆಯನ್ನು ಈಡೇರಿಸಿದ್ದಾರೆ. ಕುಲಾಲ ಮಂದಿರ ನವೀಕರಣಕ್ಕೆ ಈ ಹಿಂದೆ ರೂ. 5 ಲಕ್ಷ, ಮತ್ತೋಮ್ಮೆ 25 ಲಕ್ಷ ನೀಡಿದ್ದಾರೆ. ನಮ್ಮ ಸಂಘ ಮತ್ತು ಸಮಾಜಕ್ಕೆ ವಿವಿಧ ರೀತಿಯಲ್ಲಿ ಸಹಕಾರ ನೀಡುತ್ತಿರುವ ಶಾಸಕ ಹರೀಶ್ ಪೂಂಜರಿಗೆ ತಾಲೂಕಿನ ಸಮಸ್ತ ಕುಲಾಲ-ಕುಂಬಾರ ಬಾಂಧವರ ಪರವಾಗಿ ಕೃತಜ್ಞತೆ ಸಲ್ಲಿಸುವುದಾಗಿ ತಿಳಿಸಿದರು. ಈಗಿರುವ ಕುಲಾಲ ಮಂದಿರವನ್ನು ಉಳಿಸಿಕೊಂಡು ಪ್ರತ್ಯೇಕವಾಗಿ ಸಮುದಾಯ ಭವನ ನಿರ್ಮಿಸಲು ಕುಲಾಲ ಮಂದಿರದ ಸಮೀಪವೇ 37ಸೆಂಟ್ಸ್ ಜಾಗವನ್ನು ಗುರುತಿಸಲಾಗಿದೆ. ಇದನ್ನು ಖರೀದಿಸಬೇಕಾದರೆ ರೂ.70 ಲಕ್ಷ ಬೇಕಾಗಿದೆ. ಇದಕ್ಕೆ ಸಮಾಜ ಬಾಂಧವರು ಸಂಪೂರ್ಣ ಸಹಕಾರ ನೀಡಬೇಕು ಎಂದು ಕರೆ ನೀಡಿದರು.
ಸಾಧಕರಿಗೆ ಸನ್ಮಾನ:
ಈ ಸಂದರ್ಭದಲ್ಲಿ ಕುಲಾಲ ಸಮುದಾಯ ಭವನ ನಿರ್ಮಾಣ ಕೈ ಸರ್ಕಾರ ರಿಂದ ರೂಂ.1.50 ಕೋಟಿ ಅನುದಾನ ಮಂಜೂರು ಗೊಳಿಸಿದ ಶಾಸಕ ಹರೀಶ್ ಪೂಂಜ ಇವರನ್ನು ಸಂಘದ ವತಿಯಿಂದ ಗೌರವಿಸಲಾಯಿತು. ಸಮಾಜದ ಸಾಧಕರಾದ ಮಂಗಳೂರು ವಿ.ವಿ.ಯಿಂದ ಡಾಕ್ಟೇರೆಟ್ ಪದವಿ ಪಡೆದ ಡಾ. ಅಭಿನಂದನ್ ಕುಲಾಲ್, ಸಿ.ಎ ಪದವಿ ಪಡೆದ ಅಭಿನಯ ಕುಲಾಲ್, ನರೇಗಾ ಯೋಜನೆ ಅನುಷ್ಠಾನದಲ್ಲಿ ರಾಜ್ಯ ಪ್ರಶಸ್ತಿ ಪುರಸ್ಕೃತರಾದ ಮೋಹನ್ ಬಂಗೇರ ಇವರನ್ನು ಸಂಘದ ವತಿಯಿಂದ ಶಾಸಕರು ಶಾಲು ಹೊದಿಸಿ, ಸ್ಮರಣಿಕೆ ನೀಡಿ ಗೌರವಿಸಿದರು. ಈ ಸಂದರ್ಭದಲ್ಲಿ ನೂತನ ಕಟ್ಟಡ ಸಮಿತಿ ಅಧ್ಯಕ್ಷರಾಗಿ ಆಯ್ಕೆಯಾದ ಸೋಮಯ್ಯ ಮೂಲ್ಯ ಅನ್ಯೆನಡೆ, ಪ್ರಧಾನ ಕಾರ್ಯದರ್ಶಿ ಜಗನ್ನಾಥ್, ಕೋಶಾಧಿಕಾರಿ ಯತೀಶ್ ಸಿರಿಮಜಲು ಇವರನ್ನು ಅಭಿನಂದಿಸಲಾಯಿತು.
ವೇದಿಕೆಯಲ್ಲಿ ಸಮಾಜದ ಹಿರಿಯರಾದ ಗೋವಿಂದ ಮೂಲ್ಯ, ಕುವೆಟ್ಟು ಗ್ರಾ.ಪಂ ಅಧ್ಯಕ್ಷೆ ಆಶಾಲತಾ, ಯುವ ವೇದಿಕೆ ಜಿಲ್ಲಾ ಕಾರ್ಯದರ್ಶಿ ಲೋಕೇಶ್ ಕುಲಾಲ್, ಯುವ ವೇದಿಕೆ ತಾಲೂಕು ಅಧ್ಯಕ್ಷ ಉಮೇಶ್ ಕುಲಾಲ್, ವೇಣೂರು ಗ್ರಾ.ಪಂ ಅಧ್ಯಕ್ಷ ನೇಮಯ್ಯ ಮೂಲ್ಯ ಉಪಸ್ಥಿತರಿದ್ದರು. ವಂಶಿಕ ಇವರ ಪ್ರಾರ್ಥನೆ ಬಳಿಕ ಅಧ್ಯಕ್ಷ ಹರೀಶ್ ಕಾರಿಂಜ ಸ್ವಾಗತಿಸಿದರು. ಪುಷ್ಪರಾಜ್ ಲಾಯಿಲ ಕಾರ್ಯಕ್ರಮ ನಿರೂಪಿಸಿ, ಕಟ್ಟಡ ಸಮಿತಿ ಪ್ರಧಾನ ಕಾರ್ಯದರ್ಶಿ ಜಗನ್ನಾಥ್ ವಂದಿಸಿದರು.