ಗುರುಪುರ(ಕುಲಾಲ್ ವರ್ಲ್ಡ್ ಡಾಟ್ ಕಾಮ್) : ಗ್ರಾಮಾಡಳಿತ, ಹಿರಿಯ ನಾಗರಿಕರು, ಉದ್ಯಮಿಗಳು, ಸಂಘ-ಸoಸ್ಥೆಗಳು, ಸಮಾನ ಮನಸ್ಕರು ಹಾಗೂ ಹಿತೈಷಿ ಬಂಧುಗಳ ನೆರವಿನಿಂದ ವಿಜಯವಾಣಿ' ಪತ್ರಿಕೆ ಮತ್ತು
ದಿಗ್ವಿಜಯ’ ಚಾನೆಲ್ ಹಮ್ಮಿಕೊಂಡಿರುವ ಬಡ ಕುಟುಂಬಕ್ಕೆ `ಮನೆ ಕಟ್ಟೋಣ ಅಭಿಯಾನ’ವು ಈ ಬಾರಿ ಕುಪ್ಪೆಪದವು ಪಂಚಾಯತ್ ವ್ಯಾಪ್ತಿಯ ನಿವಾಸಿ, ರಾಜೀವ ಕುಲಾಲ್ ಬಡ ಕುಟುಂಬದತ್ತ ಮುಖ ಮಾಡಿದೆ.
ಏಳು ವರ್ಷದ ಹಿಂದೆ ಸೆಂಟ್ರಿoಗ್ ಕೆಲಸ ಮಾಡುತ್ತಿದ್ದಾಗ ಕಬ್ಬಿಣದ ತುಂಡೊoದು ಕಣ್ಣಿಗೆ ಬಿದ್ದಿದ್ದು, ಆಗ ಒಂದು ಕಣ್ಣಿನ ದೃಷ್ಟಿ ಕಳೆದುಕೊಂಡಿದ್ದ ಕುಲಾಲ್ ಈಗ ಎರಡೂ ಕಣ್ಣಿನ ದೃಷ್ಟಿಹೀನರಾಗಿದ್ದಾರೆ. ಜೀವನೋಪಾಯಕ್ಕಾಗಿ ಪತ್ನಿ ಭಾರತಿ ಕುಪ್ಪೆಪದವು ಮರೀನ್ ಕಾಲೇಜಿನ ಮೆಸ್ನಲ್ಲಿ ಕೆಲಸ ಮಾಡುತ್ತಿದ್ದರೆ, ದಂಪತಿಗೆ ದಿವ್ಯಾಶ್ರೀ ಎಂಬ ಪುಟ್ಟ ಮಗುವೊಂದಿದ್ದು, ದಾನಿಗಳ ನೆರವಿನಿಂದ ಕುಪ್ಪೆಪದವಿನಲ್ಲಿ ಶಾಲೆಯ ಮುಖ ಕಂಡಿದ್ದಾಳೆ.
ದೃಷ್ಟಿ ಕಳೆದುಕೊಂಡ ಮೇಲೆ ರಾಜೀವರು ಕುಪ್ಪೆಪಪದವಿನಲ್ಲಿ ಮಡಕೆ ಮಾರಾಟದ ಸಣ್ಣ ಅಂಗಡಿಯೊoದು ಇಟ್ಟುಕೊಂಡಿದ್ದು, ಕಣ್ಣು ಕಾಣದ ಇವರಿಗೆ ವ್ಯಾಪಾರದ ವೇಳೆ ಗ್ರಾಹಕರೇ ಮಾನವೀಯ ನೆಲೆಯಲ್ಲಿ ಸಹಕರಿಸುತ್ತಿದ್ದಾರೆ. ಅಂಗಡಿ ತೆರೆಯುವಲ್ಲಿ ಸ್ಥಳೀಯ ಮುಸ್ಲಿಂ ಸಂಘಟನೆ ಹಾಗೂ ಇತರ ಸಮಾನ ಮನಸ್ಕರು ಸಹಕರಿಸಿದ್ದಾರೆಂದು ರಾಜೀವ್ ಕುಟುಂಬ ಹೇಳುತ್ತದೆ.
ಸ್ವಂತ ಮನೆ ಇಲ್ಲದ ರಾಜೀವ್ ದಂಪತಿ ತಮ್ಮ ಮಗುವಿನೊಂದಿಗೆ ಕುಪ್ಪೆಪದವಿನಲ್ಲಿ ಬಾಡಿಗೆ ಮನೆಯೊಂದರಲ್ಲಿ ವಾಸಿಸುತ್ತಿದ್ದಾರೆ. ಇವರ ದಯನೀಯ ಸ್ಥಿತಿ ಕಂಡು ವಿಜಯವಾಣಿ ಪತ್ರಿಕೆ ಹಾಗೂ ದಿಗ್ವಿಜಯ ಚಾನೆಲ್ ಪ್ರತಿನಿಧಿಗಳು ಇತ್ತೀಚೆಗೆ ಕುಪ್ಪೆಪದವು ಗ್ರಾಮ ಪಂಚಾಯತ್ ಅಧ್ಯಕ್ಷ ಡಿ ಪಿ ಹಮ್ಮಬ್ಬ ಹಾಗೂ ಪಿಡಿಒ ಸವಿತಾ ಮಂದೋಲಿಕರ್ ಅವರನ್ನು ಸಂಪರ್ಕಿಸಿ ಬಡ ಕುಟುಂಬಕ್ಕೆ ಮನೆ ನಿರ್ಮಿಸಿ ಕೊಡುವ ಬಗ್ಗೆ ಚರ್ಚಿಸಿದರು. ಜೊತೆಗೆ ಉದ್ಯಮಿಗಳಾದ ಜಗದೀಶ್ ಕುಲಾಲ್ ಪಾಕಜೆ, ಪೃಥ್ವಿರಾಜ್, ಪಂಚಾಯತ್ ಸದಸ್ಯರು, ಸ್ಥಳೀಯ ಸಂಘ-ಸoಸ್ಥೆಗಳು, ಇತರ ಉದ್ಯಮಿಗಳು ಹಾಗೂ ಸಮಾನ ಮನಸ್ಕರೊಂದಿಗೆ ನೆರವಿನ ಹಸ್ತಕ್ಕಾಗಿ ಸಮಾಲೋಚಿಸಲಾಗಿದ್ದು, ಎಲ್ಲರಿಂದಲೂ ಸಕಾರಾತ್ಮಕ ಪ್ರತಿಕ್ರಿಯೆ ಲಭಿಸಿದೆ.
ಡಿ ಪಿ ಹಮ್ಮಬ್ಬ ಅವರು ತನ್ನ ವೈಯಕ್ತಿಕ ಆಸಕ್ತಿಯಿಂದ ಈಗಾಗಲೇ ಪಂಚಾಯತ್ ವ್ಯಾಪ್ತಿಯಲ್ಲಿ ಸರ್ಕಾರಿ ಸ್ವಾಮ್ಯದ ಸಣ್ಣ ಜಾಗ ಗುರುತಿಸಿ, ಜಾಗ ಸಮತಟ್ಟು ಮಾಡಿಕೊಟ್ಟಿರುವುದಲ್ಲದೆ, ಪಂಚಾಯತ್ ಹಾಗೂ ವೈಯಕ್ತಿಕ ನೆಲೆಯಲ್ಲಿ ಸಕಲ ನೆರವಿನ ಭರವಸೆ ನೀಡಿದ್ದಾರೆ.
ಎ. ೨ರಂದು ಯುಗಾದಿಯಂದು ಸ್ಥಳೀಯ ಅರ್ಚಕರಾದ ಐ ಕೃಷ್ಣ ಭಟ್ಟರ ನೇತೃತ್ವದಲ್ಲಿ ಮನೆಗೆ ಶಿಲಾನ್ಯಾಸ(ಕೆಸರು ಕಲ್ಲು ಹಾಕುವುದು) ನಡೆಸಲಾಗಿದೆ. ಈ ಸಂದರ್ಭದಲ್ಲಿ ರಾಜೀವ್ ದಂಪತಿ, ಪುತ್ರಿ ದಿವ್ಯಾಶ್ರೀ, ಕುಟುಂಬಿಕರು, ಡಿ ಪಿ ಹಮ್ಮಬ್ಬ, ಪಂಚಾಯತ್ ಸದಸ್ಯ ಶರೀಫ್ ಕಜೆ, ಹಿರಿಯ ನಾಗರಿಕರು, ಹಿತೈಷಿಗಳು ಉಪಸ್ಥಿತರಿದ್ದರು. ಮನೆ ನಿರ್ಮಾಣಕ್ಕೆ ಅಗತ್ಯವಿರುವ ಕಿಟಿಕಿ, ಬಾಗಿಲು ನೀಡುವುದಾಗಿ ಶರೀಫ್ ಕಜೆ ಪ್ರಕಟಿಸಿದರು. ಸ್ಥಳೀಯ ಕಟ್ಟಡ ಗುತ್ತಿಗರೆದಾರ ವಿನೋದ್ ಕುಮಾರ್ ಅಂಬೆಲೊಟ್ಟು ಅವರು ಮನೆ ನಿರ್ಮಿಸಿ ಕೊಡುವ ಜವಾಬ್ದಾರಿ ಹೊತ್ತಿದ್ದಾರೆ. ಈ ಅಭಿಯಾನದಲ್ಲಿ ಈಗಾಗಲೇ ಹಲವರು ಕೈಜೋಡಿಸುಲು ಮುಂದೆ ಬಂದಿದ್ದಾರೆ.
ಈ ಅಭಿಯಾನಕ್ಕೆ ಕುಪ್ಪೆಪದವಿನ ಸರ್ವ ನಾಗರಿಕರ ಸಹಕಾರ ಅತ್ಯಗತ್ಯ. ಹೀಗಿದ್ದರೆ ಮಾತ್ರ ದೃಷ್ಟಿಹೀನ ರಾಜೀವರ ಕುಟುಂಬವು ಭವಿಷ್ಯದಲ್ಲಾದರೂ, ಮನೆ ಮಕ್ಕಳೊಂದಿಗೆ ನೆಮ್ಮದಿಯ ಜೀವನ ಸಾಗಿಸಲು ಸಾಧ್ಯವಿದೆ. ಎಲ್ಲರ ಸಹಕಾರದೊಂದಿಗೆ ನಿರ್ಮಾಣಗೊಳ್ಳಲಿರುವ ಬಡ ಕುಟುಂಬದ ಮನೆಗೆ ನಾವೂ-ನೀವೂ ಕೈಲಾದ ಸಹಾಯ ಮಾಡೋಣ. ಅವರ ಪುಟ್ಟ ಕುಟುಂಬಕ್ಕೆ ಆಶಾಕಿರಣವಾಗಿ ಕೈಲಾದ ಸೇವೆ ಮಾಡೋಣ. ಇದು ನಮ್ಮ-ನಿಮ್ಮೆಲ್ಲರ ಹಾರೈಕೆಯಾಗಲಿ. ರಾಜೀವ ಕುಲಾಲರ ಸಂಪರ್ಕ ಸಂಖ್ಯೆ : 8970996506.
ಬರಹ : ಧನಂಜಯ ಗುರುಪುರ