ಉಡುಪಿ(ಕುಲಾಲ ವರ್ಲ್ಡ್ ಡಾಟ್ ಕಾಮ್) : ಹಿರಿಯಡ್ಕ ಪೊಲೀಸ್ ಠಾಣೆಯ ವ್ಯಾಪ್ತಿಯ ಕುಕ್ಕೆಹಳ್ಳಿ ಎಂಬಲ್ಲಿ ಆರೋಗ್ಯ ಇಲಾಖೆಯ ವೈದ್ಯರ ಸೋಗಿನಲ್ಲಿ ಬಂದು ದಿನಗೂಲಿ ಗಳಾಗಿರುವ ಕ್ಯಾನ್ಸರ್ ರೋಗಿಗಳಿಂದ ಸಾವಿರಾರು ರೂ. ಹಣ ಲಪಟಾಯಿಸಿ ಪ್ರಕರಣ ಬೆಳಕಿಗೆ ಬಂದಿದೆ. ವಂಚನೆಗೆ ಒಳಗಾಗಿರುವ ಈ ಕುಟುಂಬಕ್ಕೆ ನ್ಯಾಯ ಒದಗಿಸುವ ನಿಟ್ಟಿನಲ್ಲಿ ಉಡುಪಿಯ ಮಾನವ ಹಕ್ಕುಗಳ ರಕ್ಷಣಾ ಪ್ರತಿಷ್ಟಾನ ಸರ್ವ ಪ್ರಯತ್ನ ನಡೆಸುತ್ತಿದೆ.
ಉಡುಪಿ ಕುಂಜಿಬೆಟ್ಟು ಕಾನೂನು ಮಹಾವಿದ್ಯಾಲಯದಲ್ಲಿ ಕರೆದ ಸುದ್ದಿ ಗೋಷ್ಠಿಯಲ್ಲಿ ಪ್ರತಿಷ್ಠಾನದ ಅಧ್ಯಕ್ಷ ಡಾ.ರವೀಂದ್ರನಾಥ್ ಶಾನುಭಾಗ್ ಈ ವಿಚಾರದ ಕುರಿತು ಮಾಹಿತಿ ನೀಡಿದರು. ಕುಕ್ಕೆಹಳ್ಳಿಯ ಕೂಲಿ ಕಾರ್ಮಿಕ ಸುಬ್ಬಣ್ಣ ಕುಲಾಲ್ (66) ಹಾಗೂ ಬೇಬಿ ಕುಲಾಲ್(55) ವಂಚನೆಗೆ ಒಳಗಾಗಿರುವ ದಂಪತಿ. ಇವರಿಗೆ ಒಂಬತ್ತನೇ ತರಗತಿಯಲ್ಲಿ ಕಲಿಯುತ್ತಿರುವ ಒಬ್ಬ ಮಗಳಿದ್ದಾಳೆ.
ಸುಮಾರು 4 ವರ್ಷಗಳ ಹಿಂದೆ ಬೇಬಿಗೆ ಕ್ಯಾನ್ಸರ್ ಕಾಯಿಲೆಗೆ ತುತ್ತಾಗಿದ್ದರು. 2019ರಲ್ಲಿ ಮಂಗಳೂರಿನ ವೆನ್ಲಾಕ್ ಆಸ್ಪತ್ರೆಯಲ್ಲಿ ಶಸ್ತ್ರ ಚಿಕಿತ್ಸೆಗೊಳಗಾಗಿದ್ದರು. 2022ರ ಫೆ.5ರಂದು ಮನೆಯಲ್ಲಿ ಬೇಬಿ ಒಬ್ಬರೇ ಇದ್ದಾಗ ಅಪರಿಚಿತರಿಬ್ಬರು ಬೈಕ್ನಲ್ಲಿ ಬಂದು, ನಾವು ಕರ್ನಾಟಕ ಸರಕಾರದ ಆರೋಗ್ಯ ಇಲಾಖೆಯಿಂದ ಬಂದಿರುವ ವೈದ್ಯ ಎಂದು ಪರಿಚಯಿಸಿಕೊಂಡರು. ನಿಮ್ಮ ಕ್ಯಾನ್ಸರ್ ಕಾಯಿಲೆಗೆ ಇನ್ನೂ ಮೂರು ಇಂಜಕ್ಷನ್ಗಳನ್ನು ನೀಡಬೇಕಾಗಿದೆ ಎಂದು ಇಲಾಖೆಗೆ ಸೂಚನೆ ಬಂದಿದೆ. ಇದರಿಂದ ನೀವು ಈಗಾಗಲೇ ಅನುಭವಿಸುತ್ತಿರುವ ನೋವು ಸಂಪೂರ್ಣವಾಗಿ ದೂರವಾಗಲಿದೆಂದು ನಂಬಿಸಿದರು.
ಸದ್ಯ ಸರಕಾರಿ ಪಾರ್ಮಸಿಯಲ್ಲಿ ಈ ಔಷಧಿಯ ಸ್ಟಾಕ್ ಮುಗಿದಿರುವುದರಿಂದ, ಅದು ಬರುವ ತನಕ ಕೊಂಚ ತಡವಾಗಬಹುದು. ಅದಕ್ಕಾಗಿ ಮಂಗಳೂರಿನ ಕೆಲವು ಖಾಸಗಿ ಪಾರ್ಮಸಿಗಳಿಂದ ನಾವೇ ಈ ಔಷಧಿ ತಂದು ನೀಡುತ್ತೇವೆ, ಅದಕ್ಕಾಗಿ ಒಟ್ಟು 18ಸಾವಿರ ರೂ. ವೆಚ್ಚವಾಗುತ್ತದೆ ಎಂದಿದ್ದರು. ವಂಚಕ ವೈದ್ಯರ ಮೇಲೆ ಸಂಪೂರ್ಣ ನಂಬಿಕೆಯನ್ನು ಬೆಳೆಸಿಕೊಂಡಿದ್ದ ಬೇಬಿ, ತಮ್ಮಲ್ಲಿದ್ದ ಹಣ ಸಂಗ್ರಹಿಸಿ ಹಾಗೂ ಸಾಲ ಮಾಡಿಕೊಂಡು ಒಟ್ಟು 18ಸಾವಿರ ರೂ. ಹಣವನ್ನು ಅವರಿಗೆ ನೀಡಿದರು.
ಇಂದೇ ಔಷಧಿ ತರುತ್ತೇವೆ ಎಂದು ಹೇಳಿ ಅವರಿಬ್ಬರು ಅಲ್ಲಿಂದ ಪರಾರಿಯಾದರು. ತಾವು ಮೋಸ ಹೋಗಿರಬಹುದೆಂದು ಶಂಕಿಸಿದ ದಂಪತಿ, ಕುಟುಂಬದ ವೈದ್ಯೆ ಡಾ.ಸುಮ ಶಶಿಕಿರಣ ಶೆಟ್ಟಿ ಅವರಿಗೆ ಮಾಹಿತಿ ತಿಳಿಸಿದರು. ಹಣ ಪಡೆದುಕೊಂಡವರು ನಕಲಿ ವೈದ್ಯರು ಎಂಬುದು ಇವರಿಗೆ ಮನದಟ್ಟು ಆಯಿತು. ಈ ಬಗ್ಗೆ ಪ್ರತಿಷ್ಠಾನವನ್ನು ಸಂಪರ್ಕಿಸಿದ ಇವರು, ತಕ್ಷಣವೇ ಹಿರಿಯಡ್ಕ ಪೊಲೀಸ್ ಠಾಣೆಗೆ ದೂರು ನೀಡಿದರು. ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಕಳೆದ ಒಂದು ತಿಂಗಳಿಂದ ಈ ಬಗ್ಗೆ ತನಿಖೆ ನಡೆಸುತ್ತಿದ್ದಾರೆ ಎಂದು ಡಾ.ಶಾನುಭಾಗ್ ತಿಳಿಸಿದರು.
ʼʼಕೇವಲ ಕೂಲಿ ಆಧಾರದಿಂದಲೇ ದಿನ ಕಳೆಯುತ್ತಿರುವ ಈ ಕುಟುಂಬ ತಾನು ಈಗಾಗಲೇ ತೆಗೆದುಕೊಂಡಿರುವ 18 ಸಾವಿರ ರೂ.ಸಾಲವನ್ನು ತೀರಿಸುವುದು ಹೇಗೆ ಎಂಬ ಚಿಂತೆಯಲ್ಲಿ ಮುಳುಗಿದೆ. ಸುಬ್ಬಣ್ಣ ದಂಪತಿಗೆ ಆಗಿರುವ ಮೋಸ ಇನ್ನಾರಿಗೂ ಆಗಬಾರದು. ಆ ನಿಟ್ಟಿನಲ್ಲಿ ಸಾರ್ವಜನಿಕರು ಇಂತಹ ಮೋಸ ಗಾರರ ಬಗ್ಗೆ ಎಚ್ಚರ ವಹಿಸಬೇಕು. ಕೆಲ ಸಮಯದ ಹಿಂದೆ ಉಪ್ಪಿನಂಗಡಿಯ ಗೋಳಿತೊಟ್ಟುವಿನ ಜನಾರ್ದನ ಗೌಡ ಎಂಬವರ ಎಂಡೋಸಲ್ಫಾನ್ ಸಂತ್ರಸ್ತ ಮಗನಿಗೆ ಅಮೆರಿಕಾದಿಂದ ಆಮದು ಮಾಡಿರುವ ಇಂಜಕ್ಷನ್ ನೀಡುವುದಾಗಿ ನಂಬಿಸಿ 20 ಸಾವಿರ ರೂ. ಪಡೆದು ಮೋಸ ಮಾಡಲಾಗಿತ್ತು” ಎಂದು ಡಾ.ರವೀಂದ್ರನಾಥ್ ಶಾನ್ಬಾಗ್ ತಿಳಿಸಿದ್ದಾರೆ.