ಉಡುಪಿ(ಕುಲಾಲ್ ವರ್ಲ್ಡ್ ಡಾಟ್ ಕಾಮ್) : ಐದು ದಶಕಗಳಿಂದ ಯಕ್ಷಗಾನ ರಂಗದಲ್ಲಿ ವಿಜೃಂಭಿಸಿದ್ದ, ಬಡಗು ತಿಟ್ಟಿನ ಹಿರಿಯ ವೇಷಧಾರಿ ಅನಂತ ಕುಲಾಲ (66 ವರ್ಷ) ಅವರು ಇತ್ತೀಚೆಗೆ ಕುಂದಾಪುರದ ಮೊಳಹಳ್ಳಿಯಲ್ಲಿ ನಿಧನರಾದರು.
ಕಳೆದ ಆರು ತಿಂಗಳಿನಿಂದ ಅಸೌಖ್ಯದಲ್ಲಿದ್ದ ಇವರು ಅ.12ರಂದು ತಡರಾತ್ರಿ ಕುಂದಾಪುರ ತಾಲೂಕಿನ ಮೊಳಹಳ್ಳಿಯಲ್ಲಿ ಕೊನೆಯುಸಿರೆಳೆದರು. ಅನಂತ ಕುಲಾಲ್ ಅವರು ಉಡುಪಿ ಯಕ್ಷಗಾನ ಕೇಂದ್ರದಲ್ಲಿ ಗುರು ವೀರಭದ್ರ ನಾಯಕರಲ್ಲಿ ಯಕ್ಷಗಾನ ಕುಣಿತ ಆಭ್ಯಾಸ ಮಾಡಿ, ಹಳ್ಳಾಡಿ ಮಂಜಯ್ಯ ಶೆಟ್ಟಿ ಮತ್ತು ಹಳ್ಳಾಡಿ ಕೃಷ್ಣರಲ್ಲಿ ಮಾತುಗಾರಿಕೆ, ರಂಗತಂತ್ರ ಕಲಿತು ಪ್ರೌಢ ಪುರುಷ ವೇಷಧಾರಿಯಾಗಿ ರೂಪುಗೊಂಡವರು. ಅಮೃತೇಶ್ವರೀ, ಹಿರಿಯಡಕ, ಸಾಲಿಗ್ರಾಮ, ಪೆರ್ಡೂರು, ಹಾಲಾಡಿ, ಮಾರಣಕಟ್ಟೆ ಮೇಳಗಳಲ್ಲಿ ಸುಮಾರು ಐದು ದಶಕಗಳ ಕಾಲ ವೈವಿಧ್ಯಮಯ ವೇಷಗಳನ್ನು ಮಾಡುತ್ತಾ ಕಲಾಭಿಮಾನಿಗಳ ಮೆಚ್ಚುಗೆಗೆ ಪಾತ್ರರಾಗಿದ್ದರು. ಕೇವಲ ಮಾರಣಕಟ್ಟೆ ಮೇಳವೊಂದರಲ್ಲಿ ನಾಲ್ಕು ದಶಕಗಳ ಕಾಲ ಕಲಾಸೇವೆಗೈದಿದ್ದರು. ಕಳೆದ ವರ್ಷ ಯಕ್ಷಗಾನ ಕಲಾರಂಗವು ಡಾ. ಬಿ. ಬಿ. ಶೆಟ್ಟಿ ಸ್ಮರಣಾರ್ಥ ‘ಯಕ್ಷಗಾನ ಕಲಾರಂಗ ಪ್ರಶಸ್ತಿ’ ನೀಡಿ ಅವರನ್ನು ಸಮ್ಮಾನಿಸಿತ್ತು. ಕಳೆದ ತಿಂಗಳು ಎಂ. ಎಂ. ಹೆಗಡೆ ಪ್ರಶಸ್ತಿಯನ್ನು ಪಿ. ಕಿಶನ್ ಹೆಗ್ಡೆಯವರ ನೇತೃತ್ವದಲ್ಲಿ ಅವರ ಮನೆಯಲ್ಲೇ ನೀಡಿ ಗೌರವಿಸಲಾಗಿತ್ತು. ಇವರು ಪತ್ನಿ, ನಾಲ್ವರು ಪುತ್ರರು ಹಾಗೂ ಅಪಾರ ಅಭಿಮಾನಿಗಳನ್ನು ಅಗಲಿದ್ದಾರೆ. ಅವರ ನಿಧನಕ್ಕೆ ಯಕ್ಷಗಾನ ಕಲಾರಂಗದ ಅಧ್ಯಕ್ಷ ಎಮ್. ಗಂಗಾಧರ ರಾವ್, ಕಾರ್ಯದರ್ಶಿ ಮುರಲಿ ಕಡೆಕಾರ್ ಹಾಗೂ ಅವರ ಅಭಿಮಾನಿ ಬಳಗ ಸಂತಾಪ ವ್ಯಕ್ತ ಪಡಿಸಿದೆ.