ಮಂಗಳೂರು(ಕುಲಾಲ್ ವರ್ಲ್ಡ್ ಡಾಟ್ ಕಾಮ್): ವಿಚಾರ ವಿನಿಮಯದ ಚಿಂತನೆಯ ಮೂಸೆಯಲ್ಲಿ ಅರಳಿರುವ `ಕ್ಲಬ್ ಹೌಸ್’ ಎಂಬ ಸಾಮಾಜಿಕ ಜಾಲತಾಣವನ್ನು ಕಾಡು ಹರಟೆಗೆ ಬಳಸಿಕೊಳ್ಳುವವರ ಮಧ್ಯೆ, ಇಂಥ ಒಂದು ಉತ್ತಮ ವೇದಿಕೆಯನ್ನು ಜ್ಞಾನಾರ್ಜನೆಗೆ, ವಿಚಾರ ವಿನಿಮಯಕ್ಕೆ, ಸಮಾಜ ಹಿತಕ್ಕೆ ಹೇಗೆ ಬಳಸಿಕೊಳ್ಳಬಹುದು ಎಂಬುದಕ್ಕೆ `ಕುಲಾಲ್ ವರ್ಲ್ಡ್’ ಸಾಕ್ಷಿಯಾಗಿದೆ. ಇದು ಕ್ಲಬ್ ಹೌಸ್ ನಲ್ಲಿ `ಕುಲಾಲ ಸಮುದಾಯದ ಹಿನ್ನೆಲೆ ಮತ್ತು ಇತಿಹಾಸ’ ಎಂಬ ವಿಷಯವನ್ನಿಟ್ಟುಕೊಂಡು ನಡೆಸಿದ ಮೊದಲ ಸಂವಾದ ಕಾರ್ಯಕ್ರಮದಲ್ಲಿ ನೂರಾರು ಮಂದಿ ಭಾಗವಹಿಸಿ ವಿಚಾರ ವಿನಿಮಯ ಮಾಡಿಕೊಂಡರು.
ಜೂ ೩೦ರಂದು ಸಂಜೆ ೭ ಗಂಟೆಯಿಂದ ಆರಂಭವಾದ ಚರ್ಚೆಯಲ್ಲಿ ದೇಶ ವಿದೇಶಗಳ ನಾನಾ ಭಾಗದಲ್ಲಿ ನೆಲೆಸಿರುವ ಕುಲಾಲ ಸಮಾಜದ ಮಿತ್ರರು ವಿಚಾರ ವಿನಮಯಗಳ ಕೂಡಲ ಸಂಗಮವಾಗಿರುವ ಕ್ಲಬ್ ಹೌಸ್ ನಲ್ಲಿ ಮೂರೂವರೆ ತಾಸಿಗೂ ಹೆಚ್ಚು ಕಾಲ ತೊಡಗಿಸಿಕೊಂಡು ಚರ್ಚೆ ನಡೆಸಿದರು. `ಕುಲಾಲ್ ವರ್ಲ್ಡ್ ಡಾಟ್ ಕಾಮ್’ ನ ಸಂಪಾದಕ ದಿನೇಶ್ ಬಂಗೇರ ಇರ್ವತ್ತೂರು ಇವರ ಮುತುವರ್ಜಿಯಲ್ಲಿ ನಡೆದ ಸಂವಾದದಲ್ಲಿ ಬೆಳ್ತಂಗಡಿ ಕುಲಾಲ ಸಂಘದ ಅಧ್ಯಕ್ಷ ಹರೀಶ್ ಕಾರಿಂಜ, ಬೆಹರೈನ್ ಕುಲಾಲ ಸಮಾಜದ ಪ್ರಮುಖರಾದ ಗಣೇಶ್ ಕುಲಾಲ್ ಮಾಣಿಲ, ಸಂಶೋಧಕರಾದ ಶಂಕರ ಕುಂಜತ್ತೂರು, ದೈವ ಸೇವಕ ಸುನಿಲ್ ಕುಲಾಲ್ ಕೃಷ್ಣಾಪುರ, ಉಡುಪಿ ಕುಲಾಲ ಯುವ ವೇದಿಕೆ ಅಧ್ಯಕ್ಷ ಸತೀಶ್ ಕುಲಾಲ್ ನಡೂರು, ಪೆರ್ಡೂರು ಕುಲಾಲ ಸಂಘದ ಗಣೇಶ್ ಕುಲಾಲ್ ಪಕ್ಕಾಲ್, ಬಂಟ್ವಾಳ ಕುಲಾಲ ಸಂಘದ ಜಲಜಾಕ್ಷಿ ಕುಲಾಲ್, ಮುಂಬಯಿ ಕುಲಾಲ ಸಂಘದ ರೇಣುಕಾ ಸಾಲ್ಯಾನ್ , ಉಪನ್ಯಾಸಕ ಜೀವನ್ ರಾಜ್ ಕುತ್ತಾರ್ ಹಾಗೂ ಕುಲಾಲ್ ವರ್ಲ್ಡ್ ವಾಟ್ಸಾಪ್ ಬಳಗದ ಹೇಮಂತ್ ಕುಮಾರ್ ಕಿನ್ನಿಗೋಳಿ, ರಾಕೇಶ್ ಕೊಣಾಜೆ, ರಂಜಿತ್ ಕುಮಾರ್, ಕಿರಣ್ ಅಟ್ಲೂರು ಮೊದಲಾದವರು ಭಾಗವಹಿಸಿದರು. ಇದೇ ವೇಳೆ ಕೇಳುಗರಾಗಿ ಭಾಗವಹಿಸಿದ್ದ ಪತ್ರಕರ್ತ, ಮಂಜೇಶ್ವರ ಜಿಲ್ಲಾ ಪಂಚಾಯತ್ ಸದಸ್ಯ ಹರ್ಷದ್ ವರ್ಕಾಡಿ, ಸಂಶೋಧಕರಾದ ಪ್ರಕಾಶ್ ಮಾರ್ಪಾಡಿ ಹಾಗೂ ಚರಣ್ ಐವರ್ನಾಡ್ ಅವರು ಕುಲಾಲ ಸಮಾಜದ ಹಿನ್ನೆಲೆ ಕುರಿತು ತಮಗೆ ತಿಳಿದ ಮಾಹಿತಿ ವಿನಿಮಯ ಮಾಡಿಕೊಂಡರು.