ಬೀದರ್(ಕುಲಾಲ್ ವರ್ಲ್ಡ್ ಡಾಟ್ ಕಾಮ್): ‘ಅಪ್ಪ ಬ್ರಶ್ ಹಿಡಿದು ಚಿತ್ರ ಬಿಡಿಸಲು ಕೂತರೆ ಮನೆ ಮಂದಿಯ ಚಿತ್ತ ಅವರತ್ತ ಇರುತಿತ್ತು. ಚಿತ್ರಗಳ ಮೇಲೆ ಅವರು ತುಂಬುತ್ತಿದ್ದ ಬಣ್ಣ ಕಂಡು ಖುಷಿಯಾಗುತಿತ್ತು. ಅಪ್ಪ ಕೋವಿಡ್ನಿಂದ ನೆನಪಿನ ರೂಪದಲ್ಲಿ ಚಿತ್ರಗಳನ್ನು ಬಿಟ್ಟು ಹೋದರು. ಚಿತ್ರಗಳು ಕ್ಷಣಕ್ಷಣಕ್ಕೂ ಅವರನ್ನು ನೆನಪಿಸುವಂತೆ ಮಾಡುತ್ತಿವೆ…’
‘ತಂದೆ ಅಂಜಪ್ಪ ಮಾಣಿಕಪ್ಪ ಕುಂಬಾರ ಬೀದರ್ ಜಿಲ್ಲೆಯ ಹುಲಸೂರಿನ ಶ್ರೀ ವೀರಭದ್ರೇಶ್ವರ ಶಿಕ್ಷಣ ಸಂಸ್ಥೆಯಲ್ಲಿ ಚಿತ್ರಕಲಾ ಶಿಕ್ಷಕರಾಗಿದ್ದರು. ಅವರು ನಮ್ಮನ್ನೆಲ್ಲ ಬಿಟ್ಟು ಹೋಗಿದ್ದು ನೋವುಂಟು ಮಾಡಿದೆ. ಅಪ್ಪನ ಕೊರಗಿನಲ್ಲಿ ಅವ್ವ ಮುಳುಗಿದ್ದಾಳೆ. ಈಗ ಅವರೇ ನಮಗೆ ಸರ್ವಸ್ವ’ ಎಂದು ಹುಲಸೂರಿನ ಪ್ರಣವ್ ಕುಂಬಾರ ನೊಂದು ನುಡಿದರು.
‘ತಂದೆಯವರು ಚಿತ್ರಕಲೆಯಲ್ಲಿ ಪದವೀಧರರಾದರೂ ಉಪ ಜೀವನಕ್ಕೆ ಹಲವು ಅಂಗಡಿಗಳಿಗೆ ನಾಮಫಲಕ ಬರೆಯುತ್ತಿದ್ದರು. ಮದುವೆ ಮುಂಜಿವೆಗಳ ಸಂದರ್ಭದಲ್ಲಿ ಮನೆಗಳಿಗೆ ಬಣ್ಣಗಳ ಚಿತ್ತಾರ ಮೂಡಿಸಿ ಕುಟುಂಬ ನಿರ್ವಹಿಸುತ್ತಿದ್ದರು. ಏಪ್ರಿಲ್ 30ರಂದು ಅವರು ಕೊನೆಯುಸಿರೆಳೆದರು. ಅದು ನಮ್ಮ ಪಾಲಿನ ಕರಾಳ ದಿನ’ ಎಂದು ತಿಳಿಸಿದರು.
‘ಸರ್ಕಾರಿ ಅಧಿಕಾರಿಯಾಗಲಿ ಎಂದು ನನ್ನನ್ನು ಹಾಗೂ ನನ್ನ ತಮ್ಮ ಪ್ರಜ್ವಲ್ಗೆ ಒಳ್ಳೆಯ ಶಾಲೆಗೆ ಸೇರಿಸಿದ್ದರು. ತಂದೆ ಇದ್ದಾಗ ಯಾವುದೂ ಕಷ್ಟ ಅನ್ನಿಸಲಿಲ್ಲ. ನಾವು ಕೇಳಿದ್ದ ವಸ್ತುಗಳನ್ನು ಮಾರುಕಟ್ಟೆಯಿಂದ ತಂದುಕೊಡುತ್ತಿದ್ದರು. ಹಬ್ಬ, ಹುಣ್ಣಿಮೆಯಲ್ಲಿ ತೋಟಕ್ಕೆ ಕರೆದೊಯ್ದು ಸಾಮೂಹಿಕ ಊಟ ಮಾಡಿಸುತ್ತಿದ್ದರು. ಬೆನ್ನ ಮೇಲೆ ಕೂರಿಸಿಕೊಂಡು ನಮ್ಮೊಂದಿಗೆ ಆಟವಾಡುತ್ತಿದ್ದರು. ಈಗ ಅವೆಲ್ಲ ಬರೀ ನೆನಪುಗಳು’ ಎಂದು ಭಾವುಕರಾದರು.
‘ಈಗ ನಾವು ಅಜ್ಜನ ಊರಾದ ಬಸವಕಲ್ಯಾಣ ತಾಲ್ಲೂಕಿನ ಮಂಠಾಳದಲ್ಲಿ ಇದ್ದೇವೆ. ನವೋದಯ ಪರೀಕ್ಷೆಯಲ್ಲಿ ಪಾಸಾದ ನಂತರ ರಾಜೋಳಾದ ಆದರ್ಶ ಶಾಲೆಯಲ್ಲಿ ಪ್ರವೇಶ ಪಡೆದುದಿರುವೆ. ನಾನು 10ನೇ ತರಗತಿ ವಿದ್ಯಾರ್ಥಿಯಾಗಿದ್ದು, ಜುಲೈ 1ರಿಂದ ಆನ್ಲೈನ್ ತರಗತಿಗಳು ಶುರುವಾಗಲಿವೆ. ಕುಟುಂಬಕ್ಕೆ ಆದಾಯ ಇಲ್ಲ. ಶಿಕ್ಷಣ ಹೇಗೆ ಮುಂದುವರಿಸಬೇಕು ಎಂಬುದು ಗೊತ್ತಾಗುತ್ತಿಲ್ಲ’ ಎಂದು ಅವರು ಬೇಸರ ವ್ಯಕ್ತಪಡಿಸಿದರು.
‘ಹುಲಸೂರಿನ ಶ್ರೀ ವೀರಭದ್ರೇಶ್ವರ ಶಿಕ್ಷಣ ಸಂಸ್ಥೆಯ ಶಾಲೆಯಲ್ಲಿ ಪ್ರಜ್ವಲ್ ಐದನೇ ತರಗತಿಯಲ್ಲಿ ಓದುತ್ತಿದ್ದಾನೆ. ಅಪ್ಪನ ತಂದೆ–ತಾಯಿಯೂ ಇಲ್ಲ. ಹೀಗಾಗಿ ಸದ್ಯ ಅವ್ವನ ತವರು ಮನೆಯಲ್ಲಿ ತಾತ್ಕಾಲಿಕ ಆಶ್ರಯ ಪಡೆದಿದ್ದೇವೆ. ಶಿಕ್ಷಣ ಮುಂದುವರಿಸಲು ಹಣ ಬೇಕು. ದಾನಿಗಳು ಶಿಕ್ಷಣದ ವೆಚ್ಚ ಭರಿಸಲು ಮುಂದಾದರೆ, ಅನುಕೂಲವಾಗುವುದು. ಕಷ್ಟಪಟ್ಟು ಓದುವೆ’ ಎಂದು ಹೇಳುತ್ತ ಪ್ರಣವ್ ಮೌನಕ್ಕೆ ಜಾರಿದರು. (ಪ್ರಣವ್ ಕುಂಬಾರ ಮೊಬೈಲ್ ಸಂಖ್ಯೆ: 7411582202)