ಮಂಗಳೂರು(ಕುಲಾಲ್ ವರ್ಲ್ಡ್ ಡಾಟ್ ಕಾಮ್): “ಸುಮಾರು 1500 ವರ್ಷಗಳ ಇತಿಹಾಸ ಇದೆ ಎನ್ನಲಾಗುವ ಕುಲಶೇಖರದ ಶ್ರೀ ವೀರನಾರಾಯಣ ದೇವಸ್ಥಾನದ ಜೀರ್ಣೋದ್ಧಾರಕ್ಕೆ ಸಂಕಲ್ಪ ಮಾಡಲಾಗಿದ್ದು ಶ್ರೀ ದೇವರ ಭಾವಚಿತ್ರ ಅನಾವರಣ, ಸಹಾಯಧನದ ಕೂಪನ್ ಬಿಡುಗಡೆ ಸಂದರ್ಭ ಪಾಲ್ಗೊಳ್ಳುವ ಅವಕಾಶ ಸಿಕ್ಕಿರುವುದು ನಮ್ಮ ಬದುಕಿನ ಪುಣ್ಯದ ಫಲ.
ಈ ದೇವಸ್ಥಾನದ ಪುನರ್ ನವೀಕರಣಕ್ಕೆ ನಮ್ಮಿಂದ ಸಾಧ್ಯವಾಗುವ ಎಲ್ಲಾ ಸಹಕಾರಗಳನ್ನು ನೀಡಲು ಬದ್ಧನಾಗಿದ್ದೇನೆ” ಎಂದು ಮಂಗಳೂರು ದಕ್ಷಿಣದ ಶಾಸಕರಾದ ಡಿ. ವೇದವ್ಯಾಸ ಕಾಮತ್ ಹೇಳಿದರು.
ಅವರು ಮಂಗಳೂರಿನ ಓಲ್ಡ್ ಕೆಂಟ್ ರಸ್ತೆಯಲ್ಲಿರುವ ಶ್ರೀ ದೇವಿ ದೇವಸ್ಥಾನಕ್ಕೆ ಮಂಗಳೂರು ಮ.ನ.ಪಾ ಕೊಡಮಾಡಿರುವ ಮೇಲ್ಚಾವಣಿ ಉದ್ಘಾಟಿಸಿ ಹಾಗೂ ಕುಲಶೇಖರ ಶ್ರೀ ವೀರನಾರಾಯಣ ದೇವಸ್ಥಾನ ಜೀರ್ಣೋದ್ದಾರಕ್ಕೆ ನಿಧಿ ಸಂಚಯನ ಪ್ರಾರಂಭೋತ್ಸವ ಕಾರ್ಯಕ್ರಮದಲ್ಲಿ ಶ್ರೀ ವೀರನಾರಾಯಣ ದೇವರ ಭಾವಚಿತ್ರ ಅನಾವರಣಗೊಳಿಸಿ ಮಾತನಾಡಿದರು.
ಜಿ.ಪಂ ಉಪಾಧ್ಯಕ್ಷೆ ಶ್ರೀಮತಿ ಕಸ್ತೂರಿ ಪಂಜ ಮಾತನಾಡಿ ನಮ್ಮ ಕುಲದೇವರಾದ ಕುಲಶೇಖರ ಶ್ರೀ ವೀರನಾರಾಯಣ ದೇವಸ್ಥಾನದ ಜೀರ್ಣೋದ್ಧಾರಕ್ಕೆ ಇಡೀಯ ಸಮಾಜ ಮೊದಲ ಆದ್ಯತೆ ನೀಡಬೇಕಾಗಿದ್ದು ಬಿಜೆಪಿ ರಾಜ್ಯಾಧ್ಯಕ್ಷರಾದ ನಳಿನ್ ಕುಮಾರ್ ಕಟೀಲ್ ಅವರ ಮಾರ್ಗದರ್ಶನದಲ್ಲಿ ಸಚಿವರ, ಶಾಸಕರ ಸಹಿತ ಮುಖ್ಯಮಂತ್ರಿಯವರನ್ನು ಭೇಟಿಯಾಗಿ ಕನಿಷ್ಠ ಎರಡು ಕೋಟಿಯಾದರೂ `ನಿಧಿ’ ಪಡೆಯಲು ಅಹರ್ನಿಶಿ ಪ್ರಯತ್ನಿಸೋಣ ಎಂದರು.
ಅಧ್ಯಕ್ಷತೆ ವಹಿಸಿದ್ದ ದ.ಕ.ಜಿಲ್ಲಾ ಮೂಲ್ಯರ ಯಾನೆ ಕುಲಾಲರ ಮಾತೃಸಂಘದ ಅಧ್ಯಕ್ಷರಾದ ಮಯೂರ್ ಉಳ್ಳಾಲ್ ಮಾತನಾಡಿ ಧಾರ್ಮಿಕ ಕ್ಷೇತ್ರದ ಜೀರ್ಣೋದ್ಧಾರದಿಂದ ಬಿಲ್ಲವ ಸಮಾಜ ಮಾಜಿ ಕೇಂದ್ರ ಸಚಿವವರಾದ ಜನಾರ್ದನ ಪೂಜಾರಿಯವರ ನೇತೃತ್ವದಲ್ಲಿ ಇಡೀಯ ದೇಶದ ಗಮನ ಸೆಳೆದಂತೆ ಕುಲಾಲ ಸಮಾಜವೂ ಕುಲದೇವರಾದ ಶ್ರೀ ವೀರನಾರಾಯಣನ ಸಾನಿಧ್ಯದ ನವೀಕರಣದಿಂದ ಎಲ್ಲಾ ರೀತಿಯ ಶಕ್ತಿಯನ್ನು ಪಡೆದುಕೊಂಡು ರಾಜಕೀಯ, ಸಾಮಾಜಿಕ ಎಲ್ಲಾ ರಂಗಗಳಲ್ಲೂ ಮುಂಚೂಣಿ ಪಡೆಯುವ ದಿನ ಸನ್ನಿಹಿತ ವಾಗಲಿದೆ ಎಂದರು.
ದ.ಕ. ಜಿಲ್ಲಾ ಮೂಲ್ಯರ ಯಾನೆ ಕುಲಾಲರ ಮಾತೃಸಂಘ(ರಿ.) ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಶಾಸಕರನ್ನು ಹಾಗೂ ಮಂಗಳೂರು ಮ.ನ.ಪಾ ಮೇಯರ್ ಪ್ರೇಮಾನಂದ ಶೆಟ್ಟಿ ಅವರನ್ನು ಗೌರವಿಸಲಾಯಿತು. ಹಿರಿಯರಾದ ರಾಮಣ್ಣ ಉಪ್ಪಿನಂಗಡಿ, ಯಜ್ಞೇಶ್ವರ ಬರ್ಕೆ, ನ್ಯಾಯವಾದಿ ರಾಮ್ ಪ್ರಸಾದ್, ಆರ್ಥಿಕ ಸಲಹೆಗಾರರಾದ ಪುಂಡರೀಕಾಕ್ಷ ಕೈರಂಗಳ , ರೂಪಾ.ಡಿ ಬಂಗೇರ, ಶ್ರೀ ವೀರನಾರಾಯಣ ದೇವಸ್ಥಾನದ ಮ್ಯಾನೇಜಿಂಗ್ ಟ್ರಸ್ಟಿ, ಪುರುಷೋತ್ತಮ ಕುಲಾಲ್ ಕಲ್ಬಾವಿ, ಜೀರ್ಣೋದ್ದಾರ ಸಮಿತಿ ಅಧ್ಯಕ್ಷರಾದ *ದಾಮೋದರ್.ಎ., ಮಹೇಶ್ ಸವಣೂರು, ನ್ಯಾಯವಾದಿ ಕುಶಾಲಪ್ಪ ಕುಲಾಲ್, ಗಿರಿಧರ ಜೆ. ಮೂಲ್ಯ, ಪ್ರೇಮಾನಂದ ಕುಲಾಲ್, ಅನಿಲ್ದಾಸ್, ಮಾತೃಸಂಘದ ಪ್ರಮೀಳಾ ಸಾಲ್ಯಾನ್, ಜಯಶ್ರೀ, ಭಾಸ್ಕರ್ ಪೆರುವಾಯಿ ಮುಂತಾದವರು ವೇದಿಕೆಯಲ್ಲಿದ್ದರು. ಪ್ರವೀಣ್ ಬಸ್ತಿ ಸ್ವಾಗತಿಸಿದರು, ನವೀನ್ ಕುಲಾಲ್ ನಿರೂಪಿಸಿದರು.